ಬೆಕ್ಕಿನ ಶಕುನದ ಸತ್ಯ-ಮಿಥ್ಯ: ಮನೆಯಿಂದ ಹೊರಟಾಗ ಬೆಕ್ಕು ಎದುರಾದರೆ ಒಳ್ಳೆಯದೋ? ಕೆಟ್ಟದ್ದೋ? ಜನಪ್ರಿಯ ನಂಬಿಕೆಗಳು ಎಷ್ಟು ಸರಿ? ಇಲ್ಲಿದೆ ವಿವರ
ಜನ್ಮಕುಂಡಲಿಯಲ್ಲಿ ಬೆಕ್ಕನ್ನು ಚಂದ್ರ ಮತ್ತು ಶುಕ್ರನಿಂದ ಕಾಣಬಹುದು. ಚಂದ್ರನು ಮನಸ್ಸನ್ನು ಸೂಚಿಸುತ್ತಾನೆ. ಆದ್ದರಿಂದ ಜನ್ಮಕುಂಡಲಿಯಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಇದ್ದಲ್ಲಿ ನೀವು ಸಾಕುವ ಬೆಕ್ಕು ನಿಮ್ಮೊಂದಿಗೆ ಹೊಂದಿಕೊಳ್ಳುತ್ತದೆ. (ಬರಹ: ಸತೀಶ್ ಎಸ್., ಜ್ಯೋತಿಷಿ)

ಬೆಕ್ಕನ್ನು ಸಾಕಲು ಎಲ್ಲರೂ ಬಯಸುತ್ತಾರೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೆಕ್ಕುಗಳು ದೊರೆಯುತ್ತವೆ. ಆದರೆ ಶಕುನದ ಬಗ್ಗೆ ಬಂದಾಗ ಬೆಕ್ಕನ್ನು ದ್ವೇಷಿಸುವವರೆ ಹೆಚ್ಚು. ಅತಿ ಚುರುಕಾದ ಪ್ರಾಣಿಗಳಲ್ಲಿ ಬೆಕ್ಕು ಸಹ ಒಂದು. ಪ್ರಾಣಿಗಳು ನಮ್ಮ ಮೇಲೆ ಅವಲಂಬಿತವಾಗುವುದಿಲ್ಲ. ಆದರೆ ನಾವು ಪ್ರಾಣಿಗಳ ಮೇಲೆ ಪೂರ್ಣವಾಗಿ ಅವಲಂಬಿತರಾಗುತ್ತೇವೆ. ಆದ್ದರಿಂದ ಪ್ರಾಣಿಗಳನ್ನು ಅಪಶಕುನ ಸೂಚಕ ಎಂದು ಭಾವಿಸುವುದೇ ತಪ್ಪು. ಇದನ್ನು ಕೇವಲ ನಂಬಿಕೆ ಎನ್ನಬಹುದು. ಕೆಲವೊಮ್ಮೆ ಇದು ಕೇವಲ ಅನುಭವದ ಮಾತಾಗುತ್ತದೆ.
ಯಾವುದೇ ಪ್ರಾಣಿಯನ್ನು ಸಾಕಲು ನಿರ್ಧರಿಸಿ ಆಯ್ಕೆ ಮಾಡಿದಾಗ ಆ ಪ್ರಾಣಿಯ ವರ್ತನೆಯನ್ನು ಗಮನಿಸಿ ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಆ ಪ್ರಾಣಿಗಳು ನಿಮ್ಮನ್ನು ನೋಡಿ ಪ್ರೀತಿಯಿಂದ ವರ್ತಿಸಿದಲ್ಲಿ ಅದು ಶುಭಸೂಚನೆಯಾಗುತ್ತದೆ. ಜನ್ಮಕುಂಡಲಿಯಲ್ಲಿ ಬೆಕ್ಕನ್ನು ಚಂದ್ರ ಮತ್ತು ಶುಕ್ರನಿಂದ ಕಾಣಬಹುದು. ಚಂದ್ರನು ಮನಸ್ಸನ್ನು ಸೂಚಿಸುತ್ತಾನೆ. ಆದ್ದರಿಂದ ಜನ್ಮಕುಂಡಲಿಯಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಇದ್ದಲ್ಲಿ ನೀವು ಸಾಕುವ ಬೆಕ್ಕು ನಿಮ್ಮೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಮನೆಗೆ ಆಗಮಿಸುವ ಅತಿಥಿಗಳ ಜೊತೆಯಲ್ಲಿಯೂ ಬೆರೆತು ಬಾಳುತ್ತದೆ. ಇದರಿಂದ ಬೆಕ್ಕು ಶುಭಸೂಚಕವಾಗುತ್ತದೆ.
ಬೆಕ್ಕನ್ನು ಸಾಕಲು ನಿರ್ಧರಿಸುವಾಗ ಅದು ನಿಮ್ಮೊಡನೆ ಸಹಜವಾಗಿ ವರ್ತಿಸಬೇಕು. ಅದು ಶುಭಸೂಚಕವಾಗಿರುತ್ತದೆ. ಅದು ನಿಮ್ಮೊಡನೆ ಅಸಹಜವಾಗಿ ಅಂದರೆ ಸಿಡುಕುತನದಿಂದ ವರ್ತಿಸಿದಲ್ಲಿ ಅದು ಅಶುಭಸೂಚಕವಾಗುತ್ತದೆ ಎನ್ನುವುದು ಗಮನದಲ್ಲಿರಲಿ. ಜನ್ಮಕುಂಡಲಿಯಲ್ಲಿ ಶುಕ್ರನು ಶುಭಸ್ಥಾನದಲ್ಲಿ ಇದ್ದು, ಸಶಕ್ತನಾಗಿದ್ದಲ್ಲಿ ನೋಡಲು ಸುಂದರವಾದ ಮತ್ತು ಆಕರ್ಷಕವಾದ ಬೆಕ್ಕು ನಿಮ್ಮದಾಗುತ್ತದೆ. ಎಲ್ಲರ ಮನಗೆದ್ದು ಸಂತೋಷ ಹಂಚುವಲ್ಲಿ ಸಫಲವಾಗುತ್ತದೆ.
ಬೆಕ್ಕುಗಳ ವರ್ತನೆ ಆಧರಿಸಿದ ನಂಬಿಕೆಗಳು ಹೀಗಿವೆ
1) ಮನೆಗೆ ಸಂಬಂಧಿಸಿದ ಹೊಸ ಕೆಲಸವನ್ನು ಆರಂಭಿಸುವ ವೇಳೆ ಬೆಕ್ಕು ಮನೆಯ ಮುಂದೆಯೆ ಇದ್ದಲ್ಲಿ ಅಪಶಕುನವಲ್ಲ. ಕೆಲಸಕ್ಕೆ ಸಂಬಂಧಿಸಿದ ಪದಾರ್ಥಗಳನ್ನು ಹಾಳುಗೆಡವಿದರೂ ಅಪಶಕುನವಲ್ಲ. ಆದರೆ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ ಎಂದು ಅದರ ವರ್ತನೆ ನಮಗೆ ತಿಳಿಸುತ್ತದೆ.
2) ಹೊಸ ಕೆಲಸ ಅರಂಭಿಸುವ ಮುನ್ನ ಬೆಕ್ಕು ಮನೆಮಂದಿಯ ಜೊತೆ ಬೆರೆಯದೆ, ಒಂಟಿಯಾಗಿ ಒಂದೆಡೆ ಕುಳಿತರೆ ಮನೆಯಲ್ಲಿ ಆಗಬಹುದುದಾದ ಭಿನ್ನಾಭಿಪ್ರಾಯಗಳನ್ನು ಸೂಚಿಸುತ್ತದೆ. ಮೌನವಾಗಿದ್ದು ಕೆಲಸ ಸಾಧಿಸಬೇಕೆಂಬುದರ ಸೂಚನೆ ಇದಾಗಿರುತ್ತದೆ.
3) ಕೆಲಸ ನಡೆಯುವಾಗ ವೇಳೆ ಬೆಕ್ಕು ಯಾರೊಬ್ಬರಿಗೂ ಸಿಗದೆ, ಬುದ್ದಿವಂತಿಕೆಯಿಂದ ಓಡಾಡುತ್ತಿದ್ದಲ್ಲಿ ಅದು ಆರಂಭವಾದ ಕೆಲಸ ಮುಂದೂಡುವ ಸೂಚನೆ ಆಗಿರುತ್ತದೆ. ಹಣಕಾಸಿನ ವ್ಯವಹಾರವಾದಲ್ಲಿ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು.
4) ಕೊಟ್ಟ ಆಹಾರವನ್ನು ಬೆಕ್ಕು ಹಲವು ದಿನಗಳಿಂದ ಸರಿಯಾಗಿ ಸೇವಿಸದಿದ್ದರೆ ಅದು ಮನೆಯಲ್ಲಿನ ಸದಸ್ಯರಿಗೆ ಅನಾರೋಗ್ಯ ಉಂಟಾಗುವ ಸೂಚನೆಯಾಗಿರುತ್ತದೆ.
5) ಹೊಸ ಕೆಲಸವನ್ನು ಆರಂಭಿಸುವ ವೇಳೆ ಬೆಕ್ಕು ಮಾಲೀಕನ ಬಟ್ಟೆಯನ್ನು ಹಿಡಿದು ಎಳೆದರೆ, ಹೆಚ್ಚಿನ ಪ್ರಯತ್ನದ ನಡುವೆಯೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ ಎಂಬ ಸೂಚನೆಯಾಗಿರುತ್ತದೆ.
6) ಮನೆಯ ಬಾಗಿಲಲ್ಲಿ ಮಲ ಮೂತ್ರಮಾಡಿದಲ್ಲಿ ವಾಸಸ್ಥಳವನ್ನು ಬದಲಾಯಿಸುವ ಅಥವಾ ಮನೆಯನ್ನು ನವೀಕರಿಸುವ ಸೂಚನೆಯಾಗಿರುತ್ತದೆ.
7) ನೀವು ಸಾಕಿದ ಬೆಕ್ಕು ಆಹಾರಕ್ಕಾಗಿ ಬೇರೆಯವರ ಮನೆಗೆ ತೆರಳಿದಲ್ಲಿ ಅತಿ ಮಖ್ಯವಾದ ಕೆಲಸವೊಂದು ಆತ್ಮೀಯರ ಸಹಾಯದಿಂದ ಪೂರ್ಣಗೊಳ್ಳುವ ಸೂಚನೆ ಆಗಿರುತ್ತದೆ.
8) ನಿಮ್ಮ ಮನೆಯ ಬೆಕ್ಕು ಬೇರೆ ಮನೆಯಿಂದ ಆಹಾರ ಪದಾರ್ಥವನ್ನು ಮನೆಗೆ ತಂದರೆ, ಅಂದಿನ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುವ ಸೂಚನೆ ಆಗಿರುತ್ತದೆ.
9) ಮನೆಯ ಮುಂಬಾಗಿಲ ಬಲಬಾಗದಲ್ಲಿ ಮೆತ್ತಗಿನ ಬಟ್ಟೆಯ ಮೇಲೆ ನಿದ್ರಿಸಿದಲ್ಲಿ, ಅದು ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ಸೂಚನೆ.
10) ಮನೆಯ ಮಧ್ಯೆ ಕುಣಿಯುತ್ತ ಸಂತೋಷದಿಂದ ಇದ್ದಲ್ಲಿ, ಮನೆಗೆ ಆತ್ಮೀಯರು ಆಗಮಿಸುವ ಸೂಚನೆಯಾಗಿರುತ್ತದೆ.
11) ವಾಹನ ಚಾಲನೆ ಮಾಡುವ ವೇಳೆ ಬೆಕ್ಕು ಎಡದಿಂದ ಬಲಕ್ಕಾಗಲಿ, ಬಲದಿಂದ ಎಡಕ್ಕಾಗಲಿ ಹೋದಲ್ಲಿ ಬದಲಾದ ವೇಳೆ ಮತ್ತು ಬದಲಾದ ಸ್ಥಳದಲ್ಲಿ ಕೆಲಸ ಪೂರೈಸಲು ಸಾಧ್ಯ ಎಂಬುದರ ಸೂಚನೆ.
ಬೆಕ್ಕನ್ನು ಸಾಕುವುದು ತಪ್ಪು, ಅದು ಅಪಶಕುನದ ಪ್ರಾಣಿ ಎನ್ನುವ ನಂಬಿಕೆಯನ್ನು ಒಪ್ಪಲು ಆಗುವುದಿಲ್ಲ. ಯಾವುದೇ ಪ್ರಾಣಿಯನ್ನು ಸಾಕುವವರು ಅದರ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕು. ಪ್ರೀತಿ, ಕಾಳಜಿ ಮತ್ತು ವಿಶ್ವಾಸ ತೋರಿಸಬೇಕು. ಪ್ರಾಣಿಗಳನ್ನು ಒಂಟಿಯಾಗಿ ಬಿಡುವುದು, ಉಪವಾಸ ಇರಿಸುವುದು ಸರಿಯಲ್ಲ. ಪ್ರಾಣಿಗಳ ಮಾತನ್ನು ಅರಿಯಲು ಸಾಧ್ಯವಾಗದೆ ಹೋದರೂ ಅವುಗಳ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಪ್ರಾಣಿಗಳಿಗೆ ನಾವು ಪ್ರೀತಿಯಿಂದ ಕೊಡುವ ಒಂದು ತುತ್ತು ಅನ್ನವನ್ನು ದೇವರು ಲೆಕ್ಕಕ್ಕೆ ಇರಿಸಿಕೊಳ್ಳುತ್ತಾನೆ. ನಮಗೆ ಒಳ್ಳೆಯದು ಮಾಡುತ್ತೇನೆ.
ಬರಹ: ಸತೀಶ್ ಎಸ್., ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಇದು ಶಾಸ್ತ್ರ ಮತ್ತು ನಂಬಿಕೆಗಳನ್ನು ಆಧರಿಸಿದ ಬರಹ. ಅನುಸರಿಸುವ ಮೊದಲು ತಜ್ಞರೊಂದಿಗೆ ಚರ್ಚಿಸಿ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

ವಿಭಾಗ