ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಮುಚ್ಚಿಟ್ಟಿದ್ದ ಹಣಕಾಸು ವಿಚಾರ ಮನೆಯವರಿಗೆ ತಿಳಿಯಲಿದೆ, ದೂರದೂರಿಗೆ ಪ್ರವಾಸ ಹೋಗುವ ಸಾಧ್ಯತೆ; ವಾರ ಭವಿಷ್ಯ

Weekly Horoscope: ಮುಚ್ಚಿಟ್ಟಿದ್ದ ಹಣಕಾಸು ವಿಚಾರ ಮನೆಯವರಿಗೆ ತಿಳಿಯಲಿದೆ, ದೂರದೂರಿಗೆ ಪ್ರವಾಸ ಹೋಗುವ ಸಾಧ್ಯತೆ; ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. (14th April 2024 to 20th April Weekly Horoscope)

ಏಪ್ರಿಲ್‌ 14 ರಿಂದ ಏಪ್ರಿಲ್‌ 20 ವರೆಗಿನ ವಾರ ಭವಿಷ್ಯ
ಏಪ್ರಿಲ್‌ 14 ರಿಂದ ಏಪ್ರಿಲ್‌ 20 ವರೆಗಿನ ವಾರ ಭವಿಷ್ಯ

ಏಪ್ರಿಲ್‌ 14 ರಿಂದ ಏಪ್ರಿಲ್‌ 20 ವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (14th April 2024 to 20th April Weekly Horoscope)

ಮೇಷ

ದೃಢಸಂಕಲ್ಪದಿಂದಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕುಟುಂಬದಲ್ಲಿ ಅನಾವಶ್ಯಕ ಗೊಂದಲದ ಸನ್ನಿವೇಶ ಎದುರಾಗುತ್ತದೆ. ನಿಮ್ಮದಲ್ಲದ ವಿಚಾರಗಳಿಗೆ ಕುಟುಂಬದಲ್ಲಿ ಚರ್ಚೆ ನಡೆಯುತ್ತದೆ. ಆಪತ್ಕಾಲದಲ್ಲಿ ಸಂಗಾತಿಯಿಂದ ಸೂಕ್ತ ಸಲಹೆ ದೊರೆಯುತ್ತದೆ. ಉದ್ಯೋಗದ ಬಗ್ಗೆ ಚಿಂತೆ ಮಾಡುವುದಿಲ್ಲ. ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ಪರಿಹರಿಸುವಿರಿ. ಸೋದರಿಯ ವಿಚಾರದಲ್ಲಿ ಸಂತಸದ ವಿಚಾರ ತಿಳಿದುಬರಲಿದೆ. ಮಿತಿಮೀರಿದ ಭೋಜನ ಅನಾರೋಗ್ಯಕ್ಕೆ ಕಾರಣ. ತಂದೆಯವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಯೋಚನೆ ಇರುತ್ತದೆ. ಕಾನೂನು ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ.

ವೃಷಭ

ಹಣಕಾಸಿಗೆ ಸಂಬಂಧಿಸಿದ ಮುಖ್ಯವಾದ ಕೆಲಸವೊಂದು ಮುಂದೂಡಲ್ಪಡುತ್ತದೆ. ಸೋಲನ್ನು ಲೆಕ್ಕಿಸದೆ ಕೆಲಸ ಕಾರ್ಯಗಳಲ್ಲಿ ಮುಂದುವರಿಯುವಿರಿ. ಅನಿರೀಕ್ಷಿತ ಧನಲಾಭವಿರುತ್ತದೆ. ಹಿರಿಯರ ಆದೇಶದಂತೆ ವಾಸ ಸ್ಥಳವನ್ನು ಬದಲಿಸುವಿರಿ. ನೀರಾವರಿ ಭೂಮಿ ಇದ್ದಲ್ಲಿ ತೋಟಗಾರಿಕೆ ಆರಂಭಿಸುವ ಸೂಚನೆಗಳಿವೆ. ವಿದ್ಯಾರ್ಥಿಗಳು ಏಕಾಂಗಿತನವನ್ನು ತೊರೆದು ಗುಂಪಿನಲ್ಲಿ ಕುಳಿತು ವ್ಯಾಸಂಗ ಮಾಡುತ್ತಾರೆ. ಹಠದ ಬುದ್ಧಿ ಮರೆಯುವುದು ಒಳ್ಳೆಯದು. ವ್ಯಾಪಾರ ವ್ಯವಹಾರಗಳಲ್ಲಿ ಬಂಡವಾಳಕ್ಕೆ ಸಮನಾದ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪಾಲುದಾರಿಕೆ ವ್ಯಾಪಾರ ಆರಂಭಿಸುವ ಯೋಗವಿದೆ.

ಮಿಥುನ

ಆತ್ಮೀಯರ ಸಹಕಾರದಿಂದ ದಿಟ್ಟ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸೋಲು ಗೆಲುವಿನ ವಿಚಾರದಲ್ಲಿ ಕ್ರೀಡಾ ಮನೋಭಾವನೆ ಇರುವ ಕಾರಣ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದವರೊಂದಿಗೆ ಮಾತನಾಡಲು ಸಹ ಸಾಧ್ಯವಿಲ್ಲದಷ್ಟು ಕೆಲಸವಿರುತ್ತದೆ. ಅಪರೂಪವೆಂಬಂತೆ ಅನಿರೀಕ್ಷಿತ ಧನಲಾಭ ದೊರೆಯುತ್ತದೆ. ಉದ್ಯೋಗ ಬದಲಿಸುವಿರಿ. ಹಿರಿಯ ಅಧಿಕಾರಿಗಳ ಸೂಚನೆಗಳನ್ನು ಒಪ್ಪದ ಕಾರಣ ಗಂಭೀರವಾದ ವಾತಾವರಣ ಉಂಟಾಗಲಿದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಮಕ್ಕಳಿಗೆ ಕಣ್ಣಿನ ತೊಂದರೆ ಇರುತ್ತದೆ. ಸಹನೆಯಿಂದ ವರ್ತಿಸಿದಲ್ಲಿ ಹಣಕಾಸಿನ ವಿವಾದವೊಂದು ದೂರವಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ.

ಕಟಕ

ಒಂದಕ್ಕಿಂತಲೂ ಅಧಿಕ ಮಟ್ಟದ ಜವಾಬ್ದಾರಿಗಳನ್ನು ಒಪ್ಪಬೇಕಾಗುತ್ತದೆ. ಬಿಡುವಿಲ್ಲದ ಕೆಲಸ-ಕಾರ್ಯಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ. ಕುಟುಂಬದ ಎಲ್ಲಾ ಆಗು ಹೋಗುಗಳು ಸಂಪೂರ್ಣವಾಗಿ ನಿಮ್ಮನ್ನು ಅವಲಂಬಿಸಿರುತ್ತದೆ. ಕುಟುಂಬದಲ್ಲಿನ ಅನಾವಶ್ಯಕ ವಾದ-ವಿವಾದಗಳು ದೂರವಾಗಲಿವೆ. ಕುಟುಂಬದಲ್ಲಿ ಎಲ್ಲರೂ ಸಂತೋಷದಿಂದ ಬಾಳುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಗಳು ಅಥವಾ ಹಿನ್ನಡೆ ಉಂಟಾಗುವುದಿಲ್ಲ. ವಂಶಾನುಗತವಾಗಿ ಬಂದಿರುವ ವ್ಯಾಪಾರ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ನಿಮ್ಮ ಪಾಲಿನ ಆಸ್ತಿಯಲ್ಲಿನ ವಿವಾದವು ಸ್ನೇಹಿತರೊಬ್ಬರ ಸಹಾಯದಿಂದ ಪರಿಹಾರವಾಗಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ.

ಸಿಂಹ

ಕೌಟುಂಬಿಕ ಬದಲಾವಣೆಗಳು ಹೊಸ ಚೇತನಕ್ಕೆ ಕಾರಣವಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ಪ್ರಗತಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಿರಿ. ಜನಸೇವೆ ಮಾಡುವ ಆಸೆಯಿಂದ ಸೇವಾವೃತ್ತಿಯೊಂದನ್ನು ಆರಂಭಿಸುವಿರಿ. ಪರಂಪಾನುಗತವಾಗಿ ನಡೆದುಕೊಂಡು ಬಂದ ವೃತ್ತಿ ಅಥವಾ ವ್ಯಾಪಾರವನ್ನು ಮುಂದುವರಿಸುವಿರಿ. ಯಾರ ಮಾತನ್ನು ಕೇಳದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳು ವಿಶೇಷ ಸೌಲಭ್ಯವನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳು ಸ್ನೇಹಿತರ ಜೊತೆಯಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.

ಕನ್ಯಾ

ಆರಂಭದಲ್ಲಿ ಬಹುಶಃ ಬೇಸರದಿಂದ ದಿನಗಳನ್ನು ಕಳೆಯಬೇಕಾಗಬಹುದು. ಕೆಲಸ ಕಾರ್ಯಗಳಲ್ಲಿ ತೊಂದರೆ ಆಗದೆ ಹೋದರೂ ನಿರೀಕ್ಷಿತ ಫಲಿತಾಂಶಗಳು ದೊರೆಯುವುದಿಲ್ಲ. ಅನಿರೀಕ್ಷಿತ ಧನಲಾಭವಿರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳಿಂದ ತೊಂದರೆಗೆ ಒಳಗಾಗುವಿರಿ. ಪ್ರಸಕ್ತ ಇರುವ ವ್ಯಾಪಾರ ವ್ಯವಹಾರಗಳನ್ನು ಮುಂದುವರೆಸುವಿರಿ. ಹೊಸ ಹಣಕಾಸಿನ ವ್ಯವಹಾರದಲ್ಲಿ ಹಣ ವಿನಿಯೋಗಿಸುವಿರಿ. ವಾರಾಂತ್ಯಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಈ ಕಾರಣ ಹಣ ಉಳಿತಾಯ ಮಾಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ.

ತುಲಾ

ಬೇರೆಯವರು ಮಾಡುವ ಕೆಲಸಗಳಲ್ಲಿ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸುವಿರಿ. ಈ ಕಾರಣದಿಂದಾಗಿ ಅನೇಕರ ವಿರೋಧವನ್ನು ಎದುರಿಸಬೇಕಾಗುತ್ತದೆ. ಅತಿಯಾದ ಅತುರ ಮತ್ತು ಆತ್ಮವಿಶ್ವಾಸದಿಂದ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಕೆಲಸದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಸರ್ಕಾರದ ಅನುಮತಿಯಿಂದ ಲೇವಾದೇವಿ ವ್ಯವಹಾರವನ್ನು ಆರಂಭಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಅತಿಯಾದ ಆಸೆ ಆಕಾಂಕ್ಷಿಗಳು ಈಡೇರದೆ ನಿರಾಸೆಗೆ ಒಳಗಾಗುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ

ವೃಶ್ಚಿಕ

ಉಪಯೋಗವಿಲ್ಲದ ಕೆಲಸ ಕಾರ್ಯಗಳಿಂದ ಬೇಸರಕ್ಕೆ ಒಳಗಾಗುವಿರಿ. ಅನಾವಶ್ಯಕ ಕೋಪ ತಾಪಗಳು ವಿವಾದಕ್ಕೆ ಕಾರಣವಾಗುತ್ತದೆ. ಕೌಟುಂಬಿಕ ವಿಚಾರಗಳಲ್ಲಿನ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಕಂಡುಬರುತ್ತವೆ. ಉದ್ಯೋಗದಲ್ಲಿ ಪ್ರಯೋಜನಕಾರಿ ಬೆಳವಣಿಗೆಗಳು ಉಂಟಾಗಲಿವೆ. ವಿದ್ಯಾರ್ಥಿಗಳು ಉನ್ನತ ಆಶಯಗಳೊಂದಿಗೆ ಬಾಳುತ್ತಾರೆ. ಹಣಕಾಸಿನ ವಿಚಾರದಲ್ಲಿ ಹಿರಿಯರ ಆದೇಶವನ್ನು ಪಾಲಿಸುವಿರಿ. ಉದ್ಯೋಗವನ್ನು ಬದಲಾಯಿಸುವ ಯೋಜನೆ ಈಡೇರಲಿದೆ. ಮಕ್ಕಳಿಗೆ ವಿದೇಶಿ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸಲು ಪ್ರಯತ್ನಿಸುವಿರಿ. ಕುಟುಂಬದಲ್ಲಿ ಮದುವೆಯ ಕಾರ್ಯ ನೆರವೇರುವ ಸೂಚನೆ ಇದೆ.

ಧನಸ್ಸು

ಕುಟುಂಬದ ಒತ್ತಡದಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಎಲ್ಲಾ ರೀತಿಯ ಅನುಕೂಲತೆಗಳು ಇದ್ದರೂ ಮನಸ್ಸಿಗೆ ನೆಮ್ಮದಿ ಇರದು. ವೈಯಕ್ತಿಕ ಕೆಲಸ ಕಾರ್ಯಗಳನ್ನು ಕಡೆಗಣಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಉಂಟಾಗದು. ಉದ್ಯೋಗದಲ್ಲಿ ನಿರೀಕ್ಷಿತ ಬೆಳವಣಿಗೆಗಳು ಕಂಡುರುತ್ತದೆ. ಉನ್ನತ ಅಧಿಕಾರ ದೊರೆಯಲಿದೆ. ವಿದ್ಯಾರ್ಥಿಗಳು ಆಟ ಪಾಠಗಳಲ್ಲಿ ಮುಂದಿರುತ್ತಾರೆ. ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕುಟುಂಬದ ಸದಸ್ಯರೊಂದಿಗೆ ಮನರಂಜನಾ ಕೂಟಕ್ಕೆ ತೆರಳುವಿರಿ. ರಜೆಯ ಕಾರಣ ಕುಟುಂಬದ ಸದಸ್ಯರ ಜೊತೆಯಲ್ಲಿ ದೂರದೂರಿಗೆ ಪ್ರವಾಸಕ್ಕೆ ತೆರಳುವಿರಿ.

ಮಕರ

ಅತಿಯಾದ ಒಳ್ಳೆಯತನ ನಿಮಗೆ ಮುಳುವಾಗುತ್ತದೆ. ಬೇರೆಯವರ ಕೆಲಸ ಕಾರ್ಯಗಳ ಜವಾಬ್ದಾರಿ ನಿಮ್ಮದಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ತಪ್ಪುಗಳನ್ನು ಸರಿಪಡಿಸುವಿರಿ. ಅನಿವಾರ್ಯವಾಗಿ ಬೇರೆಯವರಿಂದ ಹಣವನ್ನು ಪಡೆಯಬೇಕಾಗಿ ಬರುತ್ತದೆ. ವಿಶ್ರಾಂತಿ ಇಲ್ಲದ ಕೆಲಸಗಳಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಬಹುದಿನದ ನಂತರ ಆತ್ಮೀಯರೊಬ್ಬರನ್ನು ಭೇಟಿ ಮಾಡುವಿರಿ. ಕಷ್ಟದ ಸಂದರ್ಭದಲ್ಲಿ ಹೆದರದೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ಮಕ್ಕಳಿಗೆ ಉಡುಗೊರೆ ನೀಡಲು ಹೆಚ್ಚಿನ ಹಣ ಖರ್ಚು ಮಾಡುವಿರಿ. ಸೋದರ-ಸೋದರಿಯ ಜೊತೆ ವಿಶೇಷ ಪ್ರೀತಿ ಉಂಟಾಗುತ್ತದೆ. ಸೋದರ ಮಾವನಿಂದ ಹಣದ ಸಹಾಯ ದೊರೆಯುತ್ತದೆ.

ಕುಂಭ

ಮುಚ್ಚಿಟ್ಟಿದ್ದ ಹಣಕಾಸಿನ ವಿಚಾರ ಕುಟುಂಬದ ಸದಸ್ಯರಿಗೆ ತಿಳಿಯುತ್ತದೆ. ಉದರ ಸಂಬಂಧಿತ ದೋಷದಿಂದ ಬಳಲುವಿರಿ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಉಂಟಾಗುತ್ತದೆ. ಹಣದ ಕೊರತೆಯಿಂದ ಬಳಲುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಕೈಕಾಲುಗಳಲ್ಲಿನ ಶಕ್ತಿ ಕಡಿಮೆ ಆಗಬಹುದು. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು ಮತ್ತು ಬದಲಾವಣೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಆತಂಕದಿಂದ ಗುರಿ ಸಾಧಿಸುತ್ತಾರೆ. ವ್ಯಾಪಾರ ವ್ಯವಹಾರಗಳು ನಿಸುಗಮವಾಗಿ ಸಾಗಲಿದೆ. ಕೃಷಿಕರ ಆತಂಕವು ದೂರವಾಗಲಿವೆ. ದಾಂಪತ್ಯದಲ್ಲಿನ ಮನಸ್ತಾಪ ದೂರಾಗಲಿದೆ. ವಾಹನ ದುರಸ್ತಿಗಾಗಿ ಹೆಚ್ಚಿನ ಹಣ ಖರ್ಚಾಗಲಿದೆ.

ಮೀನ

ಮೋಡಿಯ ಮಾತಿನಿಂದ ವಿರೋಧಿಗಳ ಮನಸ್ಸನ್ನು ಗೆಲ್ಲಬಲ್ಲಿರಿ. ಮಾತುಕತೆಯಿಂದ ಕುಟುಂಬದ ಸಮಸ್ಯೆಯನ್ನು ನಿವಾರಿಸುವಿರಿ. ಸುಲಭದ ಕೆಲಸಗಳನ್ನು ಮಾಡಿ ಸಂತೋಷದಿಂದ ಕಾಲ ಕಳೆಯುವಿರಿ. ಯಾವುದೇ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಮನೆಯ ಸುತ್ತಮುತ್ತಲಿನ ಅಂದವನ್ನು ಕಾಪಾಡುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಮಾತ್ರ ಹಣ ಖರ್ಚು ಮಾಡುವಿರಿ. ಉದ್ಯೋಗಲ್ಲಿದ್ದ ವಿವಾದವು ಮರೆಯಾಗುತ್ತದೆ. ಕಷ್ಟದಲ್ಲಿರುವ ಸಂಬಂಧಿಕರಿಗೆ ಹಣ ಸಹಾಯ ಮಾಡುವಿರಿ. ಸಮಾಜದಲ್ಲಿ ವಿಶೇಷ ಸ್ಥಾನಮಾನ ದೊರೆಯುತ್ತದೆ. ಖರ್ಚಿಗೆ ಹಣ ಇಲ್ಲದೇ ಹೋದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ.

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).