ಬೆಂಗಳೂರಿನ ಇಸ್ಕಾನ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯ ಭವ್ಯ ಆಚರಣೆ, ಈ ಬಾರಿ ನೀವೂ ಪಾಲ್ಗೊಳ್ಳಿ
ಇಸ್ಕಾನ್ ಬೆಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವ ರೀತಿ ಆಚರಣೆ ಮಾಡುತ್ತಾರೆ ಮತ್ತು ಈ ವರ್ಷದ ಆಚರಣೆ ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ. ನೀವೂ ಕೃಷ್ಣನ ಸನ್ನಿಧಾನಕ್ಕೆ ಒಮ್ಮೆ ಭೇಟಿ ನೀಡಿ.
ಇಸ್ಕಾನ್ ಬೆಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬಕ್ಕೆ ಹಲವು ತಿಂಗಳ ಮುಂಚೆಯೇ ಸಿದ್ಧತೆಗಳು ಆರಂಭವಾಗುತ್ತವೆ. ದೇವಾಲಯವು ವರ್ಣರಂಜಿತ ಹೂವುಗಳಿಂದ ಅಲಂಕೃತಗೊಳ್ಳುತ್ತದೆ. ಭಗವಂತನಿಗೆ ವಿವಿಧ ಸೇವೆಗಳನ್ನು ನೀಡಲಾಗುತ್ತದೆ. ಭಗವಂತನಿಗೆ ಹಲವು ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ದಿನವಿಡೀ ಭವ್ಯವಾದ ಆಚರಣೆಯಲ್ಲಿ ಭಾಗವಹಿಸಲು ನಿಮಗೂ ಅವಕಾಶ ಇರುತ್ತದೆ. ಈ ಅತ್ಯಂತ ಮಂಗಳಕರ ದಿನದಂದು ನೀವೂ ಆಚರಣೆಯಲ್ಲಿ ಒಬ್ಬರಾಗುವ ಅವಕಾಶ ಇರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ದೈವಿಕ ದರ್ಶನ, ವಿಶೇಷ ಸೇವೆಗಳು, ಸುಮಧುರ ಕೀರ್ತನೆಗಳು ಮತ್ತು ಪ್ರಸಾದ ವಿತರಣೆ ಇರುತ್ತದೆ.
ಉತ್ಸವ, ಅರ್ಚನೆ
ಶ್ರೀ ಕೃಷ್ಣನ ಉತ್ಸವ ಇರುತ್ತದೆ. ಮಹಾ ಮಂಗಳಾರತಿ, ಅರ್ಚನೆ, ನೈವೇಧ್ಯ ಮತ್ತು ಭಜನೆ ಹೀಗೆ ವಿವಿಧ ರೀತಿಯಲ್ಲಿ ಕೃಷ್ಣನನ್ನು ಮತ್ತು ಅವನ ಪರಿವಾರವನ್ನು ಆರಾಧಿಸಲಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಿಹಿ ಪದಾರ್ಥ ಹೀಗೆ ಪಂಚಾಮೃತ ಅಭಿಷೇಕ ಇರುತ್ತದೆ. ಈ ವರ್ಷ ಕೆಂಪು ಬಣ್ಣದ ಹಾಗೂ ಕೇಸರಿ ಬಣ್ಣದ ವಸ್ತ್ರವನ್ನು ದೇವರಿಗೆ ಉಡಿಸಿ ಅಂದವಾಗಿ ಶೃಂಗರಿಸಲಾಗಿದೆ. ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ನಿನ್ನೆ ಅಂದರೆ ಆಗಸ್ಟ್ 25 ಮತ್ತು 26 ರಂದು ನೀವೂ ಭೇಟಿ ನೀಡಿ. ದೇವರನ್ನು ಕಣ್ತುಂಬಿಕೊಳ್ಳಬಹುದು.
ಭಜನೆ
ಇಡೀ ದಿನವೂ ನಿರಂತರ ಭಜನೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಯಾರು ಇಲ್ಲಿಗೆ ಬರಲು ಸಾಧ್ಯವಿಲ್ಲವೋ ಅವರು ಇಸ್ಕಾನ್ ಬೆಂಗಳೂರನ್ನು ಮನೆಯಲ್ಲೇ ಕುಳಿತು ನೊಡಬಹುದು. ಯಾಕೆಂದರೆ ಈ ಕಾರ್ಯಕ್ರಮದ ಲೈವ್ ನಿಮಗೆ ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಹೂಗಳ ಅಲಂಕಾರ
ಸುತ್ತಲೂ ಮಂಟಪವನ್ನು ಹೂವುಗಳಿಂದ ಅಂದಗಾಣಿಸಿದ್ದಾರೆ. ಆ ವೈಭವವನ್ನು ಎರಡು ಕಣ್ಣುಗಳಲ್ಲಿ ಎಷ್ಟು ಬಾರಿ ನೋಡಿದರೂ ಕಡಿಮೆ ಎಂದೆನಿಸುತ್ತದೆ. ನೀವು ಈ ಬಾರಿ ಇಸ್ಕಾನ್‌ಗೆ ಬರಬೇಕು ಎಂದುಕೊಂಡಿದ್ದರೆ ಮೆಟ್ರೋ ಮತ್ತು ಸಾರಿಗೆ ಸಂಪರ್ಕ್ ಇದೆ. ಬಂದು ದರ್ಶನ ಪಡೆಯಬಹುದು. ಹಲವಾರು ಜನ ಈ ಸಂದರ್ಭದಲ್ಲಿ ಬಂದು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಆಗಸ್ಟ್ 27, 2024 ರಂದು ಕೂಡ ಕಾರ್ಯಕ್ರಮ ಮುಂದುವರೆಯುತ್ತದೆ. ಅಂದು ವ್ಯಾಸ ಪೂಜೆ ಮಾಡುತ್ತಾರೆ. ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರನ್ನು ಅಂದು ಸ್ಮರಣೆ ಮಾಡಲಾಗುತ್ತದೆ.
ರಾಧಾಷ್ಟಮಿ
ಹೀಗೆ ಇನ್ನು ಅನೇಕ ಕಾರ್ಯಕ್ರಮಗಳು ನಡೆಯುತ್ತದೆ. ಮುಖ್ಯವಾಗಿ ಬಹಳ ವಿಜ್ರಂಭಣೆಯಿಂದ ನಡೆಯುವ ಹಬ್ಬ ಎಂದರೆ ಅದು ಕೃಷ್ಣಾಷ್ಟಮಿ, ಆ ನಂತರದ ದಿನಗಳಲ್ಲಿ ರಾಧಾಷ್ಟಮಿ ಕೂಡ ನಡೆಯುತ್ತದೆ. ಈ ಬಾರಿ ಸಪ್ಟೆಂಬರ್ 11ರಂದು ಆಚರಿಸಲಾಗುತ್ತದೆ. ನೀವೂ ಇದೆಲ್ಲದರಲ್ಲಿ ಭಾಗಿಯಾಗಬಹುದು.