Sai Sudharsan: ಸಾಯಿ ಸುದರ್ಶನ್ ಭಾರತದ ಪರ ಅದ್ಭುತಗಳನ್ನೇ ಸೃಷ್ಟಿಸಲಿದ್ದಾರೆ: ಟೀಮ್ ಇಂಡಿಯಾಗೆ ಕರೆ ತರುವ ಸುಳಿವು ನೀಡಿದ ಹಾರ್ದಿಕ್
Apr 05, 2023 06:17 PM IST
ಹಾರ್ದಿಕ್ ಪಾಂಡ್ಯ ಮತ್ತು ಸಾಯಿ ಸುದರ್ಶನ್
- Sai Sudharsan: ಮುಂದಿನ ಎರಡು ವರ್ಷಗಳಲ್ಲಿ ಸಾಯಿ ಸುದರ್ಶನ್ ಅವರು ಫ್ರಾಂಚೈಸಿ ಕ್ರಿಕೆಟ್‌ಗೆ ಮತ್ತು ಭಾರತ ಕ್ರಿಕೆಟ್‌ಗೆ ಏನಾದರೂ ಉತ್ತಮವಾದದ್ದನ್ನೇ ಮಾಡುತ್ತಾರೆ ಎಂದು ಆತನನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕರೆ ತರುವ ಸುಳಿವನ್ನೂ ಹಾರ್ದಿಕ್ ಪಾಂಡ್ಯ ನೀಡಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಗುಜರಾತ್ ಟೈಟಾನ್ಸ್ (Gujarat Titans) 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ತಮಿಳುನಾಡು ಯುವ ಕ್ರಿಕೆಟಿಗ ಸಾಯಿ ಸುದರ್ಶನ್ (Sai Sudharsan), ಜಬರ್ದಸ್ತ್ ಅರ್ಧಶತಕದ ಮೂಲಕ ದಿಗ್ಗಜರ ಗಮನ ಸೆಳೆದಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೂಡ ಅವರನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ್ದು, ಟೀಮ್ ಇಂಡಿಯಾಗೆ (Team India) ಕರೆತರುವ ಸುಳಿವನ್ನೂ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಬಹು ಬೇಗನೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ವೃದ್ಧಿಮಾನ್ ಸಾಹ (Wriddhiman Saha), ಶುಭ್ಮನ್ ಗಿಲ್ (Shubman Gill) ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತ್ವರಿತವಾಗಿ ವಿಕೆಟ್ ಒಪ್ಪಿಸಿದರು. ಇದರಿಂದ ಗುಜರಾತ್ ಒತ್ತಡಕ್ಕೆ ಸಿಲುಕಿತು. ಆಗ ಸಾಯಿ ಸುದರ್ಶನ್ ಒತ್ತಡದ ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದರು. ಸನ್ನಿವೇಶಕ್ಕೆ ತಕ್ಕಂತೆ ಆಟವಾಡಿ ಗಮನ ಸೆಳೆದರು.
ಒತ್ತಡವನ್ನು ಮೆಟ್ಟಿನಿಂತ 21 ವರ್ಷದ ಎಡಗೈ ಬ್ಯಾಟರ್ 48 ಎಸೆತಗಳಲ್ಲಿ ಅಜೇಯ 62 ರನ್ ಸಿಡಿಸಿ, ಗುಜರಾತ್ ಸತತ 2ನೇ ಗೆಲುವಿಗೆ ಕಾರಣರಾದರು. ಪಂದ್ಯದ ನಂತರ ಸುದರ್ಶನ್ ಪ್ರದರ್ಶನವನ್ನು ಶ್ಲಾಘಿಸಿದ ನಾಯಕ ಹಾರ್ದಿಕ್ ಪಾಂಡ್ಯ, ಚೆನ್ನೈ ಮೂಲದ ಕ್ರಿಕೆಟಿಗ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸುದರ್ಶನ್ ಇದೇ ರೀತಿ ಬ್ಯಾಟಿಂಗ್ ಮಾಡಲು ಯಶಸ್ವಿಯಾದರೆ, ಮುಂದಿನ ಒಂದೆರಡು ವರ್ಷಗಳಲ್ಲಿ ಫ್ರಾಂಚೈಸಿ ಪರ ಮತ್ತು ಭಾರತ ಪರವೂ ಅದ್ಭುತಗಳನ್ನು ಸೃಷ್ಟಿಸಬಹುದು ಎಂದು ಹೇಳಿದ್ದಾರೆ.
ಅವರು (ಸಾಯಿ ಸುದರ್ಶನ್) ಭಯಂಕರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆತನಿಗೆ ಸಿಬ್ಬಂದಿಯಿಂದ ಅಪಾರ ಬೆಂಬಲ ಸಿಗುತ್ತಿದೆ. ಕಳೆದ 15 ದಿನಗಳಿಂದ ಅದ್ಭುತ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು. ಸದ್ಯ ಹೊರ ಬಂದಿರುವ ಫಲಿತಾಂಶ ಅವರ ಕಠಿಣ, ಪರಿಶ್ರಮಕ್ಕೆ ಸಿಕ್ಕ ಫಲ. ಮುಂದಿನ ಎರಡು ವರ್ಷಗಳಲ್ಲಿ ಅವರು ಫ್ರಾಂಚೈಸಿ ಕ್ರಿಕೆಟ್‌ಗೆ ಮತ್ತು ಭಾರತ ಕ್ರಿಕೆಟ್‌ಗೆ ಏನಾದರೂ ಉತ್ತಮವಾದದ್ದನ್ನೇ ಮಾಡುತ್ತಾರೆ ಎಂದು ಆತನನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕರೆ ತರುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸಾಯಿ ಸುದರ್ಶನ್, ಒತ್ತಡಕ್ಕೆ ಒಳಗಾಗಿದ್ದರೆ, ಇಲ್ಲವೇ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಆದರೆ, ನಾನು ಒತ್ತಡಕ್ಕೆ ಒಳಗಾಗಿರಲಿಲ್ಲ. ಕೆಲವು ವಿಚಾರಗಳ ಬಗ್ಗೆ ಲೆಕ್ಕ ಹಾಕುತ್ತಿದ್ದೆ. ನಾನು ಯಾವ ಆಯ್ಕೆ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಆ ಮೂಲಕ ಆಟವನ್ನು ಆಳವಾಗಿ ತೆಗೆದುಕೊಂಡು ಹೋಗುವುದು ನನ್ನ ಯೋಜನೆಯಾಗಿತ್ತು. ಅದರಂತೆ ಬ್ಯಾಟಿಂಗ್ ನಡೆಸಿ, ಯಶಸ್ಸು ಕಂಡೆ ಎಂದು ಸುದರ್ಶನ್ ಹೇಳಿದ್ದಾರೆ.
IPL 2023: ಸಾಯಿ ಸುದರ್ಶನ್ ಆಟಕ್ಕೆ ಶಹಬ್ಬಾಸ್ ಎಂದ ಗವಾಸ್ಕರ್, ಅನಿಲ್ ಕುಂಬ್ಳೆ
ಇನ್ನು ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್ ಅವರು, ಸಾಯಿ ಸುದರ್ಶನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಅನುಭವಿ ಆಟಗಾರನಂತೆ ಸುದರ್ಶನ್ ಬ್ಯಾಟಿಂಗ್ ನಡೆಸಿದರು ಎಂದು ಗವಾಸ್ಕರ್ ಗುಣಗಾನ ಮಾಡಿದ್ದಾರೆ. ಇದೇ ಪ್ರದರ್ಶನ ಮುಂದುವರೆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ ನೀಡುವ ದಿನಗಳು ದೂರ ಇರುವುದಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಗವಾಸ್ಕರ್ ಜೊತೆಗೆ ಅನಿಲ್ ಕುಂಬ್ಳೆ ಸಹ ತಮಿಳುನಾಡು ಕ್ರಿಕೆಟಿಗನ ಬ್ಯಾಟಿಂಗ್ ನೋಡಿ ಮಂತ್ರಮುಗ್ಧರಾಗಿದ್ದಾರೆ. ಸಾಯಿ ಸುದರ್ಶನ್ ತುಂಬಾ ಸಂಘಟಿತ ಆಟಗಾರನಂತೆ ಕಾಣುತ್ತಿದ್ದರು. ವೇಗದ ಬೌಲಿಂಗ್ ಮತ್ತು ಸ್ವಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಅವರು ಮೊದಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದರೂ, 2ನೇ ಪಂದ್ಯದಲ್ಲಿ ಖಂಡಿತವಾಗಿಯೂ ಪ್ರಭಾವ ಬೀರಿದರು ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ. ಈ ಸುದ್ದಿಯ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.