Bhagavad Gita: ಅಧ್ಯಾತ್ಮಿಕ ಶರೀರಕ್ಕೆ ಹುಟ್ಟು, ಸಾವು, ಮುಪ್ಪು, ರೋಗ ಯಾವುದೂ ಇಲ್ಲ; ಗೀತೆಯ ಸಾರಾಂಶ ಹೀಗಿದೆ-bhagavad gita updesh lord krishna spiritual body has no birth death disease bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಅಧ್ಯಾತ್ಮಿಕ ಶರೀರಕ್ಕೆ ಹುಟ್ಟು, ಸಾವು, ಮುಪ್ಪು, ರೋಗ ಯಾವುದೂ ಇಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಅಧ್ಯಾತ್ಮಿಕ ಶರೀರಕ್ಕೆ ಹುಟ್ಟು, ಸಾವು, ಮುಪ್ಪು, ರೋಗ ಯಾವುದೂ ಇಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಹುಟ್ಟು, ಸಾವು, ಮುಪ್ಪು ಮತ್ತು ರೋಗಗಳು ಈ ಜಡ ದೇಹವನ್ನು ಕಾಡುತ್ತವೆ. ಅಧ್ಯಾತ್ಮಿಕ ದೇಹವನ್ನಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ ಶ್ಲೋಕ 29 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 28

ಯೇಷಾಂ ತ್ವನ್ತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ |

ತೇ ದ್ವನ್ದೈಮೋಹನಿರ್ಮುಕ್ತಾ ಭಜನ್ತೇ ಮಾಂ ದೃಢವ್ರತಾಃ ||28|

ಅನುವಾದ: ಯಾರು ತಮ್ಮ ಹಿಂದಿನ ಜನ್ಮಗಳಲ್ಲಿ ಮತ್ತು ಈ ಜನ್ಮದಲ್ಲಿ ಪುಣ್ಯ ಕರ್ಮಗಳನ್ನು ಮಾಡಿದ್ದಾರೆಯೋ ಮತ್ತು ಯಾರಾ ಪಾಪಕಾರ್ಯಗಳು ಸಂಪೂರ್ಣವಾಗಿ ನಿರ್ಮೂಲವಾಗಿಯೋ ಅವರು ಭ್ರಾಂತಿಯ ದ್ವಂದ್ವಗಳಿಂದ ಮುಕ್ತರಾಗುತ್ತಾರೆ. ಅವರು ದೃಢ ಮನಸ್ಸಿನಿಂದ ನನ್ನ ಸೇವೆಯಲ್ಲಿ ನಿರತರಾಗುತ್ತಾರೆ.

ಭಾವಾರ್ಥ: ಈ ಶ್ಲೋಕದಲ್ಲಿ ದಿವ್ಯ ಸ್ಥಿತಿಗೆ ಏರಲು ಅರ್ಹರಾದವರು ಯಾರು ಎಂದು ಹೇಳಿದೆ. ಪಾಪಿಗಳಾದವರು, ನಾಸ್ತಿಕರು, ಮೂರ್ಖರು ಮತ್ತು ಮೋಸಗಾರರಿಗೆ ಆಸೆ ಮತ್ತು ದ್ವೇಷಗಳ ದ್ವಂದ್ವವನ್ನು ದಾಡುವುದು ಬಹಳ ಕಷ್ಟ. ಯಾರು ಧರ್ಮದ (Bhagavad Gita Updesh in Kannada) ನಿಯಂತ್ರಕ ತತ್ವಗಳನ್ನು ಅನುಷ್ಠಾನಕ್ಕೆ ತಂದಿದ್ದಾರೋ, ದೈವಭಕ್ತರಾಗಿ ನಡೆದುಕೊಂಡಿದ್ದಾರೋ ಮತ್ತು ಪಾಪಕರ ಪ್ರತಿಕ್ರಿಯೆಗಳನ್ನು ಜಯಿಸಿದ್ದಾರೋ ಅವರು ಮಾತ್ರ ಭಕ್ತಿಸೇವೆಯನ್ನು ಸ್ವೀಕರಿಸಬಲ್ಲರು ಮತ್ತು ಕ್ರಮ ಕ್ರಮವಾಗಿ ದೇವೋತ್ತಮ ಪರಮ ಪುರುಷನ ಪರಿಶುದ್ಧ ಜ್ಞಾನದ ಮಟ್ಟಕ್ಕೆ ಏರಬಲ್ಲರು. ಅನಂತರ ಕ್ರಮೇಣ ಅವರು ಸಮಾಧಿಸ್ಥಿತಿಯಲ್ಲಿ ದೇವೋತ್ತಮ ಪರಮ ಪುರುಷನನ್ನು ಧ್ಯಾನಿಸಬಲ್ಲರು. ಇದು ಅಧ್ಯಾತ್ಮಿಕ ನೆಲೆಯಲ್ಲಿ ನೆಲೆಸುವ ಪ್ರಕ್ರಿಯೆ. ಪರಿಶುದ್ಧ ಭಕ್ತರ ಸಹವಾಸದಲ್ಲಿ ಕೃಷ್ಣಪ್ರಜ್ಞೆಯಲ್ಲಿ ಈ ಉತ್ಕರ್ಷ ಸಾಧ್ಯ. ಏಕೆಂದರೆ ಶ್ರೇಷ್ಠ ಭಕ್ತರ ಸಹವಾಸದಲ್ಲಿ ಮನುಷ್ಯನು ಮಾಯೆಯಿಂದ ಬಿಡುಗಡೆ ಹೊಂದಬಲ್ಲ.

ಮನುಷ್ಯನಿಗೆ ವಾಸ್ತವವಾಗಿ ಮುಕ್ತಿ ಬೇಕೆಂದರೆ ಆತನು ಭಕ್ತರ ಸೇವೆಯನ್ನು ಮಾಡಬೇಕ. (ಮಹತ್ಸೇವಾಂ ದ್ವಾರಮ್ ಆಹುರ್ ವಿಮುಕ್ತೇಃ) ಆದರೆ ಪ್ರಾಪಂಚಿಕ ಮನೋಧರ್ಮದ ಜನರೊಂದಿಗೆ ಸೇರುವವನು ಅಸ್ತಿತ್ವದ ಅತ್ಯಂತ ಕತ್ತಲೆಗೆ ಹೋಗುವ ದಾರಿಯಲ್ಲಿದ್ದಾನೆ (ತಮೋದ್ವಾರಂ ಯೋಷಿತಾಂ ಸನ್ಗಿಸನ್ಗಮ್) ಎಂದು ಶ್ರೀಮದ್ಭಾಗವತದಲ್ಲಿ (5.5.2) ಹೇಳಿದೆ. ಭಗವತಂತನ ಭಕ್ತರೆಲ್ಲ ಬದ್ಧ ಆತ್ಮಗಳನ್ನು ಅವರ ಭ್ರಾಂತಿಯಿಂದ ಬಿಡಿಸಲೆಂದೇ ಈ ಭೂಮಿಯಲ್ಲಿ ಸಂಚಾರಮಾಡುತ್ತಾರೆ. ಪರಮ ಪ್ರಭುವಿನ ಅಧೀನರಾಗಿರುವ ತಮ್ಮ ಸಹಜ ಸ್ವರೂಪವನ್ನು ಮರೆಯುವುದು ಭಗವಂತನ ನಿಯಮದ ಮಹಾ ಉಲ್ಲಂಘನೆ ಎಂದು ನಿರಾಕಾರವಾದಿಗಳಿಗೆ ತಿಳಿಯದು. ತನ್ನ ಸಹಜ ಸ್ವರೂಪದಲ್ಲಿ ಮತ್ತೆ ಸ್ಥಾಪಿತನಾಗದೆ ಯಾವ ಮನುಷ್ಯನಿಗೂ ಪರಮ ಪುರುಷನನ್ನು ಅರ್ಥಮಾಡಿಕೊಳ್ಳುವುದಾಗಲೀ ಅಥವಾ ದೃಢಸಂಕಲ್ಪದಿಂದ ಅವರ ದಿವ್ಯಪ್ರೇಮಪೂರ್ವಕ ಸೇವೆಯಲ್ಲಿ ತೊಡಗುವುದಾಗಲೀ ಸಾಧ್ಯವಿಲ್ಲ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 29

ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತನ್ತಿ ಯೇ |

ತೇ ಬ್ರಹ್ಮ ತದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ ||29||

ಅನುವಾದ: ಮುಪ್ಪು, ಸಾವುಗಳಿಂದ ಬಿಡುಗಡೆ ಹೊಂದುವುದಕ್ಕಾಗಿ ಶ್ರಮಿಸುತ್ತಿರುವ ಬುದ್ಧಿವಂತರು ಭಕ್ತಿಸೇವೆಯನ್ನು ಮಾಡುತ್ತ ನನ್ನಲ್ಲಿ ಆಶ್ರಯವನ್ನು ಪಡೆಯುವವರು. ನಿಜವಾಗಿ ಅವರು ಬ್ರಹ್ಮನ್, ಏಕೆಂದರೆ ಅವರು ದಿವ್ಯಕರ್ಮಗಳ ವಿಷಯದಲ್ಲಿ ಪ್ರತಿಯೊಂದು ಸಂಗತಿಯನ್ನೂ ಸಮಗ್ರವಾಗಿ ಬಲ್ಲರು.

ಭಾವಾರ್ಥ: ಹುಟ್ಟು, ಸಾವು, ಮುಪ್ಪು ಮತ್ತು ರೋಗಗಳು ಈ ಜಡ ದೇಹವನ್ನು ಕಾಡುತ್ತವೆ. ಅಧ್ಯಾತ್ಮಿಕ ದೇಹವನ್ನಲ್ಲ. ಅಧ್ಯಾತ್ಮಿಕ ಶರೀರಕ್ಕೆ ಹುಟ್ಟು, ಸಾವು, ಮುಪ್ಪು, ರೋಗ ಯಾವುದೂ ಇಲ್ಲ. ಆದುದರಿಂದ ಅಧ್ಯಾತ್ಮಿಕ ಶರೀರವನ್ನು ಪಡೆದು ದೇವೋತ್ತಮ ಪರಮ ಪುರುಷನ ಜೊತೆಯವರಲ್ಲಿ ಒಬ್ಬನಾಗಿ ಭಕ್ತಿಸೇವೆಯಲ್ಲಿ ತೊಡಗುವವನು ನಿಜವಾಗಿ ಮುಕ್ತನಾದವನು. ಅಹಂ ಬ್ರಹ್ಮಾಸ್ಮಿ. ನಾನು ಚೇತನಾತ್ಮನು. ತಾನು ಬ್ರಹ್ಮನ್ ಅಥವಾ ಚೇತನಾತ್ಮ ಎನ್ನುವುದನ್ನು ಮನುಷ್ಯನು ಅರ್ಥಮಾಡಿಕೊಳ್ಳಬೇಕೆಂದು ಹೇಳಿದೆ. ಈ ಶ್ಲೋಕದಲ್ಲಿ ವರ್ಣಿಸಿರುವಂತೆ, ಬದುಕಿನ ಈ ಬ್ರಹ್ಮನ್ ಪರಿಕಲ್ಪನೆಯು ಭಕ್ತಿಸೇವೆಯಲ್ಲಿಯೂ ಇದೆ. ಪರಿಶುದ್ಧ ಭಕ್ತರು ಅಧ್ಯಾತ್ಮಿಕವಾಗಿ ಬ್ರಹ್ಮನ್ ನೆಲೆಯಲ್ಲಿದ್ದಾರೆ. ಅವರಿಗೆ ಅಧ್ಯಾತ್ಮಿಕ ಕರ್ಮಗಳ ವಿಷಯವಾಗಿ ಎಲ್ಲವೂ ತಿಳಿದಿವೆ.

ಭಗವಂತನ ದಿವ್ಯ ಸೇವೆಯಲ್ಲಿ ನಿರತರಾಗುವ ನಾಲ್ಕು ಬಗೆಯ ಅಶುದ್ಧ ಭಕ್ತರು ತಮ್ಮ ತಮ್ಮ ಗುರಿಗಳನ್ನು ತಲಪುತ್ತಾರೆ ಮತ್ತು ಪರಮ ಪ್ರಭುವಿನ ಕೃಪೆಯಿಂದ ಅವರು ಸಂಪೂರ್ಣ ಕೃಷ್ಣಪ್ರಜ್ಞೆಯನ್ನು ಪಡೆದಾಗ, ಪರಮ ಪ್ರಭುವಿನೊಡನೆ ಅಧ್ಯಾತ್ಮಿಕ ಸಹವಾಸವನ್ನು ಸವಿಯುತ್ತಾರೆ. ಆದರೆ ದೇವತೆಗಳನ್ನು ಪೂಜೆ ಮಾಡುವವರು ಪರಮ ಪ್ರಭುವನ್ನು ಅವನ ಲೋಕದಲ್ಲಿ ತಲಪುವುದೇ ಇಲ್ಲ. ಬ್ರಹ್ಮನ್ ಸಾಕ್ಷಾತ್ಕಾರವಾಗಿದ್ದರೂ ಅಷ್ಟು ಬುದ್ಧಿವಂತರಲ್ಲದವರು ಸಹ, ಗೋಲೋಕ, ವೃಂದಾವನ ಎನ್ನುವ ಹೆಸರಿನ ಕೃಷ್ಣನ ಪರಮ ಲೋಕವನ್ನು ಸೇರಲಾರರು.

ಕೃಷ್ಣಪ್ರಜ್ಞೆಯಲ್ಲಿ (ಮಾಮ್ ಆಶ್ರಿತ್ಯ) ಕರ್ಮಮಾಡುವವರು ಮಾತ್ರ ಬ್ರಹ್ಮನ್ ಎಂದು ಕರೆಸಿಕೊಳ್ಳುವುದಕ್ಕೆ ಅರ್ಹರು, ಏಕೆಂದರೆ ಅವರು ಕೃಷ್ಣ ಲೋಕವನ್ನು ಸೇರಲು ವಾಸ್ತವವಾಗಿ ಪ್ರಯತ್ನಿಸುತ್ತಿದ್ದಾರೆ. ಇಂತಹವರಿಗೆ ಕೃಷ್ಣನ ವಿಷಯವಾಗಿ ಯಾವ ಸಂಶಯವೂ ಇಲ್ಲ. ಆದುದರಿಂದ ಅವರು ವಾಸ್ತವವಾಗಿ ಬ್ರಹ್ಮನ್. ಭಗವಂತನ ರೂಪ ಅಥವಾ ಅರ್ಚಾವನ್ನು ಪೂಜಿಸುವುದರಲ್ಲಿ ನಿರತರಾದವರಿಗೆ ಅಥವಾ ಐಹಿಕ ಬಂಧನದಿಂದ ಮುಕ್ತಿ ಪಡೆಯಲು ಮಾತ್ರವೇ ಭಗವಂತನ ಧ್ಯಾನದಲ್ಲಿ ನಿರತರಾದವರಿಗೆ ಸಹ, ಭಗವಂತನ ಕೃಪೆಯಿಂದ ಬ್ರಹ್ಮನ್ ಅಥವಾ ಅಧಿಭೂತ ಮೊದಲಾದವುಗಳ ಭಾವಾರ್ಥವು ತಿಳಿಯುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.