Student Astrology: ಏಕಾಗ್ರತೆ ಹೆಚ್ಚಾಗಲು ವಿದ್ಯಾರ್ಥಿಗಳಿಗೆ ಇಲ್ಲಿದೆ ಜ್ಯೋತಿಷ್ಯ ಸಲಹೆ
Student Astrology: ಯಾವುದೇ ವ್ಯಕ್ತಿಯ ವಿದ್ಯಾಭ್ಯಾಸದ ಸಾಧಕ ಭಾದಕಗಳನ್ನು ಜನ್ಮಕುಂಡಲಿಯ ಕೂಲಂಕಷ ಅಧ್ಯಯನದಿಂದ ತಿಳಿಯಬಹುದು. ನಿಮಗೆ ಅರಿವಿಲ್ಲದಂತೆ ಈ ವಯಸ್ಸಿನಲ್ಲಿ ಯಾರಿಗೋ ಮಾಡಿದ ಸಹಾಯ ನಿಮಗೆ ಒಳ್ಳೆಯದನ್ನು ಮಾಡುತ್ತದೆ. ಅನುತ್ತೀರ್ಣರಾದವರು ಮಾನಸಿಕ ಒತ್ತಡಕ್ಕೆ ಒಳಗಾಗದೆ ಓದಿ ಜಯಗಳಿಸಿ.
ಎಸ್‌ಎಸ್‌ಎಲ್‌ಸಿ ಅಥವ ಪಿಯುಸಿ ಫಲಿತಾಂಶ (SSLC or PUC Results) ಗಳು ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಕೇವಲ ನಿಮ್ಮ ಮುಂದಿನ ಆಯ್ಕೆ ಮತ್ತು ದಾರಿಯನ್ನು ಸೂಚಿಸಬಹುದು. ಜೋತಿಷ್ಯದ ಪ್ರಕಾರ ಯಾವುದೂ ಅಸಾಧ್ಯವಲ್ಲ. ನಿಮಗೆ ಅರಿವಿಲ್ಲದಂತೆ ಈ ವಯಸ್ಸಿನಲ್ಲಿ ಯಾರಿಗೋ ಮಾಡಿದ ಸಹಾಯ ನಿಮಗೆ ಒಳ್ಳೆಯದನ್ನು ಮಾಡುತ್ತದೆ. ಅನುತ್ತೀರ್ಣರಾದವರು ಮಾನಸಿಕ ಒತ್ತಡಕ್ಕೆ ಒಳಗಾಗದೆ ಓದಿ ಜಯಗಳಿಸಬಹುದು. ಚಿಂತೆ ಬಿಡಿ.
ಯಾವುದೇ ವ್ಯಕ್ತಿಯ ವಿದ್ಯಾಭ್ಯಾಸದ ಸಾಧಕ ಭಾದಕಗಳನ್ನು ಜನ್ಮಕುಂಡಲಿಯ ಕೂಲಂಕಷ ಅಧ್ಯಯನದಿಂದ ತಿಳಿಯಬಹುದು. ಮುಖ್ಯವಾಗಿ ದಶಾ ಭುಕ್ತಿ ಮುಖ್ಯವಾಗುತ್ತದೆ. ಗೋಚಾರದಲ್ಲಿನ ಗ್ರಹಗಳ ಸ್ಥಿತಿಗತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜನ್ಮರಾಶಿಯಷ್ಠೇ ಜನ್ಮಲಗ್ನವೂ ಮುಖ್ಯವಾಗುತ್ತದೆ.
ಮೇಷ
ಗೆಲ್ಲಲೇ ಬೇಕೆಂಬ ಹಠವಿರುತ್ತದೆ. ಆದರೆ ಅತಿಯಾದ ಆತ್ಮವಿಶ್ವಾಸ ದೊಡ್ಡತೊಡಕಾಗುತ್ತದೆ. ತಂದೆ ತಾಯಿಯ ಆಶೀರ್ವಾದವೇ ಮುಖ್ಯವಾಗುತ್ತದೆ. ಗುರುಗಳ ಅನುಗ್ರಹವೂ ಬೇಕು. ಶಿವ ಪಾರ್ವತಿಯ ಪೂಜೆ ಮತ್ತು ಗುರುಪೂಜೆಯಿಂದ ಯಾವುದೇ ಕೆಲಸ ಸಾಧಿಸಬಹುದು. ಧಾಮಿಕ ಗುರುಗಳ ದೇಗುಲಕ್ಕೆ ವಸ್ತ್ರ ನೀಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಆದಿತ್ಯ ಹೃದಯ ಸ್ತೋತ್ರವನ್ನು ಆಲಿಸುವುದರಿಂದ ಆತ್ಮಸ್ಥೈರ್ಯವು ಹೆಚ್ಚುತ್ತದೆ. ನೀಲಿ ಮತ್ತು ಹಸಿರು ಬಣ್ಣಗಳ ಬಳಕೆಯನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಕಷ್ಟ ಎನಿಸುವ ವಿಷಯವನ್ನು ಬೆಳಗಿನ ವೇಳೆಯಲ್ಲಿ ಅಧ್ಯಯನ ಮಾಡಿ.
ವೃಷಭ
ಜಯಗಳಿಸಬೇಕೆಂಬ ಆಸೆ ಇರುತ್ತದೆ. ಆದರೆ ಸಮಯಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ತಂದೆ, ಸೋದರಮಾವ ಮತ್ತು ಹಿರಿಯ ಸೋದರನ ಮಾರ್ಗದರ್ಶನದಲ್ಲಿ ನಡೆದಲ್ಲಿ ಯಾವುದೂ ಅಸಾಧ್ಯವಲ್ಲ. ಮನೆಯ ಮುಂಬಾಗದಲ್ಲಿ ಗಿಡಗಳನ್ನು ಪೋಷಿಸಿ. ಸಹ ಪಾಠಿಗಳಿಗೆ ಕೈಲಾದಷ್ಟೂ ಸಹಾಯ ಮಾಡಿ. ಬಡವರ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿ. ಮನೆಯಲ್ಲಿರುವ ವಾಹನವನ್ನು ಶುಚಿಯಾಗಿಡಲು ಸಹಕರಿಸಿ. ಇದರಿಂದ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಷ್ಟದ ವಿಷಯವನ್ನು ಗುರುಹಿರಿಯರಿಂದ ಕಲಿಯಿರಿ. ಮಧ್ಯಾಹ್ನದ ವೇಳೆ ಓದುವುದು ಒಳ್ಳೆಯದು. ಕೆಂಪು ಬಣ್ಣದಿಂದ ದೂರವಿರಿ. ಒಳ್ಳೆಯದನ್ನು ಆಲಿಸಿ.
ಮಿಥುನ
ಗ್ರಹಿಕೆಯ ಶಕ್ತಿ ಚೆನ್ನಾಗಿರುತ್ತದೆ. ಆದರೆ ಸ್ಥಿರವಾದ ಮನಸ್ಸಿರುವುದಿಲ್ಲ. ನಿಮ್ಮ ತಾಯಿ ಮತ್ತು ನಿಮ್ಮ ಸೋದರಿಯ ಸಲಹೆಯಂತೆ ನಡೆದಲ್ಲಿ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಆಗದು. ಸರಳವಾದ ವಿಷಯಗಳನ್ನು ಮಾತ್ರ ಬೆಳಗಿನ ವೇಳೆ ಓದಿರಿ. ನಿದ್ದೆಗೆಟ್ಟು ಓದಲು ನಿಮ್ಮಿಂದ ಸಾಧ್ಯವಾಗದು. ಕಷ್ಟಕರ ವಿಷಯಗಳನ್ನು ಸಂಜೆಯ ವೇಳೆಯಲ್ಲಿ ವ್ಯಾಸಂಗ ಮಾಡಿರಿ. ಶ್ರೀ ವಿಷ್ಣು ಸಹಸ್ರನಾಮ ಕೇಳುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಹನುಮಾನ್ ಚಾಲೀಸವನ್ನು ಕೇಳುವುದರಿಂದ ಅಥಾವ ಪಠಿಸುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವ್ಯಾಸಂಗದಲ್ಲಿ ಆಸಕ್ತಿ ಉಂಟಾಗುತ್ತದೆ. ಅತಿಯಾದ ಆತ್ಮವಿಶ್ವಾಸ ಯಶಸ್ಸಿಗೆ ಅಡ್ಡಗಾಲಾಗುತ್ತದೆ.
ಕಟಕ
ಅತಿಯಾದ ಆತುರ ನಿಮ್ಮ ಅಧ್ಯಯನಕ್ಕೆ ಅಡ್ಡಗಾಗುತ್ತದೆ. ಯಾವುದೇ ವಿಚಾರದಲ್ಲಿ ಸ್ಥಿರವಾದ ಮನಸ್ಸಿರದು. ನಿಮ್ಮ ಕುಟುಂಬವರ್ಗದವರ ಜತೆಯಲ್ಲಿ ಸಂತೋಷದಿಂದ ಓದಿನಲ್ಲಿ ಯಾವುದೇ ತೊಂದರೆ ಬಾರದು. ಸೋದರಿಯರ ಮನಸ್ಸಿಗೆ ನೋವುಂಟು ಮಾಡದಿರಿ. ಅನ್ನಪೂರ್ಣಾಷ್ಟಕ ಪಠಣೆಯಿಂದ ಶುಭವಿರುತ್ತದೆ. ತಂಪಾದ ಜಾಗದಲ್ಲಿ ನಿಮಗೆ ವ್ಯಾಸಂಗದಲ್ಲಿ ಏಕಾಗ್ರತೆ ಉಂಟಾಗುತ್ತದೆ. ಸಿದ್ದಪುರುಷರ ಆರಾಧನೆ ನಿಮಗೆ ಶುಭಫಲಗಳನ್ನು ನೀಡುತ್ತದೆ. ಸುಬ್ರಹ್ಮಣ್ಯನ ಪೂಜಾರಾಧನೆ ಆತ್ಮಶಕ್ತಿಯನ್ನು ನೀಡುತ್ತಾನೆ. ಬೆಳಗಿನ ವೇಳೆ ಮತ್ತು ಸಂಜೆಯ ನಂತರ ಯಾವುದೇ ವಿಷಯಗಳನ್ನು ಓದಬಹುದು. ಓದಿನ ವೇಳೆ ಶಾಂತಿಯಿಂದಿರಿ.
ಸಿಂಹ
ಗೆಲ್ಲುವ ಹಂಬಲದಲ್ಲಿ ಹಲವು ತಪ್ಪುಗಳನ್ನು ಮಾಡುವಿರಿ. ನೀವು ಮಾಡುವುದೆಲ್ಲಾ ಸರಿ ಎಂಬ ಭಾವನೆ ಇರುತ್ತದೆ. ನಿಮ್ಮ ಗುರುಗಳ ಜತೆಯಲ್ಲಿ ಉತ್ತಮ ಒಡನಾಟ ಇರಲಿ. ಗುರುಗಳ ಮತ್ತು ಹಿರಿಸೋದರನ ಆಶೀರ್ವಾದ ನಿಮ್ಮ ಆಶೋತ್ತರಗಳನ್ನು ಈಡೇರಿಸುತ್ತದೆ. ಮುಂಜಾನೆ ಮತ್ತು ರಾತ್ರಿ ವೇಳೆ ಓದುವುದು ನಿಮಗೆ ಆಗದು. ಬೆಚ್ಚಗಿನ ವಾತಾವರಣದಲ್ಲಿ ವ್ಯಾಸಂಗ ಮುಂದುವರಿಸುವಿರಿ. ಗುರ್ವಾಷ್ಟಕ ಮತ್ತು ಪ್ರಜ್ಞಾವಿವರ್ಧನ ಸ್ತ್ರೋತ್ರದ ಪಾರಾಯಣದಿಂದ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ನೀಡುತ್ತದೆ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ.
ಕನ್ಯಾ
ಒಮ್ಮೆ ಕಲಿತ ವಿಚಾರವನ್ನು ಎಂದಿಗೂ ಮರೆಯುವುದಿಲ್ಲ. ಆದರೆ ನಿಮ್ಮ ಗಲಿ ಬಿಲಿಯ ಮನಸ್ಸು ಅಡ್ಡಪರಿಣಾಮಕ್ಕೆ ನಾಂದಿ ಹಾಡುತ್ತದೆ. ಪದೇಪದೆ ಮನನ ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ಶ್ರೀ ರಾಮರಕ್ಷಾಕವಚ ಮತ್ತು ಹಯಗ್ರೀವ ಸ್ತೋತ್ರ ಪಾರಾಯಣದಿಂದ ಶುಭಫಲಗಳನ್ನು ಪಡೆಯಬಹುದು. ಅಭ್ಯಾಸದ ಸಮಯದಲ್ಲಿ ಹರಿದ ಬಟ್ಟೆಗಳನ್ನು ಧರಿಸಿರಬಾರದು. ಪಶ್ಚಿಮ ದಿಕ್ಕಿನಲ್ಲಿ ಕುಳಿತು ಅಭ್ಯಾಸ ಮಾಡಬಾರದು. ಸತತವಾಗಿ ಒಂದೇ ವಿಷಯವನ್ನು ಅಧ್ಯಯನ ಮಾಡುವ ಬದಲು ಚಿಕ್ಕ ಸಮಯದಲ್ಲಿ ಓದಬೇಕಾದ ವಿಚಾರಗಳನ್ನು ಬದಲಿಸಿ. ಬರೆಯುವ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿ
ತುಲಾ
ವ್ಯಾಸಂಗ ಮಾಡಲು ಸುಖಕರ ವಾತಾವರಣ ಬೇಕು. ಸದಾಕಾಲ ಹಾಸಿಗೆ ಅಥವ ಸೋಫಾದ ಮೇಲೆ ಕುಳಿತು ಓದುವ ಮನಸ್ಸು. ಆತುರದ ಮನಸ್ಸು. ಅತಿ ನಿಧಾನಗತಿಯಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಓದಿನ ಮಧ್ಯೆ ಇನ್ನಿತರ ಕೆಲಸದಲ್ಲಿಯೂ ನಿರತರಾಗುವಿರಿ. ಶ್ರೀ ಆಂಜನೇಯನ ಪೂಜೆಯೊಂದೇ ನಿಮಗೆ ಉತ್ತಮ ಫಲಗಳನ್ನು ನೀಡಲು ಸಾಧ್ಯ. ಸಾಧ್ಯವಾದಷ್ಟೂ ಓದುವ ವೇಳೆ ಕಬ್ಬಿಣದ ಕುರ್ಚಿಯನ್ನು ಬಳಸದಿರಿ. ಬೆಳಗಿನ ಮತ್ತು ಸಂಜೆಯವೇಳೆ ಒಳ್ಳೆಯ ಫಲಗಳನ್ನು ನೀಡುತ್ತದೆ. ನಿಮ್ಮ ಹಿರಿಯ ಸೋದರ ಅಥವ ಸೋದರಿಯ ಆದೇಶವನ್ನು ಪಾಲಿಸಿದಲ್ಲಿ ಯಾವುದೂ ಅಸಾಧ್ಯವಲ್ಲ.
ವೃಶ್ಚಿಕ
ಗುರುಗಳ ಅನುಗ್ರಹ ನಿಮಗೆ ಇರುತ್ತದೆ. ಸಾದಿಸಬೇಕೆಂಬ ಛಲವೂ ಇರುತ್ತದೆ. ಆದರೆ ಬೇಡದ ಯೋಚನೆಗಳು ನಿಮ್ಮ ಮನಸಿಗೆ ಬರುತ್ತದೆ. ಈ ಕಾರಣದಿಂದಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಯಾವ ವೇಳೆಯಲ್ಲಿ ಓದಿನಲ್ಲಿ ಮಗ್ನರಾದರೂ ತನ್ಮಯತೆಯನ್ನು ತೋರುವಿರಿ. ಶನಿಶಾಂತಿ ಮತ್ತು ಶ್ರೀ ಗುರುಗಳ ಆರಾಧನೆಯಿಂದ ವಿಷೇಶವಾದ ಫಲಗಳನ್ನು ಪಡೆಯುವಿರಿ. ಶನಿವಾರದಂದು ದೇವಾಲಯಕ್ಕೆ ದೀಪದ ಎಣ್ಣೆಯನ್ನು ನೀಡಿ. ದುಡುಕುಮಾತಿನಿಂದ ಯಾರಿಗೂ ಬೇಸರ ಉಂಟಾಗುವಂತೆ ಮಾತನಾಡದಿರಿ. ಯಾವುದೆ ಬಿಳಿಬಣ್ಣದ ಆಹಾರ ವಸ್ತುವನ್ನು ಕಸದಲ್ಲಿ ಹಾಕದಿರಿ. ಬಿಳಿ ಬಟ್ಟೆ ಧರಿಸದಿರಿ
ಧನಸ್ಸು
ವಿಧ್ಯಯೇ ನಿಜವಾದ ಸಂಪಾತ್ತು ಎಂಬ ಭಾವನೆ ಇರುತ್ತದೆ. ಇಷ್ಟವಾದ ವಿಷಯವನ್ನು ಆಳದವರೆಗೂ ಅಧ್ಯಯನ ಮಾಡುವಿರಿ. ಆದರೆ ಯಾವ ವಿಷಯವನ್ನೂ ಸತತವಾಗಿ ಅಭ್ಯಾಸ ಮಾಡುವುದಿಲ್ಲ. ಚಂಚಲತೆ ಯಿನ್ನೆಡೆಯನ್ನು ಉಂಟುಮಾಡಲಿದೆ. ಕುಲದೈವರ ಆರಾಧನೆ ನಿಮಗೆ ಉತ್ತಮಜ್ಞಾನವನ್ನು ನೀಡುತ್ತದೆ. ಕುಮಾರಸೂಕ್ತವನ್ನು ಕೇಳಿರಿ ಅಥವ ಪಠಿಸಿರಿ. ತಾಯಿಯವರ ಬುದ್ಧಿಮಾತನ್ನು ಕೇಳಿದಲ್ಲಿ ಯಾವುದೇ ತೊಂದರೆ ಉಂಟಾಗದು. ಹಳೆಯ ಪುಸ್ತಕಗಳನ್ನು ಹಾಳುಮಾಡದಿರಿ. ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ಕುಳಿತು ವ್ಯಾಸಂಗ ಮಾಡಿದಲ್ಲಿ ಉನ್ನತ ಮಟ್ಟವನ್ನು ತಲುಪಬಹುದು. ಓದಿಗೆ ವೇಳೆಯ ನಿರ್ಬಂದ ಇರದು.
ಮಕರ
ಬೇರೆಯವರ ಸ್ಫೂರ್ತಿ ಇಲ್ಲದೆ ಅಭ್ಯಾಸದಲ್ಲಿ ತೊಡಗುವುದಿಲ್ಲ. ಅತಿಯಾದ ನಿದಾನತೆ ಅಧ್ಯಯನದಲ್ಲಿ ದೊಡ್ಡ ತೊಡಕಾಗುತ್ತದೆ. ಕೇಸರಿ ಮತ್ತು ಹಳದಿ ಬಣ್ಣದಿಂದ ದೂರವಿರುವುದು ಒಳ್ಳೆಯದು. ನಿಮ್ಮ ಸೋದರರ ಸಲಹೆ ಸೂಚನೆಯನ್ನು ಪಾಲಿಸಿದಲ್ಲಿ ತೊಂದರೆ ಕಡಿಮೆ ಆಗುತ್ತದೆ. ನಾರಾಯಣಸೂಕ್ತವನ್ನು ಕೇಳಿರಿ ಅಥವ ಪಠಣೆ ಮಾಡಿರಿ. ಆಡುಮಾತಿನ ಮೇಲೆ ಹಿಡಿತವಿರಲಿ. ನಿದ್ದೆ ಮತ್ತು ಋಚಿಕರವಾದ ಭೋಜನದಿಂದ ದೂರವಿದ್ದಷ್ಟೂ ಒಳ್ಳೆಯದು. ಅತಿಯಾಗಿ ಓದುವ ಬದಲು ಬರೆದು ಅಭ್ಯಾಸ ಮಾಡಿದಲ್ಲಿ ವಿದ್ಯಾಭ್ಯಾಸವು ಅವಿರತವಾಗಿ ಸಾಗುತ್ತದೆ. ಸಾಧ್ಯವಾದಷ್ಟೂ ಕಡಿಮೆ ಸ್ನೇಹಿತರಿರಬೇಕು
ಕುಂಭ
ಸರಿಯಾದ ಯೋಜನೆ ಮತ್ತು ಯೋಚನೆಯ ಕೊರತೆ ತೊಂದರೆಯನ್ನು ನೀಡುತ್ತದೆ. ನಿಮ್ಮ ಮನದ ಆಲೋಚನೆಗಳನ್ನು ಅರಿಯಲು ಯಾರಿಂದಲೂ ಸಾಧ್ಯವಾಗದು. ಶ್ರೀಸೂಕ್ತ ಮತ್ತು ಮನ್ಯುಸೂಕ್ತದ ಹೇಳಿಕೊಳ್ಳಿ ಇಲ್ಲವಾದಲ್ಲಿ ಆಲಿಸಿ. ಕಪ್ಪು ಬಣ್ಣದ ವಸ್ತ್ರವನ್ನು ಧರಿಸದಿರಿ. ಓದುವ ವೇಳೆ ಸುತ್ತಮುತ್ತಲಿನ ವಾತಾವರಣ ಪರಿಶುದ್ದವಾಗಿರುವಂತೆ ನೋಡಿಕೊಳ್ಳಿ. ಮನರಂಜನೆಯನ್ನು ಮರೆತು ಏಕಾಂಗಿಯಾಗಿ ಅಭ್ಯಾಸದಲ್ಲಿ ತೊಡಗುವುದು ಒಳ್ಳೆಯದು. ಚಿಕ್ಕ ಮಕ್ಕಳ ಶುಭ ಹಾರೈಕೆಯು ಸದಾ ಕಾಪಾಡುತ್ತದೆ. ಓದಿನಲ್ಲಿ ಮಗ್ನರಾದಗ ಸಣ್ಣ ದೀಪದ ಬೆಳಕು ನಿಮ್ಮ ಕಣ್ಮುಂದೆ ಇರಲಿ
ಮೀನ
ನಿಮ್ಮ ಜತೆಗಾರರಿಗೂ ನಿಮ್ಮಿಂದ ವಿದ್ಯಾಭ್ಯಾಸದಲ್ಲಿ ಅನುಕೂಲವಾಗುತ್ತದೆ. ಅತಿ ಕ್ಲಿಷ್ಟಕರ ವಿಷಯಗಳು ಸುಲಭವಾಗಿ ಅರ್ಥೈಸಿಕೊಳ್ಳುವಿರಿ. ನೀಲಿ ಮತ್ತು ಹಸಿರು ಬಣ್ಣದಿಂದ ದೂರವಿರಿ. ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ಶುಭವಿದೆ. ವಿಷ್ಣುವಿಗೆ ಸಂಬಂದಿಸಿದ ಯಾವುದೇ ಮಂತ್ರ ತಂತ್ರದಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಇರುತ್ತದೆ. ಉತ್ತರ ಮತ್ತು ಪೂರ್ವ ದಿಕ್ಕುಗಳು ಅದೃಷ್ಟವನ್ನು ನೀಡುತ್ತದೆ. ನಿಮ್ಮ ಸೋದರನ ಮಾತಿನಿಂದ ಶುಭವಿರುತ್ತದೆ. ಹವಳ ಮತ್ತು ಮುತ್ತು ಧರಿಸಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ತಣ್ಣಗಿನ ವಾತಾವರಣದಲ್ಲಿ ಓದಿನಲ್ಲಿ ಮಗ್ನರಾಗುವುದು ಒಳಿತು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
ಎಚ್.ಸತೀಶ್, ಜ್ಯೋತಿಷಿ, ಬೆಂಗಳೂರು ಮೊ: 8546865832