ಮಕರ ರಾಶಿ ಭವಿಷ್ಯ 2025: ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ, ಜೂನ್ ತಿಂಗಳ ಮುನ್ನ ಮದುವೆ ನಿಶ್ಚಯವಾಗಲಿದೆ
Capricorn Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಮಕರ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಮಕರ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಮಕರ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಅನಿವಾರ್ಯವಿದ್ದರೂ ಮತ್ತೊಬ್ಬರಿಂದ ಸಹಾಯ ಕೇಳಲು ಹಿಂಜರಿಯುವ ವ್ಯಕ್ತಿತ್ವದವರು
ಪ್ರೀತಿ ವಿಶ್ವಾಸದಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಸುತ್ತಮುತ್ತ ನಿನ್ನ ಜನರು ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಆತುರದ ನಿರ್ಧಾರ ತೆಗೆದುಕೊಂಡರೂ ಸರಿ ದಾರಿಯಲ್ಲಿ ನಡೆಯುವಿರಿ. ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಯಾರ ಮೇಲೂ ಹೇರುವುದಿಲ್ಲ. ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಆರೋಗ್ಯ ಚೆನ್ನಾಗಿರಲಿದೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಪೂರ್ಣಗೊಳಿಸುವಿರಿ. ಎದುರಾಗುವ ಅಡ್ಡಿ ಆತಂಕಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬೇರೆಯವರನ್ನು ನಂಬಿಕೊಂಡು ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸ್ವಾರ್ಥದ ಭಾವನೆ ನಿಮ್ಮಲ್ಲಿ ಇರುವುದಿಲ್ಲ. ಪರೋಪಕಾರದ ಗುಣ ಎಲ್ಲರ ಮನಸೆಳೆಯುತ್ತದೆ.
ನಿಮ್ಮ ಆತ್ಮೀಯರಿಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿ ಕೊಡುವಿರಿ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಿಮಗೆ ಸಂಬಂಧಿಸಿದ ವಿಚಾರದಲ್ಲಿ ಆಸಕ್ತಿ ಇರುವುದಿಲ್ಲ. ಮಕ್ಕಳ ಮನಸ್ಸನ್ನು ಅರಿತು ನಡೆದುಕೊಳ್ಳುವಿರಿ. ನೀವಿದ್ದ ಕಡೆ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ಬೇರೆಯವರಿಗೆ ಹಣದ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲೂ ಬೇರೆಯವರಿಂದ ಸಹಾಯ ನಿರೀಕ್ಷಿಸುವುದಿಲ್ಲ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಕೈಕಾಲು ನೋವು ಉಂಟಾಗಬಹುದು.
ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಯಶಸ್ಸು
ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸು ಗಳಿಸುತ್ತಾರೆ. ಕೋಪವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಒಳ್ಳಯದು. ನಿಮ್ಮ ಕೆಲಸ ಕಾರ್ಯಗಳಿಗೆ ಸಮರ್ಪಕವಾದ ಫಲಗಳು ದೊರೆಯುತ್ತವೆ. ಕುಟುಂಬದ ಸದಸ್ಯರನ್ನು ಗೌರವಿಸುವಿರಿ. ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ಸಿನ ಪಯಣವನ್ನು ಮುಂದುವರಿಸುವಿರಿ. ಬೇರೆಯವರ ಒತ್ತಡಕ್ಕೆ ಸುಲಭವಾಗಿ ಮಣಿಯುವುದಿಲ್ಲ. ಕೆಲವೊಮ್ಮೆ ನಿಮ್ಮದೇ ಆದ ತಪ್ಪಿಗೆ ದಂಡ ತರಬೇಕಾಗುತ್ತದೆ. ದಾಂಪತ್ಯ ಜೀವನದಲ್ಲಿನ ಕಷ್ಟಗಳು ಕ್ರಮೇಣ ದೂರವಾಗುತ್ತವೆ. ಸಮಾಜಕ್ಕೆ ಸಂಬಂಧಿಸಿದ ಒಳ್ಳೆಯ ಕೆಲಸಗಳನ್ನು ಮಾಡುವಿರಿ. ಜೂನ್ ತಿಂಗಳ ಮುನ್ನ ಮದುವೆ ನಿಶ್ಚಯವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳುವಿರಿ. ಪೂರ್ವ ನಿಯೋಜಿತ ಪ್ರಯಾಣವನ್ನು ಕೈ ಬಿಡುವಿರಿ. ದಾಂಪತ್ಯ ಜೀವನದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು.
ಉದ್ಯೋಗದಲ್ಲಿ ಯಾವುದೇ ಅಡಚಣೆಗಳು ಇರುವುದಿಲ್ಲ. ಆದರೆ ವಿಧಿ ಇಲ್ಲದೆ ಬೇರೆಯವರು ಮಾಡಬೇಕಾದ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಶೀತದ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಉತ್ತಮ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಶಾಂತರಾಗಿ ಕಂಡರೂ ಕೋಪ ಬಂದಾಗ ಉದ್ವೇಗದಿಂದ ವರ್ತಿಸುವಿರಿ. ಕುಟುಂಬದವರೊಂದಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಮಹಿಳಾ ಉದ್ಯೋಗಿಗಳಿಗೆ ಉನ್ನತ ಅಧಿಕಾರ ದೊರೆಯುವ ಸಾಧ್ಯತೆಗಳಿವೆ. ಆರ್ಥಿಕ ಪ್ರಗತಿ ಇರುವ ಕಾರಣ ನೆಮ್ಮದಿಯಿಂದ ಬಾಳುವಿರಿ. ನಿಮ್ಮ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಲಭಿಸುತ್ತದೆ. ಸೋದರ ಮಾವನ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಬಹುದು.
ಜಮೀನು ಕೊಳ್ಳುವ ವಿಚಾರದಲ್ಲಿ ಎಚ್ಚರ
ಹೆಚ್ಚಿನ ನಿರೀಕ್ಷೆಯಿಂದ ಉದ್ಯೋಗವನ್ನು ಬದಲಿಸುವಿರಿ. ಅತಿಯಾದ ಆಸೆಯಾಗಲಿ ಹಟವಾಗಲಿ ಇರುವುದಿಲ್ಲ. ಹೊಸ ಜಮೀನು ಅಥವಾ ಮನೆಯನ್ನು ಕೊಳ್ಳುವ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ. ಕುಟುಂಬದ ಹಿರಿಯರ ಮನಸ್ಸು ಗೆಲ್ಲುವಿರಿ. ಅವರಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ನಿಮ್ಮದಾಗುತ್ತದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ. ನಿಮಗೆ ಸಂಬಂಧಿಸದ ವಿಚಾರಗಳಿಂದ ದೂರ ಉಳಿಯುವಿರಿ. ದಂಪತಿ ನಡುವಿನ ಮನಸ್ತಾಪಕ್ಕೆ ಸಂಧಾನದಿಂದ ಪರಿಹಾರವನ್ನು ಕಂಡುಹಿಡಿಯುವಿರಿ. ಪಾಲುದಾರಿಕೆ ವ್ಯಾಪಾರದಲ್ಲಿ ಮಧ್ಯಮ ಗತಿಯ ವರಮಾನ ದೊರೆಯಲಿದೆ. ಸೋಲಿನ ಭಯದಲ್ಲಿ ತಪ್ಪು ಮಾಡುವ ಸಾಧ್ಯತೆಗಳಿವೆ. ಮಕ್ಕಳ ಅಥವಾ ಕುಟುಂಬದ ಸದಸ್ಯರನ್ನು ಅವಲಂಬಿಸದೆ ಸ್ವತಂತ್ರವಾದ ಜೀವನ ನಡೆಸುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).