Birth Date Astrology: ಸಣ್ಣ ಪುಟ್ಟ ಕೆಲಸಗಳಿಗೂ ಬೇಕು ಹೆಚ್ಚಿನ ಪ್ರಯತ್ನ; 13ನೇ ತಾರೀಖಿನಂದು ಜನಿಸಿದವರ ಗುಣ ಲಕ್ಷಣ
Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು.
13ನೇ ದಿನಾಂಕದಂದು ಹುಟ್ಟಿದವರು ಸಾಮಾನ್ಯವಾಗಿ ದೊರೆಯುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ. ಇವರು ಕಲಿತಿರುವ ವಿದ್ಯೆಯನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಬೇರೆಯವರ ಸಹಾಯ ಸಹಕಾರದಿಂದ ಕೆಲಸ ಕಾರ್ಯಗಳು ಯಶಸ್ವಿಯಾಗುವರು. ಇವರ ಬಳಿ ಇಷ್ಟೇ ಹಣವಿದ್ದರೂ ಅದನ್ನು ಉಳಿಸಲು ಸಾಧ್ಯವಾಗದು. ತಮ್ಮ ಅರಿವಿಗೆ ಬಾರದಂತೆ ಇರುವ ಹಣವನ್ನೆಲ್ಲಾ ಖರ್ಚು ಮಾಡುವರು.
ಕುಟುಂಬದ ಸದಸ್ಯರು ಇವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುತ್ತಾರೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಹಣದ ಸಹಾಯ ಮಾಡುತ್ತಾರೆ. ಕೆಲವೊಮ್ಮೆ ಇವರ ಮನಸ್ಸಿನಲ್ಲಿ ವೈರಾಗದ ಭಾವನೆ ಮೂಡುತ್ತದೆ. ಧಾರ್ಮಿಕತೆಯನ್ನು ಪ್ರಚಾರ ಮಾಡುವ ವ್ಯಕ್ತಿಗಳಿಗೆ ಸಹಾಯ ಮಾಡುವಲ್ಲಿ ಇವರೇ ಮೊದಲಿಗರು. ದೇವರಲ್ಲಿ ಅಪಾರವಾದ ಭಕ್ತಿ ಇರುತ್ತದೆ. ಹಾಗೆ ಕೆಲಸ ಕಾರ್ಯದಲ್ಲಿ ಶ್ರದ್ದೆಯು ಇರುತ್ತದೆ. ಆದರೆ ಕೆಲಸ ಮಾಡುವ ಮನಸ್ಸಿರುವುದಿಲ್ಲ. ಕಷ್ಟವಿಲ್ಲದೆ ಜೀವನ ನಡೆಸಬೇಕೆಂಬ ಮನಸಿರುತ್ತದೆ. ತಾವಾಗಿಯೇ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಆದರೆ ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹಿರಿಯ ಅಣ್ಣನ ಜೊತೆ ಉತ್ತಮ ಬಾಂಧವ್ಯ ಇರುತ್ತದೆ.
ಸಣ್ಣ ಪುಟ್ಟ ತಪ್ಪಿಗೆ ಹೆಚ್ಚಿನ ವಿರೋಧ
ಅರಿಯದೆ ಮಾಡುವ ಸಣ್ಣಪುಟ್ಟ ತಪ್ಪಿಗೂ ಹೆಚ್ಚಿನ ವಿರೋಧ ಎದುರಿಸುತ್ತಾರೆ. ಯಾವುದೇ ಕೆಲಸ ಆರಂಭಿಸುವುದು ಕಷ್ಟ. ಆದರೆ ಒಮ್ಮೆ ಆರಂಭವಾದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕಷ್ಟ ನಷ್ಟಗಳಿಗೆ ಹೆದರದೆ ಕೆಲಸ ಕಾರ್ಯಗಳಲ್ಲಿ ಮುನ್ನಡೆಯುವರು. ಆದಾಯ ಕಡಿಮೆ ಇದ್ದರೂ ಹಣಕಾಸಿನ ಕೊರತೆ ಇರುವುದಿಲ್ಲ .ಇವರು ಸಂಪಾದಿಸಿದ ಬಹುಪಾಲು ಹಣವು ಬೇರೆಯವರ ಸಲುವಾಗಿ ಖರ್ಚಾಗುತ್ತದೆ. ಅನಾವಶ್ಯಕ ವಾದ ವಿವಾದ ಸದಾಕಾಲ ಇರುತ್ತವೆ. ಇವರು ಶಾಂತಿ ಸಂಯಮದಿಂದ ವರ್ತಿಸಿದಷ್ಟು ಜೀವನದಲ್ಲಿ ಪ್ರಗತಿ ಕಾಣುತ್ತಾರೆ.
ಕೇವಲ ಶಾಲಾ ಕಾಲೇಜಿನಲ್ಲಿ ಕಲಿತ ವಿಚಾರವಲ್ಲದೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳುವರು. ಒಟ್ಟಾರೆ ಇವರಿಗೆ ವಿದ್ಯೆಗಿಂತಲೂ ಒಳ್ಳೆಯ ಬುದ್ದಿ ಶಕ್ತಿ ಇರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲರು. ಆದರೆ ಆತ್ಮೀಯರ ಸಹಾಯ ಸಹಕಾರದ ಅವಶ್ಯಕತೆ ಇರುತ್ತದೆ. ಇವರು ಓದುವುದೇ ಒಂದು ಕೆಲಸ ಮಾಡುವ ಕೆಲಸ ಮತ್ತೊಂದು. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹಿಂಜರಿಯುವುದಿಲ್ಲ. ಕೇವಲ ಮನುಷ್ಯರನ್ನು ಅಷ್ಟೇ ಅಲ್ಲದೆ ಅವರು ಮಾಡುವ ಕೆಲಸ ಕಾರ್ಯಗಳನ್ನು ಗೌರವಿಸುತ್ತಾರೆ. ಅತಿಯಾದ ನಿರೀಕ್ಷೆ ಇರುವ ಕಾರಣ ಮನಸ್ಸಿಗೆ ತೃಪ್ತಿ ಇರುವುದಿಲ್ಲ.
ಸಹಾಯ ಮಾಡುವುದರಲ್ಲಿ ಎತ್ತಿದ ಕೈ
ಉಪವಾಸವಿದ್ದವರಿಗೆ ಆಹಾರ ನೀಡುವುದರಲ್ಲಿ ಸಂತಸ ಕಾಣುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಮಿತಿ ಇಲ್ಲದ ಹಣ ಬೇಕಾಗುತ್ತದೆ. ಉಷ್ಣದ ತೊಂದರೆ ಇರುತ್ತದೆ. ಕೈ ಕಾಲುಗಳಲ್ಲಿ ಊತ ಕಂಡು ಬರುತ್ತದೆ. ಅಜೀರ್ಣದ ತೊಂದರೆ ಇವರಿಗೆ ಇರುತ್ತದೆ. ನೀರಿನಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹುಟ್ಟೂರಿನಲ್ಲಿ ಇವರಿಗೆ ಯಾವುದೇ ರೀತಿಯ ಅನುಕೂಲತೆ ಇರುವುದಿಲ್ಲ. ಪರಸ್ಥಳದಲ್ಲಿ ಎಲ್ಲಾ ರೀತಿಯ ಅನುಕೂಲಗಳು ದೊರೆಯುತ್ತವೆ. ಹೆಚ್ಚಿನ ಪ್ರಯತ್ನದಿಂದ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ.
ಪ್ರೀತಿ ವಿಶ್ವಾಸದಿಂದ ಇವರ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು. ಈ ಕಾರಣದಿಂದ ಇವರುಗಳು ಮೋಸ ಹೋಗುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಇವರಿಗೆ 25 ವರ್ಷಗಳ ನಂತರ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಸಮಾಜದ ಕಟ್ಟುಪಾಡುಗಳನ್ನು ಇವರು ಗೌರವಿಸುತ್ತಾರೆ. ಮನೆಯಲ್ಲಿರುವ ತಾತ,ಅಜ್ಜಿ ಅಥವಾ ಬೇರೆ ವಯೋವೃದ್ಧರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಹಿರಿ ವಯಸ್ಸಿನವರೆಗೆ ಗೌರವ ನೀಡುತ್ತಾರೆ. ಮದುವೆ ಆದ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿವೆ. ತಮ್ಮ ಸಂಸಾರಕ್ಕಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಮಕ್ಕಳಾದ ಮೇಲೆ ಇವರಿಗೆ ಜೀವನದಲ್ಲಿ ಸುಖ ಸಂತೋಷ ಲಭಿಸುತ್ತದೆ.