2025 Budha Gochar: ಜನವರಿ 4 ರಿಂದ ಧನು ರಾಶಿಯಲ್ಲಿ ಬುಧ ಸಂಚಾರ, ವಿದ್ಯಾರ್ಥಿಗಳಿಗೆ ವಿಶೇಷ ಫಲ, ದ್ವಾದಶ ರಾಶಿಫಲ
2025 Budha Gochar: ಹೊಸ ವರ್ಷ 2025 ಶುರುವಾಗುತ್ತಿದ್ದಂತೆ ಜನವರಿ 4 ರಂದು ಬುಧ ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದೆ. ಜನವರಿ 4 ರಿಂದ ಧನು ರಾಶಿಯಲ್ಲಿ ಬುಧ ಸಂಚಾರ ಶುರುವಾಗಲಿದ್ದು, ಪರಿಣಾಮ ವಿದ್ಯಾರ್ಥಿಗಳಿಗೆ ವಿಶೇಷ ಫಲ ಸಿಗಲಿದೆ. ದ್ವಾದಶ ರಾಶಿಗಳ ಫಲ ವಿವರ ಹೀಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು)
2025 Budha Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಜನವರಿ 4 ರಂದು ಧನು ರಾಶಿಯನ್ನು ಪ್ರವೇಶಿಸಿ ಸಂಚಾರ ಶುರುಮಾಡಲಿದೆ. ಜನವರಿ 24ರ ತನಕ ಈ ಸಂಚಾರ ಮುಂದುವರಿಯಲಿದ್ದು, ಬುಧನ ಮೇಲೆ ಗುರು ಮತ್ತು ಕುಜನ ದೃಷ್ಟಿ ಇರುತ್ತದೆ. ಇದರಿಂದಾಗಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಫಲಗಳು ದೊರೆಯುತ್ತವೆ. ವಿದ್ಯಾಕಾರಕನಾದ ಬುಧನನ್ನು ಜ್ಞಾನಕಾರಕನಾದ ಗುರುವು ವೀಕ್ಷಿಸುವುದರಿಂದ ದಿನನಿತ್ಯದ ವಿಚಾರದಲ್ಲಿ ಉತ್ತಮ ಬದಲಾವಣೆಗಳನ್ನು ಗಮನಿಸಬಹುದು.
ಜನವರಿ 4 ರಿಂದ ಧನು ರಾಶಿಯಲ್ಲಿ ಬುಧ ಸಂಚಾರ, ವಿದ್ಯಾರ್ಥಿಗಳಿಗೆ ವಿಶೇಷ ಫಲ, ದ್ವಾದಶ ರಾಶಿಫಲ
1) ಮೇಷ ರಾಶಿ: ನಿಮ್ಮ ಕೆಲಸ ಕಾರ್ಯಗಳು ಆಡುವ ಮಾತನ್ನು ಅವಲಂಬಿಸಿರುತ್ತದೆ. ಎಲ್ಲರ ಮನಗೆದ್ದು ಕೆಲಸ ಸಾಧಿಸಬೇಕಾಗುತ್ತದೆ. ನಿಮ್ಮ ವಿದ್ಯಾಬುದ್ದಿಗೆ ತಕ್ಕಂತಹ ಉದ್ಯೋಗವು ಲಭಿಸುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನದಿಂದ ಉನ್ನತ ಮಟ್ಟವನ್ನು ತಲುಪುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ನಿಮ್ಮದಲ್ಲದ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಕೋಪವನ್ನು ಕಡಿಮೆ ಮಾಡಿಕೊಂಡರೆ ನಿರೀಕ್ಷಿತ ರೀತಿಯಲ್ಲಿ ಜೀವನವನ್ನು ನಡೆಸಬಹುದು. ಬಿಡುವಿಲ್ಲದ ದುಡಿಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಹೋದ್ಯೋಗಿಗಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ವಿರೋಧಿಗಳು ಸಹ ನಿಮ್ಮ ಸ್ನೇಹಿತರಾಗುತ್ತಾರೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಒಳ್ಳೆಯದು.
2) ವೃಷಭ ರಾಶಿ: ನಿರಾಸೆಯಿಂದ ಅಪೂರ್ಣಗೊಳಿಸಿರುವ ಕೆಲಸ ಕಾರ್ಯಗಳಲ್ಲಿ ಧಿಡೀರ್ ಯಶಸ್ಸು ಕಂಡು ಬರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ನಿಮ್ಮ ಮನಸ್ಸಿನ ಯೋಜನೆಗಳಂತೆ ಕೆಲಸ ಕಾರ್ಯಗಳು ಸಾಗಲಿವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ವರಮಾನವಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಸಮಯ ಪ್ರಜ್ಞೆಯಿಂದ ತಮ್ಮ ಕೆಲಸ ಸಾಧಿಸುತ್ತಾರೆ. ಬಂಧು-ಬಳಗದವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಿಮಗೆ ಒಪ್ಪಿಗೆಯಾಗದ ಮನಸ್ಸು ಒಪ್ಪದ ಕೆಲಸವನ್ನು ಮಾಡುವಿರಿ. ವಿವಾಹ ಕಾರ್ಯವೊಂದು ನಿಮ್ಮ ನೇತೃತ್ವದಲ್ಲಿ ನಡೆಯಲಿದೆ. ಬಹುತೇಕ ಸಮಯವನ್ನು ಬೇರೆಯವರಿಗೆ ಬುದ್ಧಿವಾದ ಹೇಳುವುದರಲ್ಲಿಯೇ ಕಳೆಯುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದು ಒಳ್ಳೆಯದು.
3) ಮಿಥುನ ರಾಶಿ: ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ಬದಲಾವಣೆಗಳು ಕಂಡುಬರುತ್ತವೆ. ಸುಖ ಸಂತೋಷದ ಜೀವನ ನಡೆಸುವಿರಿ. ತಾಯಿಯವರ ಅಥವಾ ಕಿರಿಯ ಮಗಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ದಾನ ಧರ್ಮದ ಕೆಲಸಗಳಿಗಾಗಿ ಹಣವನ್ನು ವಿನಿಯೋಗಿಸುವಿರಿ. ವಿದ್ಯಾರ್ಥಿಗಳು ಹೊಸ ನಿರೀಕ್ಷೆಯೊಂದಿಗೆ ಕರ್ತವ್ಯ ಪೂರೈಸುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ತೆರಳುವಿರಿ. ಉದ್ಯೋಗದಲ್ಲಿ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುವಿರಿ. ಆತುರಕ್ಕೆ ಒಳಗಾಗದೆ ಸಹನೆಯಿಂದ ವರ್ತಿಸುವುದು ಒಳ್ಳೆಯದು. ಮನಸ್ಸು ಒಳ್ಳೆಯದಾದರೂ ದುಡುಕು ಮಾತಿನಿಂದ ಕೆಟ್ಟ ಹೆಸರು ಬರಬಹುದು.
4) ಕಟಕ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಹಣದ ಸಹಾಯ ದೊರೆಯುತ್ತದೆ. ಕುಟುಂಬದ ಸದಸ್ಯರ ನಡುವಿನ ಮನಸ್ತಾಪಗಳು ಮರೆಯಾಗುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತವೆ. ಶಾಂತಿ ನೆಮ್ಮದಿಯಿಂದ ಬಾಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ವರಮಾನವಿರುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ. ವ್ಯವಸಾಯವನ್ನು ಅವಲಂಬಿಸಿದವರಿಗೆ ಉತ್ತಮ ಗಳಿಕೆ ದೊರೆಯುತ್ತದೆ. ನರಕ್ಕೆ ಸಂಬಂಧಿಸಿದ ದೋಷವಿದ್ದಲ್ಲಿ ಗುಣಕಾಣುವಿರಿ. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ಆರಂಭಿಸುವ ಸಾಧ್ಯತೆ ಇದೆ. ಸ್ವಂತ ವಿಚಾರಗಳಲ್ಲಿ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಸೋದರ ಅಥವಾ ಸೋದರಿಗೆ ವಿವಾಹ ಯೋಗವಿದೆ. ಬಂಧು ಬಳಗದವರಿಂದ ವಿವಾದ ಉಂಟಾಗಬಹುದು.
5) ಸಿಂಹ ರಾಶಿ: ಸಂತಾನ ಪ್ರಾಪ್ತಿ ಆಗುತ್ತದೆ. ಮಕ್ಕಳ ಜೀವನದಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡು ಬರುತ್ತವೆ. ಉತ್ತಮ ಅವಕಾಶಗಳು ದೊರೆಯುವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದ ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸೂಕ್ತ ನಿರ್ಣಯ ಕೈಗೊಳ್ಳುವಿರಿ. ಇದರಿಂದಾಗಿ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ದುಡುಕು ಮಾತಿನಿಂದ ಆತ್ಮೀಯರ ವಿರೋಧವನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಚಿಂತೆ ಇರುತ್ತದೆ. ಕೌಟುಂಬಿಕ ವಿಚಾರಗಳನ್ನು ಹಿರಿಯರ ಸಹಾಯದಿಂದ ಸರಿಪಡಿಸಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಾವಶ್ಯಕ ಪ್ರಯಾಣವಿರುತ್ತದೆ. ಕಷ್ಟಕರ ಕೆಲಸದಿಂದ ದೂರ ಉಳಿಯುವಿರಿ.
6) ಕನ್ಯಾ ರಾಶಿ: ಖಚಿತ ತೀರ್ಮಾನ ತೆಗೆದುಕೊಳ್ಳದ ಕಾರಣ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗುತ್ತದೆ. ಆತ್ಮವಿಶ್ವಾಸದ ಕೊರತೆ ಇರುವ ಕಾರಣ ಬೇರೆಯವರನ್ನು ಅವಲಂಬಿಸುವಿರಿ. ಉತ್ತಮ ವರಮಾನವಿದ್ದರೂ ಸರಿಯಾದ ರೀತಿಯಲ್ಲಿ ಬಳಸುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳಿರುತ್ತವೆ. ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಹಿರಿಯ ಅಧಿಕಾರಿಗಳಿಗೆ ಉದ್ಯೋಗಿಗಳಿಂದ ಅಸಹಕಾರ ಇರುತ್ತದೆ. ಅನಾವಶ್ಯಕವಾಗಿ ಬೇರೆಯವರನ್ನು ಟೀಕಿಸುವಿರಿ. ಅದೃಷ್ಟದಿಂದ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುವಿರಿ. ರಕ್ತಕ್ಕೆ ಸಂಬಂಧಿಸಿದ ದೋಷ ಇದ್ದಲ್ಲಿ ಎಚ್ಚರಿಕೆ ವಹಿಸಬೇಕು. ಉದ್ಯೋಗಸ್ಥರಾದರೂ ಸ್ವಂತ ವ್ಯಾಪಾರವನ್ನು ಆರಂಭಿಸುವಿರಿ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.
7) ತುಲಾ ರಾಶಿ: ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶವು ದೊರೆಯುತ್ತದೆ. ಆತುರಕ್ಕೆ ಒಳಗಾಗದೆ ನಿಧಾನ ಗತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಒಳ್ಳೆಯದು. ಆತ್ಮಸ್ಥೈರ್ಯದ ಕೊರತೆ ಇರುತ್ತದೆ. ಆತ್ಮೀಯರ ಸಹಾಯವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾರಿರಿ. ಸ್ವಂತ ಉದ್ದಿಮೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗುವಿರಿ. ಆದಾಯದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ವಾಯುದೋಷವಿದ್ದರೂ ಯಾವುದೇ ತೊಂದರೆ ಕಂಡು ಬರದು.
8) ವೃಶ್ಚಿಕ ರಾಶಿ: ಅತಿಯಾದ ಆತ್ಮವಿಶ್ವಾಸವಿರುತ್ತದೆ. ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವುದು ಅತಿ ಅವಶ್ಯಕ. ಉನ್ನತ ಶಿಕ್ಷಣ ಆಕಾಂಕ್ಷಿಗಳು ತಮ್ಮ ಯೋಜನೆಯನ್ನು ಮುಂದೂಡಬೇಕಾಗುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಪಿತ್ರಾರ್ಜಿತ ಆಸ್ತಿಯ ಒಡೆತನ ನಿಮ್ಮದಾಗುತ್ತದೆ. ಕೌಟುಂಬಿಕ ಕಲಹಗಳಿಗೆ ಪರಿಹಾರ ಕಂಡುಹಿಡಿಯುವಿರಿ. ನಿಮ್ಮಲ್ಲಿನ ನಿಸ್ವಾರ್ಥ ಗುಣವನ್ನು ಎಲ್ಲರು ಮೆಚ್ಚುತ್ತಾರೆ. ಸಮಾಜದಲ್ಲಿ ಉನ್ನತ ಮಟ್ಟದ ಗೌರವವನ್ನು ಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಗತಿಯ ಪ್ರಗತಿ ದೊರೆಯಲಿದೆ.
9) ಧನು ರಾಶಿ: ಮಕ್ಕಳು ಹಿರಿಯರ ಸಲಹೆಯಂತೆ ನಡೆಯುವುದರಿಂದ ಉತ್ತಮ ಯಶಸ್ಸು ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಎದುರಾಗಬಹುದು. ಮನದಲ್ಲಿ ಅನಾವಶ್ಯಕ ಚಿಂತೆ ಇರುತ್ತದೆ. ಕುಟುಂಬದಲ್ಲಿ ಅಸಂಬದ್ಧ ಸನ್ನಿವೇಶಗಳು ಎದುರಾಗುತ್ತವೆ. ಮಾನಸಿಕ ಒತ್ತಡದಿಂದ ದೂರವಾಗಲು ಪ್ರಯತ್ನಿಸುವಿರಿ. ಪರಿಸ್ಥಿತಿಯ ಒತ್ತಡದಿಂದ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ಆದಾಯಕ್ಕೆ ಸರಿಸಮನಾದ ಖರ್ಚು ವೆಚ್ಚಗಳು ಇರಲಿವೆ. ಆರಂಭಿಸಿದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಮನದಲ್ಲಿ ಅಳುಕಿನ ಭಾವವಿರುತ್ತದೆ. ಮಕ್ಕಳ ಜೊತೆಯಲ್ಲಿ ವಾದ ವಿವಾದಗಳಿರುತ್ತವೆ. ನಿಮ್ಮಲ್ಲಿರುವ ಕ್ಷಮಾಗುಣವು ಪರಿಸ್ಥಿತಿಯನ್ನು ತಿಳಿಗೊಳಿಸುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ನಿಧಾನ ಗತಿಯ ಯಶಸ್ಸಿಗೆ ಹೊಂದಿಕೊಂಡು ನಡೆಯುವಿರಿ. ನಿಮ್ಮಲ್ಲಿನ ಉತ್ತಮ ಹವ್ಯಾಸಗಳು ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಕುಟುಂಬದ ಒಳಿತಿಗಾಗಿ ನಿಮ್ಮ ಸ್ವಂತ ಸುಖವನ್ನು ತ್ಯಾಗ ಮಾಡುವಿರಿ.
10) ಮಕರ ರಾಶಿ: ನಿಮ್ಮನ್ನು ಒಂಟಿತನವು ಬಹುವಾಗಿ ಕಾಡಬಹುದು. ಕಷ್ಟ ನಷ್ಟಗಳನ್ನು ಎದುರಿಸಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ದುಡುಕು ಮಾತಿನಿಂದ ಕುಟುಂಬದಲ್ಲಿ ಬೇಸರದ ವಾತಾವರಣ ಇರುತ್ತದೆ. ಶೀಘ್ರಗತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಾಣದು. ಹಠದ ಸ್ವಭಾವ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಮಕ್ಕಳಿಗೆ ಸಂಬಂಧಿಸಿದಂತೆ ಮಂಗಳ ಕಾರ್ಯಗಳು ನಡೆಯಬಹುದು. ಮನೆ ಮಂದಿಯ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಶೀತದ ತೊಂದರೆ ಉಂಟಾಗಬಹುದು.
11) ಕುಂಭ ರಾಶಿ: ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಬೇರೆಯವರಿಗೆ ಬೇಸರವಿರುತ್ತದೆ. ಬೇರೊಬ್ಬರ ಸಲಹೆ ಅಥವಾ ಸೂಚನೆಯನ್ನು ಒಪ್ಪಿಕೊಳ್ಳುವುದಿಲ್ಲ. ಉತ್ತಮ ಆದಾಯವಿರುತ್ತದೆ. ಆದರೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿ ಗಂಭೀರದ ವಾತಾವರಣವಿರುತ್ತದೆ. ಕುಟುಂಬದ ಮಹಿಳೆಯರ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ತಾಂತ್ರಿಕ ಪರಿಣತಿ ಹೊಂದಿರುವವರಿಗೆ ವಿದೇಶದಲ್ಲಿ ಅವಕಾಶ ದೊರೆಯುತ್ತದೆ. ದಂಪತಿಗಳ ನಡುವೆ ಅನಾವಶ್ಯಕವಾದ ವಿಚಾರಗಳಿಗಾಗಿ ಮನಸ್ತಾಪ ಉಂಟಾಗುತ್ತದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಉದ್ಯೋಗ ಬದಲಿಸುವ ಸೂಚನೆಗಳಿವೆ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ.
12) ಮೀನ ರಾಶಿ: ಮನಸ್ಸಿನಲ್ಲಿ ಬೇರೆಯವರ ಬಗ್ಗೆಅಪನಂಬಿಕೆ ಇರುತ್ತದೆ. ಎಲ್ಲರೊಂದಿಗೆ ಸಹಬಾಳ್ವೆಯಿಂದ ಬಾಳುವಿರಿ. ಸಮಯಕ್ಕೆ ತಕ್ಕಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆರಂಭಿಸಿದ ಕೆಲಸ ಕಾರ್ಯಗಳನ್ನು ವಿಶ್ರಾಂತಿಯನ್ನು ಪಡೆಯುವುದು ಮುಖ್ಯ. ಕಲುಷಿತ ಆಹಾರ ಸೇವನೆಯಿಂದ ಸೋಂಕು ಉಂಟಾಗಬಹುದು. ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ದುಬಾರಿ ಬೆಲೆಯ ವಾಹನವನ್ನು ಕೊಳ್ಳುವಿರಿ. ಅವಶ್ಯಕತೆ ಇಲ್ಲದೆ ಹೋದರು ಉದ್ಯೋಗವನ್ನು ಬದಲಿಸುವಿರಿ. ವಿದ್ಯಾರ್ಥಿಗಳು ಅಲ್ಪತೃಪ್ತಿಗೆ ಒಳಗಾಗುತ್ತಾರೆ. ಮಾನಸಿಕ ಒತ್ತಡವಿರುತ್ತದೆ. ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಬೇರೆಯವರ ಮಧ್ಯಸ್ಥಿಕೆಯಿಂದ ತೊಂದರೆ ಉಂಟಾಗಬಹುದು.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ, ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ