ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆರಳಿನ ಆಕಾರ ತಿಳಿಸಲಿವೆ ನಮ್ಮ ಗುಣ; ಹೆಬ್ಬೆರಳಿನ ಮೇಲ್ಬಾಗ ಹಿಂದೆ ಬಾಗಿದಂತೆ ಇರುವವರ ಸ್ವಭಾವ ಹೀಗಿದೆ

ಬೆರಳಿನ ಆಕಾರ ತಿಳಿಸಲಿವೆ ನಮ್ಮ ಗುಣ; ಹೆಬ್ಬೆರಳಿನ ಮೇಲ್ಬಾಗ ಹಿಂದೆ ಬಾಗಿದಂತೆ ಇರುವವರ ಸ್ವಭಾವ ಹೀಗಿದೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಹೆಬ್ಬೆರಳು, ಹೆಬ್ಬೆರಳಿನ ಮೇಲ್ಭಾಗ ಹಿಂಬದಿಗೆ ಬಾಗಿದಂತೆ ಇರುವವರ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್ ಜ್ಯೋತಿಷಿ)

ಹೆಬ್ಬೆರಳಿನ ಆಕಾರ ತಿಳಿಸಲಿವೆ ನಮ್ಮ ಗುಣ; ಹೆಬ್ಬೆರಳಿನ ಮೇಲ್ಬಾಗ ಹಿಂದೆ ಬಾಗಿದಂತೆ ಇರುವವರ ಸ್ವಭಾವ ಹೀಗಿದೆ
ಹೆಬ್ಬೆರಳಿನ ಆಕಾರ ತಿಳಿಸಲಿವೆ ನಮ್ಮ ಗುಣ; ಹೆಬ್ಬೆರಳಿನ ಮೇಲ್ಬಾಗ ಹಿಂದೆ ಬಾಗಿದಂತೆ ಇರುವವರ ಸ್ವಭಾವ ಹೀಗಿದೆ (PC: Pixabay )

ಹೆಬ್ಬೆರಳಿನ ಮೇಲ್ಭಾಗ ಹಿಂಬದಿಗೆ ಬಾಗಿದಂತೆ ಇರುತ್ತದೆ. ಇಂತಹವರಿಗೆ ನಿರ್ದಿಷ್ಟ ಮನಸ್ಸಿರುತ್ತದೆ. ಯಾವುದೇ ಕಟ್ಟುಪಾಡಿಗೆ ಒಳಪಟ್ಟು ವ್ಯವಹರಿಸುವುದಿಲ್ಲ. ಹಾಗೆಯೇ ಬೇರೆಯವರ ಒತ್ತಡಕ್ಕೂ ತಲೆ ಬಾಗುವುದೂ ಇಲ್ಲ. ಇವರು ಸರಳ ಜೀವಿಗಳಾಗಿ ಬಾಳುತ್ತಾರೆ. ಆಡಂಬರದ ಜೀವನ ಇವರಿಗೆ ಇಷ್ಟವಾಗುವುದಿಲ್ಲ. ಸಾಕಷ್ಟು ಸ್ಥಿತಿವಂತರಾದರೂ ಬೇರೆಯವರ ಮುಂದೆ ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ.

ಜನರ ವಿರೋಧ ಎದುರಿಸುತ್ತಾರೆ

ಇವರ ಹಣೆಯು ಅಗಲವಾಗಿರುತ್ತದೆ. ಇವರಲ್ಲಿ ಎಲ್ಲರೂ ಮೆಚ್ಚುವಂತಹ ಒಳ್ಳೆಯ ಗುಣಗಳಿರುತ್ತವೆ. ಸಾಮಾನ್ಯವಾಗಿ ಇವರನ್ನು ಎಲ್ಲರೂ ಒಪ್ಪುತ್ತಾರೆ. ಗೌರವಿಸುತ್ತಾರೆ. ಇವರು ಎಂದಿಗೂ ಸುಳ್ಳು ಹೇಳಲು ಇಷ್ಟಪಡದವರು. ಇವರ ಕೆಲಸ ಕಾರ್ಯಗಳು ಸಹ ಸತ್ಯದ ಹಾದಿಯಲ್ಲಿ ಇರುತ್ತದೆ. ಕಾನೂನನ್ನು ಗೌರವಿಸುವ ಇವರು ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ. ವಾದ ವಿವಾದಗಳಲ್ಲಿ ಇವರನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ.

ಇವರಿಗೆ ಪ್ರತಿಯೊಂದು ವಿಷಯದಲ್ಲಿಯೂ ಉತ್ತಮ ಜ್ಞಾನವಿರುತ್ತದೆ. ಅದನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳುತ್ತಾರೆ. ಕೇವಲ ತಮ್ಮ ಮಕ್ಕಳಿಗೆ ಅಷ್ಟೇ ಅಲ್ಲದೆ ಇತರ ಜನಗಳಿಗೂ ಆದರ್ಶ ಜೀವಿಗಳಾಗಿ ಬಾಳುತ್ತಾರೆ. ಆರಂಭಿಸಿದ ಕೆಲಸದಿಂದ ಉಪಯೋಗವಿಲ್ಲ ಎಂದಾದಲ್ಲಿ ಅದರಿಂದ ದೂರ ಸರಿಯುತ್ತಾರೆ. ಇವರು ಮಾತನಾಡಲು ಆರಂಭಿಸಿದರೆ ಎಲ್ಲರೂ ಮೌನದಿಂದ ಕೇಳುತ್ತಾರೆ. ಇವರಲ್ಲಿನ ವಿಚಾರಧಾರೆ ಉನ್ನತ ಮಟ್ಟದಲ್ಲಿ ಇರುತ್ತದೆ. ಯಾರಿಗೂ ತೊಂದರೆ ನೀಡದೆ ಎಲ್ಲರಿಗೂ ಒಳಿತನ್ನೇ ಕೋರುವುದು ಇವರ ಹೆಗ್ಗಳಿಕೆ.

ಬಾಲ್ಯದಲ್ಲಿ ಅತಿಯಾದ ಸಿಡುಕುತನದಿಂದ ವರ್ತಿಸುತ್ತಾರೆ. ಆದರೆ ದಿನ ಕಳೆದಂತೆ ತಂದೆ ತಾಯಿಯ ಪ್ರೀತಿಯಿಂದ ಇವರ ಮನಸ್ಸು ಪರಿವರ್ತನೆ ಆಗುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಇವರು ತಮ್ಮ ವಯಸ್ಸಿನ ಜನರೊಂದಿಗೆ ನಾಯಕರಾಗಿ ಬಾಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇವರಿಗೆ ಪರೋಪಕಾರದ ಗುಣ ಬರುತ್ತದೆ. ತಮ್ಮ ಬಳಿ ಇರುವ ಹಣವನ್ನು ಬೇರೆಯವರ ಅವಶ್ಯಕತೆಗಳನ್ನು ಪೂರೈಸಲು ಖರ್ಚು ಮಾಡುತ್ತಾರೆ.

ವಿದ್ಯಾಭ್ಯಾಸದಲ್ಲಿ ಸದಾ ಮುಂದು

ನ್ಯಾಯದ ಮಾರ್ಗದಲ್ಲಿ ಹಣ ಸಂಪಾದಿಸುವ ಮಾರ್ಗ ಇವರಿಗೆ ತಿಳಿದಿರುತ್ತದೆ. ಇರುವ ಹಣ ಖರ್ಚಾದ ಮೇಲೆ ನಮಗೆ ಅವಶ್ಯಕತೆ ಇದ್ದಷ್ಟು ಹಣವನ್ನು ಸಂಪಾದಿಸಬಲ್ಲ ಬುದ್ಧಿವಂತಿಕೆ ಇರುತ್ತದೆ. ಹಣಕ್ಕಾಗಿ ಬೇರೆಯವರ ಬಳಿ ಕೈಚಾಚುವುದಿಲ್ಲ. ಬಾಳ ಸಂಗಾತಿಯಿಂದ ತೆಗೆದುಕೊಂಡ ಹಣವನ್ನು ಸಹ ಸಾಲವೆಂದು ಪರಿಗಣಿಸುತ್ತಾರೆ. ದೇವತಾ ಕಾರ್ಯಗಳಿಗೆ ಹಣವನ್ನು ಮಿತಿ ಇಲ್ಲದೆ ಖರ್ಚು ಮಾಡುವುದಿಲ್ಲ. ಕಷ್ಟದಲ್ಲಿ ಇದ್ದವರಿಗೆ ಕನಿಕರ ತೋರುತ್ತಾರೆ. ವಿದ್ಯಾಭ್ಯಾಸದಲ್ಲಿ ಇವರು ಎಂದಿಗೂ ಹಿಂದೆ ಉಳಿಯುವುದಿಲ್ಲ. ತಮ್ಮ ಸ್ನೇಹಿತರು ಯಶಸ್ವಿಯಾಗಲು ನೇರವಾಗಿ ಕಾರಣರಾಗುತ್ತಾರೆ. ಎರಡಕ್ಕಿಂತಲೂ ಹೆಚ್ಚಿನ ಪದವಿ ಇವರಿಗೆ ದೊರೆಯುತ್ತದೆ. ಇವರಿಗೆ ವಿಶೇಷವಾದಂತಹ ವಿದ್ಯೆಯೊಂದು ಲಭಿಸಿ ಜೀವನ ನಡೆಸಲು ಆಧಾರವಾಗುತ್ತದೆ.

ಮನಸ್ಸನ್ನು ಅರಿತು ನಡೆಯುವ ವ್ಯಕ್ತಿಯ ಜೊತೆ ವಿವಾಹವಾಗುತ್ತದೆ. ಉನ್ನತ ಅಧಿಕಾರ ದೊರೆತರೂ ಇವರು ದರ್ಪದಿಂದ ವರ್ತಿಸುವುದಿಲ್ಲ. ಹೆಚ್ಚಿನ ಜವಾಬ್ದಾರಿ ಹೊರಲು ಇವರು ಸಿದ್ಧರಿರುವುದಿಲ್ಲ. ಆದರೆ ಬೇರೆಯವರಿಗೆ ಸಹಾಯ ಮಾಡುತ್ತಾರೆ. ವಿವಾಹವಾದ ನಂತರ ಜೀವನದಲ್ಲಿ ಶಾಂತಿ ನೆಮ್ಮದಿ ತುಂಬಿರುತ್ತದೆ. ಇವರಿಗೆ ಸಂಗೀತ ನಾಟ್ಯದಂತಹ ಕಲೆ ಸುಲಭವಾಗಿ ಒಲಿಯುತ್ತದೆ. ಯಾವುದೇ ಕೆಲಸ ಕಾರ್ಯಗಳಾದರೂ ಆರಂಭದಲ್ಲಿ ಇರುವ ಆಸಕ್ತಿ ಬಹುಕಾಲ ಇರುವುದಿಲ್ಲ. ಆದ್ದರಿಂದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ.

ಸುಖವಾದ ಜೀವನ ನಡೆಸಲು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಆದರೆ ಅತಿಯಾಗಿ ಹಣ ಗಳಿಸಬೇಕೆಂಬ ಆಸೆ ಇರುವುದಿಲ್ಲ. ಖರ್ಚು ವೆಚ್ಚಕ್ಕೆ ಸಾಕಾಗುವಷ್ಟು ಹಣ ಸ್ವೀಕರಿಸುತ್ತಾರೆ. ಜೀವನದುದ್ದಕ್ಕೂ ಇವರು ಬೇರೆಯವರನ್ನು ಆಶ್ರಯಿಸುವುದಿಲ್ಲ. ಇಳಿ ವಯಸಿನಲ್ಲಿಯೂ ಸಹ ಸಂಗಾತಿಯನ್ನು ಸುಖವಾಗಿ ನೋಡಿಕೊಳ್ಳಲು ಹಣ ಸಂಪಾದಿಸುತ್ತಾರೆ. ಇವರ ಕೆಲಸ ಕಾರ್ಯಗಳಿಂದ ನಿವೃತ್ತಿ ಪಡೆಯುವುದಿಲ್ಲ. ಸಮಾಜಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡುವುದೇ ಇವರ ಮೂಲ ಉದ್ದೇಶವಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).