Padma Shri 2024: ರೋಹನ್ ಬೋಪಣ್ಣ ಸೇರಿ 7 ಕ್ರೀಡಾಪಟುಗಳಿಗೆ ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಪಟ್ಟಿ
Jan 26, 2024 06:16 AM IST
ರೋಹನ್ ಬೋಪಣ್ಣ.
- Padma Shri 2024 awards: ಗಣರಾಜ್ಯೋತ್ಸವದ ಮುನ್ನಾದಿನ ಕೇಂದ್ರ ಸರ್ಕಾರವು 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಹಲವಾರು ಗಣ್ಯರ ಪೈಕಿ ಕ್ರೀಡಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 7 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗಣರಾಜ್ಯೋತ್ಸವದ ಮುನ್ನಾದಿನ 2024ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗಳಿಗೆ (Padma Shri 2024 awards) ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದೆ. 7 ಕ್ರೀಡಾಪಟುಗಳು ಸೇರಿ ಒಟ್ಟು 110 ಮಂದಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ 7 ಕ್ರೀಡಾಪಟುಗಳಲ್ಲಿ ಹಿರಿಯ ಟೆನಿಸ್ ಪಟು ರೋಹನ್ ಬೋಪಣ್ಣ (Rohan Bopanna) ಕೂಡ ಸೇರಿದ್ದಾರೆ.
ಕೇಂದ್ರ ಗೃಹ ಸಚಿವಾಲಯ 5 ಪದ್ಮ ವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿ ಒಳಗೊಂಡಿರುವ ಪದ್ಮ ಪ್ರಶಸ್ತಿ 2024 ವಿಜೇತರ ಪಟ್ಟಿಯನ್ನು ಜನವರಿ 25ರಂದು ಗುರುವಾರ ಬಿಡುಗಡೆ ಮಾಡಿದೆ. ಈ ಪೈಕಿ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ 7 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರ ಪಟ್ಟಿಯನ್ನು ಈ ಮುಂದೆ ನೋಡೋಣ.
ರೋಹನ್ ಬೋಪಣ್ಣಗೆ ಪದ್ಮಶ್ರೀ
ಆಸ್ಟ್ರೇಲಿಯನ್ ಓಪನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿರುವ 43 ವರ್ಷದ ರೋಹನ್ ಬೋಪಣ್ಣಗೆ ಪದ್ಮಶ್ರೀ ಗೌರವ ಸಿಕ್ಕಿದೆ. ಸದ್ಯ ಡಬಲ್ಸ್‌ನಲ್ಲಿ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸೇರಿ ಫೈನಲ್ನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಬೋಪಣ್ಣ ಅವರು 2023ರ ಏಷ್ಯನ್ ಗೇಮ್ಸ್‌ನಲ್ಲಿ ರುತುಜಾ ಭೋಸ್ಲೆ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದರು. ಕಳೆದ ವರ್ಷ 3 ಗ್ರ್ಯಾಂಡ್‌ಸ್ಲಾಮ್ ಪಂದ್ಯಾವಳಿಗಳ ಫೈನಲ್‌ಗೆ ತಲುಪಿದರು.
43ರ ಹರೆಯದ ಬೋಪಣ್ಣ ಎಟಿಪಿ ಡಬಲ್ಸ್ ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನವನ್ನು ಗಳಿಸಿ ಬುಧವಾರ ವಿಶ್ವ ಟೆನಿಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 4ನೇ ಭಾರತದ ಟೆನಿಸ್ ಆಟಗಾರ ಎನಿಸಿಕೊಂಡರು. ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ 2024 ರ ಫೈನಲ್‌ಗೆ ಪ್ರವೇಶಿಸಿದ್ದು, ಜನವರಿ 27ರಂದು ತಮ್ಮ 2ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿಯಾಗಿಸಿಕೊಂಡಿದ್ದಾರೆ.
ಜೋಶ್ನಾ ಚಿನಪ್ಪಗೂ ನಾಗರಿಕ ಪ್ರಶಸ್ತಿ
ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನಪ್ಪ ಅವರು 2022ರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. 37ರ ಹರೆಯದ ಚಿನಪ್ಪ 2022ರಲ್ಲಿ ಡಬಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಹಾಗೂ 2014ರಲ್ಲಿ ಕಾಮನ್‌ವೆಲ್ತ್ ಚಿನ್ನ ಗೆದ್ದಿದ್ದರು.
ಅನುಭವಿ ಪ್ಯಾರಾ ಈಜುಗಾರ ಸತೇಂದ್ರ ಸಿಂಗ್ ಲೋಹಿಯಾ ಅವರಿಗೆ ಪದ್ಮಶ್ರೀ 2024 ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲೋಹಿಯಾ 2018ರಲ್ಲಿ ಈಜು ರಿಲೇ ತಂಡದ ಭಾಗವಾಗಿದ್ದರು.
ಗೋವಾದಲ್ಲಿ 2023ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ದಾಖಲೆ ಮುರಿಯುವ ಪ್ರದರ್ಶನದ ನಂತರ ಹಿರಿಯ ಮಲ್ಲಖಂಬ ತರಬೇತುದಾರ ಉದಯ್ ವಿಶ್ವನಾಥ್ ದೇಶಪಾಂಡೆ ಅವರು ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ.
ಮಾಜಿ ಬಿಲ್ಲುಗಾರ್ತಿ ಮತ್ತು ಕೋಚ್ ಪೂರ್ಣಿಮಾ ಮಹತೋ, ಬ್ಯಾಡ್ಮಿಂಟನ್ ಕೋಚ್ ಗೌರವ್ ಖನ್ನಾ ಮತ್ತು ಹಾಕಿ ತರಬೇತುದಾರ ಹರ್ಬಿಂದರ್ ಸಿಂಗ್ ಅವರು ಕ್ರೀಡೆಯಲ್ಲಿ ತಮ್ಮ ವಿಶಿಷ್ಟ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಪಟ್ಟಿಯಲ್ಲಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಪಟ್ಟಿ
- ರೋಹನ್ ಬೋಪಣ್ಣ - ಟೆನಿಸ್ (ಕ್ರೀಡಾಪಟು)
- ಜೋಷ್ನಾ ಚಿನಪ್ಪ - ಸ್ಕ್ವಾಷ್ (ಕ್ರೀಡಾಪಟು)
- ಉದಯ ವಿಶ್ವನಾಥ ದೇಶಪಾಂಡೆ - ಮಲ್ಲಖಂಬ (ತರಬೇತುದಾರ)
- ಗೌರವ್ ಖನ್ನಾ - ಬ್ಯಾಡ್ಮಿಂಟನ್ (ಕೋಚ್)
- ಸತೇಂದ್ರ ಸಿಂಗ್ ಲೋಹಿಯಾ - ಈಜು (ಕ್ರೀಡಾಪಟು)
- ಹರ್ಬಿಂದರ್ ಸಿಂಗ್ - ಹಾಕಿ (ಕೋಚ್)
- ಪೂರ್ಣಿಮಾ ಮಹತೋ - ಬಿಲ್ಲುಗಾರಿಕೆ (ಮಾಜಿ ಅಥ್ಲೀಟ್ ಮತ್ತು ಕೋಚ್)