PKL 10: ಯುವ ಆಟಗಾರ ಪಂಕಜ್ ಖಡಕ್ ರೇಡಿಂಗ್; ಪಾಟ್ನಾ ಪೈರೇಟ್ಸ್ ಕೋಟೆ ಕೆಡವಿದ ಪುಣೇರಿ ಪಲ್ಟನ್
Dec 27, 2023 08:30 AM IST
ಪಾಟ್ನಾ ಪೈರೇಟ್ಸ್ ಕೋಟೆ ಕೆಡವಿದ ಪುಣೇರಿ ಪಲ್ಟನ್.
- Pro Kabaddi League season 10: ಪ್ರೊ ಕಬಡ್ಡಿ ಲೀಗ್-10 42ನೇ ಪಂದ್ಯದಲ್ಲಿ ಯುವ ಆಟಗಾರ ಪಂಕಜ್ ಖಡಕ್ ರೇಡಿಂಗ್ನಿಂದ ಪಾಟ್ನಾ ಪೈರೇಟ್ಸ್ ವಿರುದ್ಧ ಪುಣೇರಿ ಪಲ್ಟನ್ ಭರ್ಜರಿ ಗೆಲುವು ದಾಖಲಿಸಿದೆ.
ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ (Pro Kabaddi league 10) 42ನೇ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ತಂಡದ ವಿರುದ್ಧ ಪುಣೇರಿ ಪಲ್ಟನ್ ತಂಡ (Puneri Paltan vs Patna Pirates) 46-28 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆರಂಭದಿಂದ ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪಲ್ಟನ್ ಅದ್ಭುತ ಗೆಲುವು ಸಾಧಿಸುವ ಮೂಲಕ 18 ಅಂಕಗಳ ಅಂತರದಿಂದ ಜಯಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಪೈರೇಟ್ಸ್ ಕೋಟೆ ಕೆಡವಿದ ಪಂಕಜ್
ಚೆನ್ನೈನ ಜವಾಹರ್ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಪಂದ್ಯದಲ್ಲಿ ಕೊನೆಯವರೆಗೂ ಜೋಶ್ ತೋರಿಸಿದ ಪಲ್ಟನ್, ಪಾಟ್ನಾ ಮೇಲೆ ಸವಾರಿ ಮಾಡಿತು. ಯುವ ಆಟಗಾರ ಪಂಕಜ್ ಮೋಹಿತ್, ಖಡಕ್ ರೇಡಿಂಗ್ ನಡೆಸಿ ಪೈರೇಟ್ಸ್ ಕೋಟೆಯನ್ನು ಕೆಡವಿದರು. ಎದುರಾಳಿ ಆಟಗಾರರು ಆತನ ರೇಡಿಂಗ್ ಆರ್ಭಟಕ್ಕೆ ಬ್ರೇಕ್ ಹಾಕುವಲ್ಲಿ ವಿಫಲರಾದರು. 10 ರೇಡಿಂಗ್ ಸೇರಿ 11 ಅಂಕ ಕಲೆ ಹಾಕುವಲ್ಲಿ ಯಶಸ್ವಿಯಾದರು.
ಒಂದೆಡೆ ಬಿರುಗಾಳಿ ರೇಡಿಂಗ್ ನಡೆಸುತ್ತಿದ್ದ ಪಂಕಜ್ಗೆ ಸಹ ಆಟಗಾರ ಮೋಹಿತ್ ಗೋಯತ್ ಉತ್ತಮ ಸಾಥ್ ಕೊಟ್ಟರು. ಅತ್ಯಂತ ಚಾಣಾಕ್ಷದಿಂದ ರೇಡಿಂಗ್ ನಡೆಸಿದ ಮೋಹಿತ್, 9 ಅಂಕ ಕಲೆ ಹಾಕಿ ಗಮನ ಸೆಳೆದರು. ಅಸ್ಲಾಂ ಇನಾಮದಾರ್ ಮತ್ತು ಮೊಹಮ್ಮದ್ ಜಾಶಾಡ್ಲೂಯಿ ತಲಾ 6 ಅಂಕ, ಅಭಿನೇಶ್ (5), ಗೌರವ್(2) ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸಚಿನ್ಗೆ ಸಾಥ್ ನೀಡದ ಸಹ ಆಟಗಾರರು
ಆದರೆ ಪಾಟ್ನಾದ ಪ್ರಧಾನ ರೇಡರ್ ಸಚಿನ್ಗೆ ತಮ್ಮ ಸಹ ಆಟಗಾರರಿಂದ ಸಾಥ್ ಸಿಗಲಿಲ್ಲ. ಅಲ್ಲದೆ, ಆತನ ಆಟದಲ್ಲೂ ಅಗ್ರೆಸ್ಸಿವ್ ಇರಲಿಲ್ಲ. ಹೀಗಾಗಿ 15 ರೇಡಿಂಗ್ ನಡೆಸಿ ಗಳಿಸಿದರೂ 9 ಅಂಕ ಮಾತ್ರ ಗಳಿಸಲಷ್ಟೇ ಶಕ್ತರಾದರು. ನಾಯಕ ನೀರಜ್ ಒಂದೂ ಅಂಕ ಸಂಪಾದಿಸಲಿಲ್ಲ. ಸುಧಾಕರ್ (5), ಮಂಜಿತ್ (4) ಅಂಕ ಪಡೆದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಒಟ್ಟಾರೆ 28 ಅಂಕ ಸಂಪಾದಿಸಲು ಮಾತ್ರ ಶಕ್ತವಾಯಿತು.
ಅಂಕಪಟ್ಟಿಯಲ್ಲಿ ಯಾವ ಸ್ಥಾನ?
ಗೆದ್ದ ಪುಣೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈವರೆಗೂ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 6 ಪಂದ್ಯಗಳಲ್ಲಿ ಗೆದ್ದಿದೆ. ಅಲ್ಲದೆ, 1ರಲ್ಲಿ ಸೋಲನುಭವಿಸಿದೆ. ಸದ್ಯ 31 ಅಂಕ ಸಂಪಾದಿಸಿರುವ ಪಲ್ಟನ್, ಪ್ರಥಮ ಸ್ಥಾನವನ್ನು ಗಟ್ಟಿಗೊಳಿಸಿದೆ. ಮತ್ತೊಂದೆಡೆ ಸೋತ ಪಾಟ್ನಾ, 9ನೇ ಸ್ಥಾನದಲ್ಲಿದೆ. ಒಟ್ಟು 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 3ರಲ್ಲಿ ಗೆಲುವು, 4ರಲ್ಲಿ ಸೋಲಿನ ರುಚಿ ನೋಡಿದೆ. 17 ಅಂಕ ಸಂಪಾದಿಸಿದೆ. ಬೆಂಗಳೂರು ಬುಲ್ಸ್ 19 ಪಾಯಿಂಟ್ಸ್ಗಳೊಂದಿಗೆ 7ನೇ ಸ್ಥಾನದಲ್ಲಿದೆ.