logo
ಕನ್ನಡ ಸುದ್ದಿ  /  ಕ್ರೀಡೆ  /  Top 5 T20i Batters In 2022: 'ಕ್ಷಮಿಸಿ, ನನ್ನ ತಂಡದಲ್ಲಿ ಬಾಬರ್‌ಗೆ ಸ್ಥಾನವಿಲ್ಲ': ಅಗ್ರ 5 ಬ್ಯಾಟರ್‌ಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ

Top 5 T20I batters in 2022: 'ಕ್ಷಮಿಸಿ, ನನ್ನ ತಂಡದಲ್ಲಿ ಬಾಬರ್‌ಗೆ ಸ್ಥಾನವಿಲ್ಲ': ಅಗ್ರ 5 ಬ್ಯಾಟರ್‌ಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ

Jayaraj HT Kannada

Dec 31, 2022 08:30 PM IST

google News

ಬಾಬರ್ ಅಜಮ್ - ವಿರಾಟ್ ಕೊಹ್ಲಿ

    • ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು, ಕೊಹ್ಲಿ ಕಳಪೆ ಫಾರ್ಮ್‌ನಿಂದ ಉತ್ತುಂಗಕ್ಕೇರಿರುವ ಪರಿವರ್ತನೆಯನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರಾ, 2022ರ ಅಗ್ರ ಐದು ಟಿ20 ಬ್ಯಾಟರ್‌ಗಳು ಯಾರು ಎಂಬುದನ್ನು ಹೇಳಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಅವರು ಕೊಹ್ಲಿಗೆ ಮೂರನೇ ಸ್ಥಾನವನ್ನು ನೀಡಿದ್ದಾರೆ.
ಬಾಬರ್ ಅಜಮ್ - ವಿರಾಟ್ ಕೊಹ್ಲಿ
ಬಾಬರ್ ಅಜಮ್ - ವಿರಾಟ್ ಕೊಹ್ಲಿ (getty images/file photo)

ವರ್ಷಗಳಿಂದ ಫಾರ್ಮ್‌ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಪಾಲಿಗೆ 2022 ಪ್ರಮುಖ ವರ್ಷ. ಈ ವರ್ಷ ಸ್ಪೋಟಕವಾಗಿ ಫಾರ್ಮ್‌ಗೆ ಮರಳಿದ ಕಿಂಗ್‌, ಮತ್ತೆ ಕ್ರಿಕೆಟ್‌ ಲೋಕವನ್ನು ಆಳುತ್ತಿದ್ದಾರೆ. 2022ರ ಏಷ್ಯಾಕಪ್‌ಗೂ ಮೊದಲು ಬ್ಯಾಟ್‌ ಬೀಸಲು ಹೆಣಗಾಡುತ್ತಿದ್ದ ವಿರಾಟ್‌, 1020 ದಿನಗಳ ನಂತರ ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಮತ್ತೆ ತಾವು ರನ್ ಮಷಿನ್ ಎಂಬುದನ್ನು ಸಾಬೀತುಪಡಿಸಿದರು.

ಏಷ್ಯಾಕಪ್ ಸೂಪರ್ ಫೋರ್ ಹಂತದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ 71ನೇ ಶತಕ ಸಿಡಿಸಿ, ಶತಕದ ಬರ ನೀಗಿಸಿದರು. ಆ ಬಳಿಕ ಟಿ20 ವಿಶ್ವಕಪ್‌ನಲ್ಲಿಯೂ ತಮ್ಮ ಅಮೋಘ ಆಟ ಮುಂದುವರೆಸಿದರು. ಆರು ಪಂದ್ಯಗಳಲ್ಲಿ 98.66ರ ಸರಾಸರಿಯಲ್ಲಿ 296 ರನ್ ಗಳಿಸಿದರು. 2022 ಮುಕ್ತಾಯವಾಗುತ್ತಿದ್ದಂತೆ, ಕೊಹ್ಲಿ ಟಿ20ಯಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಬ್ಲೂ ಬಾಯ್ಸ್‌ ಪರ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು, ಕೊಹ್ಲಿ ಕಳಪೆ ಫಾರ್ಮ್‌ನಿಂದ ಉತ್ತುಂಗಕ್ಕೇರಿರುವ ಪರಿವರ್ತನೆಯನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಚೋಪ್ರಾ, 2022ರ ಅಗ್ರ ಐದು ಟಿ20 ಬ್ಯಾಟರ್‌ಗಳು ಯಾರು ಎಂಬುದನ್ನು ಹೇಳಿದ್ದಾರೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಅವರು ಕೊಹ್ಲಿಗೆ ಮೂರನೇ ಸ್ಥಾನವನ್ನು ನೀಡಿದ್ದಾರೆ.

2022ರಲ್ಲಿನ ಆಟಗಾರರ ಅಂಕಿ-ಅಂಶಗಳು ಮತ್ತು ತಮ್ಮ ಸ್ವಂತ ವಿಶ್ಲೇಷಣೆಯ ಮೂಲಕ ಆಟಗಾರರಿಗೆ ಚೋಪ್ರಾ ಶ್ರೇಯಾಂಕವನ್ನು ನೀಡಿದ್ದಾರೆ. ಅದರ ಪ್ರಕಾರ, ಸೂರ್ಯಕುಮಾರ್ ಯಾದವ್‌ಗೆ ಮೊದಲ ಸ್ಥಾನ ನೀಡಿದ್ದಾರೆ. ಆ ಬಳಿಕ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ಗೆ ಎರಡನೇ ಶ್ರೇಯಾಂಕ ನೀಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಗೆ ಮೂರನೇ ಸ್ಥಾನ ನೀಡಿದ್ದು, ಜಿಂಬಾಬ್ವೆಯ ಸಿಕಂದರ್ ರಜಾ ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಕ್ರಮವಾಗಿ ನಾಲ್ಕು‌ ಮತ್ತು ಐದನೇ ಬ್ಯಾಟರ್‌ಗಳು ಎಂದು ಚೋಪ್ರಾ ಹೇಳಿದ್ದಾರೆ. ಇದೇ ವೇಳೆ ಕೊಹ್ಲಿಯನ್ನು ಹಾಡಿ ಹೊಗಳಿದ ಅವರು, 2022ರಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ ವಿರಾಟ್‌ ಆಟವನ್ನು ಶ್ಲಾಘಿಸಿದ್ದಾರೆ.

“ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಕೆಲವು ವರ್ಷಗಳ ಕಾಲ ಫಾರ್ಮ್‌ಗಾಗಿ ಹೋರಾಡಿದರು. ಐಪಿಎಲ್‌ನಲ್ಲೂ ಅವರ ಪ್ರದರ್ಶನ ಸಾಕಷ್ಟು ಕೆಳಮಟ್ಟದಲ್ಲಿತ್ತು. ಅವರ ಪಾಲಿಗೆ ಯಾವುದು ಕೂಡಾ ಸರಿ ದಾರಿಯಲ್ಲಿ ಇರಲಿಲ್ಲ. ಆದರೂ, 2022ರ ಅಂತ್ಯದ ವೇಳೆಗೆ, ಅವರು ಪುಟಿದೆದ್ದರು. ಈ ವರ್ಷದ ಟಿ20ಗಳಲ್ಲಿ, ಕೊಹ್ಲಿ 20 ಪಂದ್ಯಗಳಲ್ಲಿ 55.78 ರ ಸರಾಸರಿಯಲ್ಲಿ 138.23 ಸ್ಟ್ರೈಕ್ ರೇಟ್‌ನೊಂದಿಗೆ 781 ರನ್ ಗಳಿಸಿದ್ದಾರೆ. ಅವರು ಟಿ20 ವಿಶ್ವಕಪ್‌ನಲ್ಲಂತೂ ಅಮೋಘವಾಗಿ ಆಡಿದ್ದರು,” ಎಂದು ಚೋಪ್ರಾ ಹೇಳಿದ್ದಾರೆ.

ಈ ವರ್ಷ ಟಿ20ಯಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ, ಪಾಕಿಸ್ತಾನದ ಬಾಬರ್‌ ಅಜಮ್‌. ಆದರೂ, ಮೊದಲ ಐದು ಜನರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿಲ್ಲ. ಇದರ ಹಿಂದಿನ ತಮ್ಮ ನಿಲುವನ್ನು ಚೋಪ್ರಾ ವೀಕ್ಷಕರಿಗೆ ತಿಳಿಸಿದ್ದಾರೆ.

“ಅಂಕಿ-ಅಂಶಗಳ ಪ್ರಕಾರ, ಬಾಬರ್ ಅಜಮ್ ನಂ.5 ಆಗಿರಬೇಕು. ಆದರೆ ನಾನು ಅವರನ್ನು ನನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿಲ್ಲ. ಅವರು 26 ಪಂದ್ಯಗಳಲ್ಲಿ 735 ರನ್ ಗಳಿಸಿದ್ದಾರೆ. ಆದರೆ, ಅವರ ಸರಾಸರಿ ಕೇವಲ 32 ಮತ್ತು ಸ್ಟ್ರೈಕ್ ರೇಟ್ ಕೇವಲ 123. ಹೀಗಾಗಿ ನನ್ನನ್ನು ಕ್ಷಮಿಸಿ. ನಾನು ಅವರನ್ನು ನನ್ನ ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಬದಲಿಗೆ ನಾನು ಡೆವೊನ್ ಕಾನ್ವೆ ಅವರ ಹೆಸರನ್ನು ಸೇರಿಸುತ್ತಿದ್ದೇನೆ. 2022 ರಲ್ಲಿ ಟಿ20ಗಳಲ್ಲಿ ಕಾನ್ವೆ ಅವರ ಪ್ರದರ್ಶನ ನಂಬಲಸಾಧ್ಯವಾಗಿವೆ. ಅವರು ಈ ವರ್ಷ ಚುಟುಕು ಸ್ವರೂಪದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ್ದರೆ, ಬಹುಶಃ ಸೂರ್ಯಕುಮಾರ್ ಯಾದವ್ ಅವರನ್ನು ಕೂಡಾ ಹಿಂದಿಕ್ಕುತ್ತಿದ್ದರು,” ಎಂದು ಚೋಪ್ರಾ ಹೇಳಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ