ಯುಪಿ ಯೋಧಾಸ್ ವಿರುದ್ಧ ದಬಾಂಗ್ ಡೆಲ್ಲಿಗೆ ಭರ್ಜರಿ ಗೆಲುವು; ಪಾಟ್ನಾ-ಪುಣೇರಿ ಪಂದ್ಯ ರೋಚಕ ಡ್ರಾ
Jan 28, 2024 06:00 AM IST
ದಬಾಂಗ್ ಡೆಲ್ಲಿ ಮತ್ತು ಯುಪಿ ಯೋಧಾಸ್ ನಡುವಿನ ಪಂದ್ಯದ ಕ್ಷಣಗಳು.
- Pro Kabaddi League 2024: ಪ್ರೊ ಕಬಡ್ಡಿ ಲೀಗ್ನಲ್ಲಿ ಜನವರಿ 27ರಂದು ನಡೆದ ಡಬಲ್ ಹೆಡ್ಡರ್ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಪುಣೇರಿ ಪಲ್ಟನ್ಸ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಭರ್ಜರಿ ಜಯ ಸಾಧಿಸಿತು.
ಜನವರಿ 27ರಂದು ನಡೆದ ಸೀಸನ್ 10ರ ಪ್ರೊ ಕಬಡ್ಡಿ ಲೀಗ್ನ (Pro Kabaddi League 2024) ಡಬಲ್ ಹೆಡ್ಡರ್ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಪುಣೇರಿ ಪಲ್ಟನ್ಸ್ ನಡುವಿನ (Puneri Paltan vs Patna Pirates) ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಮತ್ತೊಂದು ಪಂದ್ಯದಲ್ಲಿ ಯುಪಿ ಯುಧಾಸ್ ವಿರುದ್ಧ ದಬಾಂಗ್ ಡೆಲ್ಲಿ (Dabang Delhi vs UP Yoddhas) ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದೆ.
ಜನವರಿ 27ರಂದು ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಮತ್ತು ಪುಣೇರಿ ಪಂದ್ಯವು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಪಲ್ಟನ್ ಪರ ಅಸ್ಲಾಂ ಇನಾಮದಾರ್ 13 ರೈಡಿಂಗ್ ಪಾಯಿಂಟ್ಸ್ ಪಡೆದರೆ, ಪೈರೇಟ್ಸ್ ಪರ ಸಚಿನ್ 9 ರೈಡಿಂಗ್ ಪಾಯಿಂಟ್ಸ್ ಕಬಳಿಸಿದರು. ಕೊನೆಯವರೆಗೂ ರೋಚಕತೆ ಕೂಡಿದ್ದ ಈ ಪಂದ್ಯ 32-32 ಅಂಕಗಳಿಂದ ಡ್ರಾ ಸಾಧಿಸಿತು.
ಸದ್ಯ ಪುಣೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಕೆ ಕಂಡಿದೆ. ಈವರೆಗೂ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 11 ಗೆಲುವು, 2 ಸೋಲು, 2 ಪಂದ್ಯಗಳು ಡ್ರಾ ಸಾಧಿಸಿದೆ. 63 ಅಂಕ ಪಡೆದಿರುವ ಪುಣೇರಿ ಅಗ್ರಸ್ಥಾನ ಪಡೆದಿದೆ. ಪಾಟ್ನಾ ಆಡಿದ 16 ಪಂದ್ಯಗಳಲ್ಲಿ 7 ಗೆಲುವು, 7 ಸೋಲು ಕಂಡಿದೆ. 2 ಡ್ರಾ ಸಾಧಿಸಿದೆ. 45 ಅಂಕ ಪಡೆದು 5ನೇ ಸ್ಥಾನದಲ್ಲಿದೆ.
ದಬಾಂಗ್ ಡೆಲ್ಲಿ ದರ್ಬಾರ್
ದಿನದ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ದರ್ಬಾರ್ ನಡೆಸಿತು. ಗಗನ್ ಗೌಡ 12 ಅಂಕ ಪಡೆದು ಹೋರಾಟದ ನಡುವೆಯೂ ಯುಪಿ ಯೋಧಾಸ್ ಸೋಲು ಕಂಡಿತು. ಡೆಲ್ಲಿ ಪರ ಅಶು ಮಲಿಕ್ 11 ಅಂಕ ಪಡೆದು ಅಬ್ಬರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 36-27 ಅಂಕಗಳಿಂದ ದಬಾಂಗ್ ಭರ್ಜರಿ ಗೆಲುವು ಸಾಧಿಸಿತು.
ಅಮೋಘ ಜಯ ದಾಖಲಿಸಿದ ದಬಾಂಗ್ ಡೆಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದತ್ತ ಸಾಗುತ್ತಿದೆ. ಈಗಾಗಲೇ 16 ಪಂದ್ಯಗಳಲ್ಲಿ 10 ರಲ್ಲಿ ಜಯ ಸಾಧಿಸಿದ್ದು, 4 ಸೋಲು, 2 ಡ್ರಾ ಸಾಧಿಸಿದೆ. ಸದ್ಯ 59 ಅಂಕ ಸಂಪಾದಿಸಿದೆ. ಸೋತ ಯುಪಿ ಯೋಧಾಸ್ ಪ್ಲೇ ಆಫ್ ಕನಸು ಕಷ್ಟವಾಗಿದೆ. ಆಡಿದ 16 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. 23 ಅಂಕ ಪಡೆದು 11ನೇ ಸ್ಥಾನದಲ್ಲಿದೆ.
(This copy first appeared in Hindustan Times Kannada website. To read more like this please logon to kannada.hindustantime.com)