Birth Day Personality Test: ವ್ಯಕ್ತಿತ್ವ ಹೇಗೆ ಅಂತ ತಿಳ್ಕೋಬೇಕಾ, ಹುಟ್ಟಿದ ವಾರ ಯಾವುದು ಹೇಳಿ, ಅದೃಷ್ಟ ಹೇಗಿರುತ್ತೆ ಅಂತ ತಿಳ್ಕೊಳ್ಳಿ
Birth Day Personality Test: ವ್ಯಕ್ತಿತ್ವ ಪರೀಕ್ಷೆಯನ್ನು ಹುಟ್ಟಿದ ವಾರದ ಆಧಾರ ಮೇಲೂ ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿತ್ವ ಹೇಗೆ ಅಂತ ತಿಳ್ಕೋಬೇಕಾ, ಹುಟ್ಟಿದ ವಾರ ಯಾವುದು ಅಂತ ಹೇಳಿ, ಭಾನುವಾರದಿಂದ ಶನಿವಾರದವರೆಗಿನ ದಿನದಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ? ಇಲ್ಲಿದೆ ಓದಿ. (ಬರಹ: ಅರ್ಚನಾ ಭಟ್)
Birth Day Personality Test: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಊಹಿಸಬಹುದಾಗಿದೆ. ರಾಶಿ ಮತ್ತು ಗ್ರಹಗತಿಗಳ ಪ್ರಕಾರ ಭವಿಷ್ಯದಲ್ಲಿ ಏನಾಗುತ್ತದೆ?, ಯಾವ ಬದಲಾವಣೆಗಳು ನಡೆಯುತ್ತವೆ? ಏನೇನು ತೊಂದರೆಗಳು ಬರುತ್ತವೆ? ಅದಕ್ಕೆ ಪರಿಹಾರಗಳೇನು? ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ರಾಡಿಕ್ಸ್ ನಂಬರ್‌ಗಳ ಮೂಲಕ ಯಾವ ತಾರೀಖಿನಂದು ಹುಟ್ಟಿದ್ದರೆ ಯಾವ ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ತಿಳಿಯಬಹುದಾಗಿದೆ. ಅದೇ ರೀತಿ ಹುಟ್ಟಿದ ವಾರ ಯಾವುದು ಎಂದು ತಿಳಿದುಕೊಂಡರೆ, ಅದನ್ನು ಆಧರಿಸಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದಾಗಿದೆ. ವಾರದ ಏಳು ದಿನಗಳಲ್ಲಿ ನೀವು ಯಾವ ವಾರ ಜನಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಗುಣ ಸ್ವಭಾವ, ಅದೃಷ್ಟ ಮುಂತಾದವುಗಳನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಭಾನುವಾರದಿಂದ ಶನಿವಾರದವರೆಗಿನ ದಿನಗಳಲ್ಲಿ ಹುಟ್ಟಿದವರ ವ್ಯಕ್ತಿತ್ವದ ಬಗ್ಗೆ ಇಲ್ಲಿ ಪರಿಚಯ ಮಾಡಿಕೊಳ್ಳೋಣ.
ಜನ್ಮ ವಾರದ ಪ್ರಕಾರ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ
ಭಾನುವಾರ: ಭಾನುವಾರದಂದು ಜನಿಸಿದವರು ಯಾವಾಗಲೂ ಎಚ್ಚರಿಕೆಯಿಂದ ಇರುತ್ತಾರೆ. ಪ್ರತಿಯೊಂದು ಕೆಲಸವನ್ನೂ ಗಮನವಿಟ್ಟು ನಿರ್ವಹಿಸುತ್ತಾರೆ. ಅದೃಷ್ಟ ಕೂಡಾ ಅವರ ಪಾಲಿಗೆ ಇರುತ್ತದೆ. ಅವರು ಎಲ್ಲರೊಂದಿಗೆ ಬೆರೆಯುವುದಿಲ್ಲ. ಸ್ವಲ್ಪ ನಾಚಿಕೆ ಸ್ವಭಾವದವರಾಗಿರುತ್ತಾರೆ. ಮುಖಭಾವ ಹೆಚ್ಚಾಗಿರುತ್ತದೆ. ಶಿಕ್ಷಣ ಮತ್ತು ಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಭಾನುವಾರದಂದು ಜನಿಸಿದ ಜನರು ತಮ್ಮ ಕುಟುಂಬ ಸದಸ್ಯರನ್ನು ಯಾವಾಗಲೂ ಸಂತೋಷಪಡಿಸುತ್ತಾರೆ. ಪ್ರೀತಿಯಿಂದ ವರ್ತಿಸುತ್ತಾರೆ ಮತ್ತು ದೇವರಲ್ಲಿ ಭಕ್ತಿಯೂ ಹೆಚ್ಚಿರುತ್ತದೆ.
ಸೋಮವಾರ: ಸೋಮವಾರದಂದು ಜನಿಸಿದವರು ಯಾವಾಗಲೂ ತಮ್ಮನ್ನು ತಾವೇ ಪ್ರೇರೇಪಿಸಿಕೊಳ್ಳುತ್ತಾರೆ. ಇವರು ತುಂಬಾ ಕರುಣಾಮಯಿಗಳಾಗಿರುತ್ತಾರೆ. ಇತರರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ. ಇವರು ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ನಿಭಾಯಿಸಲು ಸಮರ್ಥರಾಗಿರುತ್ತಾರೆ. ಚಿಕ್ಕಂದಿನಲ್ಲಿ ಓದಿನ ಕಡೆಗೆ ಹೆಚ್ಚು ಗಮನ ಕೊಡದಿದ್ದರೂ ನಂತರ ಚೆನ್ನಾಗಿ ಓದಿ ಬುದ್ಧಿವಂತಿಕೆಯಿಂದ ಜೀವನದಲ್ಲಿ ಮುನ್ನಡೆಯುತ್ತಾರೆ.
ಮಂಗಳವಾರ: ಮಂಗಳವಾರ ಜನಿಸಿದವರಿಗೆ ಕೋಪ ಜಾಸ್ತಿಯಾಗಿರುತ್ತದೆ. ಬಹಳ ಬೇಗನೆ ಕೋಪಗೊಳ್ಳುತ್ತಾರೆ. ಇತರರೊಂದಿಗೆ ಇವರ ನಡವಳಿಕೆ ಉತ್ತಮವಾಗಿರುವುದಿಲ್ಲ. ಕೆಲವೊಮ್ಮೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳವಾರದಂದು ಜನಿಸಿದವರಿಗೆ ಸ್ವಲ್ಪ ಹೆಮ್ಮೆ ಇರುತ್ತದೆ.
ಬುಧವಾರ: ಬುಧವಾರ ಜನಿಸಿದವರು ಆಧ್ಯಾತ್ಮದ ಕಡೆಗೆ ಹೆಚ್ಚು ಗಮನವಹಿಸುತ್ತಾರೆ. ದೇವರ ಮೇಲೆ ಭಯವಿರುತ್ತದೆ. ಇವರು ತುಂಬಾ ನಿಧಾನವಾಗಿ ಮಾತನಾಡುತ್ತಾರೆ. ಇತರರಿಗೆ ಗೌರವವನ್ನು ನೀಡುತ್ತಾರೆ. ಜೊತೆಗೆ ಪೋಷಕರನ್ನು ಗೌರವಿಸುತ್ತಾರೆ.
ಗುರುವಾರ: ಗುರುವಾರ ಜನಿಸಿದವರು ತುಂಬಾ ಬುದ್ಧಿವಂತರು. ಇವರು ಕಷ್ಟದ ಸಮಯದಲ್ಲೂ ಸುಲಭವಾಗಿ ಬದುಕುತ್ತಾರೆ. ಜೀವನದಲ್ಲಿ ಸದಾ ಮುನ್ನಡೆಯುತ್ತಾರೆ. ಇವರು ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಬಹಳ ಜನಪ್ರಿಯರಾಗಿರುತ್ತಾರೆ. ಅದೃಷ್ಟ ಅವರ ಪಾಲಿಗೆ ಇರುತ್ತದೆ.
ಶುಕ್ರವಾರ: ಶುಕ್ರವಾರ ಜನಿಸಿದವರು ಯಾವಾಗಲೂ ವಿನೋದಮಯವಾಗಿರುತ್ತಾರೆ. ಅವರು ತಮ್ಮ ಜೀವನವನ್ನು ಬಹಳ ಸಂತೋಷದಿಂದ ಕಳೆಯುತ್ತಾರೆ. ಇವರು ಇತರರಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಕಷ್ಟ ಕಾಲದಲ್ಲೂ ನಗುನಗುತ್ತಾ ಮುಂದೆ ಸಾಗುತ್ತಾರೆ.
ಶನಿವಾರ: ಶನಿವಾರ ಜನಿಸಿದವರು ತಂತ್ರಜ್ಞಾನ, ಕೃಷಿ ಮತ್ತು ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಹಲವು ಕಷ್ಟಗಳನ್ನು ಎದುರಿಸಿದ್ದರೂ, ವಯಸ್ಸಾಗುತ್ತಿದ್ದಂತೆ ಕಷ್ಟಗಳಿಂದ ಸುಲಭವಾಗಿ ಹೊರಬರುತ್ತಾರೆ. ಪೋಷಕರೊಂದಿಗಿನ ಅವರ ಬಾಂಧವ್ಯ ತುಂಬಾ ಗಟ್ಟಿಯಾಗಿರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)