Finance Horoscope: 2024ರ ಮೇಷ, ವೃಷಭ ರಾಶಿಯ ಹಣಕಾಸು ಭವಿಷ್ಯ; ದುಡ್ಡಿನ ವಿಚಾರದಲ್ಲಿ ಸ್ಥಿರತೆ ಇರುವುದಿಲ್ಲ, ಅನಾರೋಗ್ಯದಿಂದ ಖರ್ಚು
Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಮೇಷ ಹಾಗೂ ವೃಷಭ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಮೇಷ ಹಾಗೂ ವೃಷಭ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ಮೇಷ
ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಂಡುಬರುವುದಿಲ್ಲ. ಉತ್ತಮ ಆದಾಯ ದೊರೆತರೂ ಹಣವನ್ನು ಸರಿಯಾದ ಕ್ರಮದಲ್ಲಿ ಬಳಸುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳು ಸದಾ ಎದುರಾಗುತ್ತದೆ. ಆದರೆ ವರ್ಷ ಪೂರ್ತಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಏಪ್ರಿಲ್ ತಿಂಗಳವರೆಗೂ ನಿಧಾನಗತಿಯ ಆದಾಯವಿರುತ್ತದೆ. ಅವಶ್ಯಕತೆ ಇರುವ ವೇಳೆ ಹಣವನ್ನು ಗಳಿಸಲು ವಿಫಲರಾಗುವಿರಿ. ಅನಿವಾರ್ಯವಾಗಿ ಕುಟುಂಬದ ಸದಸ್ಯರಿಂದ ಅಥವಾ ಆತ್ಮೀಯರಿಂದ ಹಣವನ್ನು ಪಡೆಯಬೇಕಾಗುತ್ತದೆ. ಆದರೆ ಕೆಲವೇ ದಿನಗಳಲ್ಲಿ ಪಡೆದ ಹಣವನ್ನು ಮರುಪಾವತಿ ಮಾಡಲು ಕಷ್ಟವೇನು ಆಗದು. ನ್ಯಾಯದ ಪಕ್ಷಪಾತಿ ಆದ ರಣ ಹಣಕಾಸಿನ ವ್ಯವಹಾರದಲ್ಲಿ ವಿರೋಧಿಗಳು ಇರುತ್ತಾರೆ.
ಬೇಡದ ಅಥವಾ ಉಪಯೋಗವಿಲ್ಲದ ವಿಚಾರಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಪರಿಚಿತರ ಜೊತೆಯಲ್ಲಿ ಹಣಕಾಸಿನ ವ್ಯವಹಾರ ಮಾಡಿದಲ್ಲಿ ಸಹಜವಾಗಿ ಸಮಸ್ಯೆಗಳು ಎದುರಾಗಲಿವೆ. ಈ ರಾಶಿಯವರು ಕಷ್ಟಪಟ್ಟು ದುಡಿದಷ್ಟು ಹಣದ ಗಳಿಕೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ. ಆದರೆ ಯಾವುದೇ ರೀತಿಯ ತೊಂದರೆಯೂ ಬಾರದು.
ಇದನ್ನೂ ಓದಿ: BBK 10: ನನ್ನ ಪ್ರಕಾರ ಈ ಐದೇ ಜನ ಟಾಪ್‌ನಲ್ಲಿರ್ತಾರೆ, ಆ ಐವರಲ್ಲಿ ಈ ಸ್ಪರ್ಧಿಯೇ ಗೆಲ್ಲಬೇಕು; ಅವಿನಾಶ್ ಶೆಟ್ಟಿ ಹೇಳಿದ್ದು ಯಾರಿಗೆ?
ಏಪ್ರಿಲ್ ತಿಂಗಳ ನಂತರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಈ ಅವಧಿಯಲ್ಲಿ ಅನಪೇಕ್ಷಿತ ವಿಚಾರಗಳಿಗೆ ಹಣ ಖರ್ಚಾಗಲಿದೆ. ವ್ಯಾಪಾರದಲ್ಲಿಯೂ ಸಹ ಉತ್ತಮ ಆದಾಯ ದೊರೆಯುತ್ತದೆ. ಕೇವಲ ಉತ್ತಮ ಯೋಜನೆಗಳಿಂದ ಮಾತ್ರ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಆಗಸ್ಟ್ ತಿಂಗಳ ನಂತರದ ದಿನಗಳಲ್ಲಿ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಪ್ರಸಿದ್ಧ ಕಂಪನಿಗಳ ಷೇರುಗಳನ್ನು ಕೊಳ್ಳುವ ಸೂಚನೆ ಇದೆ.
ಅಕ್ಟೋಬರ್ ಮತ್ತು ನವಂಬರ್ ತಿಂಗಳಿನಲ್ಲಿಅನಾರೋಗ್ಯದ ಕಾರಣ ಹೆಚ್ಚಿನ ಹಣ ಬೇಕಾಗಬಹುದು. ಕುಟುಂಬದವರ ಸಹಾಯದಿಂದ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಬಂಡವಾಳದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆಯಿಂದ ಹಣವನ್ನು ವಿನಿಯೋಗಿಸಿ. ಹಿರಿಯ ಸೋದರನಿಗೆ ಹಣಕಾಸಿನ ತೊಂದರೆ ಇರುವ ಕಾರಣ ಹಣ ಸಹಾಯ ಮಾಡಬೇಕಾಗುತ್ತದೆ. ವಂಶದ ಆಸ್ತಿಯೊಂದನ್ನು ಮಾರಾಟ ಮಾಡಿ ಹಣವನ್ನು ಸಂಗ್ರಹಿಸುವಿರಿ.
ವೃಷಭ
ನಿರೀಕ್ಷೆಗೂ ಮೀರಿದ ಆದಾಯ ದೊರೆಯುತ್ತದೆ. ಆದರೆ ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಒದಗಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಏರಿಳಿತ ಉಂಟಾಗುವ ಕಾರಣ ಅನಿವಾರ್ಯವಾಗಿ ಧನ ಸಹಾಯ ಮಾಡುವಿರಿ. ಕಷ್ಟಜೀವಿಗಳಾದ ಕಾರಣ ಸಮಯ ವ್ಯರ್ಥ ಮಾಡದೆ ಒಂದಿಲ್ಲೊಂದು ಕೆಲಸ ಕಾರ್ಯಗಳಲ್ಲಿ ನಿರ್ತರಾಗುವಿರಿ. ಇದರ ಪ್ರತಿಫಲವಾಗಿ ಉತ್ತಮ ಹಣವನ್ನು ಗಳಿಸುವಿರಿ. ಆತ್ಮೀಯರಿಗೆ ನೀಡಿದ್ದ ಹಣ ಮರಳಿ ಕೈ ಸೇರುವುದು. ಹಣಕಾಸನ್ನು ಸರಿಯಾದ ಮಾರ್ಗದಲ್ಲಿ ಬಳಸುವಿರಿ. ಹಠದ ಸ್ವಭಾವವನ್ನು ತೊರೆದರೆ ಮತ್ತಷ್ಟು ಅನುಕೂಲತೆಯನ್ನು ಪಡೆಯಬಹುದು. ಲಾಭವಿಲ್ಲದ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.
ಇದನ್ನೂ ಓದಿ: Aries Astrology: ಕಂಕಣ ಭಾಗ್ಯ, ಉದ್ಯೋಗ, ವ್ಯಾಪಾರ, ಹಣಕಾಸು: 2024ರಲ್ಲಿ ಹೇಗಿರಲಿದೆ ಮೇಷ ರಾಶಿಯ ಭವಿಷ್ಯ
ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಮೇ ತಿಂಗಳವರೆಗೂ ಉತ್ತಮ ಆದಾಯ ದೊರೆಯಲಿದೆ. ಅನಂತರ ಆದಾಯದಲ್ಲಿ ಕೊರತೆ ಉಂಟಾಗುತ್ತದೆ. ಇದನ್ನು ಸರಿದೂಗಿಸಲು ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಖರ್ಚು ವೆಚ್ಚಗಳಿಗೆ ಸರಿಸಮನಾದ ಹಣವನ್ನು ಸುಲಭವಾಗಿ ಗಳಿಸಬಲ್ಲಿರಿ. ಹಣಕಾಸಿನ ವ್ಯವಹಾರದಲ್ಲಿ ಹೇರಳ ಲಾಭ ದೊರೆಯಲಿದೆ. ಸಾಲದ ವ್ಯವಹಾರಗಳಲ್ಲಿ ಬೇರೆಯವರಿಗೆ ಹಣ ನೀಡುವ ಮೊದಲು ಕೊಂಚ ಯೋಚಿಸಬೇಕು. ನಿಮ್ಮಲ್ಲಿನ ಮೃದುವಾದ ಮನಸ್ಸನ್ನು ಅರಿತ ಜನ ಸ್ವಾರ್ಥ ಮನೋಭಾವನೆಯಿಂದಲೇ ಹಣಕ್ಕಾಗಿಯೇ ನಿಮ್ಮ ಬಳಿ ಬರಬಹುದು. ವಿದ್ಯಾರ್ಥಿಗಳಿಗೆ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಪ್ರೋತ್ಸಾಹ ಧನ ದೊರೆಯುತ್ತದೆ. ಒಟ್ಟಾರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ಅವಲಂಬಿಸುವುದಿಲ್ಲ. ಹಾಗೆಯೇ ನಂಬುವುದೂ ಇಲ್ಲ.
ಇದನ್ನು ಓದಿ: 2024 ರ ರಾಶಿ ಪ್ರಕಾರ ವರ್ಷ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಅನಿರೀಕ್ಷಿತವಾಗಿ ಹಣವನ್ನು ಗಳಿಸುವ ಸಾಧ್ಯತೆಗಳಿವೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಹಿನ್ನಡೆ ಉಂಟಾಗಬಹುದು. ಯಾವುದೇ ಯೋಜನೆಗಳಲ್ಲಿ ಹಣ ವಿನಿಯೋಗಿಸುವ ಮುನ್ನ ಒಮ್ಮೆ ಯೋಚಿಸಿ. ಅತಿಯಾದ ಆತ್ಮವಿಶ್ವಾಸವನ್ನು ಬದಿಗಿಟ್ಟು ಕುಟುಂಬದ ಸದಸ್ಯರ ಸಲಹೆ ಸೂಚನೆಗಳನ್ನು ಪಾಲಿಸಲು ಪ್ರಯತ್ನಿಸಿ. ಆದಾಯ ಮತ್ತು ಖರ್ಚು-ವೆಚ್ಚಗಳನ್ನು ಸರಿದೂಗಿಸಲು ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವಿರಿ.
ಆಗಸ್ಟ್ ತಿಂಗಳ ನಂತರ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಭೂ ವ್ಯವಹಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಆದರೆ ಕಾನೂನು ಕಟ್ಟಳೆಯ ಬಗ್ಗೆ ಎಚ್ಚರಿಕೆ ಇರಲಿ. ಉತ್ತಮ ಯೋಜನೆ ಇಲ್ಲದೆ ಯಾವುದೇ ವಿಚಾರದಲ್ಲಿಯೂ ಹಣವನ್ನು ವಿನಿಯೋಗಿಸದಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).