Birth Date Astrology: ಮಗುವಿನ ಮನಸ್ಸು, ಹಿಡಿದ ಕೆಲಸವನ್ನು ಸಾಧಿಸದೇ ಬಿಡುವವರಲ್ಲ; 16ನೇ ತಾರೀಕು ಜನಿಸಿದವರ ಗುಣಲಕ್ಷಣಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date Astrology: ಮಗುವಿನ ಮನಸ್ಸು, ಹಿಡಿದ ಕೆಲಸವನ್ನು ಸಾಧಿಸದೇ ಬಿಡುವವರಲ್ಲ; 16ನೇ ತಾರೀಕು ಜನಿಸಿದವರ ಗುಣಲಕ್ಷಣಗಳು

Birth Date Astrology: ಮಗುವಿನ ಮನಸ್ಸು, ಹಿಡಿದ ಕೆಲಸವನ್ನು ಸಾಧಿಸದೇ ಬಿಡುವವರಲ್ಲ; 16ನೇ ತಾರೀಕು ಜನಿಸಿದವರ ಗುಣಲಕ್ಷಣಗಳು

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 16ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ
14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ

16ನೇ ತಾರೀಕಿನಂದು ಜನಿಸಿದವರಿಗೆ ಉತ್ತಮ ಬುದ್ಧಿವಂತಿಕೆ ಇರುತ್ತದೆ. ಯಾವುದೇ ವಿಚಾರವಾದರೂ, ಯಾವುದೇ ಕೆಲಸವಾದರೂ ಸುಲಭವಾಗಿ ಮಾಡಬಲ್ಲರು. ಇವರಲ್ಲಿನ ಋಣಾತ್ಮಕ ಭಾವನೆ ಎಂದರೆ ಮಾಡಬೇಕಾದ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸುವುದಿಲ್ಲ. ಸತತ ಪ್ರಯತ್ನದ ನಡುವೆಯೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕೆಂಬ ಹಂಬಲವಿರುತ್ತದೆ. ಇವರಿಗೆ ತಾನಾಗಿಯೇ ಸಮಾಜದಲ್ಲಿ ಜನಪ್ರಿಯತೆ ದೊರೆಯುತ್ತದೆ. ಬಿಡುವಿಲ್ಲದ ಕೆಲಸವಿರುತ್ತದೆ. ಕೆಲಸ ಕಾರ್ಯ ಮತ್ತು ಜವಾಬ್ದಾರಿಗಳ ನಡುವೆ ಮನರಂಜನೆಯನ್ನು ಮಾತ್ರ ತೊರೆಯುವುದಿಲ್ಲ. 

ಮಕ್ಕಳ ಬಗ್ಗೆ ವಿಶೇಷ ಅಕ್ಕರೆ ಹೊಂದಿರುತ್ತಾರೆ 

ಸಂಗೀತ ನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಕಲಿಯುವಲ್ಲಿ ಯಶಸ್ವಿಯಾಗುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಇವರ ಒಂದು ವಿಶೇಷವಾದ ಗುಣ. ಸದಾಕಾಲ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲವಿರುತ್ತದೆ. ಇವರ ಮನಸ್ಸಿಗೆ ಹತ್ತಿರವಾದವರನ್ನು ರಕ್ಷಿಸುವ ಗುಣವಿರುತ್ತದೆ. ಭಯವೆಂಬುದು ಇವರಿಗೆ ಇರುವುದೇ ಇಲ್ಲ. ಉತ್ತಮ ಆರೋಗ್ಯವಿದ್ದರೂ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ರುಚಿಯಾದ ಆಹಾರವೆಂದರೆ ಬಲು ಇಷ್ಟ. ಸ್ಥಾನ ಪ್ರತಿಷ್ಠೆಗೆ ಹೆಚ್ಚು ಗೌರವವನ್ನು ನೀಡುವುದಿಲ್ಲ. ಎಲ್ಲರೊಂದಿಗೆ ಸಹಜವಾಗಿ ಸ್ನೇಹದಿಂದ ನಡೆದುಕೊಳ್ಳುತ್ತಾರೆ. ಮಕ್ಕಳ ಬಗ್ಗೆ ವಿಶೇಷವಾದ ಅಕ್ಕರೆ ತೋರಿಸುತ್ತಾರೆ.

ಉತ್ತಮ ಭಾಷಣಕಾರರು 

ಅನಾವಶ್ಯಕವಾಗಿ ಮಾತನಾಡದೆ ಮೌನದಿಂದ ಕೆಲಸ ಸಾಧಿಸುವರು. ಆದರೆ ಮಾತನಾಡಿದರೆ ಎಲ್ಲರ ಮನಸ್ಸನ್ನು ಸುಲಭವಾಗಿ ಗೆಲ್ಲಬಲ್ಲರು. ಅನಾವಶ್ಯಕವಾಗಿ ವಾದ ಮಾಡುವುದಿಲ್ಲ. ಆದರೆ ಸರಿಯಾದ ವಿಚಾರಗಳಿಗಾಗಿ ಮಾತ್ರ ವಾದದಲ್ಲಿ ತೊಡಗುವರು. ಬೇರೆಯವರ ನಡೆನುಡಿಯಿಂದ ಮನಸ್ಸಿಗೆ ಬೇಸರವಾದರೆ ಆ ಜಾಗದಲ್ಲಿ ನಿಲ್ಲುವುದಿಲ್ಲ. ಒಳ್ಳೆಯ ವಿಷಯ ದೊರೆತರೆ ಸೊಗಸಾದ ಭಾಷಣ ಮಾಡಬಲ್ಲರು. ಸಾಮಾನ್ಯವಾಗಿ ಅಜೀರ್ಣ ಇವರನ್ನು ಕಾಡುತ್ತದೆ. ನ್ಯಾಯನೀತಿಯನ್ನು ಗೌರವಿಸುತ್ತಾರೆ.

ಚಿನ್ನ, ಬೆಳ್ಳಿಯ ಮೇಲೆ ಅಕ್ಕರೆಯಿಲ್ಲ 

ಹಣ ಉಳಿಸುವ ಯೋಚನೆ ಮಾಡುವುದಿಲ್ಲ. ಉತ್ತಮ ಸಂಪಾದನೆ ಇದ್ದರೂ ಯಥೇಚ್ಛವಾಗಿ ಖರ್ಚು ಮಾಡಿ ಬರಿಗೈ ಆಗುವಿರಿ. ಆದರೆ ಹಣಕಾಸಿನ ತೊಂದರೆ ಇವರಿಗೆ ಬರುವುದಿಲ್ಲ. ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಸಂಪಾದಿಸಬಲ್ಲರು. ಒಮ್ಮೆತೀರ್ಮಾನಿಸಿದರೆ ಇವರು ಯಾವುದೇ ಕೆಲಸವನ್ನು ಮಾಡಬಲ್ಲರು. ಸುಲಭವಾಗಿ ಸೋಲನ್ನು ಒಪ್ಪುವುದಿಲ್ಲ. ತಾವು ಆಡಿದ ಮಾತು ಮಾಡುವ ಕೆಲಸಕ್ಕೆ ಪ್ರಥಮ ಆದ್ಯತೆ ನೀಡುವರು. ಬೇರೆಯವರ ಅಧಿಕಾರದಲ್ಲಿ ಕೆಲಸ ಮಾಡಲು ಇಚ್ಛೆ ಪಡುವುದಿಲ್ಲ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಬಲ್ಲರು. ವ್ಯಾಪಾರ ವ್ಯವಹಾರಗಳು ಪರೋಕ್ಷವಾಗಿ ಜನರಿಗೆ ಸಹಾಯವಾಗುವಂತಿರುತ್ತದೆ. ಜನಸೇವೆ ಮಾಡುವುದೆಂದರೆ ಪಂಚಪ್ರಾಣ. ಕಂತಿನ ವ್ಯವಹಾರದಲ್ಲಿ ಆಸಕ್ತಿ ಇರುತ್ತದೆ. ತೊಡುವ ಬಟ್ಟೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ದುಬಾರಿ ಬಟ್ಟೆಗಳನ್ನು ಕೊಳ್ಳುತ್ತಾರೆ. ಆದರೆ ಚಿನ್ನ ಬೆಳ್ಳಿಯ ಮೇಲೆ ಅಕ್ಕರೆ ಬಹಳ ಕಡಿಮೆ ಇರುತ್ತದೆ. ಉಡುಗೊರೆಯಾಗಿ ಬಂದರು, ಚಿನ್ನವನ್ನು ಧರಿಸಲು ಇಷ್ಟಪಡುವುದಿಲ್ಲ. 

ದುಡುಕಿ ಮಾತನಾಡುವ ಅಭ್ಯಾಸವಿಲ್ಲ 

ದೇವರಲ್ಲಿ ವಿಶೇಷವಾದ ನಂಬಿಕೆ ಇರುತ್ತದೆ. ಕುಟುಂಬದ ಒಳಗೂ ಹೊರಗೂ ಅಧಿಕಾರವನ್ನು ಬಯಸುವಿರಿ. ಸೋದರ ಸೋದರಿಯ ಜೊತೆಯಲ್ಲಿ  ಉತ್ತಮ ಬಾಂಧವ್ಯ ಇರುತ್ತದೆ. ಉಚಿತವಾಗಿದ್ದರೂ ಅನಾವಶ್ಯಕವಾಗಿ ಯಾರಿಂದಲೂ ಹಣವನ್ನು ಪಡೆಯುವುದಿಲ್ಲ. ಗುಟ್ಟಾಗಿ ದಾನ ಧರ್ಮವನ್ನು ಮಾಡುತ್ತಾರೆ. ಕುಟುಂಬದಲ್ಲಿ ಅತ್ಯಂತ ಕಿರಿಯ ವ್ಯಕ್ತಿಯಾದರೂ ದೊಡ್ಡ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವರು. ಇವರು ಊಹಿಸಿದಂತೆ ಹಲವಾರು ಘಟನೆಗಳು ನಡೆಯುತ್ತವೆ. ಬೇರೆಯವರು ಹೇಳುವ ಮಾತುಗಳನ್ನು ಸುಲಭವಾಗಿ ಒಪ್ಪುವುದಿಲ್ಲ. ದುಡುಕಿ ಮಾತನಾಡುವ ಮೂಲಕ ಸ್ನೇಹ ಸಂಬಂಧಗಳನ್ನು ಕಳೆದುಕೊಳ್ಳುವುದಿಲ್ಲ. 

ಕುಟುಂಬದಲ್ಲಿರುವ ಹಿರಿಯರನ್ನು ಗೌರವದಿಂದ ಕಾಣುತ್ತಾರೆ. ಸಾಮಾನ್ಯವಾಗಿ ಇವರು ಎಲ್ಲರನ್ನೂ ಗೌರವಿಸುತ್ತಾರೆ. ಮಕ್ಕಳಿಗೆ ತಿಂಡಿ ತಿನಿಸು ನೀಡುವುದೆಂದರೆ ಬಲು ಪ್ರೀತಿ. ಅತಿಯಾದ ಆಸೆ ಇರುವುದಿಲ್ಲ. ದಾಂಪತ್ಯದಲ್ಲಿ ಪರಸ್ಪರ ಒಳ್ಳೆಯ ಅಭಿಪ್ರಾಯ ಇರುತ್ತದೆ. ದಂಪತಿಗಳು ಎನ್ನುವುದಕ್ಕಿಂತಲೂ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ತವಕವಿರುತ್ತದೆ. ಸ್ವಂತ ವಾಹನದ ಬಗ್ಗೆ ಆಸೆ ಇರುವುದಿಲ್ಲ. ಪ್ರವಾಸ ಮಾಡುವುದೆಂದರೆ ಬೇಸರದ ವಿಚಾರ. ಆದರೆ ಬೇರೆ ಬೇರೆ ಸ್ಥಳಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಯಾರ ಮನಸ್ಸನ್ನು ನೋಯಿಸದ ಇವರು ಎಲ್ಲರ ಮನ ಮನೆಯಲ್ಲಿಯೂ ಆತ್ಮೀಯರಾಗಿ ಬಾಳುತ್ತಾರೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.