ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚಾಣಕ್ಯ ನೀತಿ: ಕುಟುಂಬದ ಯಜಮಾನ ಹೇಗಿರಬೇಕು? ಆಚಾರ್ಯ ಚಾಣಕ್ಯರು ಹೇಳಿದ ಮಾರ್ಗ ಪಾಲಿಸಿದರೆ ಯಶಸ್ಸು ಸಿದ್ಧಿಸುವುದು ಖಂಡಿತ

ಚಾಣಕ್ಯ ನೀತಿ: ಕುಟುಂಬದ ಯಜಮಾನ ಹೇಗಿರಬೇಕು? ಆಚಾರ್ಯ ಚಾಣಕ್ಯರು ಹೇಳಿದ ಮಾರ್ಗ ಪಾಲಿಸಿದರೆ ಯಶಸ್ಸು ಸಿದ್ಧಿಸುವುದು ಖಂಡಿತ

Chanakya Neeti: ಆಚಾರ್ಯ ಚಾಣಕ್ಯರ ನೀತಿಶಾಸ್ತ್ರವು ಜಗತ್ಪ್ರಸಿದ್ಧಿಯಾಗಿದೆ. ಚಾಣಕ್ಯರು ತಮ್ಮ ನೀತಿಗಳು ಮೂಲಕ ವ್ಯಕ್ತಿಯು ಸಮಾಜದಲ್ಲಿ ಹೇಗೆ ಗೌರವಯುತವಾದ ಜೀವನ ನಡೆಸಬೇಕು ಎಂದು ಹೇಳಿದ್ದಾರೆ. ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಕುಟುಂಬದ ಯಜಮಾನನಿಗೆ ಇರಬೇಕಾದ ಗುಣಲಕ್ಷಣಗಳನ್ನು ಹೇಳಿದ್ದಾರೆ. ‌

ಚಾಣಕ್ಯ ನೀತಿ: ಕುಟುಂಬದ ಯಜಮಾನ ಹೇಗಿರಬೇಕು? ಆಚಾರ್ಯ ಚಾಣಕ್ಯರು ಹೇಳಿದ ಮಾರ್ಗ ಪಾಲಿಸಿದರೆ ಯಶಸ್ಸು ಸಿದ್ಧಿಸುವುದು ಖಂಡಿತ
ಚಾಣಕ್ಯ ನೀತಿ: ಕುಟುಂಬದ ಯಜಮಾನ ಹೇಗಿರಬೇಕು? ಆಚಾರ್ಯ ಚಾಣಕ್ಯರು ಹೇಳಿದ ಮಾರ್ಗ ಪಾಲಿಸಿದರೆ ಯಶಸ್ಸು ಸಿದ್ಧಿಸುವುದು ಖಂಡಿತ

ಆಚಾರ್ಯ ಚಾಣಕ್ಯರನ್ನು ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜಕಾರಣಿ ಎಂದು ಕರೆಯಲಾಗುತ್ತದೆ. ತಮ್ಮ ಜೀವನದ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ಕೆಲವೊಂದು ಪ್ರಮುಖ ನೀತಿಗಳನ್ನು ಅವರು ಜನಸಾಮಾನ್ಯರಿಗಾಗಿ ಹಂಚಿಕೊಂಡಿದ್ದಾರೆ. ಅದನ್ನೇ ಚಾಣಕ್ಯ ನೀತಿ ಎಂದು ಕರೆಯಲಾಗುತ್ತದೆ. ಅದು ದೇಶ ವಿದೇಶಗಳಲ್ಲೂ ಬಹಳ ಪ್ರಸಿದ್ಧಿಯನ್ನು ಪಡೆದಿದೆ.

ಚಾಣಕ್ಯರು ಹೇಳಿದ ನೀತಿಗಳನ್ನು ಪಾಲಿಸುವುದರಿಂದ ವ್ಯಕ್ತಿಯು ಅವನ ಜೀವನದಲ್ಲಿರುವ ಅನೇಕ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳುವುದರ ಜೊತೆಗೆ ಗೌರವಯುತವಾದ ಜೀವನವನ್ನು ನಡೆಸಬಹುದು. ಸುಖ, ಸಂತೋಷ, ಸಮೃದ್ಧಿಯನ್ನು ಜೀವನದಲ್ಲಿ ಕಾಣಬಹುದು. ಚಾಣಕ್ಯರ ನೀತಿ ಶಾಸ್ತ್ರವು ಎಲ್ಲಾ ಸಮಸ್ಯೆಗಳಿಗೂ ಪರಿಹಾವನ್ನು ಒದಗಿಸುವುದರಿಂದ ಅದು ಅತ್ಯಂತ ಪರಿಣಾಮಕಾರಿ ಪುಸ್ತಕಗಳಲ್ಲಿ ಒಂದಾಗಿದೆ. ಜೀವನದಲ್ಲಿ ಯಶಸ್ಸು, ಧರ್ಮ, ಕರ್ಮ ಮತ್ತು ಪಾಪ–ಪುಣ್ಯಗಳಿಗೆ ಸಂಬಂಧಿಸಿ ಅನೇಕ ವಿಷಯಗಳನ್ನು ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

ಮನೆಯ ಯಜಮಾನನಿಗೆ ಇರಬೇಕಾದ ಗುಣ–ನಡೆತಗಳನ್ನು ಸಹ ಅದರಲ್ಲಿ ಹೇಳಿದ್ದಾರೆ. ಚಾಣಕ್ಯರು ಹೇಳಿದಂತೆ ಮನೆಯ ಅಥವಾ ಕುಟುಂಬದ ಯಜಮಾನ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸುವುದರಿಂದ ಕುಟುಂಬದಲ್ಲಿ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ. ಸದಸ್ಯರ ನಡುವೆ ಮನಃಸ್ತಾಪಗಳೂ ಸಹ ಇರುವುದಿಲ್ಲ. ಕುಟುಂಬದ ಯಜಮಾನನು ಬಹಳ ಬುದ್ಧಿವಂತಿಕೆಯಿಂದ ಹೇಗೆ ವರ್ತಿಸಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದರೆ ಯಜಮಾನನು ಯಾವ ರೀತಿ ಗುಣಗಳನ್ನು ಹೊಂದಿರಬೇಕು ಮತ್ತು ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕು ಇಲ್ಲಿದೆ ಓದಿ.

1. ಖರ್ಚಿನ ಬಗ್ಗೆ ಗಮನವಿರಲಿ

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಮನೆಯ ಯಜಮಾನನಿಗೆ ಖರ್ಚಿನ ಬಗ್ಗೆ ಗಮನವಿರಬೇಕು. ಕುಟುಂಬದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಹಣವನ್ನು ಖರ್ಚು ಮಾಡಬೇಕು. ಕುಟುಂಬ ಸದಸ್ಯರ ದುಂದುವೆಚ್ಚಗಳನ್ನು ನಿಲ್ಲಿಸಬೇಕು. ಹೀಗೆ ಮಾಡಿದಾಗ ಮಾತ್ರ ಕುಟುಂಬವು ತ್ವರಿತವಾಗಿ ಪ್ರಗತಿ ಹೊಂದುತ್ತದೆ. ಜೊತೆಗೆ ಭವಿಷ್ಯದ ದಿನಗಳಿಗಾಗಿ ಹಣ ಅಥವಾ ಸಂಪತ್ತನ್ನು ಕೂಡಿಡಲು ಸಾಧ್ಯವಾಗುತ್ತದೆ.

2. ಶಿಸ್ತು ರೂಢಿಸಿಕೊಳ್ಳಬೇಕು

ಕುಟುಂಬದ ಯಜಮಾನ ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕು. ಆಗ ಕುಟುಂಬದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಬಹುದು. ಶಿಸ್ತುಬದ್ಧವಾಗಿ ಜೀವನ ನಡೆಸಿದರೆ ಸುಲಭವಾಗಿ ಯಶಸ್ಸು ಗಳಿಸಬಹುದು. ಆದ್ದರಿಂದ ಮನೆಯವರೆಲ್ಲರೂ ಶಿಸ್ತು ಪಾಲಿಸುವುದು ಕುಟುಂಬ ಮುನ್ನಡೆಯಲು ಸಹಕಾರಿಯಾಗಿದೆ.

3. ಕುಟುಂಬದ ಜನರ ನಡುವೆ ತಾರತಮ್ಯ ಮಾಡಬಾರದು

ಕುಟುಂಬದ ಯಜಮಾನನು ಕುಟುಂಬದ ಸದಸ್ಯರ ನಡುವೆ ಎಂದಿಗೂ ತಾರತಮ್ಯ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಎಲ್ಲರನ್ನೂ ಸಮಾನ ಭಾವನೆಯಿಂದ ನೋಡಬೇಕು ಮತ್ತು ಎಲ್ಲರಿಗೂ ಒಂದೇ ರೀತಿಯ ನಿಯಮ ಮಾಡಬೇಕು. ಹೀಗೆ ಮಾಡುವುದರಿಂದ ಕುಟುಂಬದ ಸದಸ್ಯರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಬರುವುದಿಲ್ಲ.

4. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಉತ್ತಮವಾಗಿರಬೇಕು

ಚಾಣಕ್ಯ ನೀತಿಯ ಪ್ರಕಾರ, ಕುಟುಂಬದ ಯಜಮಾನನಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು. ಆ ನಿರ್ಧಾರಗಳು ಉತ್ತಮವಾಗಿದ್ದಾಗ ಅದು ಕುಟುಂಬಕ್ಕೆ ಒಳಿತನ್ನು ಮಾಡುತ್ತದೆ. ಯಜಮಾನನು ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಹಾಗೆ ತೆಗೆದುಕೊಂಡ ನಿರ್ಧಾರಗಳು ಮನೆಯ ಯಾವ ಸದಸ್ಯನಿಗೂ ತೊಂದರೆಯನ್ನುಂಟು ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಚಾಣಕ್ಯರ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕುಟುಂಬದ ಪ್ರಗತಿ ಸಾಧ್ಯ. ಜೊತೆಗೆ ಜೀವನದಲ್ಲಿ ಸುಖ, ಸಂತೋಷ ಮತ್ತು ಸಮೃದ್ಧಿಗಳನ್ನು ಕಾಣಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.