ಕಟಕ ರಾಶಿ ಭವಿಷ್ಯ 2025: ಪರಿಚಯಸ್ಥರ ನೆರವಿನಿಂದ ಅವಿವಾಹಿತರಿಗೆ ಮದುವೆ ನಿಶ್ಚಯ, ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ
Cancer Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಕಟಕ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಕಟಕ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಕಟಕ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಮತ್ತೊಬ್ಬರ ಮನಸ್ಸಿಗೆ ನೋವುಂಟುಮಾಡಬೇಡಿ
ಕಟಕ ರಾಶಿಯವರು ದೈಹಿಕವಾಗಿ ದುರ್ಬಲರಾಗಿರುತ್ತಾರೆ. ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ತಾವು ತೆಗೆದುಕೊಳ್ಳುವ ತೀರ್ಮಾನಗಳು ಮತ್ತು ಬಾಳಿನ ನೀತಿ ಸರಿ ಎಂಬ ಭಾವನೆ, ಇವರನ್ನು ಸೋಲಿನ ದವಡೆಗೆ ನೂಕಬಹುದು. ಸಾಧ್ಯವಾದಷ್ಟು ಬೇರೆಯವರ ಮನಸ್ಸನ್ನು ಅರಿತು ನಡೆಯುವುದು ಉತ್ತಮ ಮಾರ್ಗ. ನೀವು ಆಡುವ ಮಾತುಗಳು ಬೇರೆಯವರ ಮನಸ್ಸಿಗೆ ನೋವನ್ನುಉಂಟು ಮಾಡಬಹುದು.
ಧಾರ್ಮಿಕ ಕೆಲಸ ಕಾರ್ಯಗಳನ್ನು ನಡೆಸುವಲ್ಲಿ ಮುಂದಾಳತ್ವ ವಹಿಸುವಿರಿ. ನಿಮ್ಮ ಕಷ್ಟಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಮನದ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಿಂದೆ ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಡುವಿರಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಆದಾಯವಿದ್ದರೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಆತ್ಮೀಯರಿಗೆ ಮತ್ತು ಬಂಧು ಬಳಗದವರಿಗೆ ಅನಿವಾರ್ಯವಾಗಿ ಹಣದ ಸಹಾಯ ಮಾಡುವಿರಿ. ನಿಮ್ಮ ಕಷ್ಟದ ಕೆಲಸ ಕಾರ್ಯಗಳ ಪ್ರತಿಫಲವು ಬೇರೆಯವರಿಗೆ ದೊರೆಯಲಿದೆ. ಇದರಿಂದಾಗಿ ಯಾವುದೇ ಕೆಲಸ ಕಾರ್ಯವಾದರೂ ಪೂರ್ಣವಾದ ಮನಸ್ಸಿನಿಂದ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಇದರಿಂದಾಗಿ ಸಂತಸ ಮತ್ತು ನೆಮ್ಮದಿಯ ಜೀವನ ನಡೆಸುವಿರಿ. ಬೇಡದ ವಿಚಾರಗಳಿಗೆ ಸಮಯ ವ್ಯರ್ಥ ಮಾಡುವಿರಿ.
ಸಾಯು ಸೆಳೆತದ ತೊಂದರೆ ಕಾಡಲಿದೆ
ದುರಾಸೆಯ ಗುಣವಿರುವುದಿಲ್ಲ. ಇದರಿಂದಾಗಿ ನಿಮ್ಮಿಂದ ಆತ್ಮೀಯರ ಪ್ರೀತಿ ವಿಶ್ವಾಸ ಗಳಿಸುವಿರಿ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಒಳ್ಳೆಯದು. ನಿಮ್ಮ ಮನಸ್ಸಿನ ಆಸೆಯಂತೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಮನೆಯಲ್ಲಿನ ಜವಾಬ್ದಾರಿಗಳಿಂದ ದೂರ ಉಳಿಯಲು ಬಯಸುವಿರಿ. ಮನಸ್ಸಿನ ಮೇಲೆ ಹತೋಟಿ ಸಾಧಿಸಲಾಗುವುದಿಲ್ಲ. ಬೇರೆಯವರ ತೀರ್ಮಾನಗಳನ್ನು ಒಪ್ಪುವುದಿಲ್ಲ. ಸ್ನಾಯು ಸೆಳೆತದ ತೊಂದರೆ ನಿಮ್ಮನ್ನು ಕಾಡುತ್ತದೆ. ನಿರುದ್ಯೋಗಿಗಳಾಗಿದ್ದಲ್ಲಿ ದೊರವ ಅವಕಾಶವನ್ನುಉಪಯೋಗಿಸಿಕೊಳ್ಳಲು ವಿಫಲರಾಗುವಿರಿ. ಹಣದ ಕೊರತೆ ಇದ್ದರೂ ಮತ್ತೊಬ್ಬರ ಬಳಿ ಹೇಳಿಕೊಳ್ಳುವುದಿಲ್ಲ. ಮನೆತನಕ್ಕೆ ಸಂಬಂಧಪಟ್ಟ ಹಣ ಅಥವಾ ಆಸ್ತಿಯಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಗುರು ಹಿರಿಯರ ಸಲಹೆ ಪಾಲಿಸಿದರೆ ಜೀವನ ಸುಂದರವಾಗಿರುತ್ತದೆ.
ಗೃಹ ನಿರ್ಮಾಣದ ಕಾರ್ಯ ನಿಧಾನವಾಗಿ ಸಾಗುತ್ತದೆ. ಹೆಣ್ಣು ಮಕ್ಕಳ ಜೀವನದಲ್ಲಿ ಅದ್ಭುತವಾದ ವಿಚಾರಗಳು ನಡೆಯಲಿವೆ. ಅವರಿಗೆ ಉದ್ಯೋಗದಲ್ಲಿ ಉನ್ನತ ಪ್ರಗತಿ ದೊರೆಯುತ್ತದೆ. ಅವಿವಾಹಿತರಿಗೆ ಪರಿಚಯಸ್ಥರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಮಕ್ಕಳ ವಿಚಾರದಲ್ಲಿ ದಂಪತಿ ನಡುವೆ ವಾದ ವಿವಾದ ಉಂಟಾಗಬಹುದು. ಅನಗತ್ಯವಾಗಿ ಉದ್ಯೋಗ ಬದಲಿಸುವ ನಿರ್ಧಾರಕ್ಕೆ ಬರುವಿರಿ. ಹಣದ ಕೊರತೆಯಿಂದ ಹೊರ ಬರಲು ಬಿಡುವಿನ ವೇಳೆಯಲ್ಲಿ ಮತ್ತೊಂದು ಉದ್ಯೋಗಕ್ಕೆ ಸೇರುವ ಸಾಧ್ಯತೆಗಳಿವೆ. ಸೇವಾ ಸೌಲಭ್ಯ ಒದಗಿಸುವ ಉದ್ಯೋಗದಿಂದ ಕೇವಲ ಆದಾಯವಲ್ಲದೆ ಉನ್ನತ ಗೌರವೂ ದೊರೆಯುತ್ತದೆ. ವಿವಾಹಿತರ ಜೀವನದಲ್ಲಿ ಶುಭ ಘಟನೆಗಳು ನಡೆಯಲಿವೆ. ಕೌಟುಂಬಿಕ ಜೀವನದಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕೌಟುಂಬಿಕ ವಿವಾಹಗಳಿದ್ದಲ್ಲಿ ಮಾತುಕತೆಯಿಂದ ಸುಖಾಂತ್ಯಗೊಳ್ಳುತ್ತದೆ. ವ್ಯಾಪಾರ ವ್ಯವಹಾರಗಳಿದ್ದಲ್ಲಿ ಉತ್ತಮ ಆದಾಯ ಇರಲಿದೆ. ಎದುರಾಗುವ ಬದಲಾವಣೆಗಳಿಗೆ ಹೊಂದಿಕೊಂಡು ನಡೆಯಬೇಕಾಗುತ್ತದೆ.
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಹಣಕಾಸಿನ ವ್ಯವಹಾರವಿದ್ದಲ್ಲಿ ಎಚ್ಚರಿಕೆಯಿಂದ ಇರಬೇಕು. ಪ್ರಯತ್ನ ಪಟ್ಟಲ್ಲಿ ಕುಟುಂಬದವರ ಜೊತೆಗೆ ವಿದೇಶ ಅಥವಾ ದೂರದ ಊರಿಗೆ ಪ್ರವಾಸಕ್ಕೆ ತೆರಳಬಹುದು. ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿಯೋಗವಿದೆ. ಆದರೆ ಅವರ ಆರೋಗ್ಯದಲ್ಲಿಏರಿಳಿತವಿರುತ್ತದೆ. ರಕ್ತಕ್ಕೆ ಸಂಬಂಧಿಸಿದ ದೋಷ ಎದುರಾಗುತ್ತದೆ. ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗೆ ವಿಶಿಷ್ಟ ಗೌರವ ಮತ್ತು ಪ್ರತಿಷ್ಠಿತ ಸ್ಥಾನಮಾನ ದೊರೆಯುತ್ತದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡು ಶಾಂತಿ ಸಂಯಮದಿಂದ ನಡೆದುಕೊಳ್ಳುವುದು ಒಳ್ಳೆಯದು. ಸಾರಿಗೆ ವ್ಯವಸ್ಥೆ ಕಲ್ಪಿಸುವವರಿಗೆ ಉತ್ತಮ ಆದಾಯ ಇರುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯತೆ ಇದೆ. ವಯೋವೃದ್ದರ ಆದಾಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಮಾನಸಿಕ ನೆಮ್ಮದಿಯ ಕೊರತೆ ಇರಲಿದೆ. ತಮಗಿಂತಲೂ ಕಿರಿವಯಸ್ಸಿನವರ ಜೊತೆ ಹೊಂದಾಣಿಕೆ ಇರುವುದಿಲ್ಲ. ತಮ್ಮ ಸ್ವಂತ ಸಂಪಾದನೆಯಲ್ಲಿ ಸುಖ ಜೀವನ ನಡೆಸುತ್ತಾರೆ. ಹಣಕ್ಕಾಗಲಿ ಅಥವಾ ಯಾವುದೇ ಅನುಕೂಲತೆಗಾಗಿ ಬೇರೆಯವರನ್ನು ಅವಲಂಬಿಸುವುದಿಲ್ಲ. ನಮ್ಮಲ್ಲಿರುವ ಬುದ್ದಿವಂತಿಕೆಯನ್ನು ಬಂಡವಾಳವನ್ನಾಗಿ ಉಪಯೋಗಿಸಿಕೊಂಡು ಬಾಳುತ್ತಾರೆ. ಆದರೆ ಮಕ್ಕಳಿಗೆ ಇವರ ಬಗ್ಗೆ ಪ್ರೀತಿ ವಿಶ್ವಾಸ ಹೆಚ್ಚಾಗಿಯೇ ಇರುತ್ತದೆ. ಒಟ್ಟಾರೆ ಎಲ್ಲರೊಂದಿಗೆ ಹೊಂದಿಕೊಂಡು ಬಾಳಬೇಕಾದ ಅವಶ್ಯಕತೆ ನಿಮಗಿದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).