ಕುಂಭ ರಾಶಿ ಭವಿಷ್ಯ 2025: ಮೇ ತಿಂಗಳ ನಂತರ ಜೀವನದಲ್ಲಿ ಪ್ರಮುಖ ಬದಲಾವಣೆ, ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ
Aquarius Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಕುಂಭ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಕುಂಭ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಮಕರ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಲೋಹದ ಪದಾರ್ಥಗಳು, ವಾಹನಗಳಿಂದ ಸಮಸ್ಯೆ
ಮಾನಸಿಕ ನೆಮ್ಮದಿ ಇರುವುದಿಲ್ಲ. ನಿಮ್ಮದಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ವೇಳೆ ಆಂತರಿಕ ಭಯವಿರುತ್ತದೆ. ಮನ ಬಿಚ್ಚಿ ನಿಮ್ಮ ಭಾವನೆಗಳನ್ನು ಬೇರೆಯವರಲ್ಲಿ ಹಂಚಿಕೊಂಡರೆ ಯಾವುದೇ ತೊಂದರೆ ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ನೀವಾಗಿಯೇ ಬೇರೆಯವರ ಸಹಾಯ ಬಯಸುವುದಿಲ್ಲ. ಹಗಲಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಇರುವ ನೀವು ಸಂಜೆ ಯಾವುದೇ ವಿಚಾರದಲ್ಲಿ ಆಸಕ್ತಿಯನ್ನು ತೋರುವುದಿಲ್ಲ. ಅದರಿಂದಾಗಿ ಅತಿ ಮುಖ್ಯವಾದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ.
ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಮಕ್ಕಳು ತಮ್ಮ ಮನಸ್ಸಿನ ಆಸೆಗಳನ್ನು ಪೂರೈಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ನಿರಾಸೆಗೆ ಕುಗ್ಗದೆ ಜಾಣ್ಮೆಯಿಂದ ವಯಸ್ಸಿಗೆ ಮೀರಿದ ಸಾಧನೆ ತೋರಿಸುತ್ತಾರೆ. ಕಲಿಕೆಯಲ್ಲಿ ಸದಾ ಕಾಲ ಮುಂಚೂಣಿಯಲ್ಲಿ ಇರುತ್ತಾರೆ. ಅತಿ ಕಷ್ಟದ ವಿಚಾರಗಳನ್ನು ಸುಲಭವಾಗಿ ಅರಿಯುವ ಪ್ರತಿಭೆ ಇರುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಹಿರಿಯರು ನಿಷ್ಠುರವಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಮನೆಯಲ್ಲಿ ಬಳಸುವ ಲೋಹದ ಪದಾರ್ಥಗಳು ಅಥವಾ ವಾಹನಗಳಿಂದ ತೊಂದರೆ ಆಗಬಹುದು. ಹಣದ ಬಗ್ಗೆ ಹೆಚ್ಚಿನ ಆಸೆ ತೋರದೆ ಸಂತೃಪ್ತಿಯಿಂದ ಬಾಳುವಿರಿ.
ಮೇ ತಿಂಗಳ ನಂತರ ಧನಾತ್ಮಕ ಬೆಳವಣಿಗೆ ಉಂಟಾಗಲಿದೆ
ಸ್ನೇಹಕ್ಕೆ ಹೆಚ್ಚಿನ ಗೌರವವನ್ನು ನೀಡುವಿರಿ. ಬಂಧು ಬಳಗದವರಿಂದ ಯಾವುದೇ ಸಹಾಯ ದೊರೆಯುವುದಿಲ್ಲ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಗಳು ದೊರೆಯುತ್ತವೆ. ಕೆಲವರು ನಿಮಗೆ ತೊಂದರೆ ನೀಡಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಬದಲಾಗದ ವ್ಯಕ್ತಿತ್ವ ಮತ್ತು ಸಂಕಲ್ಪಗಳು ಜೀವನದಲ್ಲಿ ನೆಮ್ಮದಿ ಉಂಟುಮಾಡಲಿದೆ. ಪರೋಪಕಾರದ ಗುಣ ಎಲ್ಲರ ಮನ ಗೆಲ್ಲುತ್ತದೆ.
ಕುಟುಂಬಕ್ಕೆ ಸೇರಿದಂತೆ ಧಾರ್ಮಿಕ ಕೆಲಸಗಳು ನಿಮ್ಮ ನೇತೃತ್ವದಲ್ಲಿ ನಡೆಯುತ್ತವೆ. ಕೌಟುಂಬಿಕ ಜೀವನದಲ್ಲಿ ಕೆಲವೊಂದು ಅಡಚಣೆಗಳನ್ನು ಗೆಲ್ಲಲೇ ಬೇಕಾಗುತ್ತದೆ. ಕ್ರಮೇಣವಾಗಿ ಸುತ್ತ ಮುತ್ತಲ ಪರಿಸರಕ್ಕೆ ಹೊಂದಿಕೊಳ್ಳುವ ಕಾರಣ ಸುಖ ಜೀವನ ನಡೆಸುವಿರಿ. ಮೇ ತಿಂಗಳ ನಂತರ ಜೀವನದಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ನಡೆಯುವಿರಿ. ಮರು ಮಾತನಾಡದೆ ಹಿರಿಯ ಅಧಿಕಾರಿಗಳ ಸಲಹೆ ಅನುಸರಿಸಿ ಕೆಲಸ ನಿರ್ವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ಸ್ವತಂತ್ರವಾಗಿ ನಿರ್ವಹಿಸುವ ಉದ್ದಿಮೆಯಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಇದರಿಂದಾಗಿ ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ. ಆದಾಯ ಕಡಿಮೆ ಮಟ್ಟದಲ್ಲಿದ್ದರೂ ಖರ್ಚು ವೆಚ್ಚಗಳನ್ನು ನಿಯಂತ್ರಿಸುವ ಕಾರಣ ತೊಂದರೆ ಕಂಡು ಬರುವುದಿಲ್ಲ. ಬೇರೆಯವರಿಂದ ಹಣ ಪಡೆಯುವುದು ಅಥವಾ ಬೇರೆಯವರಿಗೆ ಹಣ ನೀಡುವುದು ನಿಮಗೆ ಇಷ್ಟವಿಲ್ಲ.
ದಾಂಪತ್ಯ ಜೀವನದಲ್ಲಿ ನೆಮ್ಮದಿಯ ವಾತಾವರಣ
ದಾಂಪತ್ಯ ಜೀವನದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕಷ್ಟಕ್ಕೆ ಹೆದರದೆ ಬಾಳುವುದರಿಂದ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ. ವಾತದ ತೊಂದರೆ ಇರುತ್ತದೆ. ಕೈ ಅಥವಾ ಕಾಲುಗಳಲ್ಲಿ ಊತ ಕಂಡು ಬರಬಹುದು. ಹಣಕಾಸಿನ ವಿಚಾರದಲ್ಲಿ ಬೇರೆಯವರ ಒತ್ತಡ ಹೆಚ್ಚಾಗುತ್ತದೆ. ವಾಸ ಸ್ಥಳ ಬದಲಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಸಾಧ್ಯವಾಗುವುದಿಲ್ಲ. ಇದರಿಂದ ಆರೋಗ್ಯದಲ್ಲಿ ಏರುಪೇರು ಇರುತ್ತದೆ. ಉದ್ಯೋಗದಲ್ಲಿ ಅನಾವಶ್ಯಕವಾದ ವಿವಾದಗಳು ಇರಲಿವೆ. ಉದ್ಯೋಗ ಬದಲಿಸುವ ಮನಸ್ಸು ಇರುವುದಿಲ್ಲ. ನಿಮ್ಮ ಮಕ್ಕಳು ಎಲ್ಲರ ಮೆಚ್ಚುಗೆ ಪಡೆಯುತ್ತಾರೆ.
ಚರ್ಮದೋಷದಿಂದ ಬಳಲುವವರು ಪ್ರಾಚೀನ ಪದ್ದತಿಯಿಂದ ಗುಣ ಹೊಂದುತ್ತಾರೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಸೂಚನೆಗಳಿವೆ. ಜನಸೇವೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಉತ್ತಮ ಆದಾಯ ಗಳಿಸುವಿರಿ. ಪಾಲುದಾರಿಕೆ ವ್ಯಾಪಾರದಲ್ಲಿ ಮಂದಗತಿಯ ಯಶಸ್ಸು ದೊರೆಯಲಿದೆ. ಹಿರಿಯ ವಯಸ್ಸಿನ ವ್ಯಕ್ತಿಗಳು ಸ್ವತಂತ್ರ ಜೀವನ ನಡೆಸಲು ಇಚ್ಚಿಸುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಮುಂದುವರೆಸುವಿರಿ. ಮನೆತನದ ಒಡೆತನ ನಿಮ್ಮದಾಗುತ್ತದೆ. ನಿದಗಲ್ಲದ ತಪ್ಪಿಗೆ ಹತ್ತಿರವಾಗಿದ್ದ ಯಶಸ್ಸು ದೂರವಾಗುತ್ತದೆ. ಆದರೆ ಸೋಲಿನ ಯೋಚನೆಯನ್ನು ಮರೆತು ಕ್ರಮೇಣ ಸಹಜ ದಾರಿಗೆ ಮರಳುತ್ತಾರೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).