Naga Panchami 2024: ಒಡಹುಟ್ಟಿದವರಿಗೆ ಒಳಿತು ಕೋರುವ ಸಂಭ್ರಮದ ಹಬ್ಬ ನಾಗರಪಂಚಮಿ, ಸೋದರ ಬಾಂಧವ್ಯಕ್ಕೆ ಸಂಸ್ಕೃತಿಯ ಸ್ಪರ್ಶ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Naga Panchami 2024: ಒಡಹುಟ್ಟಿದವರಿಗೆ ಒಳಿತು ಕೋರುವ ಸಂಭ್ರಮದ ಹಬ್ಬ ನಾಗರಪಂಚಮಿ, ಸೋದರ ಬಾಂಧವ್ಯಕ್ಕೆ ಸಂಸ್ಕೃತಿಯ ಸ್ಪರ್ಶ

Naga Panchami 2024: ಒಡಹುಟ್ಟಿದವರಿಗೆ ಒಳಿತು ಕೋರುವ ಸಂಭ್ರಮದ ಹಬ್ಬ ನಾಗರಪಂಚಮಿ, ಸೋದರ ಬಾಂಧವ್ಯಕ್ಕೆ ಸಂಸ್ಕೃತಿಯ ಸ್ಪರ್ಶ

ನಾಗರ ಪಂಚಮಿ ಕಥೆ: ಕರ್ನಾಟಕದಲ್ಲಿ ನಾಗರ ಪಂಚಮಿಯನ್ನು ಸೋದರ-ಸೋದರಿಯರ ಹಬ್ಬವಾಗಿ ಆಚರಿಸುವುದು ವಾಡಿಕೆ. ಒಡಹುಟ್ಟಿದವರ ಒಡನಾಟವನ್ನು ಸಂಭ್ರಮಿಸುವ ಹಬ್ಬ ಇದು. ನಾಗರ ಹಾವನ್ನು ನೆನೆಯುವ ಮೂಲಕ ಪ್ರಕೃತಿಯೊಂದಿಗೆ ಮನುಷ್ಯರಿಗೆ ಇರುವ ಸಂಬಂಧವನ್ನೂ ಈ ಹಬ್ಬ ನೆನಪಿಸುತ್ತದೆ. (ಬರಹ: ಸತೀಶ್ ಎಚ್)

ನಾಗರ ಪಂಚಮಿ ಹಬ್ಬದ ಮಹತ್ವ
ನಾಗರ ಪಂಚಮಿ ಹಬ್ಬದ ಮಹತ್ವ

ನಾಗರ ಪಂಚಮಿಯು ಸೋದರ ಮತ್ತು ಸೋದರಿಯರ ನಡುವಿನ ಅನುಬಂಧವನ್ನು ಹೆಚ್ಚಿಸುವಂತಹ ಹಬ್ಬವಾಗಿದೆ. ಇದನ್ನು ಗರುಡಪಂಚಮಿ ಎಂದೂ ಕರೆಯುತ್ತಾರೆ. ಆಗಸ್ಟ್‌ 9, 2024 ರಂದು ಈ ಹಬ್ಬವನ್ನು ಕರ್ನಾಟಕದಲ್ಲಿ ಆಚರಿಸಲಾಗುತ್ತದೆ. ಒಂದೇ ತಾಯಿಯ ಮಕ್ಕಳು ಮಾತ್ರವಲ್ಲದೆ ಸೋದರ ಭಾವನೆ ಇದ್ದಾಗಲೂ ಈ ಹಬ್ಬವನ್ನು ಆಚರಿಸಬಹುದಾಗಿದೆ. ಆ ದಿನದೊಂದು ಆಚರಿಸಿದ ಹಬ್ಬದಿಂದ ಸೋದರಿಯರ ರಕ್ಷಣೆಯ ಜವಾಬ್ದಾರಿಯನ್ನು ಸೋದರರು ನಿರ್ವಹಿಸುತ್ತಾರೆ. ಇದಕ್ಕೆ ದೈವಾನುಗ್ರಹವು ಕಾರಣವಾಗಿದೆ.

ನಾಗ ಚತುರ್ಥಿಯ ದಿನ ನಾಗಪ್ಪನ ಪೂಜೆ ಮಾಡಿ ಭತ್ತದ ಹರಳನ್ನು ಶೇಖರಿಸಬೇಕು. ಈ ಪೂಜೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹವು ಸೋದರ ಮತ್ತು ಸೋದರಿಗೆ ದೊರೆಯುತ್ತದೆ ಎಂಬ ಮಾತು ಇದೆ. ಮನೆಗೆ ಆಗಮಿಸಿದ ಸೋದರರನ್ನು ಪ್ರೀತಿಯಿಂದ ಕಂಡು ಅವರನ್ನು ಪೂರ್ವಾಭಿಮುಖವಾಗಿ ಕೂಡಿಸಿ ಅರಿಶಿನ ಮತ್ತು ಕುಂಕುಮವನ್ನು ಇಟ್ಟುಹೂವಿನಿಂದ ಬೆನ್ನನ್ನು ಹಾಲಿನಿಂದ ತೊಳೆದು ಸುಬ್ರಹ್ಮಣ್ಯ ಸ್ವಾಮಿಗೆ ನೈವೇದ್ಯವಾಗಿ ಅರ್ಪಿಸಿದ್ದ ಹರಳನ್ನು ಹಾಕುತ್ತಾರೆ. ಈ ಪ್ರಕ್ರಿಯೆಯನ್ನು ಬೆನ್ನು ತೊಳೆಯುವುದು ಎಂದು ಕರೆಯುತ್ತಾರೆ.

ನಾಗ ಪಂಚಮಿ ಪೂಜೆ ಮಾಡುವ ಆಸೆ ವ್ಯಕ್ತಪಡಿಸಿದ ಅಕ್ಮಂಜಿ

ಈ ವ್ರತದ ಹಿಂದೆ ಸೊಗಸಾದ ಕಥೆ ಇದೆ. ಒಂದು ಊರಿನಲ್ಲಿ ಬಡ ಬ್ರಾಹ್ಮಣನೊಬ್ಬನಿದ್ದನು. ಬಹು ದಿನಗಳ ನಂತರ ದೈವಾನುಗ್ರಹದಿಂದ ದಂಪತಿಗಳಿಗೆ ಒಳ್ಳೆಯ ಸಂತಾನವಾಗುತ್ತದೆ. ಅವನ ಮಗಳ ಹೆಸರು ಅಕ್ಮಂಜಿ. ಗರುಡ ಪಂಚಮಿಯ ದಿನ ಅಕ್ಮಂಜಿಯು ಪೂಜೆಯನ್ನು ಮಾಡಬೇಕೆಂಬ ಆಸೆಯನ್ನು ತಂದೆಯ ಬಳಿ ವ್ಯಕ್ತಪಡಿಸುತ್ತಾಳೆ. ಆಗ ಸಂತೋಷದ ಈ ವಿಚಾರವನ್ನು ಸೋದರರಿಗೆ ತಿಳಿಸುವಂತೆ ತಿಳಿಸುತ್ತಾನೆ.

ಆಗ ಅಕ್ಮಂಜಿಯು ತನ್ನ ಸೋದರರನ್ನು ಕುರಿತು ನಾಗಪಂಚಮಿಯ ಪೂಜೆಯನ್ನು ಮಾಡಬೇಕೆಂಬ ತನ್ನ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಇದನ್ನು ಕೇಳಿದ ಆಕೆಯ ಸೋದರರಿಗೆ ಹೆಚ್ಚಿನ ಸಂತೋಷವಾಗುತ್ತದೆ. ತಮ್ಮ ದೈನಂದಿನ ಕೆಲಸ ಮುಗಿಸಿ ಬಂದ ಆಯಾಸವನ್ನು ಮರೆತು ಸೋದರಿಗೆ ಅವಶ್ಯಕತೆ ಇರುವ ಅರಿಶಿಣ ಕುಂಕುಮ ಮುಂತಾದ ಪೂಜನೀಯ ವಸ್ತುಗಳನ್ನು ತಂದುಕೊಡುತ್ತಾರೆ. ಆದರೆ ಇದರಿಂದ ಅಕ್ಮಂಜಿಗೆ ತೃಪ್ತಿಯಾಗುವುದಿಲ್ಲ. ಪೂಜಿಸಲು ನನಗೆ ನಾಗಪ್ಪನ ವಿಗ್ರಹ ಬೇಕು ತಂದುಕೊಡಿ ಎಂದು ಬೇಡುತ್ತಾಳೆ. ಸೋದರರು ಬಂಗಾರದ ಪಂಚಮುಖವಿರುವ ನಾಗಪ್ಪನ ವಿಗ್ರಹವನ್ನು ಪೂಜೆಗೆ ಒದಗಿಸುತ್ತಾರೆ.

ಸುಬ್ರಹ್ಮಣ್ಯ ಸ್ವಾಮಿಗೆ ಇಷ್ಟವೆನಿಸುವ ಮಲ್ಲಿಗೆ ಹೂವನ್ನು ಪೂಜೆಗೆ ಬೇಕು ಎಂದು ಕೇಳುತ್ತಾಳೆ. ಈ ಕಾರಣದಿಂದಲೇ ನಾಗಮಲ್ಲಿಗೆ ಇರುವ ಕಡೆ ಸರ್ಪದ ಓಡಾಟವನ್ನು ನಾವು ಕಾಣಬಹುದು. ಆಗ ಸೋದರರು ಮಲ್ಲಿಗೆಯ ಹೂವಿನ ಜೊತೆಯಲ್ಲಿ ಇನ್ನಿತರ ಹೂಗಳನ್ನು ತಂದು ಸೋದರಿಗೆ ಕೊಡಬೇಕೆಂಬ ಆಸೆಯಿಂದ ಹೂವನ್ನು ತರಲು ಹೊರಡುತ್ತಾರೆ.

ಗಿಡಗಳ ಮಧ್ಯೆ ವಿವಿಧ ರೀತಿಯ ಹೂಗಳನ್ನು ಶೇಖರಿಸುತ್ತಾರೆ. ಆದರೆ ಅತಿಯಾದ ಸುವಾಸನೆಯುಳ್ಳ ಕೇದಿಗೆ ಹೂವು ಇವರ ಕಣ್ಣಿಗೆ ಬೀಳುತ್ತದೆ. ಅದನ್ನು ಪಡೆಯಬೇಕೆಂಬ ಆಸೆಯೂ ಉಂಟಾಗುತ್ತದೆ. ದುರಾದೃಷ್ಟವೆಂಬಂತೆ ಆ ಹೂಗಳ ಮಧ್ಯೆ ಸರ್ಪ ಒಂದು ಅವಿತು ಕುಳಿತಿರುತ್ತದೆ. ಹೂವನ್ನು ಕೀಳಲು ಕೈಇಟ್ಟ ತಕ್ಷಣ ಅವರ ಕೈಗೆ ಆ ಹಾವು ಕಡಿದುಬಿಡುತ್ತದೆ. ವಿಷವು ಹೆಚ್ಚಾಗಿ ತಲೆಗೆ ಏರುವ ಕಾರಣ ಅಕ್ಮಂಜೆಯ ಸೋದರರು ಜ್ಞಾನತಪ್ಪಿ ಬಿದ್ದುಬಿಡುತ್ತಾರೆ. ಈ ವಿಚಾರವನ್ನು ದಾರಿಹೋಕರು ಸೋದರಿಗೆ ತಿಳಿಸುತ್ತಾಳೆ. ಆಗ ದುಃಖದಿಂದ ತಾನು ನಾಗಪ್ಪನ ಪೂಜೆಯನ್ನು ಮಾಡುವುದರಿಂದ ಸೋದರರಿಗೆ ಮರುಜನ್ಮ ಬರಲಿ ಎಂದು ಬೇಡಿಕೊಳ್ಳುತ್ತಾಳೆ.

ಸೋದರರಿಗೆ ಮರುಜನ್ಮ ಕೊಟ್ಟ ನಾಗಪ್ಪ

ನೆನೆಸಿದ ಅಕ್ಕಿ ನೆನೆಗಡಲೆ, ಬಾಳೆಹಣ್ಣು, ಚಿಗಳಿ ತಂಬಿಟ್ಟು, ತೆಂಗಿನಕಾಯಿ, ಭತ್ತದ ಅರಳು, ಹುರಿಗಡಲೆ, ಹುಣಸೆಕಾಯಿ ಗಳನ್ನು ಪೂಜೆಗೆ ಶೇಖರಿಸುತ್ತಾಳೆ. ನಾಗಪ್ಪನನ್ನು ಒಂದು ಬಟ್ಟಲಲ್ಲಿ ಹಿಡಿಸಿ ಅದಕ್ಕೆ ಹಳದಿಯ ವಸ್ತ್ರ ಯಜ್ಞೋಪವೀತ, ದೂಪ, ದೀಪಗಳನ್ನು ಅರ್ಪಿಸುತ್ತಾಳೆ. ನಿವೇದನೆಯ ನಂತರ ಆರತಿಯನ್ನು ಮಾಡಿ ಹುತ್ತದ ಮಣ್ಣು ಮತ್ತು ಭತ್ತದ ಹರಳನ್ನು ತೆಗೆದುಕೊಂಡು ಜ್ಞಾನ ತಪ್ಪಿ ಮಲಗಿದ್ದ ಸೋದರ ಮೇಲೆ ಹಾಕುತ್ತಾಳೆ. ಅವರು ತಕ್ಷಣವೇ ಎಚ್ಚೆತ್ತು ಸೋದರರು ನಾವೇಕೆ ಇಷ್ಟೊತ್ತು ಮಲಗಿದ್ದೇವೆ ಎಂದು ಚಡಪಡಿಸಿ ಎಲ್ಲವನ್ನು ಮರೆತು ಪುನಃ ಹೂಗಳನ್ನು ಶೇಖರಿಸಲು ಪ್ರಾರಂಭಿಸುತ್ತಾರೆ.

ಆಗ ಅಕ್ಮಂಜಿಯು ಸೋದರರಿಗೆ ಸಂತಸದ ಕಣ್ಣೀರಿನಿಂದ ಎಲ್ಲ ವಿಚಾರವನ್ನು ತಿಳಿಸಿ ತಾನು ಮಾಡಿದ ಪೂಜೆಯನ್ನು ವಿವರಿಸುತ್ತಾಳೆ. ಅಂದಿನಿಂದ ಇಂದಿನವರೆಗೂ ಈ ಕಾರಣದಿಂದ ನಾಗಪ್ಪನ ಪೂಜೆ ಮಾಡಿ ಸೋದರರ ಬೆನ್ನನ್ನು ತೊಳೆಯುತ್ತಾರೆ. ಇದರಿಂದ ಸೋದರರು ಆಪಮೃತ್ಯುವಿನಿಂದ ಪಾರಾಗಿ ಸುಖವಾದ ಜೀವನ ನಡೆಸುತ್ತಾರೆ ಎಂಬ ನಂಬಿಕೆ ಇದೆ. ಹೊಸದಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸೋದರಿಯರ ಹಾರೈಕೆ ಬಲು ಮುಖ್ಯವಾಗುತ್ತದೆ ಎಂಬ ನಂಬಿಕೆಯೂ ಜನಜನಿತವಾಗಿದೆ.

(ಬರಹ: ಸತೀಶ್ ಎಚ್.)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.