logo
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಬೆಂಗಳೂರು ಬುಲ್ಸ್ ಬಳಗಕ್ಕೆ ಹೊಸ ಗೂಳಿ ಎಂಟ್ರಿ; ಡಿಫೆಂಡಿಂಗ್‌ಗೆ ಬಲ ತುಂಬಲಿದ್ದಾರೆ ಯು ಮುಂಬಾ ಮಾಜಿ ನಾಯಕ

PKL 11: ಬೆಂಗಳೂರು ಬುಲ್ಸ್ ಬಳಗಕ್ಕೆ ಹೊಸ ಗೂಳಿ ಎಂಟ್ರಿ; ಡಿಫೆಂಡಿಂಗ್‌ಗೆ ಬಲ ತುಂಬಲಿದ್ದಾರೆ ಯು ಮುಂಬಾ ಮಾಜಿ ನಾಯಕ

Jayaraj HT Kannada

Oct 05, 2024 04:41 PM IST

google News

ಬೆಂಗಳೂರು ಬುಲ್ಸ್ ಬಳಗಕ್ಕೆ ಡಿಫೆಂಡರ್ ಸುರಿಂದರ್ ಸಿಂಗ್ ಸೇರ್ಪಡೆ

    • Pro Kabaddi League: ಪಿಕೆಎಲ್‌ 11ನೇ ಆವೃತ್ತಿಗೂ ಮುನ್ನ ಬೆಂಗಳೂರು ಬುಲ್ಸ್ ತಂಡವು ಡಿಫೆಂಡಿಂಗ್‌ಗೆ ಮತ್ತಷ್ಟು ಬಲ ತುಂಬಿದೆ.  ಯು ಮುಂಬಾ ತಂಡದ ಮಾಜಿ ನಾಯಕ ಸುರಿಂದರ್‌ ಸಿಂಗ್‌ ತಂಡ ಸೇರಿಕೊಂಡಿದ್ದಾರೆ. ಇವರು ತಂಡದ ಡಿಫೆಂಡಿಂಗ್‌ಗೆ ಬಲ ತುಂಬಲಿದ್ದಾರೆ.
ಬೆಂಗಳೂರು ಬುಲ್ಸ್ ಬಳಗಕ್ಕೆ ಡಿಫೆಂಡರ್ ಸುರಿಂದರ್ ಸಿಂಗ್ ಸೇರ್ಪಡೆ
ಬೆಂಗಳೂರು ಬುಲ್ಸ್ ಬಳಗಕ್ಕೆ ಡಿಫೆಂಡರ್ ಸುರಿಂದರ್ ಸಿಂಗ್ ಸೇರ್ಪಡೆ (Instagram)

ಪ್ರೊ ಕಬಡ್ಡಿ ಲೀಗ್ 11ನೇ (Pro Kabaddi League 2024) ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಸೀಸನ್‌ ಆರಂಭಕ್ಕೂ ಮುನ್ನ ಬೆಂಗಳೂರು ಬುಲ್ಸ್ (Bengaluru Bulls) ತಂಡವು ಪ್ರಬಲ ಆಟಗಾರನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಪಿಕೆಎಲ್ 11ರ ಆರಂಭಕ್ಕೂ ಮುನ್ನ ನಡೆದಿದ್ದ ಹರಾಜಿನಲ್ಲಿ ಡಿಫೆಂಡರ್ ಸುರಿಂದರ್ ಸಿಂಗ್ (Surinder Singh) ಹರಾಜಾಗಿರಲಿಲ್ಲ. ಯು ಮುಂಬಾ ತಂಡದ ಮಾಜಿ ನಾಯಕನನ್ನು ಖರೀದಿಸಲೂ ಯಾವ ತಂಡಗಳು ಕೂಡಾ ಮನಸು ಮಾಡಿರಲಿಲ್ಲ. ಆದರೆ, ಅವರನ್ನೀಗ ಬೆಂಗಳೂರು ಬುಲ್ಸ್ ತಂಡವು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಕಳೆದ ಬಾರಿ ನಡೆದ ಪಿಕೆಎಲ್ 10ನೇ ಆವೃತ್ತಿಯಲ್ಲಿ ಸುರಿಂದರ್‌, ಯು ಮುಂಬಾ ನಾಯಕನಾಗಿದ್ದರು. ಆದರೆ, ಅವರನ್ನು ತಂಡ ಕೈಬಿಟ್ಟಿದೆ. ಹರಾಜಿನಲ್ಲಿಯೂ ಖರೀದಿಯಾಗದೆ ಉಳಿದ ಆಟಗಾರನಿಗೆ ಇದೀಗ ದಿಢೀರನೆ ಅದೃಷ್ಟದ ಬಾಗಿಲು ತೆರೆದುಕೊಂಡಿದೆ.

ಪಿಕೆಎಲ್‌ 11ಕ್ಕೆ ಹೊಸ ಜೆರ್ಸಿಯಲ್ಲಿ ಮಿಂಚು ಹರಿಸಲು ಸುರೀಂದರ್ ಸಜ್ಜಾಗಿದ್ದಾರೆ. ಪ್ರಬಲ ಡಿಫೆಂಡರ್‌ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡಾ ಉತ್ಸುಕರಾಗಿದ್ದಾರೆ. ಇದು ತಂಡದ ಬಲ ಹೆಚ್ಚಿಸಿದೆ. ಬೆಂಗಳೂರು ಬುಲ್ಸ್ ಫ್ರಾಂಚೈಸಿಯು ಸಾಮಾಜಿಕ ಮಾಧ್ಯಮದ ಮೂಲಕ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

ಸುರಿಂದರ್ ಸಿಂಗ್ ಇದೇ ಮೊದಲ ಬಾರಿಗೆ ಬೆಂಗಳೂರು ಬುಲ್ಸ್ ಪರ ಆಡಲಿದ್ದಾರೆ. 11ನೇ ಸೀಸನ್‌ ಆರಂಭಿಸುವುದಕ್ಕೂ ಮುನ್ನ ಅನುಭವಿ ಡಿಫೆಂಡರ್‌ಅನ್ನು ತಂಡಕ್ಕೆ ಕರೆಸಿಕೊಳ್ಳುವ ಮೂಲಕ ತಂಡವನ್ನು ಬಲಪಡಿಸುವ ಕೆಲಸವನ್ನು ಗೂಳಿಗಳ ಬಳಗ ಮಾಡಿದೆ. ತಂಡವು ಈ ಬಾರಿ ಹಲವು ಹೊಸತನಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಪರ್ದೀಪ್ ನರ್ವಾಲ್ ನಾಯಕತ್ವದಲ್ಲಿ ಒಂದಷ್ಟು ತಂತ್ರಗಳನ್ನು ಹೆಣೆಯುತ್ತಿದೆ.

ಫ್ರಾಂಚೈಸಿ ಇತ್ತೀಚೆಗಷ್ಟೇ ಪ್ರೊ ಕಬಡ್ಡಿಯ ಅತ್ಯಂತ ಯಶಸ್ವಿ ರೈಡರ್‌ ಪರ್ದೀಪ್ ನರ್ವಾಲ್ ಅವರನ್ನು ನಾಯಕನಾಗಿ ನೇಮಿಸಿತು. ಹೀಗಾಗಿ ಪರ್ದೀಪ್ ಮತ್ತು ಸುರೀಂದರ್ ಜೋಡಿಯನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಸುರಿಂದರ್ ಸಿಂಗ್

ಡಿಫೆಂಡರ್ ಸುರಿಂದರ್ ಸಿಂಗ್, ಪ್ರೊ ಕಬಡ್ಡಿ ಲೀಗ್‌ನ 5ನೇ ಋತುವಿನಲ್ಲಿ ಯು ಮುಂಬಾ ತಂಡದೊಂದಿಗೆ ತಮ್ಮ ಲೀಗ್‌ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಪಿಕೆಎಲ್‌ 7ರಲ್ಲೂ ಇದೇ ತಂಡದ ಭಾಗವಾಗಿದ್ದರು. ಆದರೆ, 8ನೇ ಆವೃತ್ತಿ ವೇಳೆಗೆ ತೆಲುಗು ಟೈಟಾನ್ಸ್ ತಂಡ ಸೇರಿಕೊಂಡರು. ಆ ಬಳಿಕ ಪಿಕೆಎಲ್ 9ರ ವೇಳೆಗೆ ಮತ್ತೆ ಯು ಮುಂಬಾಗೆ ಮರಳಿದರು. ಕಳೆದ ಬಾರಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10ರ ಸಮಯದಲ್ಲಿ ಅವರು ಯು ಮುಂಬಾ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು.

ಕಳೆದ ಋತುವಿನಲ್ಲಿ ಸುರಿಂದರ್ 29 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದರು. ಪ್ರೊ ಕಬಡ್ಡಿ ವೃತ್ತಿಜೀವನದಲ್ಲಿ ಸುರೀಂದರ್ ಸಿಂಗ್ ಒಟ್ಟು 119 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 269 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ ಒಟ್ಟು 15 ಸೂಪರ್ ಟ್ಯಾಕಲ್‌ಗಳು ಮತ್ತು 8 ಹೈ-ಫೈವ್‌ಗಳನ್ನು‌ ಪೂರೈಸಿದ್ದಾರೆ.‌

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ