ಬೆಂಗಳೂರಿನಲ್ಲಿದೆ ಅಪರೂಪದ ದ್ವಾದಶ ಜ್ಯೋತಿರ್ಲಿಂಗ ದೇವಾಲಯ; ಓಂಕಾರ ಹಿಲ್ಸ್‌ನ ಓಂಕಾರೇಶ್ವರನ ಕುರಿತ ಆಸಕ್ತಿದಾಯಕ ವಿಚಾರಗಳಿವು
Dwadasha Jyotirlinga Temple: ಮಹಾಶಿವರಾತ್ರಿ ಹಬ್ಬ ಸಮೀಪದ್ದಲ್ಲಿದ್ದೂ, ನೀವು ಬೆಂಗಳೂರಿನಲ್ಲಿದ್ರೆ ಶಿವನ ದರ್ಶನಕ್ಕೆ ದ್ವಾದಶ ಜ್ಯೋತಿರ್ಲಿಂಗ ದೇವಾಲಯಕ್ಕೆ ಭೇಟಿ ನೀಡಬಹುದು. ಓಂಕಾರ್ ಆಶ್ರಮ ಸಮೀಪದ ಓಂಕಾರ್ ಹಿಲ್ಸ್‌ನಲ್ಲಿರುವ ಈ ದೇವಾಲಯವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ದೇವಾಲಯದ ಕುರಿತು ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
ಹಿಂದೂ ಧರ್ಮದಲ್ಲಿ ಹಬ್ಬ-ಹರಿದಿನಗಳಿಗೆ ವಿಶೇಷ ಮಹತ್ವವಿದೆ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಶಿವ-ಪಾರ್ವತಿಯರು ವಿವಾಹದ ದಿನವನ್ನು ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಪರಮೇಶ್ವರನಿಗೆ ಈ ದಿನವು ಬಹಳ ವಿಶೇಷ. ಮಹಾಶಿವರಾತ್ರಿಯಂದು ಶಿವ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ. ಕರ್ನಾಟಕದಲ್ಲಿ ಹಲವು ಶಿವನ ದೇಗುಲಗಳಿದ್ದು, ಅವುಗಳಲ್ಲಿ ಕೆಲವು ವಿಶೇಷ ಮಹತ್ವವನ್ನು ಹೊಂದಿದೆ. ಈ ಸಾಲಿಗೆ ಬೆಂಗಳೂರಿನ ಓಂಕಾರ್ ಹಿಲ್ಸ್‌ನಲ್ಲಿರುವ ಓಂಕಾರೇಶ್ವರ ದೇಗುಲವೂ ಸೇರುತ್ತದೆ. ಈ ಶಿವರಾತ್ರಿಗೆ ನೀವು ಈ ದೇಗುಲಕ್ಕೆ ಭೇಟಿ ನೀಡಬಹುದು. ಇದನ್ನು ದ್ವಾದಶ ಜ್ಯೋತಿರ್ಲಿಂಗ ದೇವಾಲಯ ಎಂದೂ ಕರೆಯುತ್ತಾರೆ.
ಶಿವರಾತ್ರಿಯ ದಿನದಂದು ಶಿವನ ದೇಗುಲಕ್ಕೆ ಭೇಟಿ ನೀಡುವುದರಿಂದ ಬದುಕಿನ ಸಂಕಷ್ಟಗಳೆಲ್ಲಾ ದೂರಾಗುತ್ತವೆ ಎಂಬುದು ಹಿಂದೂಗಳ ನಂಬಿಕೆ. ಈ ಬಾರಿ ಶಿವರಾತ್ರಿಗೆ ನೀವು ವಿಶೇಷ ದೇಗುಲಕ್ಕೆ ಭೇಟಿ ನೀಡಬೇಕು ಅಂತಿದ್ರೆ ಈ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬಹುದು.
ಕರ್ನಾಟಕದಲ್ಲಿರುವ ಅತ್ಯಂತ ಭವ್ಯ ಶಿವ ದೇವಾಲಯಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ ದೇಗುಲವು ಒಂದು. ಇದು ಬೆಂಗಳೂರಿನ ಓಂಕಾರ್ ಆಶ್ರಮದ ಬಳಿಯ ಓಂಕಾರ್ ಹಿಲ್ಸ್‌ನಲ್ಲಿದೆ. ಶ್ರೀನಿವಾಸಪುರದಲ್ಲಿರುವ ಓಂಕಾರ್ ಹಿಲ್ಸ್ ಬೆಂಗಳೂರಿನ ಅತಿ ಎತ್ತರದ ತಾಣಗಳಲ್ಲಿ ಒಂದು. ಈ ಪವಿತ್ರ ಸ್ಥಳದಲ್ಲಿ ನೀವು 12 ಜ್ಯೋತಿರ್ಲಿಂಗಗಳ ಸಾಮೂಹಿಕ ದರ್ಶನ ಪಡೆಯಬಹುದು. ಇಂತಹ ಅಪರೂಪದ ದೇವಾಲಯದ ಕುರಿತ ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
ದ್ವಾದಶ ಜ್ಯೋತಿರ್ಲಿಂಗದ ಕುರಿತ ಆಸಕ್ತಿದಾಯಕ ವಿಚಾರಗಳಿವು
* ಈ ದೇವಾಲಯವನ್ನು ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮೀಜಿ ಸ್ಥಾಪಿಸಿದರು. 2002ರಲ್ಲಿ ಈ ದೇಗುಲದ ನಿರ್ಮಾಣ ಕಾರ್ಯ ಆರಂಭವಾದರೂ, ಇದು ಲೋಕಾರ್ಪಣೆಗೊಂಡಿದ್ದು, 2011ರಲ್ಲಿ. ಪ್ರತಿಯೊಬ್ಬ ಭಕ್ತರಿಗೂ ಜ್ಯೋತಿರ್ಲಿಂಗ ದರ್ಶನ ಪಡೆಯಲು ಅವಕಾಶ ನೀಡುವುದು ಅವರ ಉದ್ದೇಶವಾಗಿತ್ತು. ದೇಶ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗ ದೇಗುಲಗಳಿದ್ದು, ಎಲ್ಲರೂ ಎಲ್ಲಾ ಕಡೆಗೂ ಭೇಟಿ ನೀಡುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಸಾಕಷ್ಟು, ಹಣದ ಜೊತೆಗೆ ಆರೋಗ್ಯವಂತರಾಗಿರುವುದೂ ಮುಖ್ಯವಾಗುತ್ತದೆ. ಈ ಉದ್ದೇಶವನ್ನು ಗಮನದಲ್ಲಿ ಇರಿಸಿಕೊಂಡು ಎಲ್ಲಾ ಜ್ಯೋತಿರ್ಲಿಂಗಗಳನ್ನು ಒಂದೇ ಕಡೆ ನೋಡುವ ಭಾಗ್ಯವನ್ನು ಭಕ್ತರಿಗೆ ಕಲ್ಪಿಸುವ ಉದ್ದೇಶದಿಂದ ಈ ದೇಗುಲವನ್ನು ಸ್ಥಾಪಿಸಲಾಯಿತು. ಹನ್ನೆರಡು ಜ್ಯೋತಿರ್ಲಿಂಗಗಳ ಪ್ರಾಮುಖ್ಯ ಹಾಗೂ ವೈಶಿಷ್ಟ್ಯದ ಬಗ್ಗೆ ನೀವೂ ತಿಳಿಯಬೇಕು ಅಂದ್ರೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.
* ಇಲ್ಲಿನ ಜ್ಯೋತಿರ್ಲಿಂಗಳನ್ನು ಬಾಣ ಲಿಂಗಗಳು ಅಥವಾ ನರ್ಮದೇಶ್ವರ ಲಿಂಗಗಳು ಎಂದೂ ಕರೆಯುತ್ತಾರೆ. ಇಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳನ್ನು ನರ್ಮದಾ ನದಿಯ ಕಲ್ಲುಗಳಿಂದ ನಿರ್ಮಿಸಲಾಗಿದೆ. ಶಿವಲಿಂಗದ ಸೃಷ್ಟಿಗೆ ಈ ಕಲ್ಲು ಬಹಳ ವಿಶೇಷ ಎಂದು ನಂಬಲಾಗಿದೆ.
* ದ್ವಾದಶ ಜ್ಯೋತಿರ್ಲಿಂಗದ ಕೆಳಗೆ ಚಿಕ್ಕ ನರ್ಮದೇಶ್ವರ ಲಿಂಗಗಳು, ಸಾಲಿಗ್ರಾಮಗಳು, ಹಲವಾರು ಅಪರೂಪದ ಗಿಡಮೂಲಿಕೆಗಳು, ಬೆಲೆಬಾಳುವ ನವರತ್ನಗಳು, ಲೋಹಗಳು, ಧಾನ್ಯಗಳು, ಪಾದಸರ ಮತ್ತು ಪೂಜ್ಯ ಯಂತ್ರಗಳನ್ನು ಇರಿಸಲಾಗಿದೆ.
* ದೇವಾಲಯದಲ್ಲಿ 1000 ಚಿಕ್ಕ ಚಿಕ್ಕ ನಮರ್ದೇಶ್ವರ ಲಿಂಗಗಳಿವೆ. ಪ್ರತಿ ಲಿಂಗವೂ ಒಂದು ಇಂಚು ಉದ್ದವಿದ್ದು, ಪ್ರತಿಯೊಂದು ಜ್ಯೋತಿರ್ಲಿಂಗದ ಕೆಳಗೆ ನೆಲೆಗೊಂಡಿದೆ. ಇದಲ್ಲದೇ 2000 ಸಣ್ಣ ನರ್ಮದಾ ಲಿಂಗಗಳನ್ನು ಓಂಕಾರೇಶ್ವರದ ಲಿಂಗದ ಕೆಳಗೆ ಇರಿಸಲಾಗಿದೆ.
ಪ್ರತಿದಿನ ಎಲ್ಲಾ ಜ್ಯೋತಿರ್ಲಿಂಗಗಳಿಗೆ ರುಧಾಭಿಷೇಕ ಮತ್ತು ಪೂಜೆ ನಡೆಯುತ್ತದೆ. ವಿಶೇಷ ದಿನಗಳು ಹಬ್ಬದ ಸಂದರ್ಭದಲ್ಲಿ ಪೂಜೆಗಳು, ಹೋಮ ಹಾಗೂ ಇತರ ವಿಶೇಷ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.
ನೀವು ಬೆಂಗಳೂರಿನಲ್ಲೇ ಇದ್ದೂ ಇನ್ನೂ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿಲ್ಲ ಅಂದ್ರೆ ಪ್ಲಾನ್ ಮಾಡಿ. ಮಹಾ ಶಿವರಾತ್ರಿ ಆಚರಣೆ ವಿಶೇಷ ಇರುವ ಈ ದಿನ ನೀವು ಓಂಕಾರ ಹಿಲ್ಸ್‌ಗೆ ಭೇಟಿ ಕೊಡಬಹುದು. ಈ ವರ್ಷ ಮಾರ್ಚ್ 8 ರಂದು ಮಹಾಶಿವರಾತ್ರಿ ಆಚರಣೆ ಇದೆ.
(This copy first appeared in Hindustan Times Kannada website. To read more like this please logon to kannada.hindustantimes.com)