Ayodhya Ram Mandir: ಬಾಲರಾಮನ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ; ಅಯೋಧ್ಯೆಯ ಸುಂದರ ಅನುಭವ ಹಂಚಿಕೊಂಡ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ayodhya Ram Mandir: ಬಾಲರಾಮನ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ; ಅಯೋಧ್ಯೆಯ ಸುಂದರ ಅನುಭವ ಹಂಚಿಕೊಂಡ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು

Ayodhya Ram Mandir: ಬಾಲರಾಮನ ಸನ್ನಿಧಿಯಲ್ಲಿ ಯಕ್ಷಗಾನ ಪ್ರದರ್ಶನ; ಅಯೋಧ್ಯೆಯ ಸುಂದರ ಅನುಭವ ಹಂಚಿಕೊಂಡ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು

Ayodhya Ram Mandir: ಜ್ಯೋತಿಷಿ ಹಾಗೂ ಆಧ್ಯಾತ್ಮ ಚಿಂತಕ ವಿಠ್ಠಲ ಭಟ್ ಕೆಕ್ಕಾರು, ಪತ್ನಿ ಕಾಂಚಿಕಾ ಭಟ್‌ ಅವರೊಂದಿಗೆ ಬಾಲರಾಮನ ದರ್ಶನ ಪಡೆದಿದ್ದಾರೆ. ಕಾಂಚಿಕಾ ಅವರು, ಅಯೋಧ್ಯೆಯಲ್ಲಿ ಸಂಜೆ ನಡೆಯುವ ರಾಮನ ಪಲ್ಲಕ್ಕಿ ಉತ್ಸವದ ವೇಳೆ ಯಕ್ಷಗಾನ ಪ್ರದರ್ಶನ ಮಾಡಿದ ಖುಷಿಯ ವಿಚಾರವನ್ನು ಕೂಡಾ ವಿಠ್ಠಲ ಭಟ್ ಕೆಕ್ಕಾರು ಹಂಚಿಕೊಂಡಿದ್ದಾರೆ.

ಜ್ಯೋತಿಷಿ ಹಾಗೂ ಆಧ್ಯಾತ್ಮ ಚಿಂತಕ ವಿಠ್ಠಲ ಭಟ್ ಕೆಕ್ಕಾರು ಹಾಗೂ ಅವರ ಪತ್ನಿ ಕಾಂಚಿಕಾ ಭಟ್‌
ಜ್ಯೋತಿಷಿ ಹಾಗೂ ಆಧ್ಯಾತ್ಮ ಚಿಂತಕ ವಿಠ್ಠಲ ಭಟ್ ಕೆಕ್ಕಾರು ಹಾಗೂ ಅವರ ಪತ್ನಿ ಕಾಂಚಿಕಾ ಭಟ್‌

Ayodhya Ram Mandir: ಕಳೆದ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಭಕ್ತರು ಬಾಲರಾಮನ ದರ್ಶನ ಪಡೆಯಲು ತಂಡೋಪತಂಡವಾಗಿ ಹೋಗಿ ಬರುತ್ತಿದ್ದಾರೆ. ಒಮ್ಮೆ ಆ ಬಾಲರಾಮನನ್ನು ಕಣ್ತುಂಬಿಕೊಂಡರೆ ಸಾಕು ಎಂದು ಕಾಯುತ್ತಿದ್ದಾರೆ.  ಜ್ಯೋತಿಷಿ ಹಾಗೂ ಆಧ್ಯಾತ್ಮ ಚಿಂತಕರಾದ ವಿಠ್ಠಲ ಭಟ್ ಕೆಕ್ಕಾರು ತಮ್ಮ ಪತ್ನಿಯೊಂದಿಗೆ ಬಾಲರಾಮನ ದರ್ಶನ ಪಡೆದದದ್ದು, ಸನ್ನಿಧಿಯಲ್ಲಿ ಪತ್ನಿ ಯಕ್ಷಗಾನ ಪ್ರದರ್ಶನ ಮಾಡಿದ ಸುಂದರ ಅನುಭವನ್ನು ಹಂಚಿಕೊಂಡಿದ್ದಾರೆ.

ಆ ಭಗವಂತನ ಅನುಗ್ರಹ ದೊರೆಯುವುದಕ್ಕೆ ಗುರುಗಳ ಅನುಗ್ರಹವೂ ಮುಖ್ಯ ಎನ್ನುವುದು ನನ್ನ ಬದುಕಲ್ಲಿ ಕೂಡ ನಿಜವಾದಂಥ ಕ್ಷಣವನ್ನು ನಿಮ್ಮ ಜತೆಗೆ ಹಂಚಿಕೊಳ್ಳಬೇಕಿದೆ. ಭಗವಂತನ ಅನುಗ್ರಹದಿಂದ ನನಗೆ ಹಾಗೂ ನನ್ನ ಪತ್ನಿ ಕಾಂಚಿಕಾಗೆ ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನ ಹಾಗೂ ಅವನ ಕೈಂಕರ್ಯ ಮಾಡುವುದಕ್ಕೆ ಒಂದು ಅವಕಾಶ ದೊರೆಯಿತು. ಮಾರ್ಚ್ ಒಂದನೇ ತಾರೀಕಿನಂದು ಅಯೋಧ್ಯೆಗೆ ತೆರಳಿದ್ದೆವು. ಆ ಸಂದರ್ಭದಲ್ಲಿ ಸಂಜೆ ಹೊತ್ತಿಗೆ ನಡೆಯುವಂಥ ರಾಮನ ಪಲ್ಲಕ್ಕಿ ಉತ್ಸವದ ವೇಳೆ ಕಾಂಚಿಕಾ , ಯಕ್ಷಗಾನದ ಪ್ರದರ್ಶನವನ್ನು ನೀಡಿದ್ದು, ನಮ್ಮಿಬ್ಬರ ಬದುಕಿನ ಅವಿಸ್ಮರಣೀಯ ಕ್ಷಣವಾಯಿತು. ರಾಮನ ಸ್ವಾಗತವನ್ನು ಕೋರುವಂಥ ಪ್ರಸಂಗವನ್ನು ಸಂಜೆಯ ಹೊತ್ತಿಗೆ ರಾಮನ ಎದುರು ಪ್ರದರ್ಶನ ನೀಡುವುದಕ್ಕೆ ಕಾಂಚಿಕಾಗೆ ಅವಕಾಶ ಸಿಕ್ಕಿತು.

ಬಾಲರಾಮನ ದರ್ಶನದ ಅನುಭವ ಹಂಚಿಕೊಂಡ ವಿಠ್ಠಲ ಭಟ್ ಕೆಕ್ಕಾರು

ಈ ಅವಕಾಶ ದೊರೆತಿದ್ದು ಹೇಗೆಂದರೆ, ಖ್ಯಾತ ಜ್ಯೋತಿಷಿ ಹಾಗೂ ಮಂಗಳೂರು ಪಂಡಿತ್ ಪಂಚಾಂಗ ಕರ್ತೃ ಆದ ಪಂಡಿತ್ ನರಸಿಂಹ ಆಚಾರ್ಯ ಅವರು ಮೊದಲಿಗೆ ನನಗೆ ಕರೆ ಮಾಡಿ, ಹೀಗೆ ಸೇವೆಗೆ ಒಂದು ಅವಕಾಶ ಇದೆ ಎಂದು ತಿಳಿಸಿದರು. ಜತೆಗೆ ಸುವರ್ಧನ್ ನಾಯಕ್ ಎಂಬುವವರ ಸಂಖ್ಯೆ ಕೊಟ್ಟು, ಅಲ್ಲಿ ಅವರನ್ನು ಸಂಪರ್ಕಿಸಲು ತಿಳಿಸಿದರು. ಸುವರ್ಧನ್ ನಾಯಕ್ ಅವರಿಗೆ ಕರೆ ಮಾಡಿ, ನಾವು ರಾಮಚಂದ್ರಾಪುರ ಮಠದವರು ಹಾಗೂ ನಮಗೆ ಸೇವೆಗೆ ಅವಕಾಶ ಕೊಡಿಸಬೇಕು ಎಂದು ಕೇಳಿಕೊಂಡಾಗ ಅವರು ನಮಗೆ ಸಂತೋಷದಿಂದ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟರು.

ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರ್ಯ- ಕಾರಣರಾದ ರಾಘವೇಶ್ವರ ಭಾರತೀ ಶ್ರೀಗಳು ಹಾಗೂ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಇಬ್ಬರನ್ನೂ ಸ್ಮರಿಸಿ ನಮ್ಮ ಅನುಭವವನ್ನು ನಿಮ್ಮೆದುರು ಇಡುತ್ತಿದ್ದೇನೆ, ಒಪ್ಪಿಸಿಕೊಳ್ಳಿ. ಅಯೋಧ್ಯೆಯಲ್ಲಿ ಸಂಜೆ ವೇಳೆ ರಾಮನ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ ಆಗುತ್ತದೆ. ಈ ವೇಳೆ ನೃತ್ಯ, ಗಾಯನ, ವಾದನ, ಉಪನಿಷತ್, ವೇದ ಪಾರಾಯಣ ಹೀಗೆ ಅಷ್ಟಾವಧಾನ ಸೇವೆಯನ್ನು ಸಲ್ಲಿಸಲಾಗುತ್ತದೆ. ಆ ರೀತಿಯಲ್ಲಿ ನನ್ನ ಶ್ರೀಮತಿ ಕಾಂಚಿಕಾ ಭಟ್‌ಗೆ ಯಕ್ಷಗಾನ ಪ್ರದರ್ಶನ ಮಾಡುವುದಕ್ಕೆ ಅವಕಾಶ ದೊರೆಯಿತು. ಅಲ್ಲಿ ವಾಸ್ತವ್ಯಕ್ಕೆ, ಊಟ- ತಿಂಡಿ, ಸ್ನಾನ ಹೀಗೆ ಪ್ರತಿಯೊಂದಕ್ಕೂ ನಮಗೆ ವ್ಯವಸ್ಥೆ ಮಾಡಿಕೊಡುವರಿದ್ದರು.

ಜೀವನೋಪಾಯಕ್ಕೆ ಬಾಡಿಗೆ ಅವಲಂಬಿಸಿರುವ ಅಯೋಧ್ಯೆ ಜನತೆ

ಆದರೂ ನಮಗೊಂದು ಕುತೂಹಲ, ಅಯೋಧ್ಯೆಯಲ್ಲಿ ಇರುವಂಥ ವ್ಯವಸ್ಥೆಗಳನ್ನು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳಬೇಕಿತ್ತು. ವಾಸ್ತವ್ಯ, ಊಟ- ತಿಂಡಿ ಮೊದಲಾದವುಗಳಿಗೆ ನಾವು ಹುಡುಕಿಕೊಂಡು ಹೊರಟೆವು. ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದಲ್ಲಿ ತೆರಳಿದೆವು. ಅಲ್ಲಿಂದ ದೇವಾಲಯದ ಸ್ಥಳ ತಲುಪಿಕೊಂಡೆವು. ಹೋಲಿಕೆಗೆ ಇರಲಿ ಎಂಬ ಕಾರಣಕ್ಕೆ ಮಾತ್ರ ಇದನ್ನು ಹೇಳುತ್ತಿದ್ದೇನೆ. ಬಾಹುಬಲಿ ಎಂಬ ಸಿನಿಮಾದಲ್ಲಿ ಬರುವಂಥ ಅರಮನೆ, ದೇಗುಲ, ಆ ವೈಭವವನ್ನು ತೆರೆಯ ಮೇಲೆ ನೋಡಿ ಬೆರಗಾದವರು ನಾವು. ಅದರಲ್ಲಿ ನೋಡಿದಂಥ ವೈಭೋಗದ ನೂರು- ಸಹಸ್ರ ಪಟ್ಟು ಹೆಚ್ಚಿನದನ್ನು ಬಾಲರಾಮನ ದೇವಾಲಯದಲ್ಲಿ ನೋಡಬಹುದು. ಇನ್ನೂ ಕೆಲಸಗಳು ಬಾಕಿ ಇವೆ ಎಂದಾಗಲೇ ಈ ಪರಿಯ ಸೊಬಗು. ಒಂದು ವೇಳೆ ಪೂರ್ಣವಾದ ನಂತರ ಇನ್ನೂ ಅಮೋಘವಾಗಿ ಖಂಡಿತಾ ಇರುತ್ತದೆ.

ತುಂಬ ಸುಮಾರಾದ ಲಾಡ್ಜ್ ಅಂದುಕೊಂಡರೂ ಎರಡು-ಎರಡೂವರೆ ಸಾವಿರ ರೂಪಾಯಿ ಒಂದು ದಿನಕ್ಕೆ ಬೇಕಾಗುತ್ತದೆ. ಅದರಲ್ಲಿ ಅಯೋಧ್ಯೆಯಲ್ಲಿಯೇ ಸಣ್ಣದಾದ ಸ್ಥಳ ಇರುವವರು ಸಹ ಪುಟ್ಟ ಕೋಣೆಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಅವುಗಳ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಜೀವನೋಪಾಯಕ್ಕೆ ಮಾರ್ಗವಿಲ್ಲ ಎಂದು ಬೇರೆ ಬೇರೆ ರಾಜ್ಯಗಳಿಗೆ ಕೆಲಸ- ಕಾರ್ಯ ಎಂದುಕೊಂಡು ಹೋದವರು ಸಹ ವಾಪಸ್ ಬಂದು, ಇಲ್ಲಿ ತಮ್ಮ ಮನೆಗಳ ಆಚೀಚೆ, ಸುತ್ತ ಮುತ್ತ ಕೋಣೆಗಳನ್ನು ನಿರ್ಮಿಸಿ, ಅದರ ಬಾಡಿಗೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಇನ್ನು ಇಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನೇ ಬಳಸಬೇಕು ಎಂಬ ನಿಯಮ ಮಾಡಿದ್ದಾರೆ. ಎಲೆಕ್ಟ್ರಿಕ್ ಆಟೋಗಳನ್ನು ಓಡಿಸುತ್ತಾ ಭಕ್ತಾದಿಗಳ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿರುವವರ ಬದುಕು ಸಹ ತುಂಬ ಚೆನ್ನಾಗಿ ಆಗಿದೆ.

ಅಯೋಧ್ಯೆಯಲ್ಲಿ ವಿಠ್ಠಲ ಭಟ್ ಕೆಕ್ಕಾರು ಹಾಗೂ ಕಾಂಚಿಕಾ
ಅಯೋಧ್ಯೆಯಲ್ಲಿ ವಿಠ್ಠಲ ಭಟ್ ಕೆಕ್ಕಾರು ಹಾಗೂ ಕಾಂಚಿಕಾ

ಇನ್ನೂ ಹತ್ತು ಅಡಿ ಅಗಲ ಹಾಗೂ ಹತ್ತು ಅಡಿ ಉದ್ದದ ಪ್ರಮುಖ ಸ್ಥಳವೊಂದರಲ್ಲಿ ಇರುವ ಮಳಿಗೆಯೊಂದರ ಮುಂದೆ ನಿಂತು, ಹಿಂದಿಯಲ್ಲಿ ಅವರನ್ನು ಮಾತನಾಡಿಸಿದೆ. ಆ ಮಳಿಗೆಯ ಬಾಡಿಗೆ ತಿಂಗಳಿಗೆ ಲಕ್ಷಗಟ್ಟಲೆ ಇದೆ. ನನಗೋ ಗಾಬರಿ, ಇಷ್ಟು ಹಣ ಬಾಡಿಗೆ ಅಂತಲೇ ಕೊಟ್ಟರೆ ದಿನಕ್ಕೆ ಎಷ್ಟು ವ್ಯಾಪಾರ ಆಗಬೇಕು? ಆ ದಿನದ ವ್ಯಾಪಾರ ಲಕ್ಷಗಳಲ್ಲಿ ಇದೆ. ಅದು ಆತ ಕಲ್ಲುಸಕ್ಕರೆ ಮಾರುವಂಥ ಮಳಿಗೆ ನಡೆಸುತ್ತಿದ್ದರು. ಅಂದ ಹಾಗೆ ಇಲ್ಲಿ ಜಾತಿ- ಧರ್ಮದ ಭೇದ ನೋಡಲಿಕ್ಕೆ ಸಿಗಲ್ಲ. ಮುಸ್ಲಿಮರೂ ಒಳಗೊಂಡಂತೆ ಎಲ್ಲ ಧರ್ಮದ ಹಾಗೂ ಎಲ್ಲ ಜಾತಿಯ ಜನರಿಗೆ ರಾಮಮಂದಿರದ ಉದ್ಘಾಟನೆಯಿಂದ ಬದುಕಿನ ಬಂಡಿ ನಡೆಯುತ್ತಾ ಇದೆ. ಅಲ್ಲ, ಓಡುತ್ತಾ ಇದೆ. ಪ್ರಭುವಿನ ಅನುಗ್ರಹ ಹೀಗೂ ಆಗುತ್ತದೆ ಎಂಬುದಕ್ಕೆ ಇರುವ ನಿದರ್ಶನ ಇದು ಎನಿಸುತ್ತದೆ.

ಇಲ್ಲಿನ ಭದ್ರತೆ, ಸ್ವಚ್ಛತೆ, ಶುದ್ಧತೆ ಇವುಗಳೆಲ್ಲ ಹೇಗೆ ನಿರ್ವಹಿಸುತ್ತಾರೋ ಆ ಭಗವಂತನ ಅನುಗ್ರಹ ಇದ್ದರೆ ಮಾತ್ರ ಸಾಧ್ಯವೇನೋ! ಲಕ್ಷಗಟ್ಟಲೆ ಜನರು ಭೇಟಿ ನೀಡುತ್ತಿದ್ದಾರೆ, ಯಾವುದೇ ನೂಕುನುಗ್ಗಲು ಇಲ್ಲ. ಯಾರಿಗೂ ಅಸಮಾಧಾನ ಇಲ್ಲ. ಏಕಕಾಲಕ್ಕೆ ಕೇಳಿಸಿಕೊಳ್ಳುವ ರಾಮನಾಮ ಜಪ, ಸಂಕೀರ್ತನೆಗಳು ಒಂದು ಬಗೆಯ ದೈವಿಕ ವಾತಾವರಣವನ್ನು ಇಲ್ಲಿ ಸೃಷ್ಟಿ ಮಾಡಿಬಿಟ್ಟಿದೆ. ಅದೆಷ್ಟು ಲಕ್ಷ ಜನ ಬಂದರೂ ದರ್ಶನ ಕೆಲ ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ದರ್ಶನಕ್ಕೆ ಅಂತೇನೂ ದರ ನಿಗದಿ ಮಾಡಿಲ್ಲ. ಸರಯೂ ನದಿಯನ್ನು ತುಂಬ ಸ್ವಚ್ಛವಾಗಿ ಇರಿಸಿಕೊಳ್ಳುವುದಕ್ಕೆ ಬೇಕಾದ್ದು ಎಲ್ಲವನ್ನೂ ಮಾಡಲಾಗಿದೆ. ಇನ್ನು ಭದ್ರತೆಯಂತೂ ಅಮೋಘವಾಗಿದೆ.

ಕಾಂಚಿಕಾ ಭಟ್‌ ಯಕ್ಷಗಾನ ಪ್ರದರ್ಶನ ಮೆಚ್ಚಿದ ಭಕ್ತರು

ಈಗ ನಾವು ಅಯೋಧ್ಯೆಗೆ ತೆರಳಿದ ವಿಷಯದ ವಿವರಣೆ ಮುಂದುವರಿಸುತ್ತೇನೆ; ಯಕ್ಷಗಾನ ವೇಷಧಾರಿಯಾಗಿ ನನ್ನ ಪತ್ನಿ ಕಾಂಚಿಕಾಳನ್ನು ನೋಡಿ, ಅಲ್ಲಿದ್ದ ಸಾವಿರಾರು ಜನರಿಗೆ ಅದೇನು ಮಾಡುತ್ತಿದ್ದಾರೆ ಎಂಬುದು ಮೊದಲಿಗೆ ತಿಳಿಯಲಿಲ್ಲ. ಆದರೆ ಪ್ರದರ್ಶನದ ನಂತರ ಸೆಲ್ಫಿ ತೆಗೆದುಕೊಳ್ಳುವವರು, ಕಾಲಿಗೆ ನಮಸ್ಕರಿಸುವವರು (ಇದು ಅವರವರ ಭಕ್ತಿ ಹಾಗೂ ಎಲ್ಲವೂ ರಾಮನಿಗೇ ಅರ್ಪಣೆ), ಕೈಗೆ ಹಣ ನೀಡುವವರು ಒಬ್ಬೊಬ್ಬರದು ಒಂದೊಂದು ಬಗೆಯ ಭಕ್ತಿ ಪರಾಕಾಷ್ಠೆ. ನಮಗೆ ಏನೆಂದರೆ, ರಾಮನ ಎದುರು ನಮ್ಮದೊಂದು ಕೈಂಕರ್ಯಕ್ಕೆ ಅವಕಾಶ ಸಿಕ್ಕಿತಲ್ಲಾ ಎಂಬ ಸಂತೃಪ್ತಿ. ಅಲ್ಲಿದ್ದ ಹಲವರಿಗೆ ಯಕ್ಷಗಾನ ಪ್ರದರ್ಶನ ನೀಡಿದ್ದು ಪುರುಷನೋ ಸ್ತ್ರೀಯೋ ತಿಳಿಯದ ಪರಿಸ್ಥಿತಿ.

ಕಾಂಚಿಕಾ ಭಟ್ ಯಕ್ಷಗಾನ ಪ್ರದರ್ಶನ ನೀಡಿದ್ದ ಪದ್ಯ ಈ ಕೆಳಕಂಡಂತೆ ಇದೆ

ಸ್ಮರಿಸಯ್ಯ ರಾಮ ಮಂತ್ರ |

ನಿನ್ನ ಮರಣ ಭೀತಿಯ ಪರಿಹಾರಿಸುವುದು ಈ ಮಂತ್ರ |

ಜಗದಿ ವಾಲ್ಮೀಕಿಯ ಉದ್ಧಾರಿಸಿದ ಮಂತ್ರ |

ಬಗೆ ಬಗೆ ದುರಿತವ ಸುಡುವ ಮಂತ್ರ |

ವಿಗಡ ರೋಗಗಂಗಳ ದೂರ ಮಾಡುವ ಮಂತ್ರ

ಸುಗುಣರಿಗೆ ಸುಜ್ಞಾನ ಕೊಡುವ ಮಂತ್ರ

ಕಾಂಚಿಕಾ ತನ್ನ ನಾಲ್ಕನೇ ವಯಸ್ಸಿನಿಂದ ಯಕ್ಷಗಾನ ಅಭ್ಯಾಸ ಮಾಡಿಕೊಂಡು ಬಂದಿದ್ದು, ಇಪ್ಪತ್ತೊಂಬತ್ತು ವರ್ಷಗಳ ಸುದೀರ್ಘವಾದ ಅಭ್ಯಾಸ ಮಾಡುತ್ತಾ ಬಂದಿದ್ದರ ಸಾರ್ಥಕ ಕ್ಷಣ ಅಯೋಧ್ಯೆಯಲ್ಲಿನ ಪ್ರದರ್ಶನವಾಗಿತ್ತು. ಸದ್ಯಕ್ಕೆ ‘ಯಕ್ಷಕಾರ್ಣಿಕ’ ಎಂಬ ಹೆಸರಲ್ಲಿ ಯೂಟ್ಯೂಬ್ ಚಾನಲ್ ಮಾಡಿದ್ದು, ಅದರಲ್ಲಿ ಯಕ್ಷಗಾನದ ಮಾಹಿತಿ ಸಹಿತ ವಿವಿಧ ಕಂಟೆಂಟ್‌ಗಳು ಲಭ್ಯ ಇವೆ.

ಆ ಪ್ರಭುವಿನ ಎದುರು ಯಕ್ಷಗಾನ ಪ್ರದರ್ಶನಕ್ಕೆ ಸಿಕ್ಕ ಅವಕಾಶವನ್ನು ಹೇಳಿದಷ್ಟೂ ಪುಳಕಿತರಾಗುತ್ತಿದ್ದೇವೆ. “ದೀನ ನಾನು, ಸಮಸ್ತ ಲೋಕಕೆ ದಾನಿ ನೀನು…” ಎಂಬ ದಾಸ ವಾಣಿಯನ್ನು ಪದೇಪದೇ ಸ್ಮರಿಸುವಂತೆ ಮಾಡಿದ ಅಪೂರ್ವ ಕ್ಷಣಗಳವು. ಭಗವಂತನ ಅನುಗ್ರಹ ಹಾಗೂ ಅದನ್ನು ಪಡೆಯುವುದಕ್ಕೆ ಗುರುವಿನ ಅನುಗ್ರಹವೂ ಇದ್ದರೆ ಬದುಕು ಇಷ್ಟೊಂದು ಸಾರ್ಥಕ್ಯ ಭಾವವನ್ನು ತರುತ್ತದೆ ಎಂಬುದನ್ನು ಧನ್ಯತಾ ಭಾವದಿಂದ ಸ್ಮರಿಸುತ್ತಿದ್ದೇವೆ.

ಸರ್ವಂ ರಾಮಾರ್ಪಣಂ.

ವಿಠ್ಠಲ ಭಟ್ ಕೆಕ್ಕಾರು (ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರು)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.