Libra Horoscope in 2024: ಮೇ ತಿಂಗಳಿಂದ ಹೊಸ ಜೀವನ ಆರಂಭ, ಅವಿವಾಹಿತರಿಗೆ ಮದುವೆ ನಿಶ್ಚಯ; ತುಲಾ ರಾಶಿಯವರ 2024ರ ವರ್ಷ ಭವಿಷ್ಯ
Libra Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ತುಲಾ ರಾಶಿ ವರ್ಷ ಭವಿಷ್ಯ ಹೀಗಿದೆ.
2024ರ ತುಲಾ ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತಮವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ಥಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ತುಲಾ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ಆರೋಗ್ಯದ ಕಡೆ ಗಮನ ಹರಿಸಿ
ತುಲಾ ರಾಶಿಯವರಿಗೆ ಈ ವರ್ಷದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ವರ್ಷಪೂರ್ತಿ ಒಂದು ರೀತಿಯ ಸವಾಲುಗಳು ಎದುರಾಗಲಿದೆ. ಮೇ ಆರಂಭವಾಗುವವರೆಗೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ಇರುವುದಿಲ್ಲ. ಆದರೆ ಮೇ ತಿಂಗಳಿನಿಂದ ಹೊಸ ಜೀವನಕ್ಕೆ ಕಾಲಿರಿಸುವಿರಿ. ಅರ್ಧಕ್ಕೆ ಉಳಿದ ಅನೇಕ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. ಸೋಲಿನ ವೇಳೆ ಬೇರೆಯವರನ್ನು ಟೀಕಿಸುವಿರಿ. ಸ್ವಲ್ಪ ಶಾಂತಿ ಸಹನೆಯಿಂದ ವರ್ತಿಸಿದರೆ ಸಮಸ್ಯೆಗಳಿಂದ ಪಾರಾಗಬಹುದು.
ಕುಟುಂಬದಲ್ಲಿ ಒತ್ತಡವಿದ್ದರೂ ಗೆಲ್ಲಬೇಕೆಂಬ ಆಸೆ ಹೆಚ್ಚಾಗಿರುತ್ತದೆ. ಅವೀರಥ ಪ್ರಯತ್ನದಲ್ಲೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಮಕ್ಕಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ನೀತಿ ನಿಯಮಗಳಿಗೆ ಮೊದಲ ಆದ್ಯತೆ ನೀಡಿ ಎಲ್ಲರ ಮನೆ ಗೆಲ್ಲುವಿರಿ. ಹಳೆಯ ವಿಚಾರಗಳಿಗೆ ಕಟ್ಟು ಬೀಳದೆ ಸದಾ ಕಾಲ ಹೊಸ ಜೀವನ ಮತ್ತು ಬದಲಾವಣೆಗಳನ್ನು ನಿರೀಕ್ಷೆ ಮಾಡುವಿರಿ. ಆತ್ಮೀಯರಿಗೆ ಸಹಾಯವಾಗಲೆಂದು ಪಾಲುದಾರಿಕೆಯ ವ್ಯಾಪಾರ ಆರಂಭಿಸಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರ ಅಚಲವಾಗಿದ್ದಲ್ಲಿ ಗೆಲುವು ನಿಮ್ಮದೇ. ನಿಮ್ಮ ಸಕಾರಾತ್ಮಕ ಮನೋಭಾವನೆ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಕುಟುಂಬದಲ್ಲಿನ ಶ್ರೇಯೋಭಿವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸುವಿರಿ.
ವರ್ಷದ ದ್ವಿತೀಯ ಭಾಗದಲ್ಲಿ ಹೊಸ ಬದಲಾವಣೆ
ವರ್ಷದ ದ್ವಿತೀಯ ಭಾಗದಲ್ಲಿ ಜೀವನದಲ್ಲಿ ಹೊಸ ಸಂತಸದ ಬದಲಾವಣೆಗಳು ಕಂಡು ಬರುತ್ತವೆ. ದೈನಂದಿನ ಕೆಲಸ ಕಾರ್ಯಗಳು ನಿಮ್ಮ ನಿರೀಕ್ಷೆಯಂತೆ ನಡೆಯುತ್ತವೆ. ಕುಟುಂಬದ ಹಿರಿಯರ ಮಾರ್ಗದರ್ಶನ ಅನುಸರಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಕುಟುಂಬಕ್ಕೆ ಸೇರಿದ ಭೂ ವಿವಾದವು ಸುಖಾಂತ್ಯಗೊಳ್ಳುತ್ತದೆ. ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದ ಮೇಲೆ ಬೇರೆಯವರ ಪ್ರಭಾವವಿರುತ್ತದೆ. ತಪ್ಪು ಮಾಡಿದರೆ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಯಾವುದೇ ಕೆಲಸ ಕಾರ್ಯವಾದರೂ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವುದು ಒಳ್ಳೆಯದು.
ಉದ್ಯೋಗದಲ್ಲಿ ಯೋಚಿಸಿ ಬುದ್ದಿವಂತಿಕೆಯ ತೀರ್ಮಾನ ಕೈಗೊಳ್ಳುವಿರಿ. ಯಾರನ್ನು ಸುಲಭವಾಗಿ ನಂಬುವುದಿಲ್ಲ. ಹೊಸ ಹೊಸ ಖರ್ಚು ವೆಚ್ಚಗಳು ಇದ್ದೇ ಇರುತ್ತದೆ. ಆದ್ದರಿಂದ ಅವಶ್ಯಕವಾಗಿ ಹಣ ಉಳಿಸಲು ಪರಿಪಕ್ವ ಯೋಜನೆಯೊಂದನ್ನು ರೂಪಿಸಿ. ನಿಮ್ಮದಲ್ಲದ ಹಣಕಾಸಿನ ವ್ಯವಹಾರಗಳಿಗೆ ಮಧ್ಯವರ್ತಿಯಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಕುಟುಂಬದವರ ವಿಶ್ವಾಸ ಗಳಿಸಿದರೆ ಹಣಕಾಸಿನ ಸಹಾಯ ದೊರೆಯುತ್ತದೆ. ಎಷ್ಟೇ ಬುದ್ಧಿವಂತರಾದರೂ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಬದಲು ಆತ್ಮೀಯರ ಸಹಾಯ ತೆಗೆದುಕೊಳ್ಳಿರಿ. ಆದರೆ ನಿಮ್ಮ ಕೆಲಸ ಕಾರ್ಯಗಳು ನೆರವೇರಿದ ಬಳಿಕ ಎಲ್ಲರನ್ನು ಟೀಕಿಸುವ ವರ್ತನೆಯನ್ನು ಬದಲಿಸಿಕೊಳ್ಳಿ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ನಾಳೆ ಬೆಳಗ್ಗೆ 6 ಗಂಟೆಗೆ ವೃಶ್ಚಿಕ ರಾಶಿಯವರ ವರ್ಷ ಭವಿಷ್ಯ ಪ್ರಕಟವಾಗಲಿದೆ