PKL 11: ಈ ಬಾರಿ ಹೊಸ ತಂತ್ರದೊಂದಿಗೆ ಬರುತ್ತೇನೆ; ಬೆಂಗಳೂರು ಬುಲ್ಸ್ ಪರ ಚೆನ್ನಾಗಿ ಆಡೋದೇ ನನ್ನ ತಂತ್ರ -ಪರ್ದೀಪ್ ನರ್ವಾಲ್
Oct 03, 2024 06:46 AM IST
ಬೆಂಗಳೂರು ಬುಲ್ಸ್ ಪರ ಚೆನ್ನಾಗಿ ಆಡೋದೇ ನನ್ನ ತಂತ್ರ -ಪರ್ದೀಪ್ ನರ್ವಾಲ್
- Pardeep Narwal: ಪಿಕೆಎಲ್ 11ನೇ ಆವೃತ್ತಿಯಲ್ಲಿ ಪರ್ದೀಪ್ ನರ್ವಾಲ್ ಬೆಂಗಳೂರು ಬುಲ್ಸ್ ಪರ ಆಡುತ್ತಿದ್ದಾರೆ. ಇದೇ ತಂಡದ ಪರ ಅವರು ಪ್ರೊ ಕಬಡ್ಡಿ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ 9 ವರ್ಷಗಳ ಬಳಿಕ ಮತ್ತೆ ಬುಲ್ಸ್ ಪರ ಆಡುತ್ತಿರುವ ಬಗ್ಗೆ ಅವರು ಮಾತನಾಡಿದ್ದಾರೆ.
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಆರಂಭಕ್ಕೆ ಒಂದೆರಡು ವಾರಗಳಷ್ಟೇ ಬಾಕಿ ಉಳಿದಿವೆ. ಈ ಬಾರಿ ಬೆಂಗಳೂರು ಬುಲ್ಸ್ ತಂಡವು ಎರಡನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ತಂಡಕ್ಕೆ ಈ ಬಾರಿ ಸ್ಟಾರ್ ರೈಡರ್, ದಾಖಲೆಗಳ ಸರದಾರ ಪರ್ದೀಪ್ ನರ್ವಾಲ್ ಬಂದಿರುವುದು ತಂಡದ ಬಲ ಹೆಚ್ಚಿಸಿದೆ. ಜೊತೆಗೆ ಅಭಿಮಾನಿಗಳಿಗೂ ಖುಷಿ ತಂದಿದೆ. ಪಿಕೆಎಲ್ ಸೀಸನ್ 2ರ ಮೂಲಕ ಪರ್ದೀಪ್ ಪ್ರೊ ಕಬಡ್ಡಿ ಅಖಾಡಕ್ಕಿಳಿದಿದ್ದರು. ಅದು ಕೂಡಾ ಬೆಂಗಳೂರು ಬುಲ್ಸ್ ತಂಡದ ಮೂಲಕ. ತಮ್ಮ ಪ್ರಯಾಣವನ್ನು ಆರಂಭಿಸಿದ ಅದೇ ತಂಡಕ್ಕೆ ಮತ್ತೆ ಸೇರಿಕೊಳ್ಳುವ ಮೂಲಕ ಪರ್ದೀಪ್ ಹೊಸತನದ ಆರಂಭಕ್ಕೆ ಕಾಯುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಅಕ್ಟೋಬರ್ 18ರಂದು ಪಿಕೆಎಲ್ 11ರ ಉದ್ಘಾಟನಾ ಪಂದ್ಯ ನಡೆಯುತ್ತಿದೆ. ತೆಲುಗು ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಬುಲ್ಸ್ ಕಣಕ್ಕಿಳಿಯಲಿದೆ. ಬೆಂಗಳೂರು ಬುಲ್ಸ್ ಪರ ಆಡುತ್ತಿರುವ ಕುರಿತು ಪರ್ದೀಪ್ ತಮ್ಮ ಉತ್ಸಾಹ ಹಂಚಿಕೊಂಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್‌ನ ಮೊದಲ ಆವೃತ್ತಿಯಲ್ಲಿ, ತಂಡದ ಆರಂಭಿಕ ಪಂದ್ಯದ ಬಗ್ಗೆ ತಮ್ಮ ಉತ್ಸಾಹ ಹಂಚಿಕೊಂಡ ಪರ್ದೀಪ್, “ನಾವೇ ಮೊದಲ ಪಂದ್ಯವನ್ನು ಆಡುತ್ತಿರುವ ಕಾರಣ ತುಂಬಾ ಉತ್ಸುಕರಾಗಿದ್ದೇವೆ. ನಾವು ತೆಲುಗು ಟೈಟಾನ್ಸ್‌ನ ತವರು ನಗರವಾದ ಹೈದರಾಬಾದ್‌ಗೆ ಹೋಗುತ್ತಿದ್ದೇವೆ. ಅವರ ತವರಿನ ಅಭಿಮಾನಿಗಳು ಅವರನ್ನು ಬೆಂಬಲಿಸುತ್ತಾರೆ. ಅವರಿಗೆ ತವರು ನೆಲದ ಪ್ರಯೋಜನವಿದ್ದರೂ ನಮ್ಮ ಅಭಿಮಾನಿಗಳು ನಮ್ಮನ್ನು ಬೆಂಬಲಿಸುತ್ತಾರೆ” ಎಂದು ಹೇಳಿದರು.
ಹೊಸತ ತಂತ್ರವನ್ನು ಹೊತ್ತು ತರುತ್ತೇನೆ
ಕಳೆದ ಕೆಲವು ಸೀಸನ್‌ಗಳಲ್ಲಿ ಪರ್ದೀಪ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಈ ವರ್ಷ ತಮ್ಮ ಹೊಸ ಕೌಶಲ್ಯಗಳ ಕುರಿತು ಮಾತನಾಡಿದ ಅವರು, "ತಂಡಕ್ಕಾಗಿ ಮತ್ತು ನನಗಾಗಿ ಉತ್ತಮ ಪ್ರದರ್ಶನ ನೀಡುವುದು, ತಂಡವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡುವುದೇ ನನ್ನ ತಂತ್ರವಾಗಿದೆ. ನಾನು ಈ ಋತುವಿನಲ್ಲಿ ಹೊಸ ಕೌಶಲ್ಯಗಳನ್ನು ತರುತ್ತೇನೆ. ಅದನ್ನು ನಾನು ನಿಮಗೆ ಒಂದೊಂದಾಗಿ ತೋರಿಸುತ್ತೇನೆ. ತಂಡಕ್ಕಾಗಿ ಹೊಸ ತಂತ್ರವನ್ನು ಹೊತ್ತು ಬರುತ್ತೇನೆ,” ಎಂದು ಅವರು ಹೇಳಿದ್ದಾರೆ.
ಪಿಕೆಎಲ್‌ನಲ್ಲಿ ತಮ್ಮ ಆಟದ ವಿಕಸನ ಕುರಿತು ಮಾತನಾಡಿದ ಪರ್ದೀಪ್, “ಎರಡನೇ ಋತುವಿನಲ್ಲಿ, ನಾನು ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ ಆ ನಂತರದ ಋತುಗಳಲ್ಲಿ, ನಾನು ಸ್ಥಿರವಾಗಿ ಸುಧಾರಿಸಿದೆ. ಆಟವು ದಿನದಿಂದ ದಿನಕ್ಕೆ ಬದಲಾಗುತ್ತದೆ. ಯಾವಾಗಲೂ ಒಂದೇ ಆಗಿರುವುದಿಲ್ಲ. ಕೆಲವೊಮ್ಮೆ ನಮಗೆ ಅದು ಒಳ್ಳೆಯದು, ಕೆಲವೊಮ್ಮೆ ಅಲ್ಲ,” ಎಂದು ಹೇಳಿದ್ದಾರೆ.
ಪಿಕೆಎಲ್ ಎರಡನೇ ಆವೃತ್ತಿಗೆ ಕಾಲಿಟ್ಟ ಪರ್ದೀಪ್, ಈಗ ಲೀಗ್‌ನಲ್ಲಿ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಲೀಗ್ ಇತಿಹಾದಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್ ಇವರ ಹೆಸರಲ್ಲಿದೆ. “ಈಗ ನಾವು 11ನೇ ಸೀಸನ್ ಆಡುತ್ತಿದ್ದೇನೆ. ಆದರೆ ನಾನು ಮತ್ತೆ ಹೊಸದಾಗಿ ಪ್ರಾರಂಭಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಭಾವನೆ ನಿಜವಾಗಿಯೂ ಉತ್ತಮವಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ.