ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ashadha 2024: ಮಹಾ ವಿಷ್ಣು ಯೋಗ ನಿದ್ರೆಗೆ ಜಾರುವ ಪುಣ್ಯ ಕಾಲ ಇದು; ಆಷಾಢ ಮಾಸದ ಮಹತ್ವ, ಆಚರಣೆಗಳು ಹೀಗಿವೆ

Ashadha 2024: ಮಹಾ ವಿಷ್ಣು ಯೋಗ ನಿದ್ರೆಗೆ ಜಾರುವ ಪುಣ್ಯ ಕಾಲ ಇದು; ಆಷಾಢ ಮಾಸದ ಮಹತ್ವ, ಆಚರಣೆಗಳು ಹೀಗಿವೆ

Ashadha Month 2024: ಆಷಾಢ ಮಾಸದಲ್ಲಿ ಚಾತುರ್ಮಾಸ ವ್ರತ ಪ್ರಾರಂಭಿಸಲಾಗುತ್ತದೆ. ಆ ಸಮಯದಲ್ಲಿ ಭಗವಾನ್‌ ವಿಷ್ಣು ಯೋಗ ನಿದ್ರೆಯಲ್ಲಿರುತ್ತಾನೆ ಎಂದು ಹೇಳಲಾಗುತ್ತದೆ. ಈ ನಾಲ್ಕು ತಿಂಗಳಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಆದರೆ ಆಷಾಢ ಮಾಸದಲ್ಲಿ ವ್ರತ, ಉಪವಾಸ, ತೀರ್ಥಯಾತ್ರೆಗಳನ್ನು ಮಾಡಲಾಗುತ್ತದೆ. (ಬರಹ: ಅರ್ಚನಾ ವಿ ಭಟ್)

ಮಹಾ ವಿಷ್ಣು ಯೋಗ ನಿದ್ರೆಗೆ ಜಾರುವ ಪುಣ್ಯ ಕಾಲ ಇದು; ಆಷಾಢ ಮಾಸದ ಮಹತ್ವ, ಆಚರಣೆಗಳು ಹೀಗಿವೆ
ಮಹಾ ವಿಷ್ಣು ಯೋಗ ನಿದ್ರೆಗೆ ಜಾರುವ ಪುಣ್ಯ ಕಾಲ ಇದು; ಆಷಾಢ ಮಾಸದ ಮಹತ್ವ, ಆಚರಣೆಗಳು ಹೀಗಿವೆ

ಹಿಂದೂ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳನ್ನು ಆಷಾಢ ಮಾಸ ಎಂದು ಕರೆಯುತ್ತಾರೆ. ಇದು ಮುಂಗಾರು ಮಳೆಯ ಆರಂಭವನ್ನು ಸೂಚಿಸುತ್ತದೆ. ಈ ಮಾಸದಲ್ಲಿ ದಕ್ಷಿಣಾಯಣವೂ ಪ್ರಾರಂಭವಾಗುತ್ತದೆ. ಹಿಂದೂಗಳು ಆಷಾಢ ಮಾಸವನ್ನು ಶೂನ್ಯ ಮಾಸವೆಂದೂ ಸಹ ಕರೆಯುತ್ತಾರೆ. ಏಕೆಂದರೆ ಈ ತಿಂಗಳಿನಲ್ಲಿ ಮದುವೆ, ಗೃಹಪ್ರವೇಶ, ಉಪನಯನಗಳಂತಹ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ.

ಆಷಾಢ ಮಾಸದಿಂದ ಚಾತುರ್ಮಾಸವೂ ಪ್ರಾರಂಭವಾಗುತ್ತದೆ. ಹಾಗಾಗಿ ಆಷಾಢ ಮಾಸವು ವ್ರತಾಚರಣೆ, ತೀರ್ಥಯಾತ್ರೆಗಳಿಗೆ ಪುಣ್ಯ ಕಾಲ ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಶಕ್ತಿ ದೇವತೆಗಳಾದ ಭೈರವ, ನರಸಿಂಹ ಮುಂತಾದ ದೇವರುಗಳನ್ನು ಪೂಜಿಸಲಾಗುತ್ತದೆ. ಆಷಾಢ ಮಾಸದಲ್ಲಿ ಪೂಜೆ, ದಾನ ಮುಂತಾದ ಪುಣ್ಯದ ಕೆಲಸಗಳನ್ನು ಮಾಡಲು ಸಲಹೆ ನೀಡುತ್ತಾರೆ. ಹಾಗಾದರೆ ಆಷಾಢ ಮಾಸದ ಮಹತ್ವವೇನು? ಮತ್ತು ಆಚರಣೆ ಹೇಗೆ ಇಲ್ಲಿದೆ ಓದಿ.

ಆಷಾಢ ಮಾಸ ಯಾವಾಗ ಪ್ರಾರಂಭವಾಗುತ್ತದೆ?

ಆಷಾಢ ಮಾಸವು ಜೂನ್‌ 23, 2024ರಂದು ಪ್ರಾರಂಭವಾಗಿ ಜುಲೈ 21, 2024ಕ್ಕೆ ಮುಕ್ತಾಯವಾಗುತ್ತದೆ.

ಆಷಾಢ ಮಾಸದ ಮಹತ್ವವೇನು?

ಆಷಾಢ ಮಾಸವನ್ನು ಶೂನ್ಯ ಮಾಸವೆಂದೂ ಕರೆಯುತ್ತಾರೆ. ಇದು ಚಾತುರ್ಮಾಸದಲ್ಲಿ ಬರುವ ಮೊದಲನೇ ತಿಂಗಳಾಗಿದೆ. ಈ ಸಮಯದಲ್ಲಿ ಮಹಾವಿಷ್ಣುವು ಯೋಗ ನಿದ್ರೆಯಲ್ಲಿರುತ್ತಾನೆ. ಹಾಗಾಗಿ ಮದುವೆ, ಉಪನಯನ, ಗೃಹಪ್ರವೇಶಗಳಂಥಹ ಯಾವುದೇ ಶುಭಕಾರ್ಯಗಳನ್ನು ಚಾತುರ್ಮಾಸದಲ್ಲಿ ನಡೆಸಲಾಗುವುದಿಲ್ಲ. ಆದರೆ ಇದನ್ನು ಪುಣ್ಯಗಳಿಸುವ ಕಾಲ ಎನ್ನಲಾಗುತ್ತದೆ. ಅಂದರೆ ಈ ಸಮಯದಲ್ಲಿ ವ್ರತ, ಉಪವಾಸ ಮತ್ತು ತೀರ್ಥಯಾತ್ರೆ ಮುಂತಾದ ಪುಣ್ಯದ ಕೆಲಸಗಳನ್ನು ನೆರವೇರಿಸುತ್ತಾರೆ. ಇದರಿಂದ ಭಕ್ತರ ಎಲ್ಲಾ ಇಚ್ಛೆ ಈಡೇರುತ್ತದೆ ಎಂಬ ನಂಬಿಕೆಯಿದೆ. ಆಷಾಢ ಮಾಸದಲ್ಲೇ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥೋತ್ಸವ ನಡೆಯುತ್ತದೆ.

ಆಷಾಢದ ಆಚರಣೆಗಳೇನು?

* ಆಷಾಢ ಮಾಸವು ದೇವರುಗಳನ್ನು ಸ್ಮರಿಸುವ ಕಾಲವಾಗಿದೆ. ಈ ಸಮಯದಲ್ಲಿ ಲಕ್ಷ್ಮೀ, ಸೂರ್ಯ, ಮಹಾವಿಷ್ಣು ಮತ್ತು ಶಿವನನ್ನು ಆರಾಧಿಸಲಾಗುತ್ತದೆ.

* ಈ ಮಾಸದಲ್ಲಿ ಸೂರ್ಯ ದೇವನಿಗೆ ಅರ್ಘ್ಯವನ್ನು ನೀಡುವುದರಿಂದ ಸಂಪತ್ತು, ಯಶಸ್ಸು ಮತ್ತು ಗೌರವಗಳು ಸಿಗುತ್ತವೆ. ಮತ್ತು ಅನಾರೋಗ್ಯ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

* ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಕಮಲ ಮತ್ತು ಕೆಂಪು ಹೂಗಳನ್ನು ಸಮರ್ಪಿಸಿ ಪೂಜಿಸಲಾಗುತ್ತದೆ.

* ಆಷಾಢದಲ್ಲಿ ಯಜ್ಞ, ದಾನಗಳನ್ನು ಮಾಡುವುದರಿಂದ ಮಹಾ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.‌

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.