ಮನಸ್ಸು ಆಗಾಗ ವಿಚಲಿತವಾಗುತ್ತಾ? ಮಾನಸಿಕವಾಗಿ ಬಲಿಷ್ಠರಾಗಲು ಭಗವದ್ಗೀತೆಯ ಈ ಸಂದೇಶಗಳನ್ನು ತಿಳಿಯಿರಿ
ಉತ್ತಮ ಜೀವನ ನಡೆಸಲು ಬೇಕಾದ ಅನೇಕ ಸಂದೇಶಗಳು ಭಗವದ್ಗೀತೆಯಲ್ಲಿವೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಮೊದಲು ಮನಸ್ಸು ಶಾಂತವಾಗಿರಬೇಕು. ಮನಸ್ಸು ವಿಚಲಿತವಾದರೆ ಸಾಧನೆ ಕಷ್ಟವಾಗುತ್ತದೆ. ಇದರಿಂದ ಹೊರಬರಲು ಭಗವದ್ಗೀತೆಯಲ್ಲಿ ಹೇಳಿರುವ ಈ ಸಂದೇಶಗಳು ನಿಮಗೆ ಸಹಾಯ ಮಾಡುತ್ತವೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಜೀವನ ಕಲೆಯನ್ನು ವಿವರಿಸಿದ್ದಾನೆ. ಗೀತಾ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿಯು ಮುಂದೊಂದು ದಿನ ಯಶಸ್ವಿಯಾಗುವುದು ಖಚಿತ. ತನ್ನ ಬಂಧುಗಳು, ಸಹೋದರರು ಮತ್ತು ಗುರುಗಳು ಶಸ್ತ್ರಸಜ್ಜಿತರಾಗಿ ಯುದ್ಧಭೂಮಿಯಲ್ಲಿ ಯುದ್ಧಕ್ಕೆ ಸಿದ್ದರಾಗಿದ್ದನ್ನು ಕಂಡು ಅರ್ಜುನನ ಮನೋಬಲ ಕುಗ್ಗತೊಡಗುತ್ತದೆ. ಆಗ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನು. ಶ್ರೀಕೃಷ್ಣನ ಮಾತುಗಳನ್ನು ಕೇಳಿ ಅರ್ಜುನನು ರಣರಂಗದಲ್ಲಿ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಜೀವನದ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಗೀತೆಯಲ್ಲಿ ಹೇಳಿರುವ ಉಪದೇಶಗಳು ಜನರಿಗೆ ಮಾರ್ಗದರ್ಶಿಯಾಗಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತವಾದ ನಮ್ಮ ಮನಸ್ಸನ್ನು ಶಾಂತಗೊಳಿಸುವ ಕೆಲವು ಉಪದೇಶಗಳು ಗೀತೆಯಲ್ಲಿವೆ. ಮನಸ್ಸು ವಿಚಲಿತಗೊಳ್ಳಲು ಪ್ರಾರಂಭಿಸಿದರೆ, ಭಗವದ್ಗೀತೆಯಲ್ಲಿ ಹೇಳಿರುವ ಉಪದೇಶಗಳನ್ನು ಮೊದಲು ಅರಿತುಕೊಳ್ಳಬೇಕು. ಮನಸ್ಸು ಆಗಾಗ ವಿಚಲಿತವಾಗುತ್ತಿದ್ದರೆ ಭಗವದ್ಗೀತೆಯಲ್ಲಿನ ಈ ಉಪದೇಶಗಳ ಬಗ್ಗೆ ಅರಿತುಕೊಳ್ಳಿ.
ವಿಚಲಿತ ಮನಸ್ಸಿಗೆ ಗೀತೆಯಲ್ಲಿದೆ ಪರಿಹಾರ; ಫಲಿತಾಂಶದ ಬಗ್ಗೆ ಚಿಂತೆಬೇಡ, ಕೆಲಸದ ಬಗ್ಗೆ ಇರಲಿ ಗಮನ
ಭಗವದ್ಗೀತೆಯಲ್ಲಿ ಮನುಷ್ಯನು ದುಷ್ಪರಿಣಾಮಗಳ ಬಗ್ಗೆ ಚಿಂತಿಸದೆ ತನ್ನ ಕೆಲಸವನ್ನು ತಾನೇ ಮಾಡಬೇಕೆಂದು ಬರೆಯಲಾಗಿದೆ. ಒಬ್ಬ ವ್ಯಕ್ತಿಯು ಫಲಿತಾಂಶದ ಬಗ್ಗೆ ಅತಿಯಾಗಿ ಯೋಚಿಸದೇ, ಅವನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಮನಸ್ಸು ಹೆಚ್ಚು ಶಾಂತವಾಗಿರುತ್ತದೆ. ಅಲ್ಲಿ ಚಂಚಲತೆ ಕಡಿಮೆಯಿರುತ್ತದೆ. ಇದು ವ್ಯಕ್ತಿಯನ್ನು ಒತ್ತಡದಿಂದ ಮುಕ್ತವಾಗಿರಿಸುತ್ತದೆ ಮತ್ತು ಸಂಪೂರ್ಣವಾಗಿ ಕೆಲಸದ ಮೇಲೆಯೇ ಗಮನವನ್ನು ಕೇಂದ್ರೀಕರಿಸಬಹುದಾಗಿದೆ.
ಸ್ವಾರ್ಥವಿಲ್ಲದೆ ಕೆಲಸ ಮಾಡಿ
ಸ್ವಾರ್ಥವಿಲ್ಲದೆ ಕೆಲಸವನ್ನು ಮಾಡಬೇಕು ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅತಿಯಾದ ಆಸೆ ಅಥವಾ ಸ್ವಾರ್ಥದಿಂದ ಯಾವುದೇ ಕೆಲಸವನ್ನು ಮಾಡಿದರೂ ಅದರಿಂದ ಮನಸ್ಸು ಎಂದಿಗೂ ಶಾಂತವಾಗಿರುವುದಿಲ್ಲ. ಮನಸ್ಸು ಅಸ್ಥಿರವಾಗಿರುತ್ತದೆ. ಇದರಿಂದ ವ್ಯಕ್ತಿಯು ನೋವನ್ನು ಅನುಭವಿಸುತ್ತಾನೆ. ಹಾಗಾಗಿ ಸ್ವಾರ್ಥವನ್ನು ಬಿಟ್ಟು ಕರ್ತವ್ಯವನ್ನು ಮಾಡಬೇಕು.
ಸುಖ-ದುಃಖ ಎರಡನ್ನೂ ಸಮಾನವಾಗಿ ಕಾಣಬೇಕು
ಸುಖ ಮತ್ತು ದುಃಖ ಇವೆರಡೂ ಒಂದು ಸಮಯದ ಚಕ್ರದಂತೆ. ಇದು ಸದಾ ತಿರುಗುತ್ತಲೇ ಇರುತ್ತದೆ. ಮಾನವನ ಜೀವನದಲ್ಲೂ ಅಷ್ಟೇ ಸುಖ-ದುಃಖಗಳು ಬರುತ್ತಲೇ ಇರುತ್ತವೆ. ಎಂತಹುದೇ ಸ್ಥಿತಿಯಲ್ಲಿಯೂ ವ್ಯಕ್ತಿಯು ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸಬೇಕು. ಆಗ ಮನಸ್ಸು ಹೆಚ್ಚು ವಿಚಲಿತವಾಗುವುದಿಲ್ಲ. ಸುಖ ಬಂದಾಗ ಅಹಂಕಾರ ಪಡಬಾರದು, ಅದೇ ರೀತಿ ದುಃಖ ಬಂದಾಗ ವಿಚಲಿತಗೊಳ್ಳಬಾರದು. ಸುಖ-ದುಃಖ ಇವೆರಡೂ ಕ್ಷಣಿಕ ಎಂದು ಗೀತೆಯಲ್ಲಿ ಹೇಳಲಾಗಿದೆ.
ದೇವರಲ್ಲಿ ನಂಬಿಕೆಯಿಡಿ
ಮನುಷ್ಯನಿಗೆ ದೇವರಲ್ಲಿ ನಂಬಿಕೆ ಇರಬೇಕು ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ದೇವರಲ್ಲಿ ನಂಬಿಕೆ ಇರುವ ವ್ಯಕ್ತಿಯ ಮನಸ್ಸು ಹೆಚ್ಚು ವಿಚಲಿತವಾಗುವುದಿಲ್ಲ.
ಜ್ಞಾನ ಸಂಪಾದಿಸಿ
ಭಗವದ್ಗೀತೆಯ ಪ್ರಕಾರ, ಜ್ಞಾನವನ್ನು ಸಂಪಾದಿಸುವುದರಲ್ಲಿ ಮಗ್ನನಾದ ವ್ಯಕ್ತಿಯ ಮನಸ್ಸು ಹೆಚ್ಚು ವಿಚಲಿತವಾಗುವುದಿಲ್ಲ. ಅವನ ಮನಸ್ಸು ಸ್ಥಿರವಾಗಿರುತ್ತದೆ. ಆದ್ದರಿಂದ ಜ್ಞಾನ ಸಂಪಾದನೆಯ ಕಡೆಗೆ ಹೆಚ್ಚು ಗಮನ ಕೊಡಬೇಕು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.