ಬುದ್ಧಿವಂತ ಪ್ರಾಣಿ ಎಂದು ಹೆಸರಾಗಿರುವ ಮನುಷ್ಯ ಪ್ರಾಣಿ ಪಕ್ಷಿಗಳಿಂದ ಕಲಿಯುವುದು ಸಾಕಷ್ಟಿದೆ; ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯ ಮಹಾನ್ ವಿದ್ವಾಂಸರಾಗಿದ್ದರು. ಮನುಷ್ಯ ತನ್ನ ಜೀವನದಲ್ಲಿ ಹೇಗೆ ಯಶಸ್ಸು ಗಳಿಸಬಹುದು, ಹೇಗೆ ಸಂತೋಷವಾಗಿರಬಹುದು ಎಂಬುದರ ಕುರಿತು ಚಾಣಕ್ಯ ಅನೇಕ ನೀತಿಗಳನ್ನು ಹೇಳಿಕೊಟ್ಟಿದ್ದಾರೆ. ಹಾಗೇ ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಪ್ರಾಣಿ, ಪಕ್ಷಿಗಳಿಂದ ಕಲಿಯುವುದು ಸಾಕಷ್ಟಿದೆ ಎಂದು ಚಾಣಕ್ಯ ಹೇಳುತ್ತಾರೆ.
ರಾಜಕೀಯ, ವ್ಯಾಪಾರ, ಹಣ, ಬದುಕಿನ ಬಗ್ಗೆ ಚಾಣಕ್ಯ ಹೇಳಿದ ಮಾತುಗಳು ಇಂದಿಗೂ ಮನುಷ್ಯನಿಗೆ ಮಾರ್ಗದರ್ಶಕವಾಗಿವೆ. ನಿಮ್ಮ ಜೀವನದ ಯಾವುದೇ ಕ್ಷೇತ್ರದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಲು ಚಾಣಕ್ಯ ನೀತಿ ನಿಮಗೆ ಸಹಾಯ ಮಾಡುತ್ತದೆ.
ಚಾಣಕ್ಯರ ಪ್ರಕಾರ ಭೂಮಿ ಮೇಲೆ ಮನುಷ್ಯನಷ್ಟೇ ಪ್ರತಿಯೊಂದು ಜೀವಿಗಳೂ ಬದುಕುವ ಹಕ್ಕನ್ನು ಹೊಂದಿದೆ. ಆದರೆ ಕೆಲವೊಮ್ಮೆ ಪ್ರಾಣಿಗಳನ್ನು ನೋಡಿ ಮನುಷ್ಯ ಕಲಿಯುವುದು ಸಾಕಷ್ಟಿರುತ್ತದೆ. ಚಿಕ್ಕ ಇರುವ ಕೂಡಾ ಮನುಷ್ಯನಿಗೆ ಕೆಲವು ಪಾಠಗಳನ್ನು ಹೇಳಿಕೊಡುತ್ತದೆ. ಪ್ರಾಣಿ ಪಕ್ಷಿಗಳಿಂದ ಮನುಷ್ಯ ಕಲಿಯಬೇಕಾದ ಕೆಲವೊಂದು ಗುಣಗಳಿವೆ. ಅದು ಏನು ನೋಡೋಣ.
ಪಕ್ಷಿಗಳಿಂದ ಕಲಿಯುವುದು ಏನಿದೆ?
ಪಕ್ಷಿಯು ತನ್ನ ಕೊಕ್ಕಿನಿಂದ ಆಹಾರವನ್ನು ಹಿಡಿಯಲು ಎಲ್ಲಾ ಇಂದ್ರಿಯವನ್ನು ಬಳಸುತ್ತದೆ. ಹಾಗೇ ಜೀವನದಲ್ಲಿ ನೀವು ಯಶಸ್ವಿಯಾಗಬೇಕಾದರೆ ನಿಮ್ಮ ಇಂದ್ರಿಯವನ್ನು ನಿಗ್ರಹಿಸುವುದು ಬಹಳ ಮುಖ್ಯ. ತನ್ನ ಇಂದ್ರಿಯಗಳನ್ನು ನಿಯಂತ್ರಿಸಲಾಗದ ವ್ಯಕ್ತಿಯ ಮನಸ್ಸು ಯಾವಾಗಲೂ ಚಂಚಲವಾಗಿರುತ್ತದೆ. ಗುರಿಯ ಮೇಲೆ ಎಂದಿಗೂ ಗಮನ ಕೇಂದ್ರೀಕರಿಸಲಾಗುವುದಿಲ್ಲ. ಗುರಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಯಶಸ್ಸಿನ ಸಾಧ್ಯತೆಗಳು ಹಚ್ಚು ಪಟ್ಟು ಹೆಚ್ಚಾಗಿರುತ್ತದೆ. ಅಂದರೆ ಏಕಾಗ್ರತೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂಬುದು ಚಾಣ್ಯಕ ನೀತಿಯ ಸಾರಾಂಶವಾಗಿದೆ.
ಚಾಣಕ್ಯ ಕಾಗೆಯನ್ನು ಬಹಳ ಬುದ್ಧಿವಂತ ಪಕ್ಷಿ ಎಂದು ಬಣ್ಣಿಸುತ್ತಾನೆ. ಕಾಗೆಯು ಸದಾ ಎಚ್ಚರವಾಗಿರುತ್ತದೆ. ಅದೇ ರೀತಿ, ಮನುಷ್ಯ ಯಾವಾಗಲೂ ಎಚ್ಚರವಾಗಿರಬೇಕು. ಒಂದು ಕಾಗೆಯು ಹಿಂಜರಿಕೆ ಅಥವಾ ಭಯವಿಲ್ಲದೆ ಪೂರ್ಣ ಇಚ್ಛಾಶಕ್ತಿಯಿಂದ ತನ್ನ ಆಹಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಈ ಗುಣಗಳನ್ನು ಹೊಂದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.
ಹುಂಜವನ್ನು ನೋಡಿ ಕೂಡಾ ಕಲಿಯುವಂಥದ್ದು ಬಹಳಷ್ಟಿದೆ. ಸೋಮಾರಿತನ ಶತ್ರುವಿದ್ದಂತೆ ಎಂದು ಹೇಳುವ ಚಾಣಕ್ಯರು ಒಬ್ಬ ವ್ಯಕ್ತಿಯು ಸೂರ್ಯೋದಯಕ್ಕೆ ಮುಂಚಿತವಾಗಿ ಏಳಬೇಕು. ಹುಂಜ ಬೇಗ ಎದ್ದು ಬೆಳಗಾಯಿತೆಂದು ಎಲ್ಲರನ್ನೂ ಎಚ್ಚರಿಸುತ್ತದೆ. ಕೋಳಿಗಳು ಆಹಾರವನ್ನು ಹಂಚಿಕೊಂಡು ತಿನ್ನುತ್ತದೆ. ಈ ಗುಣಗಳನ್ನು ಮನುಷ್ಯ ಕೂಡಾ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ವೈಫಲ್ಯವನ್ನು ಸಹ ಯಶಸ್ಸಾಗಿ ಪರಿವರ್ತಿಸಬಹುದು.
ಮನುಷ್ಯನು ಪ್ರಾಣಿಯಿಂದ ಏನು ಕಲಿಯಬೇಕು?
ಸಿಂಹ, ಹುಲಿ,ಬೆಕ್ಕುಗಳು ಒಮ್ಮೆ ಬೇಟೆಗೆ ಕುಳಿತರೆ ಅದು ದೊರೆಯುವವರೆಗೂ ಅಲುಗಾಡುವುದಿಲ್ಲ. ಎಲ್ಲಿ ಬೇಟೆಯು ತಮ್ಮಿಂದ ತಪ್ಪಿಸಿಕೊಳ್ಳುವುದೋ ಎಂಬ ಕಾರಣಕ್ಕೆ ಬಹಳ ನಿಶ್ಯಬ್ಧವಾಗಿ, ಬೇಟೆಯನ್ನೇ ಗುರಿಯಾಗಿಸಿಕೊಂಡು ಯಶಸ್ಸು ಸಾಧಿಸುತ್ತವೆ. ಅದೇ ರೀತಿ ಮನುಷ್ಯ ಕೂಡಾ ತನ್ನ ಗುರಿಯನ್ನು ಸಾಧಿಸುವವರೆಗೆ ವಿರಮಿಸಬಾರದು. ಇದನ್ನು ಸಂಪೂರ್ಣ ಸಮರ್ಪಣೆ ಮತ್ತು ಕೌಶಲ್ಯದಿಂದ ಮಾಡಬೇಕು.
ನಾಯಿಯಿಂದ ಮನುಷ್ಯ ಕಲಿಯುವುದು ಕೂಡಾ ಸಾಕಷ್ಟಿದೆ. ಹಸಿವು ಹೆಚ್ಚಿದ್ದರೂ ಅಲ್ಪ ಪ್ರಮಾಣದ ಆಹಾರದಿಂದ ತೃಪ್ತರಾಗಬೇಕು. ಎಷ್ಟೇ ದಣಿದಿದ್ದರೂ ಆಪತ್ತು ಬರುವ ಸಮಯದಲ್ಲಿ ಎಚ್ಚರವಾಗುವುದನ್ನು ಮನುಷ್ಯ ಕಲಿಯಬೇಕು. ರಕ್ಷಕನನ್ನು ಪ್ರೀತಿಸಿ, ಪ್ರಾಮಾಣಿಕತೆಯಿಂದ ಇರಿ. ಧೈರ್ಯವನ್ನು ತೆಗೆದುಕೊಳ್ಳಿ ಎಂದು ಚಾಣಕ್ಯ ಹೇಳುತ್ತಾರೆ.
ಎಷ್ಟೇ ದಣಿದಿದ್ದರೂ ಭಾರ ಹೊರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಮುಂದುವರೆಯುತ್ತಿರಬೇಕು. ಇದನ್ನು ಕತ್ತೆಯಿಂದ ಕಲಿಯಬೇಕು ಎಂದು ಚಾಣಕ್ಯ ಹೇಳುತ್ತಾರೆ. ಈ ಗುಣಗಳನ್ನು ಜೀವನದಲ್ಲಿ ಅಭ್ಯಾಸ ಮಾಡುವವರು ಯಾವಾಗಲೂ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದು ಚಾಣಕ್ಯನ ಅಭಿಪ್ರಾಯ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.