ಆ ಮಗುವನ್ನು ಸಿಂಗರಿಸಿ ಸಂಭ್ರಮಿಸುತ್ತೇವೆ; ಅವನಲ್ಲಿ ಕುರೂಪವಿಲ್ಲ, ಅವನಲ್ಲಿ ದೋಷವಿಲ್ಲ -Ayodhya Ram Mandir
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆ ಮಗುವನ್ನು ಸಿಂಗರಿಸಿ ಸಂಭ್ರಮಿಸುತ್ತೇವೆ; ಅವನಲ್ಲಿ ಕುರೂಪವಿಲ್ಲ, ಅವನಲ್ಲಿ ದೋಷವಿಲ್ಲ -Ayodhya Ram Mandir

ಆ ಮಗುವನ್ನು ಸಿಂಗರಿಸಿ ಸಂಭ್ರಮಿಸುತ್ತೇವೆ; ಅವನಲ್ಲಿ ಕುರೂಪವಿಲ್ಲ, ಅವನಲ್ಲಿ ದೋಷವಿಲ್ಲ -Ayodhya Ram Mandir

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮ ಈಗ ವಿರಾಜಮಾನನಾಗಿ ನಗುತ್ತಿದ್ದಾನೆ. ಮಗುವಿನ ಮುಖದ ರಾಮನನ್ನು ಕಂಡಾಗ ಮನಸ್ಸಿಗೆ ಅನ್ನಿಸಿದ್ದೇನೆ? ದೇವರನ್ನು ಮಗುವಾಗಿ ಆರಾಧಿಸುವ ಪರಿಕಲ್ಪನೆಯ ಹಿಂದಿರುವ ತರ್ಕಗಳೇನು? ಈ ಬರಹದಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ ಶ್ರೀನಿವಾಸ ಮಠ.

ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ಮೂಲ ವಿಗ್ರಹ
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ಮೂಲ ವಿಗ್ರಹ

ಅಯೋಧ್ಯೆಯಲ್ಲಿ ಪ್ರಾಣ ಪಡೆದ ಆ ರಾಮ ಇನ್ನೂ ಬಾಲಕ. ಮುದ್ದಾದ ಮುಖ, ಫಳಫಳಿಸುವ ಕಣ್ಣುಗಳು, ಚೆಂದದ ದಿರಿಸು, ತಿದ್ದಿದಂತಿರುವ ಮೂಗು, ತುಟಿ, ಕಣ್ಣು ಹುಬ್ಬುಗಳು. ನೋಡುತ್ತಾ ನಿಂತಷ್ಟೂ ಅಪ್ಪಿ- ಮುದ್ದಾಡಬೇಕು ಎಂದೆನಿಸುವಂತಿದೆ ಬಾಲ ರಾಮನ ವಿಗ್ರಹ. ಇನ್ನು ಮುಂದೆ ನೇರವಾಗಿ ವೀಕ್ಷಿಸಿ, ಸಂತೋಷ ಪಡುವುದಕ್ಕೆ ಸಿಗುತ್ತದೆ ಈ ಸುಂದರ ಮೂರ್ತಿಯ ದರ್ಶನ. ನಿಮಗೆ ಗೊತ್ತಾಗಿರುತ್ತದೆ; ರಾಮ ಮಂದಿರದ ಪ್ರಧಾನ ಮೂರ್ತಿ ಬಾಲ ರಾಮನದೇ. ಅಲ್ಲಿ ಲಕ್ಷ್ಮಣ, ಸೀತಾ, ಭರತ- ಶತ್ರುಘ್ನ, ಹನುಮ ಇಲ್ಲ. ಇನ್ನು ಲವ- ಕುಶರ ಮಾತು ದೂರವುಳಿಯಿತು. ಏಕಿರಬಹುದು?

ಒಂದು ಮಗುವನ್ನು ನೋಡಿದೊಡನೆ ಮನಸ್ಸು ಮುದ್ದುಗರೆಯುತ್ತದೆ. ಬೇಸರವೋ ಅಥವಾ ಆತಂಕವೋ ಮನದಲ್ಲಿ ಇದ್ದರೆ ಕ್ಷಣ ಕಾಲ ಮರೆಯಾಗುತ್ತದೆ. ಸ್ವತಃ ದೇವರ ಎದುರಿಗೆ ನಿಂತಿದ್ದೇವೆ ಎಂದು ಅನಿಸಿದರೂ ದೊಡ್ಡ ಬೇಡಿಕೆ ಏನನ್ನೋ ಬೇಡಿಕೊಳ್ಳಬೇಕು ಅಂತನಿಸುವುದಿಲ್ಲ. ಈ ರೀತಿಯ ಮೂರ್ತಿಯ ಎದುರು ನಿಂತಾಗ ಸಾಮಾನ್ಯವಾಗಿ ಮೂಡುವ ಕೋರಿಕೆ ನಿನ್ನದೇ ರೂಪಿನ, ನಿನ್ನಷ್ಟೇ ಚಂದದ ಮಗುವೊಂದು ನಮ್ಮ ಮನೆಗೆ ಬರುವಂತಾಗಲಿ. ಸಾಕ್ಷಾತ್ ನೀನೇ ಮಗುವಾಗಿ ನಮ್ಮ ಮನೆಗೆ ಬಾ ಎಂದು ಕರೆಯಬೇಕೆನಿಸುತ್ತದೆ.

ಹಾಗೆ ಕರೆಯುವುದಕ್ಕೆ ಯಾವ ಜಾತಿ, ಯಾವ ಧರ್ಮ ಹಾಗೂ ಯಾವ ದೇಶದವರಾಗಬೇಕು ಹೇಳಿ? ಮಗು ಅಂದರೆ ಮಗು ಅಷ್ಟೇ. ನಿಮಗೆ ಬಾಲ ರಾಮ, ಬಾಲ ಗಣಪತಿ, ಬಾಲ ಅಯ್ಯಪ್ಪ, ಬಾಲ ಸುಬ್ರಹ್ಮಣ್ಯ ಹೀಗೆ ಕೆಲವು ದೇವಾನುದೇವತೆಗಳು ಮಾತ್ರ ಈ ಸ್ವರೂಪದಲ್ಲಿ ಕಾಣಸಿಗುತ್ತಾರೆ. ಹಾಗೆ ನೋಡಿದರೆ ಬಾಲ ತ್ರಿಪುರಸುಂದರಿ ದೇವಿ ಎಂದು ಸಹ ಆರಾಧನೆ ಮಾಡಲಾಗುತ್ತದೆ. ಅಂದರೆ ಆ ದೇವಿಯ ವಯಸ್ಸು ಬಾಲಕಿ ಎಂದು ಕರೆಸಿಕೊಳ್ಳುವಷ್ಟು ಮಾತ್ರ. ಈಗ ಅಯೋಧ್ಯೆಯಲ್ಲಿ ನಿಂತ ರಾಮ ಬಾಲ್ಯಾವಸ್ಥೆಯವನು.

ನಮಗೆಲ್ಲ ಬೆಳೆದು ನಿಂತ ರಾಮನ ಪರಿಚಯ ಇದೆ. ಅವನು ಅನೇಕ ಅಸುರರನ್ನು ಕೊಂದ. ಸಮುದ್ರವನ್ನು ದಾಟಿದ, ರಾವಣನನ್ನು ಕೊಂದ, ವಿಭೀಷಣನಿಗೆ ಪಟ್ಟ ಕಟ್ಟಿದ ಹೀಗೆ ಒಂದು ಚಿತ್ರವನ್ನು ಕಲ್ಪಿಸಿಕೊಂಡಾಗ ಮನದಲ್ಲಿ ಮೂಡುವ ರಾಮ ಗಂಭೀರ, ಪ್ರಬುದ್ಧ, ಕಣ್ಣಲ್ಲಿ ಯಾವ ಭಾವನೆಯನ್ನೂ ತುಳುಕಲು ಬಿಡದೆ ಎದುರಿಗೆ ಇರುವವರ ಮನಸ್ಸಲ್ಲಿ ಭಯ- ಭಕ್ತಿ, ಗೌರವವನ್ನು ಮಾತ್ರ ಮೂಡಿಸುವಂಥವನು.

ಆದರೆ, ಬಾಲ ರಾಮನ ಮುಖದಲ್ಲಿ ಒಂದು ನಗೆಯಿದೆ, ಅಪ್ಪಿ ಮುದ್ದಾಡುವ ಎಂಬ ಭಾವ ಉಕ್ಕುತ್ತದೆ. ಅವನು ದೇವರ ಅವತಾರ ಎಂಬುದನ್ನು ಮರೆಸಿ, ಪುಟ್ಟ ಪಾದಗಳಿಗೆ ನೋವಾಗಿದೆಯೇನೋ ಸ್ವಲ್ಪ ಒತ್ತಿಕೊಡೋಣ ಎಂಬ ಅಕ್ಕರೆ ಎದೆಯೊಳಗಿಂದ ಎದ್ದು ಬರುತ್ತದೆ. ನೀಳ ಕೇಶ ರಾಶಿಗೆ ಎಣ್ಣೆ ಹಚ್ಚಿ, ಮೈಗೆ ಗಂಧವನ್ನು ಪೂಸಿ, ಚಂದಕ್ಕೆ ಅಲಂಕಾರ ಮಾಡಿ, ಅವನು ಇಷ್ಟಪಟ್ಟು ತಿನ್ನುವ ಭಕ್ಷ್ಯ ಭೋಜನಗಳನ್ನು ಉಣಬಡಿಸಬೇಕು ಎಂದೆನಿಸುತ್ತದೆ. ಹೌದಲ್ಲವಾ, ಮಕ್ಕಳನ್ನು ನೋಡಿದರೆ ಅವರಿಗೆ ಮೊದಲು ತಿನ್ನುವುದಕ್ಕೆ ಏನಾದರೂ ಕೊಡಬೇಕು. ಅದರಲ್ಲೂ ಸಿಹಿ ಪದಾರ್ಥಗಳು, ಹಣ್ಣುಗಳೆಂದರೆ ಬಲು ಇಷ್ಟ ಅವಕ್ಕೆ. ಆದರೆ ನಮಗೆ ಕೃಷ್ಣನ ಬಾಲ ಲೀಲೆಗಳು ಗೊತ್ತು, ಅವನ ಚೇಷ್ಟೆಗಳೂ ಗೊತ್ತು. ಬಾಲಕನಾಗಿದ್ದಾಗಲೇ ಅನೇಕ ಪವಾಡಗಳು, ಅಸುರ ಸಂಹಾರವನ್ನು ಮಾಡಿದವನು ಕೃಷ್ಣ. ಆದರೆ ಇಂಥ ಯಾವುದೇ ವಿಚಾರ ರಾಮನ ಬಗ್ಗೆ ಇಲ್ಲ.

ದೇಶದ ನಾನಾ ಭಾಗಗಳಲ್ಲಿ ಸಿಗುವ ರಾಮನು ಕುಟುಂಬ ವತ್ಸಲ. ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು, ಒಂದು ಕಡೆ ಕುಟುಂಬವನ್ನೂ ಮತ್ತೊಂದು ಕಡೆ ತನ್ನನ್ನು ನಂಬಿದ ಅನುಯಾಯಿಗಳನ್ನು ಪೋಷಿಸುತ್ತಾ, ಅನುಗ್ರಹ ನೀಡುತ್ತಾ ನಿಂತವನು ರಾಮ. ಆದರೆ ಪುಟ್ಟ ಬಾಲಕನಾಗಿ ನಾವು ರಾಮನನ್ನು ಪೋಷಿಸಬೇಕು, ಪೊರೆಯಬೇಕು, ಅಕ್ಕರೆಯಿಂದ ಅವನ ಸೇವೆಗಳನ್ನು ಮಾಡುತ್ತಾ ಅದರಲ್ಲಿ ನಾವು ಸಂತೋಷ ಕಾಣಬೇಕು. ನೀವು ಗಮನಿಸಿ ನೋಡಿ, ಮಗು ಆ ಬಟ್ಟೆ ಕೇಳಿತು, ಈ ವಸ್ತು ಕೇಳಿತು, ಅವನು ಕೇಳಿದ್ದೆಲ್ಲ ಕೊಡಿಸುತ್ತೇನೆ ಎನ್ನುತ್ತೇವೆ. ಮೇಲುನೋಟಕ್ಕೆ ತ್ಯಾಗದಂತೆಯೂ ಉದಾರತೆಯಂತೆಯೂ ಕಾಣುವ ಈ ವಿಚಾರಗಳಲ್ಲಿ ಆ ಮಗುವು ಕೇಳಿದ್ದನ್ನು ಕೊಡಿಸಿದ ನಂತರ ಅದು ಎಷ್ಟು ಚೆಂದ ಕಾಣುತ್ತದೆ, ಅದರ ನಗು, ಕಣ್ಣಿನ ಹೊಳಪು ನೋಡಬೇಕು ಎಂಬ ಸ್ವಾರ್ಥ ನಮ್ಮದು. ಮಗು ಏನು ಮಾಡಿದರೂ ಚಂದ. ಅದನ್ನು ನೋಡುವ ಭಾಗ್ಯ ಸಿಗುವುದು ನಮ್ಮ ಅದೃಷ್ಟ.

ಬಾಲ ರಾಮನಿಗೆ ವೃದ್ಧಾಪ್ಯವಿಲ್ಲ, ದಿನದಿಂದ ದಿನಕ್ಕೆ ವಯಸ್ಸಾಗುವುದಿಲ್ಲ, ಅವನಿಗೆ ಏನೂ ಕಲಿಯಬೇಕಿಲ್ಲ, ಏನನ್ನೂ ಕೇಳಬೇಕಿಲ್ಲ, ಅವನಲ್ಲಿ ಕುರೂಪವಿಲ್ಲ, ಅವನಲ್ಲಿ ದೋಷವಿಲ್ಲ. ಹಾಗೇ ಎಲ್ಲವನ್ನೂ ಇನ್ನೊಮ್ಮೆ ಗಟ್ಟಿಯಾಗಿ ಹೇಳಿಕೊಳ್ಳಿ. ಹೀಗೆ ಇರುವವನು ಯಾರು? ಅವನೇ ಅಲ್ಲವಾ ಭಗವಂತ! ನಮ್ಮಿಂದ ಅವನು ಪ್ರೀತಿ, ಮಮತೆ, ಅಂತಃಕರಣವನ್ನು ಬಿಟ್ಟು ಏನನ್ನೂ ನಿರೀಕ್ಷಿಸುವುದಿಲ್ಲ.

---

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮ ಈಗ ವಿರಾಜಮಾನನಾಗಿ ನಗುತ್ತಿದ್ದಾನೆ. ಮಗುವಿನ ಮುಖದ ರಾಮನನ್ನು ಕಂಡಾಗ ಮನಸ್ಸಿಗೆ ಅನ್ನಿಸಿದ್ದೇನೆ? ದೇವರನ್ನು ಮಗುವಾಗಿ ಆರಾಧಿಸುವ ಪರಿಕಲ್ಪನೆಯ ಹಿಂದಿರುವ ತರ್ಕಗಳೇನು? ಈ ಬರಹದಲ್ಲಿ ವಿವರಿಸಲು ಪ್ರಯತ್ನಿಸಿದ್ದಾರೆ ಶ್ರೀನಿವಾಸ ಮಠ.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.