ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ

ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ

ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚಾದಲ್ಲಿ ಹಣದ ಕೊರತೆ ಕಂಡು ಬರುತ್ತದೆ. ಆದರೆ ಪ್ರತಿಯೊಂದು ರಾಶಿಯವರಿಗೂ ಬೇರೆ ಬೇರೆ ರೀತಿಯ ಖರ್ಚು ವೆಚ್ಚಗಳು ಎದುರಾಗುತ್ತವೆ. ಆದರೆ ಸುಲಭವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ನಿಯಂತ್ರಿಸಬಹುದು. (ಬರಹ: ಎಚ್‌. ಸತೀಶ್)

ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ
ಅತಿಯಾಗಿ ಹಣ ಖರ್ಚು ಮಾಡುವ ರಾಶಿಗಳು; ನಿಮ್ಮದು ಯಾವ ರಾಶಿ? ಅನಿರೀಕ್ಷಿತ ವೆಚ್ಚ ನಿಯಂತ್ರಿಸಲು ಈ ರೀತಿ ಮಾಡಿ

ಸಾಮಾನ್ಯವಾಗಿ ಎಲ್ಲರೂ ಅವರವರ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುತ್ತಾರೆ. ಒಂದಿಷ್ಟು ಹಣವನ್ನು ಭವಿಷ್ಯದ ದಿನಗಳನ್ನು ಎದುರಿಸಲು ಕೂಡಿಡುತ್ತಾರೆ. ಆದರೆ ಕೆಲವರ ಜೀವನದಲ್ಲಿ ಅದು ಬೇರೆ ರೀತಿಯದ್ದಾಗಿಯೇ ಇರುತ್ತದೆ. ಅವರ ಜೀವನದಲ್ಲಿ ಉತ್ತಮ ಆದಾಯವಿರುತ್ತದೆ. ಆದರೆ ಖರ್ಚು ಕೂಡಾ ಅಷ್ಟೇ ಹೆಚ್ಚಿರುತ್ತದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಕೈಗೆ ಬಂದ ಹಣ ಗೊತ್ತಾಗದಂತೆ ಖಾಲಿಯಾಗಿಬಿಡುತ್ತದೆ. ಹಣ ಉಳಿಸಬೇಕೆಂದು ಮಾಡಿರುವ ಯೋಜನೆಗಳೆಲ್ಲವೂ ವಿಫಲವಾಗುತ್ತದೆ. ಅದಕ್ಕೆ ಅವರ ರಾಶಿಯೂ ಕಾರಣ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಎಲ್ಲಾ ರಾಶಿಯವರು ಒಂದೇ ರೀತಿಯಲ್ಲಿ ಹಣ ಖರ್ಚು ಮಾಡುವುದಿಲ್ಲ. ಪ್ರತಿಯೊಂದು ರಾಶಿಯವರೂ ಬೇರೆ ಬೇರೆ ರೀತಿಯಲ್ಲಿ ಖರ್ಚು ವೆಚ್ಚಗಳನ್ನು ಎದುರಿಸುತ್ತಾರೆ. ಅವರಿಗೆ ಎದುರಾಗುವ ಅನಿರೀಕ್ಷಿತ ಸಂದರ್ಭಗಳು ಹಣದ ಕೊರತೆಯನ್ನು ಎದುರಿಸುವಂತೆ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ರಾಶಿಯವರೂ ಸುಲಭವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ನಿಯಂತ್ರಿಸಬಹುದಾದ ಉಪಾಯವನ್ನು ಹೇಳಲಾಗಿದೆ. ಹಾಗಾದರೆ ಯಾವ ರಾಶಿಯವರು ಏನೇನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರು ದೇವತಾ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ವೆಚ್ಚ ಮಾಡುತ್ತಾರೆ. ಸಾಮಾನ್ಯವಾಗಿ ಇವರಿಗೆ ಕುಟುಂಬದ ಜವಾಬ್ದಾರಿಯು ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಉತ್ತಮ ಆದಾಯ ಇರುತ್ತದೆ. ಆದರೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇವರು ಕೇಸರಿ ಬಣ್ಣದ ಅಥವಾ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಬಾರದು. ಶ್ರೀ ದತ್ತಾತ್ರೇಯ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ಖರ್ಚುವೆಚ್ಚಗಳು ಕಡಿಮೆಯಾಗುತ್ತವೆ. ಕಡಲೆ ಬೇಳೆಯಿಂದ ಮಾಡಿದ ತಿಂಡಿ ತಿನಿಸನ್ನು ದಾನ ಮಾಡುವುದರಿಂದ ಶುಭಫಲಗಳು ದೊರೆಯುತ್ತವೆ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದವರು ಯಾರೊಬ್ಬರ ಮಾತನ್ನು ಕೇಳುವುದಿಲ್ಲ. ಪ್ರತಿಯೊಂದು ವಿಚಾರದೊಂದಿಗೆ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲರು. ಸಾಮಾನ್ಯವಾಗಿ ಇವರು ಸೋದರ ಅಥವಾ ಸೋದರಿಯ ಸಲುವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇವರಿಗೆ ಹಣದ ತೊಂದರೆ ಬರುವುದು ಬಹಳ ಕಡಿಮೆ. ಎಲ್ಲರಿಂದಲೂ ಇವರಿಗೆ ಸಮಯಕ್ಕೆ ಸರಿಯಾಗಿ ಹಣದ ಸಹಾಯ ದೊರೆಯುತ್ತದೆ. ಇವರು ಕೆಂಪು ಬಣ್ಣದ ಬಟ್ಟೆಯನ್ನು ಧರಿಸದೆ ಇರುವುದು ಒಳ್ಳೆಯದು.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿರುವವರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಬಾಳ ಸಂಗಾತಿ ಮತ್ತು ಮಕ್ಕಳಿಗೆ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ. ಇವರ ಬಳಿ ಹಣ ಇಲ್ಲವೆಂದರೂ ಸಹ ಸಮಸ್ಯೆ ಆಗುವುದಿಲ್ಲ. ಗುಟ್ಟಾಗಿ ಹಣವನ್ನು ಸಂಗ್ರಹಿಸುತ್ತಾರೆ. ಒಂದೇ ಬಾರಿ ಹಣ ಖರ್ಚು ಮಾಡುವ ಬದಲು ಸಮಯ ಸಂದರ್ಭವನ್ನು ಅರಿತು ಕಡಿಮೆ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಬಳಿ ಇರುವ ಹಣವನ್ನೆಲ್ಲ ಖರ್ಚು ಮಾಡುತ್ತಾರೆ. ಇವರು ಹಾಲಿನ ಬಣ್ಣದ ಬಟ್ಟೆಗಳಿಂದ ದೂರವಿರುವುದು ಒಳ್ಳೆಯದು.

ಕಟಕ ರಾಶಿ

ಕಟಕ ರಾಶಿಯವರು ಯೋಚನೆಯನ್ನೇ ಮಾಡದೆ ತಮ್ಮಲ್ಲಿರುವ ಹಣವನ್ನು ಖರ್ಚು ಮಾಡುತ್ತಾರೆ. ಸ್ವಂತ ಖರ್ಚಿಗಿಂತ ತಂದೆ ಮತ್ತು ತಾಯಿಯ ಬಳಗದವರ ಖರ್ಚು ವೆಚ್ಚಗಳೆ ಇವರಿಗೆ ಹೆಚ್ಚಿನದಾಗುತ್ತದೆ. ಇವರಿಗೆ ಹಣವನ್ನು ಶೇಖರಿಸಬೇಕೆಂಬ ಯೋಚನೆ ಇರುವುದಿಲ್ಲ. ಆದರೆ ಸಾಮಾನ್ಯವಾಗಿ ಇವರಿಗೆ ಹಣದ ಕೊರತೆ ಬಾರದು. ಸಾಧ್ಯವಾದಷ್ಟು ಇವರು ಹಸಿರು ಬಣ್ಣದ ಬಟ್ಟೆಯನ್ನು ಧರಿಸದೇ ಇರುವುದು ಒಳ್ಳೆಯದು. ಮಕ್ಕಳಿಗೆ ಹೆಸರುಬೇಳೆಯಿಂದ ಮಾಡಿದ ತಿಂಡಿ ತಿನಿಸನ್ನು ನೀಡುವುದರಿಂದ ಖರ್ಚು ವೆಚ್ಚಗಳು ಕಡಿಮೆಯಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ತಾವು ಮಾಡುವ ಕೆಲಸವೆಲ್ಲ ಸರಿ ಎಂಬ ಮನೋಭಾವನೆಯಲ್ಲಿ ಇರುತ್ತಾರೆ. ಆದಾಯಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇವರು ಹಣವನ್ನು ಖರ್ಚು ಮಾಡುತ್ತಾರೆ. ಕುಟುಂಬದ ಸದಸ್ಯರ ಅನಾರೋಗ್ಯ ಸುಧಾರಣೆಗಾಗಿ ಹಣವನ್ನು ನೀಡಬೇಕಾಗಿ ಬರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ತೊಂದರೆಯನ್ನು ಅನುಭವಿಸಿ ಕಡಿಮೆ ಮೊತ್ತದ ಲಾಭಾಂಶವನ್ನು ಪಡೆಯುತ್ತಾರೆ. ಯಾವುದೇ ಹೆಣ್ಣು ದೇವರ ದೇವಸ್ಥಾನಕ್ಕೆ, ಅಕ್ಕಿ ಬೇಳೆ ಮತ್ತು ಬೆಲ್ಲವನ್ನು ನೀಡಿದರೆ ಅನಪೇಕ್ಷಿತ ಖರ್ಚು ವೆಚ್ಚಗಳಿಂದ ಇವರು ಹೊರ ಬರಬಹುದು. ಕನಿಷ್ಠ ಪಕ್ಷ ಆತ್ಮೀಯರ ಸಲಹೆಯನ್ನಾದರೂ ಒಪ್ಪುವುದು ಒಳ್ಳೆಯದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಅನಪೇಕ್ಷಿತ ವಿಚಾರಗಳಿಗೆ ಹಣವನ್ನು ಖರ್ಚು ಮಾಡುತ್ತಾರೆ. ಇವರಲ್ಲಿ ಯಾವುದೇ ವಿಚಾರದಲ್ಲಿಯೂ ತೀರವಾದ ಮನಸ್ಸಿರುವುದಿಲ್ಲ. ದಾನ ಧರ್ಮ ಮಾಡುವಲ್ಲಿ ಇವರು ನಿಷ್ಣಾಥರು. ತಾಯಿಯ ಕಡೆಯ ಸಂಬಂಧಿಕರಿಗೆ ಹಣವನ್ನು ನೀಡಬೇಕಾಗುತ್ತದೆ. ಬೇರೆಯವರಿಗೆ ನೀಡಿದ ಹಣವು ಪೂರ್ಣವಾಗಿ ಇವರ ಕೈ ಸೇರುವುದಿಲ್ಲ. ಗುರುಪೂಜೆಯಿಂದ ಆದಾಯವು ಹೆಚ್ಚುತ್ತದೆ. ಗುರು ಮಂದಿರಕ್ಕೆ ಕೇಸರಿ ಅಥವಾ ಹಳದಿ ಬಣ್ಣದ ವಸ್ತ್ರವನ್ನು ಧಾನ ನೀಡುವುದು ಒಳ್ಳೆಯದು. ವಯೋವೃದ್ಧರಿಗೆ ಗೋಧಿಯಿಂದ ಮಾಡಿದ ತಿಂಡಿ ತಿನಿಸನ್ನು ನೀಡುವುದರಿಂದಲೂ ಶುಭ ಫಲಗಳನ್ನು ಪಡೆಯಬಹುದು.

ತುಲಾ ರಾಶಿ

ತುಲಾ ರಾಶಿಯವರು ಬೇರೆಯವರ ವಿದ್ಯಾಭ್ಯಾಸಕ್ಕಾಗಿ ಹಣವನ್ನು ವಿನಿಯೋಗಿಸುತ್ತಾರೆ. ಸಮಾಜದಲ್ಲಿ ಉನ್ನತ ಸ್ಥಾನ ಪ್ರತಿಷ್ಠೆ ಮತ್ತು ಗೌರವವನ್ನು ಪಡೆಯುವ ಹಂಬಲ ಇವರಲ್ಲಿರುತ್ತದೆ. ಕುಟುಂಬದವರ ಅಥವಾ ಆತ್ಮೀಯರ ಬುದ್ದಿ ಮಾತನ್ನು ಕೇಳಿದರೂ ತಮ್ಮ ರೀತಿ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲ. ಹಣವನ್ನು ಉಳಿಸುವ ಕಾರ್ಯತಂತ್ರ ಇವರಿಗೆ ತಿಳಿಯುವುದಿಲ್ಲ. ತಾಯಿ ಅಥವಾ ಅವರ ಸಂಬಂಧಿಕರ ಸಹಾಯ ಸದಾ ಇವರಿಗೆ ದೊರೆಯುತ್ತದೆ. ಮುಖ್ಯವಾಗಿ ಹಸಿರು ಮತ್ತು ನೀಲಿ ಬಟ್ಟೆಗಳನ್ನು ಧರಿಸಿದರೆ ಹಣದ ಕೊರತೆ ಕಡಿಮೆಯಾಗುತ್ತದೆ. ಸೋದರ ಮಾವನಿಗೆ ಸಹಾಯ ಮಾಡುವುದರಿಂದ ಇವರ ಆದಾಯವು ಹೆಚ್ಚಿ ಹಣವನ್ನು ಉಳಿತಾಯ ಮಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಹಠದ ಗುಣವಿರುತ್ತದೆ. ಸುಲಭವಾಗಿ ಇವರು ಯಾರೊಬ್ಬರ ಸಲಹೆ ಸೂಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಇವರು ಮಕ್ಕಳ ಅಂಕೆಯಲ್ಲಿ ಇರುತ್ತಾರೆ. ಇಲ್ಲದೇ ಹೋದ ಪಕ್ಷದಲ್ಲಿ ಗಳಿಸಿದ ಹಣವನ್ನೆಲ್ಲ ಖರ್ಚು ಮಾಡುವ ಪರಿ ಇವರದು. ಇವರಿಗೆ ಪ್ರವಾಸ ಮಾಡುವ ಆಸೆ ವಿಶೇಷವಾಗಿ ಇರುತ್ತದೆ. ಆದ್ದರಿಂದ ಹಣದ ಅವಶ್ಯಕತೆಯೂ ಹೆಚ್ಚಾಗಿರುತ್ತದೆ. ಶ್ರೀ ಅನ್ನಪೂರ್ಣೇಶ್ವರಿಯ ದೇಗುಲಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿದರೆ ಇವರ ಖರ್ಚು ವೆಚ್ಚಗಳು ಕಡಿಮೆಯಾಗಬಹುದು. ಇವರು ಬಿಳಿ ಬಣ್ಣದ ವಸ್ತ್ರಗಳಿಂದ ದೂರವಿರುವುದು ಒಳ್ಳೆಯದು.

ಧನು ರಾಶಿ

ಧನು ರಾಶಿಯವರು ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವುದಿಲ್ಲ. ತಮಗೆ ಅವಶ್ಯಕತೆ ಇದ್ದಷ್ಟು ಹಣವನ್ನು ಕಷ್ಟವಾದರೂ ಸಂಪಾದಿಸುತ್ತಾರೆ. ಸಾಮಾನ್ಯವಾಗಿ ಇವರು ಧೃಡವಾದ ಮನಸ್ಸನ್ನು ಹೊಂದಿರುವುದಿಲ್ಲ. ಹಿರಿಯ ಸಹೋದರ ಅಥವಾ ಸಹೋದರಿಯಿಂದ ಹಣದ ಸಹಾಯವಿರುತ್ತದೆ. ಆದರೆ ಅದನ್ನು ತಮ್ಮ ಕಿರಿಯ ಸಹೋದರ–ಸಹೋದರಿಗಾಗಿ ಖರ್ಚು ಮಾಡುತ್ತಾರೆ. ಇವರು ಸಾಮಾನ್ಯವಾಗಿ ಒಂದೇ ಬಾರಿ ಬೃಹತ್‌ ಪ್ರಮಾಣದ ಹಣವನ್ನು ಯಾರಿಗೂ ನೀಡುವುದಿಲ್ಲ. ಹಾಗೆಯೇ ಸಣ್ಣ ಪುಟ್ಟ ಖರ್ಚು ವೆಚ್ಚಗಳು ಹೆಚ್ಚಾಗಿ ಇವರನ್ನು ಕಾಡಲಿದೆ. ಇವರು ನೀಲಿ ಬಣ್ಣದ ವಸ್ತ್ರಗಳಿಂದ ದೂರ ಇರುವುದು ಒಳ್ಳೆಯದು.

ಮಕರ ರಾಶಿ

ಮಕರ ರಾಶಿಯವರು ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಎಷ್ಟೇ ಕಷ್ಟವೆಂದರೂ ಇವರ ಬಳಿ ದೊಡ್ಡ ಮೊತ್ತದ ಹಣವಿರುತ್ತದೆ. ಆದರೆ ಕುಟುಂಬಕ್ಕೆ ಬೇಕಾದ ಪದಾರ್ಥಗಳನ್ನು ಕೊಳ್ಳಲು ಇವರು ಹಣವನ್ನು ಖರ್ಚು ಮಾಡುತ್ತಾರೆ. ಅನಾವಶ್ಯಕವಾಗಿ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುತ್ತಾರೆ. ಸಮಾಜದಲ್ಲಿನ ಗೌರವಯುತ ಸ್ಥಾನಮಾನಕ್ಕಾಗಿ ಹಣವನ್ನು ದೇಣಿಗೆಯಾಗಿ ನೀಡುತ್ತಾರೆ. ಕರಿ ಬಣ್ಣದ ಬಟ್ಟೆಗಳಿಂದ ದೂರವಿರಬಹುದು ಒಳಿತು. ಇವರು ರುದ್ರಾಕ್ಷಿಯನ್ನು ಅಥವಾ ಇನ್ನಾವುದೇ ಜಪಸರವನ್ನು ಧರಿಸಬಾರದು. ಸಾಕುಪ್ರಾಣಿಗಳಿಗೆ ಆಹಾರವನ್ನು ನೀಡುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಾರೆ. ಹಣವನ್ನು ಉಳಿಸಲು ಸಫಲವಾಗುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಜನಿಸಿದವರು ಸದಾ ಕಾಲ ಯಾವುದಾದರೂ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಆದರೆ ಇವರಿಗೆ ಆತ್ಮವಿಶ್ವಾಸ ಹೆಚ್ಚು. ಅಲ್ಲದೆ ಸುಲಭವಾಗಿ ಬೇರೊಬ್ಬರ ಸಲಹೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಗುಟ್ಟಾಗಿ ಇವರು ಹಣವನ್ನು ಗಳಿಸುತ್ತಾರೆ. ಹಾಗೆಯೇ ಅನಾವಶ್ಯಕವಾದ ವಿಚಾರಗಳಿ ಗುಟ್ಟಾಗಿ ಖರ್ಚು ವೆಚ್ಚಗಳಲ್ಲಿ ತೊಡಗುತ್ತಾರೆ. ಉತ್ತಮ ಆದಾಯವಿರುತ್ತದೆ. ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಮಾತ್ರ ಇವರು ಹಣವನ್ನು ವಿನಿಯೋಗಿಸುತ್ತಾರೆ. ಸುಲಭವಾಗಿ ಇವರಿಂದ ಯಾರು ಕನಿಕರವನ್ನು ಪಡೆಯಲು ಸಾಧ್ಯವಿಲ್ಲ. ತಾನು ಸಂಪಾದಿಸಿದ್ದು ತನಗೆ ಮತ್ತು ತನ್ನ ಕುಟುಂಬ ವರ್ಗಕ್ಕೆ ಎಂಬ ಭಾವನೆ ಇವರಲ್ಲಿ ಇರುತ್ತದೆ. ಕಪ್ಪು ಬಣ್ಣದ ಬಟ್ಟೆಯಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿರುವ ಪೂಜಾಗೃಹವನ್ನು ಶುಚಿಯಾಗಿಟ್ಟುಕೊಂಡಲ್ಲಿ ಮಾತ್ರ ಇವರಿಗೆ ಉತ್ತಮ ಆದಾಯ ದೊರೆಯುತ್ತದೆ ಮತ್ತು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರು ತಮ್ಮ ಒಳ್ಳೆಯತನಗಳಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ. ಸುಲಭವಾಗಿ ಇವರು ಯಾರಿಗೂ ಹಣವನ್ನು ನೀಡುವುದಿಲ್ಲ. ಗಳಿಸಿದ ಹಣದಲ್ಲಿ ಬಹು ಪಾಲು ತಮ್ಮ ಕುಟುಂಬ ವರ್ಗಕ್ಕಾಗಿ ಮೀಸಲಿಡುತ್ತಾರೆ. ಆದರೆ ಇವರಿಗೆ ಐಷಾರಾಮಿ ವಾಹನಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಆದ್ದರಿಂದ ಖರ್ಚು ವೆಚ್ಚಗಳು ಮಧ್ಯಮ ಗತಿಯಲ್ಲಿ ಇರುತ್ತದೆ. ಇವರು ಕಟ್ಟಿಸುವ ಮನೆಯು ಎಲ್ಲರೂ ಮೆಚ್ಚುವಂತೆ ಇರುತ್ತದೆ. ಈ ಕಾರಣಗಳಿಂದಾಗಿ ಬೇರೆಯವರ ಮನಸ್ಸನ್ನು ತೃಪ್ತಿಪಡಿಸಲು ತಮ್ಮಲ್ಲಿರುವ ಹಣವನ್ನು ವಿನಿಯೋಗಿಸುತ್ತಾರೆ. ಹಣವನ್ನು ಸಂಪಾದಿಸುವ ಕಲೆಯು ಇವರಿಗೆ ತಿಳಿದಿರುತ್ತದೆ. ಆಂಜನೇಯ ಸ್ವಾಮಿಯ ಪೂಜೆಯಿಂದ ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(ಬರಹ: ಎಚ್‌. ಸತೀಶ್, ಜ್ಯೋತಿಷಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.