PKL 2024: ಪ್ರೊ ಕಬಡ್ಡಿ ಪ್ಲೇ ಆಫ್ಗೆ 6 ತಂಡಗಳು ಫಿಕ್ಸ್; ನಾಕೌಟ್ಗೇರದೆ ಔಟ್ ಆದ ಬೆಂಗಳೂರು ಬುಲ್ಸ್
Feb 19, 2024 06:00 AM IST
ಪ್ರೊ ಕಬಡ್ಡಿ ಪ್ಲೇ ಆಫ್ಗೆ 6 ತಂಡಗಳು ಫಿಕ್ಸ್; ನಾಕೌಟ್ಗೇರದೆ ಔಟ್ ಆದ ಬೆಂಗಳೂರು ಬುಲ್ಸ್
- Bengaluru Bulls - PKL 2024 : ಪ್ರೊ ಕಬಡ್ಡಿ ಲೀಗ್ನಲ್ಲಿ ಜೈಪುರ, ಪುಣೇರಿ, ಡೆಲ್ಲಿ, ಹರಿಯಾಣ, ಗುಜರಾತ್, ಪಾಟ್ನಾ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಆದರೆ ಬೆಂಗಳೂರು ಬುಲ್ಸ್ ಔಟ್ ಲೀಗ್ನಿಂದಲೇ ಹೊರಬಿದ್ದಿದೆ.
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯು ಕೊನೆಯ ಹಂತ ತಲುಪಿದೆ. 2023ರ ಡಿಸೆಂಬರ್ 2ರಂದು ಆರಂಭಗೊಂಡ ಪ್ರೊ ಕಬಡ್ಡಿ ಫೆಬ್ರವರಿ 21ಕ್ಕೆ ಲೀಗ್ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಈಗಾಗಲೇ ಪ್ಲೇ ಆಫ್ ಕಣದಲ್ಲಿ ಆಡುವ 6 ತಂಡಗಳು ಖಚಿತಗೊಂಡಿವೆ. ಆದರೆ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು ಬುಲ್ಸ್ ಪ್ಲೇ ಆಫ್ಗೇರದೆ ಹೊರಬಿದ್ದಿದೆ. ಈ ಬಾರಿ ಗೂಳಿಗಳು ಮುಗ್ಗರಿಸಿದವು.
ಫೆಬ್ರವರಿ 18ರಂದು ನಡೆದ ಡಬಲ್ ಹೆಡರ್ ಪಂದ್ಯಗಳಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ತಮಿಳ್ ತಲೈವಾಸ್ ಭರ್ಜರಿ ಗೆಲುವು ಸಾಧಿಸಿತು. 74-37 ಅಂಕಗಳ ಅಂತರದಿಂದ ಜಯದ ನಗೆ ಬೀರಿತು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಎದುರಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 46-38 ಅಂಕಗಳಿಂದ ಜಯಭೇರಿ ಬಾರಿಸಿತು. ಈ ಸೋಲಿನೊಂದಿಗೆ ಬೆಂಗಳೂರು 8 ರಿಂದ 9ನೇ ಸ್ಥಾನಕ್ಕೆ ಕುಸಿದಿದೆ.
ಬೆಂಗಳೂರು ಬುಲ್ಸ್ ಅತ್ಯಂತ ಕಳಪೆ ಪ್ರದರ್ಶನ
ಬೆಂಗಳೂರು ಬುಲ್ಸ್ ಲೀಗ್ನಲ್ಲಿ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡಿತು. ಲೀಗ್ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದ್ದ ಬುಲ್ಸ್ ನಂತರ ಪುಟಿದೆದ್ದರೂ ಮತ್ತದೇ ಸೋಲಿನ ಸುರುಳಿಗೆ ಸಿಲುಕಿಕೊಂಡಿತು. ಈವರೆಗೂ ಲೀಗ್ನಲ್ಲಿ ಆಡಿದ 21 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 12 ಸೋಲು, 2 ಡ್ರಾ ಸಾಧಿಸಿದೆ. ಕೇವಲ 48 ಅಂಕ ಪಡೆದಿದೆ.
ಒಂದು ಹಂತದಲ್ಲಿ ಪ್ಲೇ ಆಫ್ ಪ್ರವೇಶ ಪಡೆಯುವ ಅವಕಾಶ ಇತ್ತು. ಆದರೆ ಅವಕಾಶ ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಯಿತು. ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದರೂ ಎದುರಾಳಿ ತಂಡಗಳ ವಿರುದ್ಧ ಪೈಪೋಟಿ ನೀಡಲು ವಿಫಲರಾದರು. ಭರತ್, ವಿಕಾಸ್ ಖಂಡೋಲಾ, ಸುರ್ಜೀತ್ ಸಿಂಗ್ ಸೇರಿದಂತೆ ಘಟಾನುಘಟಿ ಆಟಗಾರರಿದ್ದರೂ ಬುಲ್ಸ್ ವಿಫಲವಾಗಿದ್ದು ವಿಪರ್ಯಾಸವೇ ಸರಿ.
ಪ್ಲೇ ಆಫ್ ಪ್ರವೇಶಿಸಿದ ತಂಡಗಳು
1. ಜೈಪುರ ಪಿಂಕ್ ಪ್ಯಾಂಥರ್ಸ್ - 21 ಪಂದ್ಯ, 15 ಗೆಲುವು, 3, ಸೋಲು, 3 ಟೈ, 87 ಅಂಕ
2. ಪುಣೇರಿ ಪಲ್ಟನ್ - 20 ಪಂದ್ಯ, 15 ಗೆಲುವು, 2 ಸೋಲು, 3 ಟೈ, 86 ಅಂಕ
3. ದಬಾಂಗ್ ಡೆಲ್ಲಿ - 22 ಪಂದ್ಯ, 13 ಗೆಲುವು, 6 ಸೋಲು, 3 ಟೈ, 79 ಅಂಕ.
4. ಗುಜರಾತ್ ಜೈಂಟ್ಸ್ - 21 ಪಂದ್ಯ, 13 ಗೆಲುವು, 8 ಸೋಲು, 70 ಅಂಕ
5. ಹರಿಯಾಣ ಸ್ಟೀಲರ್ಸ್ - 20 ಪಂದ್ಯ, 13 ಗೆಲುವು, 6 ಸೋಲು, 1 ಟೈ, 70 ಅಂಕ
6. ಪಾಟ್ನಾ ಪೈರೇಟ್ಸ್ - 22 ಪಂದ್ಯ, 11 ಗೆಲುವು, 8 ಗೆಲುವು, 3 ಟೈ, 69.
(ಗಮನಕ್ಕೆ: ಲೀಗ್ ಹಂತದ ಮುಕ್ತಾಯವಾಗಲು ಎಲ್ಲಾ ತಂಡಗಳು 22 ಪಂದ್ಯಗಳನ್ನು ಆಡಬೇಕಿದೆ)