ವೆಂಕಟಾಚಲ ಅವಧೂತರು: ಸಖರಾಯಪಟ್ಟಣದ ಸ್ವಾಮಿಗಳ ಸಂದೇಶ ಸದಾ ಪ್ರಸ್ತುತ, ರೂಢಿಸಿಕೊಂಡರೆ ಬದುಕು ಬಂಗಾರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೆಂಕಟಾಚಲ ಅವಧೂತರು: ಸಖರಾಯಪಟ್ಟಣದ ಸ್ವಾಮಿಗಳ ಸಂದೇಶ ಸದಾ ಪ್ರಸ್ತುತ, ರೂಢಿಸಿಕೊಂಡರೆ ಬದುಕು ಬಂಗಾರ

ವೆಂಕಟಾಚಲ ಅವಧೂತರು: ಸಖರಾಯಪಟ್ಟಣದ ಸ್ವಾಮಿಗಳ ಸಂದೇಶ ಸದಾ ಪ್ರಸ್ತುತ, ರೂಢಿಸಿಕೊಂಡರೆ ಬದುಕು ಬಂಗಾರ

Venkatachala Avadhutaru: ಕಡೂರು ತಾಲ್ಲೂಕು ಸಖರಾಯಪಟ್ಟಣದಲ್ಲಿ ನೆಲೆಸಿದ್ದ ವೆಂಕಟಾಚಲ ಅವಧೂತರು ಅಧ್ಯಾತ್ಮದಲ್ಲಿ ಔನ್ಯತ್ಯ ಸಾಧಿಸಿದ್ದ ಸಾಧಕರು. ಭೌತಿಕ ಕಾಯದಲ್ಲಿದ್ದಾಗ ಸಾಕಷ್ಟು ಜನರಿಗೆ ಮಾರ್ಗದರ್ಶನ ಮಾಡಿ ಒಳಿತಿನ ಹಾದಿಗೆ ತಂದಿದ್ದರು. ಇಂದಿಗೂ ಇವರ ಮಾತುಗಳು ಬದುಕು ಬೆಳಗಬಲ್ಲವು. ಅಂಥ ಕೆಲ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.

ಚಿಕ್ಕಮಗಳೂರು ಜಿಲ್ಲೆ ಸಖರಾಯಪಣ್ಣದ ವೆಂಕಟಾಚಲ ಅವಧೂತರು
ಚಿಕ್ಕಮಗಳೂರು ಜಿಲ್ಲೆ ಸಖರಾಯಪಣ್ಣದ ವೆಂಕಟಾಚಲ ಅವಧೂತರು

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸೀಮೆ ಅವಧೂತ ಪರಂಪರೆಗೆ ಹೆಸರುವಾಸಿ. ಇಲ್ಲಿಯೇ ನೆಲೆಸಿದ್ದ ವೆಂಕಟಾಚಲ ಅವಧೂತರನ್ನು ಭಕ್ತರು "ಗುರುನಾಥರು" ಎಂದೇ ನೆನೆಯುತ್ತಾರೆ. 'ಶೃಂಗೇರಿ ಸ್ವಾಮಿಗಳಿಗೆ ಧರ್ಮ ಜಿಜ್ಞಾಸೆ ಉಂಟಾದರೂ ಅವಧೂತರು ಪರಿಹರಿಸುತ್ತಿದ್ದರು' ಎಂಬ ಪ್ರತೀತಿ ಇದೆ. ಇವರನ್ನು ಪ್ರತ್ಯಕ್ಷ ಕಂಡವರು, ಒಮ್ಮೆ ಭೇಟಿಯಾದವರು ತಮ್ಮ ಜೀವನವಿಡೀ ಗುರುನಾಥರ ಒಡನಾಟ ಮರೆಯುತ್ತಿರಲಿಲ್ಲ. ಹಾಗಿರುತ್ತಿತ್ತು ಅವರ ಮಾತುಕತೆ, ತೋರುತ್ತಿದ್ದ ಮಾನವ ಪ್ರೀತಿ. ಇಂದು ಗುರುನಾಥರ ಭೌತಿಕ ರೂಪದಲ್ಲಿ ನಮ್ಮೊಡನೆ ಇಲ್ಲ. ಆದರೆ ಚೇತನ ಸ್ವರೂಪರಾಗಿ "ಗುರುಬಂಧು"ಗಳನ್ನು ಕಾಪಾಡುತ್ತಿದ್ದಾರೆ ಎಂಬ ಪ್ರತೀತಿಯಿದೆ.

ಸಖರಾಯಪಟ್ಟಣ ಎಂದರೆ ವೆಂಕಟಾಚಲ ಅವಧೂತರು ಎಂಬ ಮಾತು ಜನಜನಿತವಾಗಿತ್ತು. ವೆಂಕಟಾಚಲ ಗುರುಗಳು ಮರೆಯಾಗಿದ್ದದ ಸಖರಾಯಪಟ್ಟಣ ದಲ್ಲಿರುವ ಅವರ ಬೃಂದಾವನಕ್ಕೆ ಪ್ರತಿನಿತ್ಯ ನೂರಾರು ಜನರು ಭೇಟಿ ನೀಡಿ ತಮಗೆ ಅಗತ್ಯವಾದ ಮನಶ್ಯಾಂತಿ ಪಡೆಯುತ್ತಿದ್ದಾರೆ. ವೆಂಕಟಾಚಲ ಗುರುಗಳು ಈಗಲೂ ತಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಎಂಬುದು ಅವರ ಭಕ್ತಗಣದ ನಂಬಿಕೆಯಾಗಿದೆ. ಅದು ವಾಸ್ತವವೂ ಹೌದು.

ತರೀಕೆರೆಯಿಂದ ಸಖರಾಯಪಟ್ಟಣ

ವೆಂಕಟಾಚಲರ ಪೂರ್ವಿಕರು ತರೀಕೆರೆ ಬಳಿಯ ಕುಡ್ಲೂರಿನವರು. 1940 ರಲ್ಲಿ ವೆಂಕಟಾಚಲ ಜನಿಸಿದರು. ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ನಡೆದಿದ್ದು ಸಖರಾಯಪಟ್ಟಣದಲ್ಲಿ. ನಂತರ ಸೇರಿದ್ದು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ. ಅಲ್ಲಿ ಓದುತ್ತಿದ್ದಾಗ ಕೌಟುಂಬಿಕ ಕಾರಣಗಳಿಂದ ಕಾಲೇಜು ಬಿಟ್ಟು ಸಖರಾಯಪಟ್ಟಣಕ್ಕೆ ಬಂದು ತಂದೆಯ ಕೃಷಿ ಕಾರ್ಯಗಳಿಗೆ ಹೆಗಲು ಕೊಡುತ್ತಾರೆ. ಜೊತೆಜೊತೆಗೆ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.

ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಪ್ರಭಾವಿತರಾಗಿದ್ದ ವೆಂಕಟಾಚಲ ಹನ್ನೊಂದನೇ ವಯಸ್ಸಿನಲ್ಲಿದ್ದಾಗಲೇ ಹರಿಹರ ತಾಲ್ಲೂಕು ಕೊಮಾರನಹಳ್ಳಿ ಶಂಕರಲಿಂಗ ಭಗವಾನ್ ಅವಧೂತರ ದರ್ಶನವಾಗಿ ಪ್ರಭಾವಕ್ಕೊಳಗಾದರು. ಲೌಕಿಕದಲ್ಲಿದ್ದುಕೊಂಡೇ ಆಧ್ಯಾತ್ಮದ ಸಾಧನೆ ಮಾಡುವಲ್ಲಿ ನಿರತರಾದರು.

ಆಧ್ಯಾತ್ಮಿಕ ಔನ್ನತ್ಯದೆಡೆಗೆ

ಬಾಣಾವರ ದ ಕೃಷ್ಣ ಯೋಗೇಂದ್ರ ಜಗದ್ಗುರುಗಳ ಸಜೀವ ಬೃಂದಾವನದ ಮುಂದೆ ವೆಂಕಟಾಚಲ ಗುರುಗಳು ಸಾಧನೆ ಮಾಡುತ್ತಿದ್ದರು. ಬಾಣವರ ದ ಕೃಷ್ಣ ಯೋಗೀಂದ್ರರ ಬೃಂದಾವನವನ್ನು ಬೆಳಕಿಗೆ ತಂದವರು ವೆಂಕಟಾಚಲರೆ. ವೆಂಕಟಾಚಲ ಗುರುಗಳು ಸ್ವಯಂಘೋಷಿತ ಅವಧೂತ ರಲ್ಲ. ಅವರ ಸಾಧನೆಯನ್ನು, ಆಧ್ಯಾತ್ಮಿಕ ಔನ್ನತ್ಯವನ್ನು ಕಂಡವರು ಅವರ ಬಳಿ ಜನ ಬರಲಾರಂಭಿಸಿದರು.

ಪಾರಮಾರ್ಥಿಕ ಸತ್ಯವನ್ನು ದೃಷ್ಟಾಂತಗಳ ಮೂಲಕ ಬಂದವರಿಗೆ ತಿಳಿಸುತ್ತಿದ್ದರು ವೆಂಕಟಾಚಲ ಗುರುಗಳು. ಸಂಗ್ರಹಿಸು ಶೇಖರಿಸ ಬೇಡ. ಶೇಖರಿಸು ಸಂಗ್ರಹಿಸ ಬೇಡ ಎಂದು ಮಾರ್ಮಿಕವಾಗಿ ಭಕ್ತರಿಗೆ ತಿಳಿಸುತ್ತಿದ್ದ ವೆಂಕಟಾಚಲ ಗುರುಗಳು ಪಾರಮಾರ್ಥಿಕ ಸತ್ಯವನ್ನು ಕಂಡುಕೊಂಡಿದ್ದ ವೆಂಕಟಾಚಲ ರನ್ನು ಭಕ್ತರು ಪ್ರೀತಿಯಿಂದ ಅವಧೂತ ಎಂದರು.ಗುರುನಾಥ ಎಂದರು. ಅವರವರ ಭಾವಕ್ಕೆ ಭಕ್ತಿಗೆ ತಕ್ಕಂತೆ. ವೆಂಕಟಾಚಲ ಗುರುಗಳನ್ನು ಕಂಡರು. ಮನಸ್ಸು ಮಾಗಬೇಕು, ಬಾಳು ಹಣ್ಣಾಗಬೇಕು ಎನ್ನುತ್ತಿದ್ದ ಮರಿ ಬೇಡ, ಮೆರಿ ಬೇಡ, ಮುರೀಬೇಡ ಎಂದು ತಮ್ಮ ಬಳಿ ಬಂದವರಿಗೆ ಬದುಕಿನ ಪಾಠವನ್ನು ತಿಳಿಸುತ್ತಿದ್ದರು.

ಕರುಣೆಯ ಅವಧೂತರು

ಪ್ರತಿನಿತ್ಯ ಇವರ ಮನೆಯಲ್ಲಿ ಸಾವಿರಾರು ಜನರು ಸದಾ ತುಂಬಿರುತ್ತಿದ್ದರು. ಪ್ರತಿಯೊಬ್ಬರನ್ನು ತಾಯಿ ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ವೆಂಕಟಾಚಲ ಗುರುಗಳು ಯಾವುದೇ ಕಾರಣಕ್ಕೂ ಆಡಂಬರ ಮತ್ತು ತೋರಿಕೆ ಪ್ರೀತಿಯನ್ನು ಸಹಿಸುತ್ತಿರಲಿಲ್ಲ. ಪರಿಶುದ್ಧವಾದ ಭಕ್ತಿಯೊಂದೇ ದೇವರನ್ನು ಮುಟ್ಟುವ ದಾರಿ ಎಂದು ನಂಬಿದ್ದರು. ವೆಂಕಟಾಚಲ ಅವಧೂತರು 2010ರಲ್ಲಿ ತಮ್ಮ ಭೌತಿಕ ದೇಹವನ್ನು ತ್ಯಜಿಸಿದರೂ ಈಗಲೂ ಜನರ ಮನಸಿನಲ್ಲಿಯೇ ಉಳಿದಿದ್ದಾರೆ.

ಅವಧೂತರೆ ಹೇಳುತ್ತಿದ್ದಂತೆ ಪಾದಪೂಜೆಗಿಂತ ಪದ ಪೂಜೆ ಮುಖ್ಯ.... ಹಾಗಾಗಿ ಅವಧೂತರು ಉಪದೇಶಿಸಿದ, ಹೇಳುತ್ತಿದ್ದ ಕೆಲವು ನುಡಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು

  • ತಂದೆ ತಾಯಿಯರ ಸ್ಥಾನ ಅತ್ಯುನ್ನತ. ಅದಕ್ಕೆ ಬೆಲೆ ಕೊಡದವನಿಗೆ ಎಲ್ಲಿಯೂ ಬೆಲೆ ಸಿಗದು
  • ಇನ್ನೊಂದು ಮನಸ್ಸನ್ನು ನೋಯಿಸಬೇಡ
  • ಮನುಷ್ಯನ ಪ್ರೀತಿ ವಾತ್ಸಲ್ಯಕ್ಕಿಂತ ಪ್ರಾಣಿ ಪಕ್ಷಿಗಳ ಪ್ರೀತಿ ವಾತ್ಸಲ್ಯವು ಸತ್ಯವಾದದ್ದು
  • ಸರಳತೆಯನ್ನು ಇಷ್ಟಪದು. ಅಳವಡಿಸಿಕೊ
  • ಸೌದೆ ಒಡೆಯುವವನಿಗೆ ಎರಡು ರೂಪಾಯಿ ವಿಭೂತಿ ಬಳಿದು ಮಂತ್ರ ಹೇಳುವವನಿಗೆ ಇನ್ನೂರು ರೂಪಾಯಿ. ಎಲ್ಲಿದೆಯಯ್ಯಾ ನ್ಯಾಯ?
  • ಸನ್ಮಾನ ಮಾಡಿದವನೇ ಅವಮಾನ ಮಾಡಬಹುದು, ಎರಡನ್ನೂ ಈಶ್ವರನಿಗೆ ಅರ್ಪಿಸು
  • ನಿನ್ನದೆಂದುಕೊಂಡ ಎಲ್ಲವನ್ನೂ ಕಿತ್ತೊಗೆದಾಗ ಗುರು ಸಿಗುತ್ತಾನೆ
  • ಮಾಡಿದ ಪಾಪ ಕರ್ಮಗಳನ್ನು ಯಜ್ಞ ಯಾಗಾದಿಗಳಿಂದಲೇ ಕೆಳೆದುಕೊಳ್ಳುವುದಾಗಿದ್ದರೆ, ಕೈಲಾಸ - ವೈಕುಂಠ ಶ್ರೀಮಂತರ ಸ್ವತ್ತಾಗಿರುತ್ತಿತ್ತು
  • ಮನೋಲಯವಾಗಿ, ಸಂಕಲ್ಪರಹಿತನಾಗುವುದೇ ಜೀವನ್ಮುಕ್ತನ ಲಕ್ಷಣ
  • Less luggage is more comfort to travel a pleasure journey... ದಿನಚರಿಯಲ್ಲಿ ವಿಷಯಗಳನ್ನು ಮಿತಿಮೀರಿ ತುಂಬಿಕೊಂಡರೆ, ಜೀವನದ ಪ್ರಯಾಣ ಭಾರವಾಗಿ ಹಿಂಸೆ ತರುತ್ತದೆ
  • ವಸ್ತ್ರ ಸನ್ಯಾಸಕ್ಕಿಂತ ವಿಷಯ ಸನ್ಯಾಸವೇ ದೊಡ್ಡದು ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು, ಆಗ ಯಾವ ಆಶ್ರಮದಲ್ಲಿದ್ದರೂ ಅವರೇ ನಿಜವಾದ ಯೋಗಿ, ಸನ್ಯಾಸಿ
  • ಕಲ್ಪನೆಗಳಿಂದ ದೂರವಿರಿ
  • ಸಣ್ಣವನಾಗು, ಪಾದುಕೆಯಾಗು, ಸದಾ ವಿನೀತ ಭಾವದಲ್ಲಿರು
  • ನಮಸ್ಕಾರ ಎನ್ನುವುದು ಮನಸ್ಸಿನ ಭಾವನೆ
  • ಕರ್ತವ್ಯದಲ್ಲೇ ಭಗವಂತನನ್ನು ಹುಡುಕು
  • ಗುರುವನ್ನು ಶುದ್ಧ ಭಾವನೆಯಲ್ಲಿ ಹಿಡಿ. ಗುರು ಹೇಳಿದಂತೆ ನಡಿ. ಇದೇ ಜನ್ಮದಲ್ಲಿ ಮುಕ್ತಿಯನ್ನು ಪಡಿ
  • ರಾಮ ಎಂದರೆ ಆನಂದ, ಈಶ್ವರ ಎಂದರೆ ಬೇಡಿದ ವರವನ್ನು ಕೊಡುವವನು
  • ಸ್ತ್ರೀ ಎಂದರೆ ಭೂಮಿ. ಭೂಮಿಯಂತ ತ್ಯಾಗ, ಸಮಾಧಾನವನ್ನು ಸ್ತ್ರೀಯರು ಗಳಿಸಿಕೊಳ್ಳಬೇಕು
  • ಎಲ್ಲರೂ ಈಶ್ವರನಲ್ಲಿ ಬೇಡುವವರಾದ ಮೇಲೆ, ಎಲ್ಲರೂ ಭಿಕ್ಷುಕರೇ. ಬೇಡುವ ವಿಧಿ ವಿಧಾನ ವಸ್ತು ಬೇರೆಯಷ್ಟೇ
  • ಹರ ಮುನಿದರೆ ಗುರು ಕಾಯಬಲ್ಲ ಆದರೆ ಗುರು ಮುನಿದರೆ ಈ ಜಗದಿ ಕಾಯುವವರೇ ಇಲ್ಲ
  • ಪ್ರೀತಿಯ ಉತ್ತುಂಗತೆಯೇ ಭಕ್ತಿ
  • ಎಲ್ಲಾ ಸಿದ್ಧ ಮಾಡಿಕೊಳ್ಳಬೇಡ, ಆದರೆ ಸಿದ್ಧನಿರು
  • ಗುರು ಸ್ಪಂದಿಸುವುದು ಅಂತರ್ಯದ ಧ್ವನಿಗೆ ಮಾತ್ರ
  • ಅವನು ಕೊಟ್ಟದ್ದನ್ನು ಸ್ವೀಕರಿಸು, ನೀನು ಬಯಸಬೇಡ

ವೆಂಕಟಾಚಲ ಅವಧೂತರ ಈ ಮಾತುಗಳನ್ನು ನಿಧಾನವಾಗಿ ಮನನ ಮಾಡಿದರೆ ಹೊಸ ಅರ್ಥಗಳು ಹೊಳೆಯುತ್ತವೆ. ಮನಸ್ಸನ್ನು ಮಾಗಿಸುವ, ಶಾಂತಿ ಕೊಡುವ ಅವಧೂತರ ಮಾತುಗಳಿಗೆ ಹಿಂದೆ ದೊಡ್ಡ ಶಕ್ತಿಯಿದೆ. ಅವಧೂತ ವಾಣಿಯನ್ನು ನಂಬಿ, ಅನುಸರಿಸಿದರೆ ನಮ್ಮ ಬದುಕು ಸಹ ಒಳಿತಿನ ಹಾದಿಯಲ್ಲಿ ಮುನ್ನಡೆಯುವುದರಲ್ಲಿ ಸಂಶಯವಿಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.