logo
ಕನ್ನಡ ಸುದ್ದಿ  /  ಕ್ರೀಡೆ  /  South Africa Vs West Indies: ವಿಂಡೀಸ್ ವಿರುದ್ಧ 284 ರನ್‌ಗಳ ಸುಲಭ ಜಯ ಸಾಧಿಸಿದ ಹರಿಣಗಳು; ಟೆಸ್ಟ್‌ ಸರಣಿ ಕ್ಲೀನ್‌ಸ್ವೀಪ್

South Africa vs West Indies: ವಿಂಡೀಸ್ ವಿರುದ್ಧ 284 ರನ್‌ಗಳ ಸುಲಭ ಜಯ ಸಾಧಿಸಿದ ಹರಿಣಗಳು; ಟೆಸ್ಟ್‌ ಸರಣಿ ಕ್ಲೀನ್‌ಸ್ವೀಪ್

HT Kannada Desk HT Kannada

Mar 11, 2023 08:45 PM IST

google News

ದಕ್ಷಿಣ ಆಫ್ರಿಕಾಗೆ ಗೆಲುವು

    • 280 ಎಸೆತಗಳನ್ನು ಎದುರಿಸಿದ ಬವುಮಾ 20 ಬೌಂಡರಿ ಸಹಿತ 172 ರನ್‌ ಗಳಿಸಿ ಔಟಾದರು. ಸೋಲುವ ಹಂತದಲ್ಲಿದ್ದ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ದಕ್ಷಿಣ ಆಫ್ರಿಕಾಗೆ ಗೆಲುವು
ದಕ್ಷಿಣ ಆಫ್ರಿಕಾಗೆ ಗೆಲುವು (REUTERS)

ಜೊಹಾನ್ಸ್‌ಬರ್ಗ್‌ನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಅಂತ್ಯಗೊಂಡ ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಭರ್ಜರಿ ಜಯ ಗಳಿಸಿದೆ. ಆ ಮೂಲಕ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ. ನಾಯಕ ತೆಂಬಾ ಬವುಮಾ ಅಮೋಘ ಶತಕದ ನೆರವಿನಿಂದ ಹರಿಣಗಳು 284 ರನ್‌ಗಳ ಸುಲಭ ಜಯ ಸಾಧಿಸಿದ್ದಾರೆ.

ನಾಲ್ಕನೇ ದಿನದಂದು ದಕ್ಷಿಣ ಆಫ್ರಿಕಾ ತಂಡವು ಪ್ರವಾಸಿ ವಿಂಡೀಸ್‌ ತಂಡದ ಗೆಲುವಿಗಾಗಿ 391 ರನ್‌ಗಳ ಗುರಿ ನೀಡಿತು. ಆದರೆ ವಿಂಡೀಸ್‌ ತಂಡವು 35.1 ಓವರ್‌ಗಳಲ್ಲಿ 106 ರನ್‌ ಗಳಿಸಿ ಆಲೌಟ್ ಆಯ್ತು‌. ಸ್ಪಿನ್ನರ್ ಹಾರ್ಮರ್ 45 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರು. ಮತ್ತೊಂದೆಡೆ ಕೊಯೆಟ್ಜಿ ಕೂಡಾ 37 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಬಳಿಸಿದರು. ವಿಂಡೀಸ್‌ ಪರ ಜೋಶುವಾ ದ ಸಿಲ್ವಾ 34 ರನ್‌ ಗಳಿಸುವ ಮೂಲಕ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು.

ಈ ಪಂದ್ಯದಲ್ಲಿ ಟಾಸ್​ ಗೆದ್ದ ಸೌತ್​ ಆಫ್ರಿಕಾ ಮೊದಲು ಬ್ಯಾಟಿಂಗ್​ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಏಡನ್​ ಮಾರ್ಕರಮ್​ (96) ಮತ್ತು ಟೋನಿ ಡಿ ಜೊರ್ಜಿ (85) ಅಮೋಘ ಅರ್ಧಶತಕಗಳ ನೆರವಿನಿಂದ 320 ರನ್ ​ಗಳಿಸಿ ಆಲೌಟ್​ ಆಯಿತು. ವಿಂಡೀಸ್‌ ಪರ ಅಲ್ಜಾರಿ ಜೋಸೆಫ್​​, ಕೈಲ್​ ಮೇಯರ್ಸ್​​ ಮತ್ತು ಗುಡಕೇಶ್​ ಮೋಟಿ ತಲಾ 3 ವಿಕೆಟ್​ ಪಡೆದು ಮಿಂಚಿದರು.

ಹರಿಣಗಳ ಸವಾಲಿನ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​​, ಜೇಸನ್​ ಹೋಲ್ಡರ್​​ ಅಜೇಯ 81 ರನ್‌ ನಡುವೆಯೂ 251ಕ್ಕೆ ಇನ್ನಿಂಗ್ಸ್‌ ಮುಗಿಸಿತು. ಹೀಗಾಗಿ 69 ರನ್‌​ಗಳ ಆರಂಭಿಕ ಮುನ್ನಡೆಯೊಂದಿಗೆ ಹರಿಣಗಳು ಎರಡನೇ ಇನ್ನಿಂಗ್ಸ್​ ಆರಂಭಿಸಿದರು. ತಂಡದ ಮೊತ್ತ 32 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್‌​ಗಳನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾ ಕೂಡಾ ಆರಂಭಿಕ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ತೆಂಬಾ ಬವುಮಾ ತಂಡಕ್ಕೆ ಆಸರೆಯಾಯ್ತು.

ರೆಕ್ಕೆ ಕಳೆದುಕೊಂಡ ಹಕ್ಕಿಯಂತಾಗಿದ್ದ ತಂಡವನ್ನು ಒಂಟಿಯಾಗಿ ಮುನ್ನಡೆಸಿದರು. ಒಂದೆಡೆ ವಿಕೆಟ್‌ಗಳು ಉದುರುತ್ತಿದ್ದರೂ, ಏಕಾಂಕಿಯಾಗಿ ಹೋರಾಡಿ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. ಆಕರ್ಷಕ ಶತಕ ಸಿಡಿಸಿ ಮಿಂಚಿದರು. 2016ರಲ್ಲಿ ಕೊನೆಯ ಬಾರಿಗೆ ಟೆಸ್ಟ್​ ಶತಕ ಸಿಡಿಸಿದ್ದ ಆಫ್ರಿಕಾ ನಾಯಕ​, ಆ ಬಳಿಕ ಇದೇ ಮೊದಲ ಬಾರಿಗೆ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.

280 ಎಸೆತಗಳನ್ನು ಎದುರಿಸಿದ ಬವುಮಾ 20 ಬೌಂಡರಿ ಸಹಿತ 172 ರನ್‌ ಗಳಿಸಿ ಔಟಾದರು. ಸೋಲುವ ಹಂತದಲ್ಲಿದ್ದ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಸರಣಿಯ ಎರಡೂ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಐಡನ್‌ ಮರ್ಕ್ರಾಮ್‌ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಸರಣಿಯ ಮೊದಲ ಪಂದ್ಯವನ್ನು ಹರಿಣಗಳು 87 ರನ್‌ಗಳಿಂದ ಗೆದ್ದುಕೊಂಡಿದ್ದರು. ಈಗ ಎರಡನೇ ಪಂದ್ಯವನ್ನು ಮತ್ತಷ್ಟು ದೊಡ್ಡ ಅಂತರದಿಂದ ಗೆದ್ದಿದ್ದಾರೆ. ಇಲ್ಲಿಗೆ ಟೆಸ್ಟ್‌ ಸರಣಿ ಮುಕ್ತಾಯಗೊಂಡಿದ್ದು, ಮಾರ್ಚ್‌ 16ರಿಂದ ಉಭಯ ತಂಡಗಳ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಬಳಿಕ ಟಿ20 ಸರಣಿ ನಡೆಯಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ