ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Capricorn Sign: 2 ವರ್ಷಗಳ ನಂತರ ಮಕರ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ; ದುರ್ಗೆಯ ಆರಾಧನೆಯಿಂದ ನಿರೀಕ್ಷೆಗೂ ಮೀರಿದ ಶುಭಫಲ

Capricorn Sign: 2 ವರ್ಷಗಳ ನಂತರ ಮಕರ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ; ದುರ್ಗೆಯ ಆರಾಧನೆಯಿಂದ ನಿರೀಕ್ಷೆಗೂ ಮೀರಿದ ಶುಭಫಲ

Capricorn Sign: ಗ್ರಹಗಳ ರಾಶಿ ಬದಲಾವಣೆಯಿಂದ ದ್ವಾದಶ ರಾಶಿಗಳು ಶುಭ, ಅಶುಭ, ಮಿಶ್ರ ಫಲಗಳನ್ನು ಅನುಭವಿಸುತ್ತಾರೆ. ಸಾಡೇ ಸಾತಿ ಇದ್ದಲ್ಲಿ 7 ವರ್ಷಗಳ ಕಾಲ ಶನಿಯಿಂದ ಬಾಧೆಗೆ ಒಳಗಾಗುತ್ತಾರೆ. 2 ವರ್ಷಗಳಿಂದ ಒಂದಲ್ಲಾ ಒಂದು ಸಮಸ್ಯೆ ಅನುಭವಿಸುತ್ತಿದ್ದ ಮಕರ ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ.

2 ವರ್ಷಗಳ ನಂತರ ಮಕರ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ
2 ವರ್ಷಗಳ ನಂತರ ಮಕರ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಮಕರ ರಾಶಿ: ಕಳೆದ 2 ವರ್ಷಗಳಲ್ಲಿ ಕಷ್ಟಪಟ್ಟು ದುಡಿದರೂ ಉತ್ತಮ ಪ್ರತಿಫಲವಿಲ್ಲದೆ, ಮೆಚ್ಚುಗೆಯ ಮಾತುಗಳಿಲ್ಲದೆ ಬೇಸರಗೊಂಡಿದ್ದ ಮಕರ ರಾಶಿಯವರಿಗೆ ಮೇ 1ರಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಇಲ್ಲಿಯವರೆಗೂ ಕಷ್ಟಪಟ್ಟು ದುಡಿದರೂ ಆ ಹೆಸರು ಪರರ ಪಾಲಾಗುತ್ತಿತ್ತು. ಆದರೆ ಇನ್ನು ಮುಂದೆ ಸಮಾಜದಲ್ಲಿ ಒಳ್ಳೆಯ ಹೆಸರು, ಕೀರ್ತಿ, ಪ್ರತಿಷ್ಠೆ ದೊರೆಯುತ್ತವೆ. ರಾಶಿಯ ಅಧಿಪತಿಯಾದ ಶನಿಯು ಕುಂಭದಲ್ಲಿ, ರಾಹುವು ಮೀನದಲ್ಲಿ ಮತ್ತು ವೃಷಭದಲ್ಲಿ ಗುರು ಇರುವ ಕಾರಣ ಅನಿರೀಕ್ಷಿತ ಫಲಗಳು ದೊರಕುತ್ತವೆ.

ಜನ್ಮ ಕುಂಡಲಿಯ ಅನುಸಾರವಾಗಿ ಪ್ರಸಕ್ತ ಸಮಯದಲ್ಲಿ ಶುಭ ದಶಾಭುಕ್ತಿಗಳು ಇದ್ದಲ್ಲಿ ಶುಭಫಲಗಳು ಅಧಿಕವಾಗಿರುತ್ತದೆ. ಇಲ್ಲವಾದಲ್ಲಿ ಸಾಧಾರಣ ಫಲಗಳು ದೊರೆಯುತ್ತವೆ. ತಮ್ಮ ಕುಲದೇವರ ಪೂಜೆಯ ಜೊತೆ ಶ್ರೀ ಆಂಜನೇಯ, ಶ್ರೀ ದುರ್ಗಾ ಮತ್ತು ಗುರುಗಳ ಆರಾಧನೆಯಿಂದ ನಿರೀಕ್ಷೆಗೂ ಹೆಚ್ಚಿದ ಶುಭಫಲಗಳನ್ನು ಪಡೆಯಬಹುದು.

ಅತಿಯಾಗಿ ಮಾತನಾಡುವ ಸ್ವಭಾವ

ಮಕರ ರಾಶಿಯಲ್ಲಿ ಜನಿಸಿದವರಿಗೆ ಅತಿಯಾಗಿ ಮಾತನಾಡುವ ಸ್ವಭಾವ ಇರುತ್ತದೆ. ಆದರೆ ಅತಿಯಾದ ಕರ್ತವ್ಯ ಪ್ರಜ್ಞೆ ಇರುವ ಕಾರಣ ಯಾರ ಆದೇಶ ಇರದೇ ಹೋದರೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಯಾವುದೇ ಕಷ್ಠಕರ ಜವಾಬ್ದಾರಿಯನ್ನು ಸುಲಭವಾಗಿ ಪೂರ್ಣಗೊಳಿಸುವರು. ಇವರ ನಿರೀಕ್ಷೆ ಎಂದರೆ ಕೇವಲ ಹೊಗಳಿಕೆಯ ಮಾತುಗಳು. ಇವರು ಮಾಡುವ ಕೆಲಸಗಳಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ ವ್ಯಕ್ತವಾಗುತ್ತದೆ. 

ಸರಳ ರೀತಿಯ ಕೆಲಸ ಕಾರ್ಯಗಳಾದರೂ ಕುಟುಂಬದವರ ಮತ್ತು ಆತ್ಮೀಯರ ಸಹಾಯ ದೊರೆಯುತ್ತದೆ. ಕುಂಭದಲ್ಲಿ ಶನಿ ಇರುವ ಕಾರಣ ಕೈ ಹಿಡಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಅದರ ಬಗ್ಗೆ ಅನಾವಶ್ಯಕವಾಗಿ ಚರ್ಚಿಸುವುದಿಲ್ಲ. ಇವರು ಆಡುವ ಮಾತುಗಳು ಸುಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಮಾತಿನ ಬರದಲ್ಲಿ ಮನದಲ್ಲಿರುವ ಆಂತರಿಕ ವಿಚಾರಗಳನ್ನೆಲ್ಲಾ ಎಲ್ಲರಿಗೂ ತಿಳಿಸಿಬಿಡುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಯಾವುದೇ ತೊಂದರೆ ಕಂಡು ಬರದು.

ಮೌನವಾಗಿ ಇರುವವರು ಮಾತನಾಡಲು ಆರಂಭಿಸಿದರೆ ಅದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಕೆಲವೊಮ್ಮೆ ಅನಾವಶ್ಯಕವಾಗಿ ಮಾತನಾಡುವ ಗುಣವೇ ತೊಂದರೆ ನೀಡುತ್ತದೆ ತಡವಾದರೂ ಉತ್ತಮ ಆದಾಯ ದೊರೆಯುತ್ತದೆ ಹಿರಿಯ ಸೋದರ ಅಥವಾ ಸೋದರಿಯ ಉತ್ತಮವಾದ ಅನುಬಂಧ ಇರುತ್ತದೆ ಸ್ವಾರ್ಥಿಗಳಲ್ಲದಿದ್ದರೂ ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.

ಅನಿರೀಕ್ಷಿತ ಧನಲಾಭದಿಂದ ಸಂತೋಷ

ರಾಹುವು ಮೀನದಲ್ಲಿ ಇರುವ ಕಾರಣ ಇವರಲ್ಲಿ ಅಪಾರ ಆತ್ಮವಿಶ್ವಾಸ ಮತ್ತು ಧೈರ್ಯವಿರುತ್ತದೆ. ಇವರು ಅನೇಕರಿಗೆ ಉತ್ತಮ ಮಾದರಿಯಾಗುತ್ತಾರೆ. ಅನಿರೀಕ್ಷಿತ ಧನಲಾಭವು ಸಂತೋಷವನ್ನು ನೀಡುತ್ತಾರೆ. ದೂರದಸ್ನೇಹಿತರು ಅಥವಾ ಸಂಬಂಧಿಕರ ಜೊತೆಯಲ್ಲಿ ಕೆಲಸ ಕಾರ್ಯಗಳು ಅಥವಾ ವ್ಯಾಪಾರ ವ್ಯವಹಾರಗಳನ್ನು ಮಾಡಬೇಕಾಗುತ್ತದೆ. ಸೋಲುವ ಸಂದರ್ಭದಲ್ಲಿ ಗೆಲುವು ಇವರದಾಗುತ್ತದೆ. ವಿದೇಶಕ್ಕೆ ತೆರಳುವ ಗುರಿ ಇದ್ದವರು ಈ ಬಾರಿ ಅಪೂರ್ವ ಅವಕಾಶ ಪಡೆಯುತ್ತಾರೆ. 

ಯಾವುದಾದರೂ ಕೆಲಸ ಕಾರ್ಯಗಳು ನಡೆಯದೇ ಹೋದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸೋದರ ಅಥವಾ ಸೋದರಿಯರಿಂದ ಮಾನಸಿಕ ಒತ್ತಡವಿರುತ್ತದೆ. ಮನಸ್ಸಿಲ್ಲದೇ ಹೋದರು ತಮ್ಮ ಸ್ವಂತ ಕೆಲಸದ ನಡುವೆ ಬೇರೆಯವರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಇವರ ಸಾಹಸದ ಗುಣ ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ. ಸಾಹಸ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆತು ಜೀವನದ ಮಟ್ಟವು ಹೆಚ್ಚುತ್ತದೆ.

ಗುರುವು ವೃಷಭ ರಾಶಿಯಲ್ಲಿ ಇರುವ ಕಾರಣ ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಇಲ್ಲಿಯವರೆಗೂ ಆಸಕ್ತಿಯನ್ನೇ ತೋರದಿದ್ದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪಲಿದ್ದಾರೆ. ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ . ವಿದ್ಯಾರ್ಥಿಗಳಾಗಿದ್ದಾಗಲೇ ಇವರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಲವು ಧಾರ್ಮಿಕ ಕೆಲಸ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಾರೆ. ತಂದೆಯ ಆರೋಗ್ಯದಲ್ಲಿ ದೊಡ್ಡ ಮಟ್ಟದ ಚೇತರಿಕೆ ಕಂಡು ಬರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲು ತಂದೆಯ ಸಹಾಯ ಸಹಕಾರ ಲಭಿಸುತ್ತದೆ. ಅನಿರೀಕ್ಷಿತವಾಗಿ ನಿರೀಕ್ಷಿಸಿದ ಮಟ್ಟದಲ್ಲಿ ಮಟ್ಟದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ ವಿಚಾರವು ಪರಿಹಾರಗೊಳ್ಳುತ್ತದೆ. ಬೇರೆಯವರ ಮಾತನ್ನು ನಂಬದೇ ಸ್ವಂತ ಪ್ರತಿಭೆಯನ್ನು ಅವಲಂಬಿಸಿರುವ ಕಾರಣ ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ಮಕ್ಕಳ ವಿಚಾರದಲ್ಲಿ ಸಂತಸ ಪಡುವಂತ ಪ್ರಗತಿ ಕಂಡುಬರುತ್ತದೆ. ಒಟ್ಟಾರೆ ಮಕರ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರು ಸುಖ ಸಂತೋಷದ ಜೀವನ ನಡೆಸುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).