ಶ್ರೀ ಕೊಳಗ ಮಹಾಲಕ್ಷ್ಮಿ ದೇಗುಲ: ತುಮಕೂರಿನ ಈ ಲಕ್ಷ್ಮೀ ದೇಗುಲ ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧ, ಬದುಕಿಗೆ ಭರವಸೆ ಕೊಡುವ ತಾಯಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀ ಕೊಳಗ ಮಹಾಲಕ್ಷ್ಮಿ ದೇಗುಲ: ತುಮಕೂರಿನ ಈ ಲಕ್ಷ್ಮೀ ದೇಗುಲ ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧ, ಬದುಕಿಗೆ ಭರವಸೆ ಕೊಡುವ ತಾಯಿ

ಶ್ರೀ ಕೊಳಗ ಮಹಾಲಕ್ಷ್ಮಿ ದೇಗುಲ: ತುಮಕೂರಿನ ಈ ಲಕ್ಷ್ಮೀ ದೇಗುಲ ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧ, ಬದುಕಿಗೆ ಭರವಸೆ ಕೊಡುವ ತಾಯಿ

ಕೊಳಗ ಮಹಾಲಕ್ಷ್ಮೀ ಪೂಜೆಯಿಂದ ದಾರಿದ್ರ್ಯವು ದೂರವಾಗುತ್ತದೆ. ಅಂತಹವರ ಜೀವನದಲ್ಲಿ ಹಣಕ್ಕಾಗಲಿ ಅಥವಾ ದವಸ, ಧಾನ್ಯಕ್ಕಾಗಿ ಎಂದಿಗೂ ಕೊರತೆ ಉಂಟಾಗುವುದಿಲ್ಲ. (ಬರಹ: ಸತೀಶ್ ಎಚ್.)

ತುಮಕೂರು ಲಿಂಗಾಪುರದಲ್ಲಿರುವ ಕೊಳಗ ಮಹಾಲಕ್ಷ್ಮೀ ದೇವಿ
ತುಮಕೂರು ಲಿಂಗಾಪುರದಲ್ಲಿರುವ ಕೊಳಗ ಮಹಾಲಕ್ಷ್ಮೀ ದೇವಿ

ತುಮಕೂರಿನ ಲಿಂಗಾಪುರದಲ್ಲಿ ಇರುವ ದೇವಾಲಯವೊಂದು ವಿಶೇಷ ನಂಬಿಕೆಯ ಸ್ಥಾನವಾಗಿದೆ. ಇದೇ ಶ್ರೀ ಕೊಳಗ ಮಹಾಲಕ್ಷ್ಮಿ. ಇದರ ಹೆಸರಿನಲ್ಲಿಯೇ ವೈಶಿಷ್ಟ್ಯವಿದೆ. ನೂರಾರು ವರ್ಷಗಳ ಹಿಂದಿನ ಮಾತು. ಅದು ವಿಜಯನಗರದ ಅರಸರ ಕಾಲ. ಈ ದೇವಾಲಯವಿರುವ ಪ್ರದೇಶವು ಪಾಳೇಗಾರನೊಬ್ಬನ ಅಧೀನದಲ್ಲಿ ಇತ್ತು. ತನ್ನ ದಿನನಿತ್ಯದ ಜೀವನಕ್ಕಾಗಿ ಆ ಪಾಳೇಗಾರನು ಕೃಷಿಯನ್ನು ಅವಲಂಬಿಸಿರುತ್ತಾನೆ. ಒಮ್ಮೆ ಕೃಷಿಕಾರ್ಯದಲ್ಲಿ ತೊಡಗಿದ ವೇಳೆ ಅವರ ನೇಗಿಲಿಗೆ ಹಿತ್ತಾಳೆಯ ಕೊಳಗವೊಂದು ದೊರೆಯುತ್ತದೆ. ಆಗಿನ ದಿನಗಳಲ್ಲಿ ನೀರು ಅಥವಾ ದಿನಸಿ ಪದಾರ್ಥಗಳ ಶೇಖರಣೆಗಾಗಿ ಇಂತಹ ಕೊಳಗವನ್ನು ಬಳಸುತ್ತಿರುತ್ತಾರೆ. ಇದಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡದ ಪಾಳೇಗಾರನು ಸರಳವೆಂಬಂತೆ ಬಾವಿಸುತ್ತಾನೆ.

ಒಮ್ಮೆ ಶ್ರೀ ಮಹಾಲಕ್ಷ್ಮಿಯು 'ನಾನು ನಿನ್ನ ಬಳಿ ಇರುವ ಕೊಳಗದಲ್ಲಿ ಸ್ಥಿತಳಾಗಿದ್ದೇನೆ. ಪ್ರತಿದಿನವೂ ನನ್ನನ್ನು ನೀನು ಪೂಜಿಸು' ಎಂದು ಆಜ್ಞಾಪಿಸುತ್ತಾಳೆ. ನಿದ್ದೆಯಿಂದ ಎಚ್ಚೆತ್ತ ಪಾಳೆಗಾರನು ಕೊಳಗದ ಮೇಲೆ ಶ್ರೀ ಮಹಾಲಕ್ಷ್ಮಿಯ ಚಿತ್ರಣವಿರುವುದನ್ನು ಕಾಣುತ್ತಾನೆ. ಅದರೊಂದಿಗೆ ಶ್ರೀ ಸೂರ್ಯ ಮತ್ತು ಚಂದ್ರನ ಚಿತ್ರವೂ ಕಂಡುಬರುತ್ತದೆ. ಇಂದಿಗೂ ಈ ಮೂರು ದೇವರ ಚಿತ್ರಗಳನ್ನು ನಾವು ಕಾಣಬಹುದು.

ಪಾಳೆಗಾರನು ಇದರ ಬಗ್ಗೆ ತನ್ನ ಜನರ ಬಳಿ ಹೇಳಿಕೊಳ್ಳುತ್ತಾನೆ. ಮಾತ್ರವಲ್ಲದೆ ಮನದಲ್ಲಿ ಆತಂಕವಿದ್ದರೂ ಭಕ್ತಿ ಭಾವನೆಯಿಂದ ಲಕ್ಷ್ಮಿದೇವಿಯ ಪೂಜೆಯನ್ನು ನಡೆಸಿಕೊಂಡು ಬರುತ್ತಾನೆ. ಆದರೂ ಆತ್ಮತೃಪ್ತಿ ಇಲ್ಲದೆ ದೇವರಲ್ಲಿ ಒಮ್ಮೆ ಪ್ರತ್ಯಕ್ಷಳಾಗುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ಆತನ ಆಶಯದಂತೆ ಶ್ರೀ ಮಹಾಲಕ್ಷ್ಮಿಯು ಮುತ್ತೈದೆಯ ರೂಪದಲ್ಲಿ ಪ್ರತ್ಯಕ್ಷಳಾಗುತ್ತಾಳೆ. ಪಾಳೆಗಾರನನ್ನು ಕುರಿತು ಅವನ ಭಕ್ತಿಭಾವಕ್ಕೆ ಒಲಿದಿರುವುದಾಗಿಯೂ. ಶಾಶ್ವತವಾಗಿ ಇದೇ ಕ್ಷೇತ್ರದಲ್ಲಿ ನೆಲೆಸುವುದಾಗಿ ವಚನವನ್ನು ನೀಡುತ್ತಾಳೆ. ಅಲ್ಲದೆ ಈ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಭಕ್ತರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸುತ್ತಾಳೆ.

ಇದರಿಂದ ಉತ್ತೇಜಿತರಾದ ಪಾಳೇಗಾರರು ತಮ್ಮ ಸೇವೆಗಳನ್ನು ಮುಂದುವರೆಸುತ್ತಾರೆ. ಕೆಲವರು ಈ ಕ್ಷೇತ್ರದ ಮತ್ತು ಶ್ರೀ ಮಹಾಲಕ್ಷ್ಮಿಯ ಶಕ್ತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಆಗ ಪಾಳೇಗಾರರು ದೇವರ ಮುಂದೆ ಆಹಾರ ಧಾನ್ಯವನ್ನು ಸುರಿಯಲು ತಿಳಿಸುತ್ತಾರೆ. ಆನಂತರ ಅಲ್ಲಿ ಸೇರಿದ್ದ ಪ್ರಜೆಯೊಬ್ಬರನ್ನು ಕರೆದು ಆ ಆಹಾರ ಧಾನ್ಯವನ್ನು ಅಳತೆ ಮಾಡಲು ತಿಳಿಸುತ್ತಾರೆ. ಅದನ್ನು ಅಳೆದು ಅಳೆದು ಸುಸ್ತಾಗುತ್ತದೆ ಹೊರತಾಗಿ ಅಲ್ಲಿರುವ ಆಹಾರಧಾನ್ಯವು ಮುಗಿಯುವುದೇ ಇಲ್ಲ. ಇಂದಿಗೂ ನಾವು ಅಲ್ಲಿ ಕೊಳಗವನ್ನು ನೋಡಬಹುದಾಗಿದೆ.

ಆಸೆಗಳನ್ನು ಈಡೇರಿಸುವ ದೇವತೆ ಮಹಾಲಕ್ಷ್ಮೀಯ ಪೂಜಾ ವಿಧಾನ

ತುಮಕೂರಿನ ಲಿಂಗಾಪುರ ಕೊರಳ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಮತ್ತು ಹರಕೆಯನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಪಡೆದ ಹಲವರನ್ನು ನಾವು ಕಾಣಬಹುದು. ಲಿಂಗಾಪುರ ಕೊಳಗ ಮಹಾಲಕ್ಷ್ಮೀ ಕ್ಷೇತ್ರದ ಭಾವಚಿತ್ರವನ್ನು ತಂದು ಮನೆಯಲ್ಲಿ ಪ್ರತಿ ಶುಕ್ರವಾರದಂದು ಬೆಳಗಿನ ವೇಳೆ ಮತ್ತು ಸಂಜೆ ಸೂರ್ಯಾಸ್ತದ ಮುನ್ನ ಪೂಜಿಸಬೇಕು. ಆ ದೇವರಲ್ಲಿರುವ ಜೀವಂತ ಕಳೆ ಎಲ್ಲರ ಜೀವನದಲ್ಲಿಯೂ ಹೊಸ ಭರವಸೆ, ಆಸೆಯನ್ನು ತುಂಬುತ್ತದೆ.

ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಭಾವಚಿತ್ರವನ್ನು ಇಟ್ಟು ಶುಕ್ರವಾರ ಭಕ್ತಿಭಾವದಿಂದ ಪೂಜಿಸಬೇಕು. ಶನಿವಾರಂದು ಅದೇ ಅಕ್ಕಿಯಿಂದ ಸಿಹಿ ಖಾದ್ಯವನ್ನು ತಯಾರಿಸಿ ಕುಟುಂಬದ ಎಲ್ಲರೂ ಸ್ವೀಕರಿಸಬೇಕು. ಇದರಿಂದ ಕುಟುಂಬದಲ್ಲಿ ನೆಲೆಸಿರುವ ದಾರಿದ್ರ್ಯವು ದೂರವಾಗುತ್ತದೆ. ಅಂತಹವರ ಜೀವನದಲ್ಲಿ ಹಣಕ್ಕಾಗಲಿ ಅಥವಾ ದವಸ, ಧಾನ್ಯಕ್ಕಾಗಿ ಎಂದಿಗೂ ಕೊರತೆ ಉಂಟಾಗುವುದಿಲ್ಲ. ಆ ದಿನ ಮನೆಗೆ ಆಗಮಿಸುವ ಹೆಣ್ಣುಮಕ್ಕಳಿಗೆ ತಾಂಬೂಲ ದಕ್ಷಿಣೆಯ ಸಮೇತ ಹಸಿರು ಬಣ್ಣದ ರವಿಕೆಯ ಕಣನೀಡುವುದರಿಂದ ವಿವಾಹ ನಿಶ್ಚಯವಾಗುತ್ತದೆ. ಅಲ್ಲದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಉತ್ತಮ ಸಂತಾನ ಭಾಗ್ಯಕ್ಕೂ ಈ ಸೇವೆಯಿಂದ ಫಲ ಪಡೆದ ಜನರಿದ್ದಾರೆ.

ತುಮಕೂರು ಸಮೀಪ ಮಧುಗಿರಿ ರಸ್ತೆಯಲ್ಲಿರುವ ಈ ಕ್ಷೇತ್ರಕ್ಕೆ ಬಸ್‌, ಅಟೊಗಳ ಮೂಲಕವೂ ತಲುಪಬಹುದು. ಬೆಂಗಳೂರಿನಿಂದ ಸ್ವಂತ ವಾಹನಗಳಲ್ಲಿ ಹೊರಡುವವರು ತುಮಕೂರಿನ ನಂತರ ಮಧುಗಿರಿ ರಸ್ತೆಯಲ್ಲಿ ತೆರಳಿ, ಕ್ಷೇತ್ರಕ್ಕೆ ಸೇರಬಹುದು. ಗೂಗಲ್ ಮ್ಯಾಪ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.