ಕನ್ನಡ ಸುದ್ದಿ  /  Astrology  /  Astrology Horoscope Vaastu Tips For Built Home Zodiac Signs Significance Of Vaastu Aaya In Jyotishya Shastra Rsm

Vaastu Tips: ಆಯ ಎಂದರೇನು, ಎಷ್ಟು ವಿಧಗಳಿವೆ ವಾಸ್ತುವಿನಲ್ಲಿ ಆಯಕ್ಕೆ ಏನು ಪ್ರಾಮುಖ್ಯತೆ: ಮನೆ ವಾಸ್ತು ಆಯದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ

ಕಾಕಾಯದ ಭೂಮಿಯಲ್ಲಿ ತೊಂದರೆ ಇರುತ್ತದೆ. ಶನಿಯ ಪ್ರಾಬಲ್ಯತೆ ಇರುತ್ತದೆ. ಭೂಕಾರಕನಾದ ಕುಜನಿಗೆ ಶನಿಯು ಶತ್ರುವಾಗುತ್ತಾನೆ. ಈ ಕಾರಣದಿಂದಾಗಿ ಇಲ್ಲಿ ವಾಸಿಸುವವರಿಗೆ ಸೋಮಾರಿತನ ಇರುತ್ತದೆ. ಕೊಂಚ ಪ್ರಮಾಣದ ಬಡತನವೂ ಇರುತ್ತದೆ.

ಮನೆ, ಕಟ್ಟಡದ ಆಯಕ್ಕೆ ಸಂಬಂಧಿಸಿದ ಮಾಹಿತಿ
ಮನೆ, ಕಟ್ಟಡದ ಆಯಕ್ಕೆ ಸಂಬಂಧಿಸಿದ ಮಾಹಿತಿ (PC; Freepik.com)

ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟಬೇಕಾದವರು ದಿನದ ನಕ್ಷತ್ರ, ಜನ್ಮ ನಕ್ಷತ್ರ, ಮಣ್ಣಿನ ಬಣ್ಣ, ಸುತ್ತಮುತ್ತಲಿನ ಇತರೆ ಮನೆಗಳು, ಮನೆಯ ಹತ್ತಿರ ಇರುವ ದೇವಾಲಯಗಳು, ರಸ್ತೆಗಳು ಸೇರಿದಂತೆ ಅನೇಕ ಅಂಶಗಳು ಮುಖ್ಯವಾಗಿರುತ್ತದೆ. ಇದರ ಜೊತೆಗೆ ಜಮೀನಿನ ಕ್ಷೇತ್ರ ಫಲವನ್ನು ಆಧರಿಸಿದ ಆಯ ಕೂಡಾ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ.

ಆಯ ಎಂದರೇನು ಎಷ್ಟು ವಿಧಗಳಿವೆ?

ಮನೆ ಅಥವಾ ಯಾವುದೇ ಕಟ್ಟಡವನ್ನು ಕಟ್ಟುವಾಗ ಮನೆ ಒಳಭಾಗವನ್ನು ಎಷ್ಟು ಉದ್ದ ಹಾಗೂ ಎಷ್ಟು ಅಗಲಕ್ಕೆ ಕಟ್ಟಲಾಗುತ್ತದೆ ಎಂಬುದನ್ನು ಆಯ ಎನ್ನುತ್ತಾರೆ. ಆಯದಲ್ಲಿ ಒಟ್ಟು ಎಂಟು ವಿಧಗಳಿವೆ.

  • ಧ್ವಜಾಯ
  • ಧೂಮ್ರಾಯ
  • ಸಿಂಹಾಯ
  • ಶ್ವಾನಾಯ
  • ವೃಷಭಾಯ
  • ಖರಾಯ
  • ಗಜಾಯ
  • ಕಾಕಾಯ

ಭೂಮಿಯ ಕ್ಷೇತ್ರಫಲವನ್ನು ಅವಲಂಬಿಸಿ ಗಣಿತದ ಲೆಕ್ಕಾಚಾರದ ಮುಖೇನ ಆಯವನ್ನು ನಿರ್ಧರಿಸಲಾಗುತ್ತದೆ.

ಧ್ವಜಾಯ: ಈ ಆಯದಲ್ಲಿ ಮಾತ್ರ ಮನೆಯ ಮುಂಬಾಗಿಲನ್ನು ಯಾವುದೇ ದಿಕ್ಕಿನಲ್ಲಿ ಇಡಬಹುದು. ಆದರೆ ಉಳಿದ ಆಯಗಳಲ್ಲಿ ಒಂದು ನಿರ್ದಿಷ್ಟವಾದ ದಿಕ್ಕಿನಲ್ಲಿ ಮಾತ್ರ ಮುಂಬಾಗಿಲನ್ನು ಇಡಬೇಕಾಗುತ್ತದೆ. ಧ್ವಜಾಯದಲ್ಲಿ ಇರುವ ಮನೆಯಲ್ಲಿ ಸಾಮಾನ್ಯವಾಗಿ ಯಾವುದೇ ದೋಷ ಉಂಟಾಗುವುದಿಲ್ಲ. ಇದು ಧ್ವಜ ಕೀರ್ತಿಯೋಗ ಕ್ಕೆ ಸಮನಾಗಿರುತ್ತದೆ. ಇಂತಹ ಮನೆಯಲ್ಲಿ ನೆಲೆಸುವವರು ಮುಖ್ಯವಾಗಿ ಕುಟುಂಬದ ಮುಖ್ಯಸ್ಥರು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ. ಇವರ ವಿರೋಧಿಗಳು ಶಕ್ತಿ ಹೀನರಾಗುತ್ತಾರೆ, ಭಾಗ್ಯವಂತರಾಗಿರುತ್ತಾರೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆ ಕಂಡುಬರುತ್ತದೆ.

ಧೂಮ್ರಾಯ: ಕೆಲವು ಗ್ರಂಥಗಳಲ್ಲಿ ತಿಳಿಸಿರುವಂತೆ ಇಂಥಹ ಭೂಮಿಗಳಲ್ಲಿ ಕೇತುವಿನ ಪ್ರಭಾವ ಹೆಚ್ಚಾಗಿರುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಯಾವುದೇ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಶತ್ರುಗಳ ಕಾಟ ಇರುತ್ತದೆ. ಮುಖ್ಯವಾಗಿ ಸ್ತ್ರೀಯರ ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ.

ಸಿಂಹಾಯ: ಇಲ್ಲಿ ರವಿಯ ಪ್ರಭಾವ ಹೆಚ್ಚಾಗಿರುತ್ತದೆ. ಇಂಥಹ ಮನೆಯಲ್ಲಿ ವಾಸಿಸುವವರಿಗೆ ಒಳ್ಳೆಯ ಹೆಸರು ದೊರೆಯುತ್ತದೆ. ಉತ್ತಮ ಆರೋಗ್ಯ ಇರುತ್ತದೆ. ಹಣದ ತೊಂದರೆ ಉಂಟಾಗುತ್ತದೆ. ಸಮಾಜದಲ್ಲಿ ನ್ಯಾಯ ಹೇಳುವ ಅವಕಾಶ ಇವರಿಗಿರುತ್ತದೆ. ಆದರೆ ಇಂತಹ ಮನೆಯಲ್ಲಿ ವಾಸಿಸುವವರಿಗೆ ಅಸಾಧ್ಯವಾದ ಸಿಡುಕುತನ ಇರುತ್ತದೆ.

ಶ್ವಾನಾಯ: ಇಂತಹ ಮನೆಯಲ್ಲಿ ರಾಹುವಿನ ಪ್ರಾಬಲ್ಯತೆ ಇರುತ್ತದೆ ಎಂದು ಕೆಲವು ಗ್ರಂಥಗಳಲ್ಲಿ ತಿಳಿಸಿದೆ. ಇಂತಹ ಮನೆಯಲ್ಲಿ ವಾಸಿಸುವವರಿಗೆ ದುರಭ್ಯಾಸಗಳು ಇರಬಹುದು. ಬಹುಕಾಲ ಮನೆಯನ್ನು ಕಟ್ಟಿಸಿದವರಿಗೆ ಶಾಶ್ವತವಾಗಿ ವಾಸಿಸುವ ಅದೃಷ್ಟ ಇರುವುದಿಲ್ಲ. ಆರೋಗ್ಯದಲ್ಲಿ ಏರಿಳಿತ ಇರುತವೆ. ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ.

ವೃಷಭಾಯ: ಇದರ ಪ್ರಕಾರ ಮನೆ ಕಟ್ಟಿಸಿದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಶುಕ್ರನ ಪ್ರಭಾವ ಇರುವ ಕಾರಣ ಐಷಾರಾಮಿ ಜೀವನ ನಡೆಸುತ್ತಾರೆ. ಹಣವನ್ನು ಉಳಿಸಲು ಸಾಧ್ಯವಿಲ್ಲ. ಸದಾ ಕಾಲ ಬಂಧು ಬಳಗದವರು ಇರುತ್ತಾರೆ. ಒಂದಲ್ಲಾ ಒಂದು ಮಂಗಳ ಕಾರ್ಯಗಳು ಅಥವ ಸಂತೋಷ ಕೂಟಗಳು ನಡೆಯುತ್ತವೆ.

ಖರಾಯ: ಈ ಆಯದ ಬಗ್ಗೆ ಹೆಚ್ಚಿನ ಮಾಹಿತಿ ಯಾವುದೇ ಗ್ರಂಥಗಳಲ್ಲಿ ಕಾಣಸಿಗುವುದಿಲ್ಲ. ಆದರೆ ಕೆಲವು ಮಹನೀಯರ ಪ್ರಕಾರ ರಾಹು ಮತ್ತು ಕೇತುವಿನ ಪ್ರಭಾವ ಇರುತ್ತದೆ. ಇಂಥಹ ಮನೆಯಲ್ಲಿ ಹಣದ ತೊಂದರೆ ಸದಾ ಕಾಲ ಇರುತ್ತದೆ. ಈ ರೀತಿಯ ಮನೆಯಲ್ಲಿ ಯಾರೇ ವಾಸ ಮಾಡಿದರೂ ತೊಂದರೆ ಖಂಡಿತ. ಸಾಲವಿಲ್ಲದೆ ಜೀವನ ಸಾಗಲಾರದು.

ಗಜಾಯ: ಈ ವರ್ಗದ ಮನೆ ಅಥವಾ ಕಟ್ಟಡವು ಅಭಿವೃದ್ಧಿ, ಜಯ, ಧನಲಾಭ ತಂದು ನೀಡುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಎಲ್ಲಾ ರೀತಿಯ ಸಮೃದ್ಧಿ ಹೊಂದುತ್ತಾರೆ.

ಕಾಕಾಯ: ಈ ರೀತಿಯ ಭೂಮಿಯಲ್ಲಿ ತೊಂದರೆ ಇರುತ್ತದೆ. ಶನಿಯ ಪ್ರಾಬಲ್ಯತೆ ಇರುತ್ತದೆ. ಭೂಕಾರಕನಾದ ಕುಜನಿಗೆ ಶನಿಯು ಶತ್ರುವಾಗುತ್ತಾನೆ. ಈ ಕಾರಣದಿಂದಾಗಿ ಇಲ್ಲಿ ವಾಸಿಸುವವರಿಗೆ ಸೋಮಾರಿತನ ಇರುತ್ತದೆ. ಕೊಂಚ ಪ್ರಮಾಣದ ಬಡತನವೂ ಇರುತ್ತದೆ. ಆದರೆ ಯಂತ್ರೋಪಕರಣಗಳ ಶೇಖರಣೆಗೆ ಇದನ್ನು ಬಳಸಬಹುದು.

ಈ ಮೇಲಿನ ಅಂಶಗಳನ್ನು ನಾನಾ ಮೂಲಗಳಿಂದ ಸಂಗ್ರಹಿಸಲಾಗಿದೆ. ವಾಸ್ತುವನ್ನು ನಂಬುವವರು ಸೂಕ್ತ ವಾಸ್ತುತಜ್ಞರನ್ನು ಸಂಪರ್ಕಿಸಿ ಮುಂದುವರೆಯಬಹುದು.

ವಿಭಾಗ