ಆತ್ಮ, ಆಸೆ, ಸಂತೋಷ: ಈ ಮೂರು ವಿಷಯಗಳ ಬಗ್ಗೆ ಭಗವಾನ್ ಬುದ್ಧ ನೀಡಿದ ಸಂದೇಶ ಹೀಗಿದೆ
Buddha Stories: ಸಂತೋಷವಾಗಿರಲು ಏನು ಮಾಡಬೇಕು ಎಂದು ಭಗವಾನ್ ಬುದ್ಧನ ಬಳಿ ಒಬ್ಬ ಸನ್ಯಾಸಿ ಕೇಳಿದನು, ಎರಡನೇ ಸನ್ಯಾಸಿ, ಆಸೆಯನ್ನು ತ್ಯಜಿಸುವುದು ಹೇಗೆ ಎಂದು ಕೇಳುತ್ತಾನೆ ಹಾಗೂ ಮೂರನೇ ಸನ್ಯಾಸಿ, ಆತ್ಮ ಎಂದರೇನು ಎಂದು ಕೇಳುತ್ತಾನೆ. ಈ 3 ಪ್ರಶ್ನೆಗಳಿಗೆ ಬುದ್ಧನು ಈ ರೀತಿಯಾಗಿ ಉತ್ತರಿಸಿದನು.

ಒಮ್ಮೆ ಒಬ್ಬ ಸನ್ಯಾಸಿಯು ಭಗವಾನ್ ಬುದ್ಧನ ಬಳಿ ಬಂದು ಕೇಳಿದನು, ಸಂತೋಷವಾಗಿರಲು ಏನು ಮಾಡಬೇಕು? ಎಂದು. ಬುದ್ಧನು ನಿನ್ನ ಮನಸ್ಸಿನಿಂದ ಮೋಹವನ್ನು ತೆಗೆದುಹಾಕು ಎಂದು ಹೇಳಿದನು. ಮೋಹವು ನಿನ್ನನ್ನು ಸಂತೋಷವಾಗಿರಲು ಬಿಡುವುದಿಲ್ಲ. ಮೋಹದೊಂದಿಗೆ ಸ್ನೇಹ ಎಂದು ಮಾಡಬಾರದು. ಅದರೊಂದಿಗಿನ ಸ್ನೇಹವು ಅವನನ್ನು ನರಕಕ್ಕೆ ಕರೆದೊಯ್ಯುತ್ತದೆ. ಲೌಕಿಕ ಸುಖಗಳು ಕಳ್ಳರಂತೆ. ಈ ಕಳ್ಳರು ಕ್ರಮೇಣ ಅವನ ಜೀವನವನ್ನು ನಾಶಮಾಡುತ್ತಾರೆ. ಇದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಪರಿತ್ಯಾಗ. ಇದನ್ನು ಕೇವಲ ಜ್ಞಾನದ ಮೂಲಕ ಮಾತ್ರ ಸಾಧಿಸಬಹುದು ಎಂದು ಭಗವಾನ್ ಬುದ್ಧನು ಹೇಳಿದನು.
ಆಗ ಎರಡನೇ ಸನ್ಯಾಸಿಯು ತನ್ನೊಳಗಿನ ದುರಾಸೆಯನ್ನು ಹೇಗೆ ಹೋಗಲಾಡಿಸಬಹುದು ಎಂದು ಕೇಳಿದ. ಇದಕ್ಕೆ ಬುದ್ಧನು, ದುರಾಸೆಯನ್ನು ಕಟ್ಟಿ ಹಾಕಿ ಎಂದು ಹೇಳಿದನು. ಇದು ನಮ್ಮೊಳಗಿರುವ ಎಲ್ಲಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಆಸೆಯೇ ಎಲ್ಲ ದುಃಖಗಳಿಗೂ ಮೂಲ. ದುರಾಸೆಯಿಂದ ಮನಸ್ಸು ಎಂದಿಗೂ ತೃಪ್ತಿಯನ್ನು ಹೊಂದುವುದಿಲ್ಲ. ದುರಾಸೆಯು ಮನುಷ್ಯನ ಅತೃಪ್ತ ಬಾಯಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ದುರಾಸೆಯಿಂದ ಮನಸ್ಸಿನ ಹಸಿವು ಎಂದಿಗೂ ತಣಿಯುವುದಿಲ್ಲ. ಇದನ್ನು ತ್ಯಜಿಸಲು ಇರುವ ಏಕೈಕ ಮಾರ್ಗವೆಂದರೆ ವ್ಯಕ್ತಿಯು ಅತಿಯಾಸೆಯನ್ನು ನಿಲ್ಲಿಸುವುದು. ಅವನ ಬಳಿ ಇರುವುದರಲ್ಲೇ ತೃಪ್ತನಾಗಿರುವುದು. ವಸ್ತುಗಳ ಮೇಲಿರುವ ಆಸೆಯನ್ನು ಬಿಟ್ಟುಬಿಡಿ. ದುರಾಸೆಯನ್ನು ಪಡದೇ ಇರುವುದನ್ನು ಇತರರೊಂದಿಗೆ ಹಂಚಿಕೊಂಡು ಬಾಳಬೇಕು. ಹಂಚಿಕೊಳ್ಳುವುದರಿಂದ ವ್ಯಕ್ತಿಯು ಹೆಚ್ಚಿನ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತಾನೆ ಎಂದು ಬುದ್ಧನು ಹೇಳಿದನು.
ಇದೆಲ್ಲವನ್ನು ಕೇಳಿಸಿಕೊಂಡು ಮೌನವಾಗಿದ್ದ ಮೂರನೇ ಸನ್ಯಾಸಿ ತಥಾಗತರನ್ನು ‘ಆತ್ಮ ಎಂದರೇನು?’ ಈ ಪ್ರಶ್ನೆಗೆ ಬುದ್ದನು, ಆತ್ಮ ನಿರಾಕಾರ, ಸರ್ವವ್ಯಾಪಿ, ಆನಂದಮಯ. ಆತ್ಮವು ಸಂಪೂರ್ಣವಾದದ್ದು, ಆತ್ಮವು ಅಮರವಾದದ್ದು. ಆತ್ಮವು ಮನುಷ್ಯರಿಂದ ಹಿಡಿದು ಪ್ರಾಣಿ, ಪಕ್ಷಿಗಳವರೆಗೆ ಎಲ್ಲ ಜೀವಿಗಳಲ್ಲೂ ಇದೆ. ಅದು ಎಲ್ಲಾ ಜೀವಿಗಳ ಚೇತನವಾಗಿದೆ.
ಆತ್ಮವು ತಟಸ್ಥವಾಗಿದೆ. ಆತ್ಮವು ಪೂರ್ಣ ಮತ್ತು ತೃಪ್ತವಾಗಿದೆ. ಆತ್ಮವು ಅತ್ಯಂತ ಪರಿಶುದ್ಧವಾಗಿದೆ. ಇಂದ್ರಿಯಗಳು, ಮನಸ್ಸು ಮತ್ತು ಬುದ್ದಿಗಳು ಆತ್ಮವನ್ನು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ಅದು ಅವ್ಯಕ್ತವಾಗಿದೆ. ಆತ್ಮವು ಇದೆಲ್ಲದರಿಂದ ಬಹಳ ದೂರದಲ್ಲಿದೆ. ಆದ್ದರಿಂದ ಅದನ್ನು ಹುಡುಕಲು ಸಾಧ್ಯವಿಲ್ಲ. ಆತ್ಮವು ಆಶ್ಚರ್ಯಕರವಾಗಿದೆ ಏಕೆಂದರೆ ಆತ್ಮದ ಬಗ್ಗೆ ಕೆಲವೇ ಕೆಲವು ಜನರು ತಿಳಿದುಕೊಳ್ಳಬಹುದು. ಆತ್ಮವನ್ನು ಅನುಭವಿಸುವುದು ಅತ್ಯಂತ ದೊಡ್ಡ ಕಾರ್ಯವಾಗಿದೆ. ಆತ್ಮವು ಅವಿನಾಶಿಯಾಗಿದೆ, ಏಕೆಂದರೆ ಯಾರೂ ಅದನ್ನು ಯಾವುದೇ ಸಾಧನ ಅಥವಾ ಆಯುಧದಿಂದ ನಾಶಮಾಡಲು ಸಾಧ್ಯವಿಲ್ಲ. ಆತ್ಮವು ಯಾವಾಗಲೂ ಪೂರ್ಣವಾಗಿರುತ್ತದೆ. ಅದನ್ನು ಅನುಭವಿಸುವವನು ಸುಖವನ್ನು ಪಡೆಯುತ್ತಾನೆ.
ಆತ್ಮವು ಎಲ್ಲಾ ಜೀವಿಗಳಲ್ಲಿದೆ. ಆತ್ಮವು ಎಲ್ಲವನ್ನೂ ನೋಡುವವನು. ಆತ್ಮವು ಎಲ್ಲಾ ಜೀವಿಗಳಲ್ಲಿ ಹುಟ್ಟು ಮತ್ತು ಸಾವುಗಳನ್ನು ನೋಡುತ್ತದೆ. ಇದು ಜನನ, ಬಾಲ್ಯ, ಯೌವನ ಮತ್ತು ವೃದ್ಧಾಪ್ಯಕ್ಕೆ ಸಾಕ್ಷಿಯಾಗಿದೆ. ಆತ್ಮವೇ ಬೆಳಕು. ಅದಕ್ಕೆ ಬೇರೆ ಯಾವ ಬೆಳಕಿನ ಅಗತ್ಯವಿಲ್ಲ. ಆತ್ಮವೇ ನಿರಂಜನ. ದುರ್ಗುಣಗಳಿಂದ ಮುಕ್ತವಾದ ಆತ್ಮದಲ್ಲಿ ಯಾವುದೇ ರೀತಿಯ ಕೊಳಕು ಇರುವುದಿಲ್ಲ. ಆತ್ಮವು ಅವಿನಾಶಿ ಮತ್ತು ಜನನ ಹಾಗೂ ಮರಣದಿಂದ ಮುಕ್ತವಾಗಿದೆ. ಆತ್ಮ ಶಾಶ್ವತ, ಅಂದರೆ ಎಂದೆಂದಿಗೂ ಅಮರ. ಆತ್ಮವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆಯುಧಗಳು ಆತ್ಮವನ್ನು ಕತ್ತರಿಸುವುದಿಲ್ಲ, ಬೆಂಕಿ ಅದನ್ನು ಸುಡುವುದಿಲ್ಲ, ನೀರು ಅದನ್ನು ಮುಳುಗಿಸುವುದಿಲ್ಲ ಮತ್ತು ಗಾಳಿಯು ಅದನ್ನು ಒಣಗಿಸುವುದಿಲ್ಲ. ಆತ್ಮವು ಶಾಶ್ವತವಾಗಿದೆ, ಅಂದರೆ ಅದು ಶಾಶ್ವತ ಅಂಶವಾಗಿದೆ. ಆದ್ದರಿಂದ, ಮನುಷ್ಯ ಭೌತಿಕ ಸುಖದ ಹಿಂದೆ ಓಡದೆ, ಆತ್ಮಜ್ಞಾನವನ್ನು ಪಡೆದುಕೊಂಡು, ಆತ್ಮ ತತ್ವವನ್ನು ಪಡೆಯಲು ಪ್ರಯತ್ನಿಸಬೇಕು. ಪ್ರತಿಯೊಬ್ಬರ ಕಲ್ಯಾಣವೂ ಇದರಲ್ಲಿಯೇ ಅಡಗಿದೆ ಎಂದು ಬುದ್ಧನು ಆತ್ಮದ ಬಗ್ಗೆ ವಿವರಿಸಿದನು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
