ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆಯೇ, ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿದ್ದೀರಾ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆಯೇ, ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿದ್ದೀರಾ

ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆಯೇ, ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿದ್ದೀರಾ

Career and Astrology: ಮನುಷ್ಯ ಬದುಕು ಎಂದು ಬಂದಾಗ ವೈಯಕ್ತಿಕ ಬದುಕಿನಷ್ಟೇ ಮುಖ್ಯ ವೃತ್ತಿ ಬದುಕು ಕೂಡ. ಬಹುತೇಕರಿಗೆ ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆ ಸಹಜ. ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿದ್ದೀರಾ, ಅದನ್ನು ವಿವರಿಸಿದ್ದಾರೆ ಹಿರಿಯ ಜ್ಯೋತಿಷಿಗಳಾದ ಬೆಂಗಳೂರಿನ ಎಚ್ ಸತೀಶ್‌.

ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆಯೇ, ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿರುವುದು ಒಳಿತು. ಆ ಮಾಹಿತಿ ಇಲ್ಲಿದೆ. (ಸಾಂಕೇತಿಕ ಚಿತ್ರ)
ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಕಷ್ಟ, ಕಿರಿಕಿರಿ ಯಾಕೆಂಬ ಚಿಂತೆಯೇ, ರಾಶಿಚಕ್ರಗಳ ಮೇಲೆ ನವಗ್ರಹಗಳ ಪ್ರಭಾವದ ಬಗ್ಗೆ ತಿಳ್ಕೊಂಡಿರುವುದು ಒಳಿತು. ಆ ಮಾಹಿತಿ ಇಲ್ಲಿದೆ. (ಸಾಂಕೇತಿಕ ಚಿತ್ರ) (canva)

Career and Astrology: ಉದ್ಯೋಗದಲ್ಲಿ ಪ್ರತಿಯೊಬ್ಬರಿಗೂ ಒಂದು ಕೊರತೆ ಕಾಡಬಹುದು. ಈ ವಿಚಾರದಲ್ಲಿ ನವಗ್ರಹಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಧರ್ಮ ಕರ್ಮ ಎಂಬ ಆಡು ಮಾತಿದೆ. ಈ ಮಾತು ಪ್ರತಿಯೊಂದು ವಿಚಾರಕ್ಕೂ ಸಂಬಂಧ ಪಡುತ್ತದೆ. ಧರ್ಮ ಎಂದರೆ ನವಮ ಭಾವವನ್ನು ಸೂಚಿಸುತ್ತದೆ. ಕರ್ಮ ಎಂದರೆ ದಶಮ ಭಾವವನ್ನು ಸೂಚಿಸುತ್ತದೆ. ಇದರ ಅರ್ಥ ನಮಗೆ ದೊರೆಯುವ ಫಲಾಫಲಗಳು ದೇವಾರಾಧನೆ ಮತ್ತು ಇನ್ನಿತರ ಧಾರ್ಮಿಕ ವಿಧಿಗಳನ್ನು ಅವಲಂಬಿಸುತ್ತದೆ. ರಾಹು ಮತ್ತು ಕೇತುಗಳು ಉದ್ಯೋಗದ ಮೇಲೆ ಪ್ರಭಾವವನ್ನು ಬೀರಿದರೆ, ಉಳಿದ ಗ್ರಹಗಳು ನೇರವಾದ ಫಲಗಳನ್ನು ನೀಡುತ್ತದೆ. ಇದರ ಜೊತೆಯಲ್ಲಿ ಕರ್ಮಕಾರಕನಾದ ಶನಿದೇವನ ಬಲಾಬಲಗಳನ್ನು ವಿಶ್ಲೇಷಿಸಬೇಕು ಎಂದು ಉದ್ಯೋಗದಲ್ಲಿ ನವಗ್ರಹಗಳ ಪಾತ್ರವನ್ನು ಹಿರಿಯ ಜ್ಯೋತಿಷಿ ಎಚ್‌. ಸತೀಶ್ ವಿವರಿಸಿದ್ದಾರೆ.

ಉದ್ಯೋಗದಲ್ಲಿ ನವಗ್ರಹಗಳ ಪಾತ್ರ

1) ಉದ್ಯೋಗದಲ್ಲಿ ರವಿಯ ಪಾತ್ರ: ರವಿಯು ಕುಂಡಲಿಯಲ್ಲಿ ವೃಷಭ, ತುಲಾ, ಮಕರ ಅಥವ ಕುಂಭ ರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ರವಿಯಿಂದ ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ಹಿರಿಯ ಅಧಿಕಾರಿಗಳೊಡನೆ ಉತ್ತಮ ಬಾಂಧವ್ಯ ಇರುವುದಿಲ್ಲ. ಆತ್ಮಶಕ್ತಿಯು ಕಡಿಮೆ ಆಗಬಹುದು. ಇಂತಹ ಸಂದರ್ಭದಲ್ಲಿ ಕಪ್ಪು ಹಸುವಿಗೆ ಅಮಾವಾಸ್ಯೆಯ ದಿನ ಆಹಾರವನ್ನು ನೀಡಬೇಕು. ಅದೇ ದಿನ ಶಿವನಿಗೆ ಬಿಲ್ವಪತ್ರೆಯಿಂದ ಅಷ್ಟೋತ್ತರ ಮಾಡಿಸಬೇಕು ಇದರಿಂದ ಉದ್ಯೋಗದಲ್ಲಿ ನಿರೀಕ್ಷಿತ ಫಲಗಳನ್ನು ಪಡೆಯಬಹುದು.

2) ಉದ್ಯೋಗದಲ್ಲಿ ಚಂದ್ರನ ಪಾತ್ರ: ಚಂದ್ರನು ಕುಂಡಲಿಯಲ್ಲಿ ವೃಶ್ಚಿಕ ರಾಶಿಯಲ್ಲಿ ಸ್ಥಿತನಾಗಿದ್ದಲ್ಲಿ ಉದ್ಯೋಗದಲ್ಲಿ ಅಡಚಣೆ ಉಂಟಾಗಬಹುದು. ಮೇಷ, ಮಿಥುನ, ತುಲಾ, ಧನಸ್ಸು, ಮಕರ, ಕುಂಭ ಅಥವ ಮೀನ ರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿಗೆ ಕಾರಣವಾಗಬಹುದು. ಆದ್ದರಿಂದ ಈ ರಾಶಿಯವರು ರಾತ್ರಿಯ ವೇಳೆ ಹಾಲು ಕುಡಿಯುವುದನ್ನು ವರ್ಜಿಸಬೇಕು. ಇವರು ಹೈನು ಪದಾರ್ಥಗಳು ಮತ್ತು ಅಕ್ಕಿಯನ್ನು ಬೇರೆಯವರಿಂದ ಉಚಿತವಾಗಿ ಪಡೆಯಬಾರದು. ದುರ್ಗಾಮಾತೆಗೆ ಕ್ಷೀರಾಭಿಷೇಕ ಮಾಡಿಸುವುದರಿಂದ ಶುಭಫಲಗಳನ್ನು ಪಡೆಯಬಹುದು.

3) ಉದ್ಯೋಗದಲ್ಲಿ ಕುಜನ ಪಾತ್ರ: ಕುಜನು ಕುಂಡಲಿಯಲ್ಲಿ ವೃಷಭ, ಕನ್ಯಾ, ತುಲಾ, ಮಕರ ಅಥವಾ ಕುಂಭರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ಉದ್ಯೋಗದಲ್ಲಿ ಅಡಚಣೆ ಉಂಟಾಗಬಹುದು. ಮನದಲ್ಲಿ ಸ್ವಂತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಭಯವಿರುತ್ತದೆ. ಇಂತಹ ಸಂದರ್ಭದಲ್ಲಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ಅಥವಾ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸಿದಲ್ಲಿ ಉದ್ಯೋಗದಲ್ಲಿ ಎದುರಾಗಬಹುದಾದ ಅಡ್ಡಿಆತಂಕಗಳು ದೂರವಾಗಬಹುದು.

4) ಉದ್ಯೋಗದಲ್ಲಿ ಬುಧನ ಪಾತ್ರ: ಬುಧನು ಕುಂಡಲಿಯಲ್ಲಿ ಕಟಕ ರಾಶಿಯಲ್ಲಿ ಸ್ಥಿತನಾದಲ್ಲಿ ಉದ್ಯೋಗದಲ್ಲಿ ತೊಂದರೆ ಎದುರಾಗಬಹುದು. ಮೇಷ, ವೃಶ್ಚಿಕ, ಮಕರ ಅಥವ ಕುಂಭರಾಶಿಗಳಲ್ಲಿ ಸ್ಥಿತನಾದಲ್ಲಿ ಉದ್ಯೋಗದಲ್ಲಿನ ಜವಾಬ್ದಾರಿಗಳನ್ನು ಪೂರೈಸಲು ಹೆಚ್ಚಿನ ಅವಧಿ ಬೇಕಾಗುತ್ತದೆ. ಆದರೆ ಉತ್ತಮ ಮಾತುಕತೆಯಿಂದ ಸಹೋದ್ಯೋಗಿಗಳ ಸಹಾಯ ದೊರೆಯಬಹುದು. ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಯಿಂದ ಶುಭಫಲಗಳು ಉಂಟಾಗಬಹುದು. ತಾಯಿಯ ಸಂಬಂಧಿಕರ ಜೊತೆಯಲ್ಲಿ ಉತ್ತಮ ಬಾಂಧವ್ಯ ವೃದ್ಧಿಯಾಗಬಹುದು.

5) ಉದ್ಯೋಗದಲ್ಲಿ ಗುರುವಿನ ಪಾತ್ರ: ಗುರುವು ಕುಂಡಲಿಯಲ್ಲಿ ವೃಷಭ, ಮಿಥುನ, ಕನ್ಯಾ, ತುಲಾ ರಾಶಿಗಳಲ್ಲಿ ಸ್ಥಿತನಾದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಜ್ಞಾನದದಲ್ಲಿ ಕೊರತೆ ಕಾಡಬಹುದು. ಸಹೋದ್ಯೋಗಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ವೃತ್ತಿಕ್ಷೇತ್ರದಲ್ಲಿ ಅನಗತ್ಯ ವಾದವಿವಾದಗಳು ಉಂಟಾಗಬಹುದು. ಶ್ರೀ ದಕ್ಷಿಣಾಮೂರ್ತಿ ಸ್ತೋತ್ರದ ಪಠನದಿಂದ ಶುಭಫಲಗಳು ದೊರೆಯಬಹುದು. ವಯೋವೃದ್ದರಿಗೆ ಕಡಲೆಬೇಳೆಯಿಂದ ಮಾಡಿದ ಸಿಹಿತಿಂಡಿಯನ್ನು ನೀಡಬಹುದು. ಕುಲದೇವರ ದೇಗುಲಕ್ಕೆ ಕಡಲೆಬೇಳೆ ಮತ್ತು ಹಳದಿಬಟ್ಟೆ ನೀಡಿದಲ್ಲಿ ಶುಭಫಲಗಳೂ ದೊರೆಯಬಹುದು.

6) ಉದ್ಯೋಗದಲ್ಲಿ ಶುಕ್ರನ ಪಾತ್ರ: ಶುಕ್ರನು ಕುಂಡಲಿಯಲ್ಲಿ ಕಟಕ, ಸಿಂಹ, ಕನ್ಯಾ, ಧನಸ್ಸು, ಮತ್ತು ಮೀನರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ನಿಮಗಿಂತ ಹಿರಿಯ ವ್ಯಕ್ತಿಗಳಿಂದ ಉದ್ಯೋಗದ ವಿಚಾರದಲ್ಲಿ ಅಸಹಕಾರ ಉಂಟಾಗಬಹುದು. ಇದರಿಂದ ನಿಮ್ಮದಲ್ಲದ ತಪ್ಪಿಗೆ ತೊಂದರೆಯನ್ನು ಅನುಭವಿಸಬೇಕಾಗಬಹುದು. ಶ್ರೀಅನ್ನಪೂರ್ಣೇಶ್ವರಿ ದೇಗುಲಕ್ಕೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ನೀಡುವುದರಿಂದ ದೋಷ ಪರಿಹಾರವಾಗಬಹುದು. ಕುಟುಂಬದ ಹಿರಿಯರ ಆಶೀರ್ವಾದದಿಂದ ಶುಭವಾಗುತ್ತದೆ. ಮಹಿಳಾ ಸಹೋದ್ಯೋಗಿಗಳಿಂದ ಸಹಾಯ ದೊರೆಯಬಹುದು.

7) ಉದ್ಯೋಗದಲ್ಲಿ ಶನಿಯ ಪಾತ್ರ: ಶನಿಯು ಕುಂಡಲಿಯಲ್ಲಿ ಮೇಷ, ಕಟಕ, ಸಿಂಹ, ವೃಶ್ಚಿಕ ರಾಶಿಗಳಲ್ಲಿ ಸ್ಥಿತನಾಗಿದ್ದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಕಡಿಮೆ. ಉದ್ಯೋಗವಿದ್ದರೂ ಸಹೋದ್ಯೋಗಿಗಳ ಜೊತೆ ಅನಾವಶ್ಯಕ ವಾದ ವಿವಾದಗಳು ಉಂಟಾಗಬಹುದು. ಮಿಥುನ, ಕನ್ಯಾ, ಧನಸ್ಸು ಮತ್ತು ಮೀನ ಲಗ್ನದಲ್ಲಿ ಜನಿಸಿದ್ದಲ್ಲಿ ಪದೇಪದೆ ವೃತ್ತಿಯನ್ನು ಬದಲಿಸುವ ಸಾಧ್ಯತೆ ಇದೆ. ಮಿಥುನ ಮತ್ತು ಕನ್ಯಾರಾಶಿಯ ಲಗ್ನ ಅಥವಾ ರಾಶಿಗಳಲ್ಲಿ ಜನಿಸಿದವರು ನವಗ್ರಹ ದೇವಸ್ಥಾನಕ್ಕೆ ಕಡಲೆಬೇಳೆ ಮತ್ತು ಹಳದಿಬಣ್ಣದ ಬಟ್ಟೆಯನ್ನು ನೀಡಬೇಕು. ಧನಸ್ಸು ಮತ್ತು ಮೀನ ಲಗ್ನ ಅಥವ ರಾಶಿಗಳಲ್ಲಿ ಜನಿಸಿರುವವರು ವಿಷ್ಣುದೇಗುಲಕ್ಕೆ ಹಸಿರು ಬಟ್ಟೆ ಮತ್ತು ಹೆಸರುಕಾಳು ನೀಡಬೇಕು. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗಬಹುದು. ಇವರು ಶನಿದೇಗುಲಕ್ಕೆ ಎಳ್ಳೆಣ್ಣೆಯನ್ನು ನೀಡುವುದು ಸೂಕ್ತ.

8) ಉದ್ಯೋಗದಲ್ಲಿ ರಾಹು ಮತ್ತು ಕೇತುಗಳ ಪಾತ್ರ: ರಾಹು ಮತ್ತು ಕೇತುಗಳು ದಶಮದಲ್ಲಿ ಇದ್ದಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು. ಆದ್ದರಿಂದ ನಾಗಪ್ಪನ ಪೂಜೆ ಮಾಡುವುದು ಒಳ್ಳೆಯದು. ಪ್ರತಿದಿನ ಬೆಳಗಿನ ವೇಳೆ ನವನಾಗ ಸ್ತೋತ್ರವನ್ನು ಪಠಿಸುವುದರಿಂದ ತೊಂದರೆಗಳು ದೂರವಾಗಬಹುದು.

ಯಾವುದೇ ವಿಚಾರವನ್ನು ಅರಿಯುವ ಮೊದಲು ಗ್ರಹಗಳ ಸಂಯೋಜನೆ ಮತ್ತು ದೃಷ್ಠಿಯನ್ನು ಪರೀಕ್ಷಿಸಬೇಕು. ಯಾವುದೇ ಗ್ರಹವು ಎಷ್ಟನೇ ಮನೆ ( ಭಾವ ) ಯಲ್ಲಿ ಸ್ಥಿತನಾಗಿದ್ದನೆ ಎನ್ನುವುದಕ್ಕಿಂತತಲೂ ಅವನಿರುವ ಮನೆಯು ಆ ಗ್ರಹಕ್ಕೆ ಸ್ವಕ್ಷೇತ್ರ, ಮಿತ್ರಕ್ಷೇತ್ರ, ಸಮಕ್ಷೇತ್ರ ಅಥವ ಶತೃಕ್ಷೇತ್ರವೋ ಎಂಬುದನ್ನು ತಿಳಿದುಕೊಳ್ಳಬೇಕು. ದಶಾಭುಕ್ತಿಗಳು ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ, ಬೆಂಗಳೂರು

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.