Finance Horoscope: ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುವುದಿಲ್ಲ; ಅನಾವಶ್ಯಕ ಖರ್ಚು ಎದುರಾಗಲಿದೆ; 2024ರ ಕುಂಭ, ಮೀನ ರಾಶಿಯ ಹಣಕಾಸು ಭವಿಷ್ಯ
Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಕುಂಭ ಹಾಗೂ ಮೀನ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಕುಂಭ ಹಾಗೂ ಮೀನ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ಕುಂಭ
ಈ ವರ್ಷದಲ್ಲಿ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುವುದಿಲ್ಲ. ಸಮಯವನ್ನು ಗೌರವಿಸಿ ಸರಿಯಾದ ವೇಳೆಯಲ್ಲಿ ತೀರ್ಮಾನಗಳನ್ನು ಕೈಗೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸಾಧ್ಯವಾದಷ್ಟು ಖರ್ಚು ವೆಚ್ಚಗಳಿಗೆ ಇತಿಮಿತಿ ಇರಲಿ. ಇದುವರೆಗೂ ಉಳಿಸಿರುವ ಹಣವನ್ನು ಗೋಪ್ಯವಾಗಿರಿಸಿ. ತಾವಾಗಿಯೇ ಸಹಾಯ ಮಾಡಲು ಬರುವ ಜನರನ್ನು ನಂಬಿಕೆಯಿಂದ ಕಾಣಿ. ಕುಟುಂಬದ ಸದಸ್ಯರ ಸಹಕಾರ ನಿಮಗಿರುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಮದ್ಯವರ್ತಿಯಾದಲ್ಲಿ ಹಣದ ಲಾಭವಿರುತ್ತದೆ. ಆದರೆ ಸಾಕ್ಷೀದಾರರಾದಲ್ಲಿ ತೊಂದರೆಗೆ ಒಳಗಾಗುವುದು ಖಚಿತ. ಆದ್ದರಿಂದ ತಾವಾಯಿತು ತಮ್ಮ ಕೆಲಸವಾಯಿತು ಎಂಬ ಬಾಳ್ವೆ ಒಳ್ಳೆಯದು. ಸೋದರ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗಿ ಬರುತ್ತದೆ.
ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲವಾದಲ್ಲಿ ಮುರಿದ ಕೈಕಾಲು ಸರಿಪಡಿಸಿಕೊಳ್ಳಬೇಕಾಗುತ್ತದೆ. ಏಪ್ರಿಲ್ ತಿಂಗಳ ಅಂತ್ಯವರೆಗೂ ಬಿಡುವಿಲ್ಲದೆ ಕೆಲಸ ನಿರ್ವಹಿಸಬೇಕಾಗುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ಆತ್ಮೀಯರ ಸಹಕಾರ ದೊರೆಯುತ್ತದೆ. ದೂರದ ಸಂಬಂಧಿ ಒಬ್ಬರಿಗೆ ನೀಡಿದ್ದ ಸಹಾಯವು ಈ ವೇಳೆಯಲ್ಲಿ ಉಪಯೋಗವಾಗುತ್ತದೆ. ಉತ್ತೇಜನಕಾರಿ ಪರಿಸರದಲ್ಲಿ ಬಾಳುವಿರಿ. ಕಷ್ಟಕ್ಕೆ ತಕ್ಕ ಫಲ ದೊರೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ. ನಿಧಾನಗತಿಯಲ್ಲಿ ಹಣವನ್ನು ಸಂಪಾದಿಸುವಿರಿ.
ಇದನ್ನೂ ಓದಿ: Aquarius Astrology in 2024: ಉದ್ಯೋಗದಲ್ಲಿ ಯಶಸ್ಸು, ಮೇ ನಂತರ ಕುಟುಂಬದಲ್ಲಿ ಶಾಂತಿ; 2024ರಲ್ಲಿ ಹೇಗಿರಲಿದೆ ಕುಂಭ ರಾಶಿಯ ಭವಿಷ್ಯ
ಆಗಸ್ಟ್ ತಿಂಗಳಲ್ಲಿ ತಂದೆಯಿಂದ ಅಥವಾ ಸಮಾಜದ ಗಣ್ಯ ವ್ಯಕ್ತಿಗಳಿಂದ ಹಣದ ಸಹಾಯ ದೊರೆಯುತ್ತದೆ. ಈ ವೇಳೆಯಲ್ಲಿ ಹಣವನ್ನು ಉಳಿಸುವ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು. ಸೆಪ್ಟೆಂಬರ್ ತಿಂಗಳಲ್ಲಿ ಆತ್ಮೀಯರ ಸಹಾಯದಿಂದ ಅನಿರೀಕ್ಷಿತ ಧನಲಾಭ ಉಂಟಾಗಲಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಎಚ್ಚರಿಕೆ ಇರಲಿ. ಈ ಅವಧಿಯಲ್ಲಿ ಹಣವನ್ನು ಉಳಿಸಲು ಪ್ರಯತ್ನಿಸಿ. ಹೊಸ ವ್ಯಾಪಾರದಲ್ಲಿ ಹಣವನ್ನು ತೊಡಗಿಸದಿರಿ. ನವೆಂಬರ್ ಉತ್ತರಾರ್ಧದಿಂದ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ಥಿರತೆ ಕಂಡುಬರುತ್ತದೆ. ಆತ್ಮೀಯರೊಂದಿಗೆ ಪೂರ್ವಯೋಜನೆಯಂತೆ ಹಣಕಾಸಿನ ವ್ಯವಹಾರವನ್ನು ಮಾಡುವಿರಿ. ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಸೇವಾಧಾರಿತ ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಉತ್ತಮ ಹಣ ಗಳಿಕೆ ಸಾಧ್ಯವಾಗುತ್ತದೆ.
ಮೀನ
ಈ ವರ್ಷದಲ್ಲಿ ಹಣಕಾಸಿನ ವಿಚಾರವು ಒಂದೇ ರೀತಿಯಲ್ಲಿ ನಡೆಯುವುದಿಲ್ಲ. ಕೈಯಲ್ಲಿ ಹಣ ಇರಲಿ ಇಲ್ಲದೆ ಹೋಗಲಿ. ನಿಯಮಿತ ಖರ್ಚು ವೆಚ್ಚಗಳು ಸದಾ ಎದುರಾಗುತ್ತದೆ. ಮೇ ಆರಂಭದವರೆಗೂ ಹಣದ ಕೊರತೆ ಇರುವುದಿಲ್ಲ. ಈ ಅವಧಿಯಲ್ಲಿ ಬರುವ ದಿನಗಳಿಗಾಗಿ ಹಣವನ್ನು ಉಳಿಸಬೇಕಾದ ಅವಶ್ಯಕತೆ ಇರುತ್ತದೆ. ಗಳಿಸಿದ ಹಣದಲ್ಲಿ ಬಹುತೇಕ ಹಣವು ಬೇರೆಯವರಿಗಾಗಿಯೇ ಖರ್ಚಾಗುತ್ತದೆ. ಮನೆವಾಳ್ತೆಗೆ ಬೇಕಾದ ವಸ್ತುಗಳನ್ನು ಬದಲಾಯಿಸಲು ಹೆಚ್ಚಿನ ಹಣ ಬೇಕಾಗುತ್ತದೆ. ಬಳಸುತ್ತಿರುವ ವಾಹನವನ್ನು ಮಾರಾಟ ಮಾಡಿ ಹೊಸ ವಾಹನವನ್ನು ಕೊಳ್ಳುವಿರಿ. ಒಟ್ಟಾರೆ ಅನಾವಶ್ಯಕ ಖರ್ಚು ವೆಚ್ಚಗಳು ನೆಮ್ಮದಿ ಕೆಡಿಸಲಿವೆ. ಒತ್ತಡಕ್ಕೆ ಮಣಿದು ಎಂದೋ ನೀಡಿದ ಮಾತಿಗೆ ಈ ದಿನ ಹಣದ ಸಹಾಯ ಮಾಡಬೇಕಾಗುತ್ತದೆ. ಬುದ್ಧಿವಂತಿಕೆಯ ನಿರ್ಣಯಗಳನ್ನು ತೆಗೆದುಕೊಂಡು ಹವ್ಯಾಸವಾಗಿ ಆರಂಭಿಸಿದ ಬೇಸಾಯದಿಂದ ಸಾಕಷ್ಟು ಹಣ ಸಂಪಾದಿಸುವಿರಿ. ಸಾಮಾನ್ಯವಾಗಿ ಯಾರಿಂದಲೂ ಹಣಕಾಸಿನ ನೆರವು ದೊರೆಯುವುದಿಲ್ಲ. ಕೇವಲ ಕಷ್ಟಪಟ್ಟು ದುಡಿಯುವ ಮುಖಾಂತರ ಹಣ ಗಳಿಸಲು ಸಾಧ್ಯ.
ಇದನ್ನೂ ಓದಿ: Pisces Astrology in 2024: ಒಂದೆರಡು ಬಾರಿ ಉದ್ಯೋಗ ಬದಲಾವಣೆ, ಮಕ್ಕಳ ಆರೋಗ್ಯದಲ್ಲಿರಲಿ ಎಚ್ಚರ: 2024ರಲ್ಲಿ ಹೇಗಿರಲಿದೆ ಮೀನ ರಾಶಿಯ ಭವಿಷ್ಯ
ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಇದರಿಂದ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ತಂದೆಯವರಿಂದ ವಂಶಾನುಗತವಾಗಿ ಬಂದ ವಿದ್ಯೆಯು ಜೀವನಾಧಾರವಾಗುತ್ತದೆ. ಕಾನೂನು ರೀತ್ಯ ಮಾಡುವ ಹಣಕಾಸಿನ ವ್ಯವಹಾರವು ಹೆಚ್ಚಿನ ಲಾಭ ನೀಡುತ್ತದೆ. ಈ ಅವಧಿಯಲ್ಲಿ ಹಣಕಾಸನ್ನು ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳು ನಿಮ್ಮನ್ನು ಸದಾ ಕಾಡುತ್ತದೆ. ಆತ್ಮೀಯ ಸ್ನೇಹಿತರೊಬ್ಬರ ನೆರವು ಹೊಸ ನಿರೀಕ್ಷೆಗೆ ಕಾರಣವಾಗುತ್ತದೆ.
ಅಕ್ಟೋಬರ್ ತಿಂಗಳಲ್ಲಿ ಮಕ್ಕಳ ಸಲುವಾಗಿ ಹೆಚ್ಚಿನ ಹಣದ ಅಗತ್ಯವಿರುತ್ತದೆ. ನವಂಬರ್ ತಿಂಗಳಿನಲ್ಲಿ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಒಟ್ಟಾರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡಿಗೆಯನ್ನು ಇಡಬೇಕು. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭವು ದೊರೆಯುತ್ತದೆ. ಸಂಯಮದಿಂದ ವರ್ತಿಸಿದರೆ ಹಣದ ತೊಂದರೆ ಕಾಣುವುದಿಲ್ಲ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).