Magha Masam: ಮಾಘ ಮಾಸದ ಮಹಿಮೆಯನ್ನು ಸ್ವತಃ ಶಿವನೇ ಪಾರ್ವತಿಗೆ ತಿಳಿಸಿದ್ದ; ನೀವೂ ತಿಳಿಯಿರಿ-culture in hindu religion magha masam 2024 importance of magha masa story told by lord shiva to parvathi mgb ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Masam: ಮಾಘ ಮಾಸದ ಮಹಿಮೆಯನ್ನು ಸ್ವತಃ ಶಿವನೇ ಪಾರ್ವತಿಗೆ ತಿಳಿಸಿದ್ದ; ನೀವೂ ತಿಳಿಯಿರಿ

Magha Masam: ಮಾಘ ಮಾಸದ ಮಹಿಮೆಯನ್ನು ಸ್ವತಃ ಶಿವನೇ ಪಾರ್ವತಿಗೆ ತಿಳಿಸಿದ್ದ; ನೀವೂ ತಿಳಿಯಿರಿ

Magha Masam 2024: ಮಾಘ ಮಾಸದಲ್ಲಿ ಮಾಡುವ ಪೂಜೆಯಿಂದ ಮತ್ತು ಮಾಘ ಸ್ನಾನ ಮಾಡುವುದರಿಂದ ಅನೇಕ ರೀತಿಯ ಶುಭ ಫಲಗಳು ನಮಗೆ ದೊರೆಯಲಿವೆ. ಮಾಘ ಮಾಸದ ಮಹಿಮೆಯನ್ನು ಸ್ವತಃ ಶ್ರೀ ಶಂಕರನೇ ಪಾರ್ವತಿಗೆ ತಿಳಿಸುತ್ತಾನೆ.(ಲೇಖನ: ಎಚ್‌. ಸತೀಶ್‌, ಜ್ಯೋತಿಷಿ-ಬೆಂಗಳೂರು)

ಶಿವ ಪಾರ್ವತಿ
ಶಿವ ಪಾರ್ವತಿ

ಒಮ್ಮೆ ಪಾರ್ವತಿಯು ಶಿವನನ್ನು ಕುರಿತು ಮಾಘ ಮಾಸದ ಮಹಿಮೆಯ ಬಗ್ಗೆ ತಿಳಿಸಬೇಕೆಂದು ಕೋರುತ್ತಾಳೆ. ಸೂರ್ಯನು ಮಕರ ರಾಶಿಯಲ್ಲಿರುವಾಗ ಸೂರ್ಯನು ಉದಯವಾಗುವ ಮುಂಚೆಯೇ ಅಥವಾ ಸೂರ್ಯೋದಯದ ವೇಳೆ ಸ್ನಾನವನ್ನು ಮಾಡಬೇಕು. ಆಗ ಮಾತ್ರ ಮನುಷ್ಯನು ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ಎಲ್ಲಾ ರೀತಿಯ ಪಾಪಕರ್ಮಗಳಿಂದ ನಿವೃತ್ತಿಯಾಗಬಹುದು. ಇದರಿಂದಾಗಿ ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ಶಿವನು ಪಾರ್ವತಿಗೆ ತಿಳಿಸುತ್ತಾನೆ.

ಎಲ್ಲರೂ ನದಿ ಅಥವಾ ಸಮುದ್ರದಲ್ಲೇ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕನಿಷ್ಠಪಕ್ಷ ಒಂದು ಹಸುವು ನಿಂತಾಗ ಅದರ ಪಾದ ಮುಳುಗುವಷ್ಟು ನೀರಿದ್ದಲ್ಲಿ ಅಲ್ಲಿಯೂ ಸ್ನಾನವನ್ನು ಮಾಡಬಹುದು. ಸೂರ್ಯೋದಯದ ವೇಳೆಯಲ್ಲಿ ಕೆರೆ, ಕಾಲುವೆ ಅಥವಾ ಇನ್ನಾವುದೇ ನೀರಿರುವ ಸ್ಥಳದಲ್ಲಿ ಸ್ನಾನ ಮಾಡಿದರೆ ಅದು ಗಂಗಾ ಸ್ನಾನ ಅಥವಾ ಪುಣ್ಯ ಸ್ನಾನಕ್ಕೆ ಸಮನಾಗುತ್ತದೆ. ಮಾಘಮಾಸದಲ್ಲಿ ಯಾವುದೇ ಸಂಕಲ್ಪವನ್ನು ಮಾಡಿಕೊಂಡು ಮಾಡುವ ಪೂಜೆ ಪುರಸ್ಕಾರಗಳು, ದಾನ ಧರ್ಮಗಳು ಹೆಚ್ಚಿನ ಫಲ ನೀಡುತ್ತವೆ . ನೀರಿಗೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಬಹುದು. ಇದರಿಂದ ಬ್ರಹ್ಮ ಹತ್ಯ ದೋಷ ಸಹ ಪರಿಹಾರವಾಗುವುದು ಎಂದು ಶಿವನು ಪಾರ್ವತಿಗೆ ಹೇಳುತ್ತಾನೆ.

ಕೆಲವು ಕಾರಣಗಳಿಂದ ವಿಶ್ವಾಮಿತ್ರನಿಗೆ ಕೋತಿಯ ಮುಖವಿರುತ್ತದೆ. ಆಗ ವಿಶ್ವಾ ಮಿತ್ರನು ಮಾಘಸ್ನಾನವನ್ನು ಮಾಡುತ್ತಾರೆ. ಆನಂತರ ಅವರಿಗೆ ಇದ್ದ ಕೋತಿಯ ಮುಖವು ಮರೆಯಾಗುತ್ತದೆ. ಸರಿಯಾಗಿ ಸಂಸ್ಕಾರ ಆಗದೆ ಇದ್ದ ಪ್ರೇತಾತ್ಮಕ್ಕೆ ಸಹ ಮಾಘಸ್ನಾನದಿಂದ ಮುಕ್ತಿ ದೊರೆಯುತ್ತದೆ. ದೇವರಲ್ಲಿ ನಂಬಿಕೆ ಇಟ್ಟಿದ್ದ ಭಕ್ತನೊಬ್ಬನು ಮಾಘ ಸ್ನಾನದದನಂತರ ಹರಿಹರರಲ್ಲಿ ಭೇದವಿಲ್ಲ ಎಂದು ಜಗತ್ತಿಗೆ ತಿಳಿಸಿ ಕೊಡುತ್ತಾನೆ.

ಪರಿಪೂರ್ಣ ವಿದ್ಯಾವಂತರಾಗಿದ್ದ ಋಷಿಮುನಿಗಳ ನಡುವೆ ದೊಡ್ಡ ಪ್ರಮಾಣದ ಕಲಹ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾಘ ಸ್ನಾನದಿಂದ ಈ ಕಲಹವು ಅಂತ್ಯಗೊಂಡಿತು ಎಂದು ಹೇಳಲಾಗುತ್ತದೆ. ಶಿವ ಬ್ರಹ್ಮನನ್ನು ಹಾಗೆಯೇ ಬ್ರಹ್ಮ ಶಿವನನ್ನು ನಿಂದಿಸುವ ವಿಚಾರ ಎಲ್ಲರಿಗೂ ತಿಳಿದಿದೆ. ಬ್ರಹ್ಮ ಕಪಾಲದ ಬಗ್ಗೆ ದೊಡ್ಡ ಕಥೆಯೇ ಇದೆ. ಇವರಿಬ್ಬರ ನಡುವಿನ ಕಲಹವು ಶ್ರೀ ವಿಷ್ಣುವಿನದ ಮಧ್ಯಸ್ಥಿಕೆಯಿಂದ ಪರಿಹಾರ ಗೊಳ್ಳುತ್ತದೆ. ಇದಕ್ಕೆ ಕಾರಣ ಮಾಘ ಸ್ನಾನ ಮತ್ತು ಮಾಘ ಮಾಸದಲ್ಲಿ ಮಾಡಿದ ಪೂಜೆ ಎಂದು ಹೇಳಲಾಗುತ್ತದೆ.

ಸೂರ್ಯನು ಮಕರ ರಾಶಿಯಲ್ಲಿ ಸಂಚರಿಸುವ ವೇಳೆ, ಸೂರ್ಯೋದಯಕ್ಕಿಂತ ಮುಂಚೆ ಅಥವಾ ಸೂರ್ಯೋದಯದ ವೇಳೆ ಸ್ನಾನವನ್ನು ಮಾಡಿದರೆ ಸಕಲ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಪಾರ್ವತಿಗೆ ಶಿವನು ತಿಳಿಸುತ್ತಾನೆ. ಮಾಘ ಮಾಸದ ಪ್ರತಿದಿನವೂ ಸ್ನಾನವನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಠಪಕ್ಷ ಹುಣ್ಣಿಮೆ ಮತ್ತು ಏಕಾದಶಿಯ ದಿನಗಳಂದು ಸ್ನಾನ ಮಾಡುವುದರಿಂದ ಪಾಪ ವಿಮುಕ್ತರಾಗಬಹುದು.

ಮಾಘ ಮಾಸದಲ್ಲಿ ಮುಖ್ಯವಾಗಿ ಶ್ರೀಹರಿಯ ಪೂಜೆಯನ್ನು ಮಾಡಬೇಕು. ಕೇವಲ ಜ್ಞಾನ ಮತ್ತು ಪೂಜೆಯಿಂದ ಯಾವುದು ಸಾಧ್ಯವಾಗದು. ಮೊರದ ಜೊತೆಯನ್ನು ದಾನ ನೀಡಿ ಆಶೀರ್ವಾದವನ್ನು ಪಡೆಯಬೇಕು. ಇದಲ್ಲದೆ ಹಣ್ಣು, ಹಾಲು, ಮೊಸರು, ತರಕಾರಿಗಳು ಹೀಗೆ ಯಾವುದೇ ಅಡುಗೆಗೆ ಉಪಯೋಗಿಸುವ ಪದಾರ್ಥಗಳನ್ನು ದಾನ ನೀಡಬಹುದು. ಈ ರೀತಿ ದಾನ ನೀಡುವುದರಿಂದ ಜನ್ಮವಿಡಿ ಅನ್ನ ದೊರೆಯುತ್ತದೆ. ಉಪವಾಸದ ಭಯ ಇರುವುದಿಲ್ಲ.

ಕುಟುಂಬದಲ್ಲಿರುವ ತಂದೆ, ತಾಯಿ, ತಾತ, ಅಜ್ಜಿ ಅಥವಾ ಬೇರೆ ವಯೋವೃದ್ಧರಿಗೆ ಗೌರವ ನೀಡದೆ ಅವಮಾನ ಮಾಡಿದಲ್ಲಿ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ದಾನ ಧರ್ಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಎಲ್ಲಾ ರೀತಿಯ ಶುಭಫಲಗಳನ್ನು ಪಡೆಯಬಹುದೆಂದು ಶಿವನು ಪಾರ್ವತಿಗೆ ಹೇಳುತ್ತಾನೆ.

ಬರಹ: ಎಚ್‌. ಸತೀಶ್‌, ಜ್ಯೋತಿಷಿ-ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.