VIDEO: ಒಂದೆಡೆ ಬ್ಯಾಟಿಂಗ್ ಬಿರುಗಾಳಿ.. ಇನ್ನೊಂದೆಡೆ ಮಾಸ್ ಡ್ಯಾನ್ಸ್.. WPLನಲ್ಲಿ ಧೂಳೆಬ್ಬಿಸಿದ ಭಾರತದ ಆಟಗಾರ್ತಿ.. ವಿಡಿಯೋ ವೈರಲ್..
Mar 06, 2023 05:13 PM IST
ಜೆಮಿಮಾ ರೋಡ್ರಿಗಸ್
- ಭಾನುವಾರ (ಮಾರ್ಚ್ 5ರಂದು) ಡೆಲ್ಲಿ ಕ್ಯಾಪಿಟಲ್ಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪಂದ್ಯ ನಡೆಯಿತು. ಆರ್ಸಿಬಿ ಚೇಸಿಂಗ್ ಮಾಡುತ್ತಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ಜೆಮಿಮಾ ರೋಡ್ರಿಗಸ್, ಅದ್ಭುತ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (Women's Premier League) ಪೂರ್ಣ ಸ್ವಿಂಗ್‌ನಲ್ಲಿದೆ. ಪಂದ್ಯಗಳು ರೋಚಕ ಹಣಾಹಣಿಗೆ ಸಾಕ್ಷಿಯಾಗುತ್ತಿವೆ. ಕೊನೆಯ ಹಂತದವರೆಗೂ ಯಾರು ಗೆಲ್ಲುತ್ತಾರೆ ಎಂಬ ಗೊಂದಲಗಳು ಸೃಷ್ಟಿಯಾಗಿವೆ. ಬೌಂಡರಿ - ಸಿಕ್ಸರ್ಗಳ ಸುರಿಮಳೆ, ವಿಕೆಟ್ ಬೇಟೆ, ರೋಚಕ ಹಣಾಹಣಿ, ಅದ್ಭುತ ಕ್ಯಾಚ್ಗಳ ಮೂಲಕ ನಮ್ಮ ನಾರಿಯರು ಅಭಿಮಾನಿಗಳಿಗೆ ಮನರಂಜನೆಯ ಹಬ್ಬದೂಟವನ್ನು ನೀಡುತ್ತಿದ್ದಾರೆ.
ಅಭಿಮಾನಿಗಳಿಗೆ ಬ್ಯಾಟ್ - ಬಾಲ್ ನಡುವಿನ ಯುದ್ಧದಿಂದ ಮಾತ್ರ ಎಂಟರ್ಟೈನ್ ಸಿಗುತ್ತಿಲ್ಲ. ಪಂದ್ಯದ ನಡುವೆಯೇ ಆಟಗಾರ್ತಿಯರೂ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದಾರೆ. ಅಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ. ಅಂತಹ ವಿಡಿಯೋಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆಮಿಮಾ ರೋಡ್ರಿಗಸ್ (Jemimah Rodrigues) ಮಾಡಿರುವ ಡ್ಯಾನ್ಸ್ ಅಗ್ರಸ್ಥಾನದಲ್ಲಿದೆ.
ಭಾನುವಾರ (ಮಾರ್ಚ್ 5ರಂದು) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) - ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳ ನಡುವೆ ಪಂದ್ಯ ನಡೆಯಿತು. ಆರ್ಸಿಬಿ ಚೇಸಿಂಗ್ ಮಾಡುತ್ತಿದ್ದಾಗ ಫೀಲ್ಡಿಂಗ್ ಮಾಡುತ್ತಿದ್ದ ಜೆಮಿಮಾ, ಬೌಂಡರಿ ಗೆರೆಯಲ್ಲಿ ಭಾರೀ ಸದ್ದು ಮಾಡಿದ್ದು ಅಸಾಮಾನ್ಯವಾಗಿತ್ತು. ಈ ವಿಡಿಯೋಗಳಲ್ಲಿ ಅದ್ಭುತ, ವಿಭಿನ್ನ ಸ್ಟೆಪ್ಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.
ಸ್ಟೇಡಿಯಂನಲ್ಲಿ ಹಾಕಲಾಗಿದ್ದ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ ಜೆಮಿಮಾ ಅವರ ನೃತ್ಯವನ್ನು ಅಭಿಮಾನಿಗಳು ತಮ್ಮ ಫೋನ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಇದನ್ನು ಸ್ವತಃ ಜೆಮಿಮಾ ಅವರೇ ರೀಟ್ವೀಟ್ ಮಾಡಿದ್ದಾರೆ ಎಂಬುದು ವಿಶೇಷ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 60 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಬ್ಯಾಟಿಂಗ್ನಲ್ಲೂ ಅಬ್ಬರಿಸಿದ್ದ ಜೆಮಿಮಾ
ಶಫಾಲಿ ವರ್ಮಾ - ಮೆಗ್ ಲ್ಯಾನಿಂಗ್ ಅವರ ಬಿರುಸಿನ ಅರ್ಧಶತಕದ ನಂತರ ಕಣಕ್ಕಿಳಿದ ಜೆಮಿಮಾ ಕೊನೆಯ ಹಂತದಲ್ಲಿ ಬಿರುಗಾಳಿ ಬ್ಯಾಟಿಂಗ್ ನಡೆಸಿದರು. 15 ಎಸೆತಗಳಲ್ಲಿ ಅಜೇಯ 22 ರನ್ ಸಿಡಿಸಿ ಮಿಂಚಿದರು. ಡೆಲ್ಲಿ ಗೆಲುವಿನ ಸಮೀಪ ಬರುತ್ತಿದ್ದಂತೆ ಜೆಮಿಮಾ ರೋಡ್ರಿಗಸ್ ಬೌಂಡರಿ ಲೈನ್‌ನಲ್ಲಿ ನಿಂತು ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು.
ಕೆಲವು ದಿನಗಳ ಹಿಂದೆ, ಜೆಮಿಮಾ ಆಯುಷ್ಮಾನ್ ಖುರಾನಾ ಅವರ ಸಹೋದರ ಅಪರಶಕ್ತಿ ಖುರಾನಾ ಅವರೊಂದಿಗೆ ಹಾಡನ್ನು ರೆಕಾರ್ಡ್ ಮಾಡಿದ್ದರು. ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡ ಬಳಿಕವೂ ಸಹ ಆಟಗಾರರ ಮುಂದೆ ಗಿಟಾರ್ ನುಡಿಸಿ, ಹಾಡಿ ಮನರಂಜಿಸಿದರು. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಡೆಲ್ಲಿ-ಬೆಂಗಳೂರು ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಆರ್ಸಿಬಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಲು ಸಾಧ್ಯವಾಗದೆ ಕೇವಲ 163 ರನ್ ಗಳಿಸಿತು. ಡೆಲ್ಲಿ ತಂಡ 60 ರನ್‌ಗಳ ಜಯ ಸಾಧಿಸಿತು.
ಸೆಕ್ಯೂರಿಟಿ ಗಾರ್ಡ್ ಜೊತೆಗೆ ಹೆಜ್ಜೆ ಹಾಕಿದ್ದ ಜೆಮಿಮಾ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿತ್ತು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರ್ತಿ ಜೆಮಿಯಾ ರೋಡ್ರಿಗಸ್ ಸೆಕ್ಯೂರಿಟಿ ಗಾರ್ಡ್ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು. ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಸೆಕ್ಯೂರಿಟಿ ಗಾರ್ಡ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ್ದರು. ಲವ್ ಆಜ್ ಕಲ್ 2 ಚಿತ್ರದ ಹಾಡೊಂದಕ್ಕೆ ಸೆಕ್ಯೂರಿಟಿ ಗಾರ್ಡ್ ಜೊತೆ ನರ್ತಿಸುವ ಮೂಲಕ ವಿಡಿಯೋ ಮಾಡಿದ್ದರು.