ಬುದ್ಧ ಪೂರ್ಣಿಮೆಯ ಇತಿಹಾಸ, ಮಹತ್ವವೇನು? ಆತ್ಮೀಯರಿಗೆ ಬುದ್ಧ ಜಯಂತಿಯ ಶುಭಾಶಯ ಕೋರಲು ಇಲ್ಲಿವೆ ಸಂದೇಶಗಳು
ಮಹಾನ್ ದಾರ್ಶನಿಕ ಗೌತಮ ಬುದ್ಧನ ಜನನ, ಮರಣ, ಜ್ಞಾನೋದಯವನ್ನು ಸ್ಮರಿಸುವ ದಿನ ಬುದ್ಧ ಪೂರ್ಣಿಮೆ. ಇಂದು (ಮೇ 12) ಬುದ್ಧ ಪೂರ್ಣಿಮೆ ಇದ್ದು ಈ ದಿನದ ಇತಿಹಾಸ, ಮಹತ್ವ ತಿಳಿಯುವ ಜೊತೆಗೆ ನಿಮ್ಮ ಆತ್ಮೀಯರಿಗೆ ಬುದ್ಧ ಜಯಂತಿಯ ಶುಭಾಶಯ ಕೋರಿ.

ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಮಹಾನ್ ದಾರ್ಶನಿಕ. ಸಿದ್ಧಾರ್ಥ ಎನ್ನುವ ರಾಜವಂಶದ ಕುಡಿ ಸಕಲ ವೈಭೋಗವನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ, ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಭೋಧಿಸುತ್ತಾನೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಇಂದು ಅಂದರೆ ಮೇ 12ಕ್ಕೆ ಬುದ್ಧ ಪೂರ್ಣಿಮೆ ಆಚರಣೆ ಇದೆ. ಇದನ್ನು ಬುದ್ಧ ಜಯಂತಿ ಎಂದು ಕೂಡ ಕರೆಯಲಾಗುತ್ತದೆ.
ಬುದ್ಧ ಪೂರ್ಣಿಮೆಯು ಬೌದ್ಧಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ. ಈ ಬಾರಿ ನಾವು ಭಗವಾನ್ ಬುದ್ಧನ 2587ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಥಾಯ್ಲೆಂಡ್, ಚೀನಾ, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮತ್ತು ಟಿಬೆಟ್ ಸೇರಿದಂತೆ ಅನೇಕ ಏಷ್ಯಾದ ದೇಶಗಳು ಬುದ್ಧ ಪೂರ್ಣಿಮೆಯನ್ನು ಆಚರಿಸುತ್ತವೆ.
ಬುದ್ಧ ಪೂರ್ಣಿಮಾ ದಿನ
ಸಾಮಾನ್ಯವಾಗಿ ವೈಶಾಖ ಮಾಸದ ಹುಣ್ಣಿಮೆಯ ದಿನ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆಯಾದರೂ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಬುದ್ಧ ಪೂರ್ಣಿಮೆ ದಿನಾಂಕವು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ನಿಖರವಾದ ದಿನಾಂಕವನ್ನು ನಿರ್ಧರಿಸಲು ಏಷ್ಯನ್ ಚಂದ್ರಸೌರ ಕ್ಯಾಲೆಂಡರ್‌ಗಳನ್ನು ಬಳಸುವುದರಿಂದ ಈ ದಿನವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ. ಈ ವರ್ಷ ಹುಣ್ಣಿಮೆ ತಿಥಿಯು ಮೇ 11ರ ರಾತ್ರಿ 8.01 ಕ್ಕೆ ಪ್ರಾರಂಭವಾಗಿ ಮೇ 12 ರ ಸೋಮವಾರ ರಾತ್ರಿ 10.25 ಕ್ಕೆ ಮುಕ್ತಾಯವಾಗುತ್ತದೆ.
ಬುದ್ಧ ಪೂರ್ಣಿಮೆಯ ಇತಿಹಾಸ
2,500 ವರ್ಷಗಳ ಹಿಂದೆ ನೇಪಾಳದ ಲುಂಬಿನಿಯಲ್ಲಿ ಗೌತಮ ಬುದ್ಧನ ಜನನವಾಯಿತು ಎಂದು ಹೇಳಲಾಗುತ್ತದೆ. ಬೌದ್ಧ ಸಂಪ್ರದಾಯ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಪ್ರಕಾರ, ಗೌತಮ ಬುದ್ಧನು ನೇಪಾಳದ ಲುಂಬಿನಿಯಲ್ಲಿ ಕ್ರಿ.ಪೂ. 563 ಮತ್ತು 483 ರ ನಡುವೆ ಜನಿಸುತ್ತಾನೆ.
ಲುಂಬಿನಿಯಲ್ಲಿರುವ ಮಾಯಾದೇವಿ ದೇವಾಲಯ, ಅದರ ಸುತ್ತಲಿನ ಮೈದಾನ ಮತ್ತು 249ರ ಅಶೋಕ ಸ್ತಂಭವು ಬುದ್ಧನ ಜನ್ಮಸ್ಥಳಗಳನ್ನು ಪ್ರತಿನಿಧಿಸುತ್ತದೆ.
ಬುದ್ಧನ ಜ್ಞಾನೋದಯ ಅಥವಾ ನಿರ್ವಾಣವು ಬೌದ್ಧರಿಗೆ ಅತ್ಯಂತ ಮಹತ್ವದ ಸಂದರ್ಭವಾಗಿದೆ. ಕೆಲವು ಬೌದ್ಧ ಗ್ರಂಥಗಳ ಪ್ರಕಾರ, ಬಿಹಾರದ ಬೋಧಗಯಾದಲ್ಲಿರುವ ಬೋಧಿ ವೃಕ್ಷದ ಕೆಳಗೆ ಧ್ಯಾನ ಮಾಡುವಾಗ ಸಿದ್ಧಾರ್ಥನು ಜ್ಞಾನೋದಯವನ್ನು ಪಡೆಯುತ್ತಾನೆ ಎಂದಿದೆ.
ಬುದ್ಧ ಪೂರ್ಣಿಮೆಯಂದು ಬೌದ್ಧರು ಮಂತ್ರಗಳನ್ನು ಪಠಿಸುತ್ತಾರೆ, ಹೂವುಗಳನ್ನು ಅರ್ಪಿಸುತ್ತಾರೆ ಮತ್ತು ಧೂಪವನ್ನು ಬೆಳಗಿಸುತ್ತಾರೆ. ದೇವಾಲಯಗಳಿಗೆ ಹೋಗಿ ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಬುದ್ಧ ಪೂರ್ಣಿಮೆಯ ಮಹತ್ವ
ಗೌತಮ ಬುದ್ಧನು ಬುದ್ಧ ಪೂರ್ಣಿಮೆಯಂದು ಜ್ಞಾನೋದಯವನ್ನು ಪಡೆದನೆಂದು ನಂಬಲಾಗಿದೆ. ಬುದ್ಧನು ತನ್ನ ಜೀವನದ 45 ವರ್ಷಗಳನ್ನು ಧರ್ಮ, ಅಹಿಂಸೆ, ಸಾಮರಸ್ಯ, ಕರುಣೆ ಮತ್ತು ನಿರ್ವಾಣದ ಮಾರ್ಗವನ್ನು ಬೋಧಿಸುತ್ತಾ ಕಳೆದನು.
ಉತ್ತರ ಭಾರತದಲ್ಲಿ, ಭಗವಾನ್ ಬುದ್ಧನು ಶ್ರೀಕೃಷ್ಣನ ಒಂಬತ್ತನೇ ಅವತಾರ ಮತ್ತು ವಿಷ್ಣುವಿನ ಎಂಟನೇ ಅವತಾರ ಎಂದು ಕೆಲವರು ನಂಬುತ್ತಾರೆ. ಬುದ್ಧನು ಹೋರಾಟಗಳನ್ನು ಕೊನೆಗೊಳಿಸುವ ಮಾರ್ಗಗಳನ್ನು ಕಂಡುಹಿಡಿದಿದ್ದ. ಬಿಹಾರದ ಬೋಧಗಯಾದಲ್ಲಿ ಬೋಧಿ (ಆಲದ) ಮರದ ಕೆಳಗೆ 49 ದಿನಗಳ ಧ್ಯಾನದ ನಂತರ ಜ್ಞಾನೋದಯವನ್ನು ಪಡೆಯುತ್ತಾನೆ ಎಂದು ಇತಿಹಾಸ ಹೇಳುತ್ತದೆ.
ಬೌದ್ಧಧರ್ಮದ ಮೂರು ಪ್ರಮುಖ ತತ್ವಗಳಾದ ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನ. ಈ ಐತಿಹಾಸಿಕ ಸಂದರ್ಭವು ಶಾಂತಿ ಮತ್ತು ಸಾಮರಸ್ಯವನ್ನು ಹರಡುವ ಬುದ್ಧ ತತ್ವಗಳನ್ನು ಸ್ಮರಿಸುತ್ತದೆ.
ಬುದ್ಧ ಪೂರ್ಣಿಮೆಯ ಶುಭಾಶಯ ಸಂದೇಶಗಳು
- ಭಗವಾನ್ ಬುದ್ಧನು ನಿಮಗೆ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ದಯಪಾಲಿಸಲಿ. ಬುದ್ಧ ಪೂರ್ಣಿಮೆಯ ಶುಭಾಶಯಗಳು.
- ಈ ಶುಭ ದಿನದಂದು ನೀವು ಜ್ಞಾನೋದಯ ಮತ್ತು ಶಾಶ್ವತ ಆನಂದದ ಮಾರ್ಗವನ್ನು ಕಂಡುಕೊಳ್ಳಿ. ಬುದ್ಧ ಪೂರ್ಣಿಮೆಯ ಶುಭಾಶಯಗಳು
- ಬುದ್ಧ ಪೂರ್ಣಿಮೆಯ ನಿಮ್ಮ ಹೃದಯ, ಬದುಕಿನಲ್ಲಿ ಶಾಂತಿಯನ್ನು ತುಂಬಲಿ. ಬುದ್ಧ ಜಯಂತಿಯ ಶುಭಾಶಯಗಳು.
- ಗೌತಮ ಬುದ್ಧ ತೋರಿಸಿದಂತೆ ಬುದ್ಧಿವಂತಿಕೆ, ಕರುಣೆ ಮತ್ತು ಸಾವಧಾನತೆಯ ಹಾದಿಯಲ್ಲಿ ನಡೆಯೋಣ. 2025 ರ ಬುದ್ಧ ಪೂರ್ಣಿಮೆಯ ಶುಭಾಶಯಗಳು.
- ಈ ಪವಿತ್ರ ದಿನದಂದು, ಬುದ್ಧನ ಬೆಳಕು ನಿಮ್ಮ ಹೃದಯದಲ್ಲಿ ಬೆಳಗಲಿ. ಸಾಮರಸ್ಯ ಮತ್ತು ಸಂತೋಷದ ಬದುಕು ನಿಮ್ಮದಾಗಲಿ.
- ಬುದ್ಧ ಜಯಂತಿಯ ಹುಣ್ಣಿಮೆಯು ನಿಮ್ಮ ಜೀವನದಲ್ಲಿ ಶಾಂತಿಯನ್ನು ತಂದು ಜಾಗೃತಿಯ ಹಾದಿಯನ್ನು ಬೆಳಗಿಸಲಿ. ಬುದ್ಧ ಪೂರ್ಣಿಮೆಯ ಶುಭಾಶಯ
ಇದನ್ನೂ ಓದಿ: ಜ್ಞಾನದಲ್ಲಿನ ಸ್ವಾರ್ಥವು ಬದುಕನ್ನು ಕಸಿಯುತ್ತದೆ; ಜ್ಞಾನ ಸಂಪಾದನೆಯ ಕುರಿತು ಗೌತಮ ಬುದ್ಧನ ಅಮೂಲ್ಯ ಸಂದೇಶ