Dharmasthala: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಉತ್ಸವಾರಂಭ: ಮಂಜುನಾಥನ ಸನ್ನಿಧಿಯಲ್ಲಿ ಬೆಳಕಿನ ಚಿತ್ತಾರ, ವಿಚಾರ ಮಂಥನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Dharmasthala: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಉತ್ಸವಾರಂಭ: ಮಂಜುನಾಥನ ಸನ್ನಿಧಿಯಲ್ಲಿ ಬೆಳಕಿನ ಚಿತ್ತಾರ, ವಿಚಾರ ಮಂಥನ

Dharmasthala: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಉತ್ಸವಾರಂಭ: ಮಂಜುನಾಥನ ಸನ್ನಿಧಿಯಲ್ಲಿ ಬೆಳಕಿನ ಚಿತ್ತಾರ, ವಿಚಾರ ಮಂಥನ

Dharmasthala News ದಕ್ಷಿಣ ಕನ್ನಡದ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳದಲ್ಲೀಗ ಬೆಳಕಿನ ವೈಭವ. ವಿಚಾರ ಮಂಥನದ ಸಮಯ. ಈ ವರ್ಷದ ಲಕ್ಷ ದೀಪೋತ್ಸವ ಶುರುವಾಗಿದೆ. ಅದರ ವಿವರ ಇಲ್ಲಿದೆ.

ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶನಂದನ್ ಎಮ್. ಶುಕ್ರವಾರ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ ಮತ್ತಿತರರು ಹಾಜರಿದ್ದರು.
ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶನಂದನ್ ಎಮ್. ಶುಕ್ರವಾರ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ ಮತ್ತಿತರರು ಹಾಜರಿದ್ದರು.

ಮಂಗಳೂರು: ದೇಶವಿದೇಶಗಳ ಜನರನ್ನೂ ತನ್ನತ್ತ ಆಕರ್ಷಿಸುವ ಸದ್ಭಾವನೆಯ ಕ್ಷೇತ್ರವೆಂದೇ ಹೇಳಲಾಗುವ ಕರ್ನಾಟಕದ ಪವಿತ್ರ ಯಾತ್ರಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿವೆ.

ಈ ಹಿನ್ನೆಲೆಯಲ್ಲಿ ಇಡೀ ಧರ್ಮಸ್ಥಳ ಬೆಳಕಿನ ವೈಭವದೊಂದಿಗೆ ಝಗಮಗಿಸುತ್ತಿದೆ.

ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದೇವಸ್ಥಾನ, ಬೀಡು, ಪ್ರವೇಶದ್ವಾರ, ವಸತಿಗೃಹಗಳು, ಮಂಜೂಷಾ ವಸ್ತುಸಂಗ್ರಹಾಲಯ ಹಾಗೂ ವಿವಿಧ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶನಂದನ್ ಎಮ್. ಶುಕ್ರವಾರ ಉದ್ಘಾಟಿಸಿ ಶುಭ ಹಾರೈಸಿದರು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಆಶೀರ್ವದಿಸಿದರು. ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

ಡಿ. 11ರಂದು ಸೋಮವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೆ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ಡಿ. 12ರಂದು ಮಂಗಳವಾರ ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೆ ಅಧಿವೇಶನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಗಮಕಿ ಡಾ.ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು.

ಡಿ. 10ರಂದು ಭಾನುವಾರ ರಾತ್ರಿ 7 ರಿಂದ 10ರ ವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಡಿ.12 ರಂದು ಮಂಗಳವಾರ ರಾತ್ರಿ ೧೨ ಗಂಟೆ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ.ಅಂದು ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಧರ್ಮಸ್ಥಳಕ್ಕೆ ಬಂದು ವೈವಿಧ್ಯಮಯ ಸೇವೆ ಅರ್ಪಿಸುವರು.ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಉತ್ಸವಗಳು: ಡಿ. 8 ಶುಕ್ರವಾರ: ಹೊಸಕಟ್ಟೆ ಉತ್ಸವ,ಡಿ. 9 ಶನಿವಾರ: ಕೆರೆಕಟ್ಟೆ ಉತ್ಸವ, ಡಿ. 10 ಭಾನುವಾರ: ಲಲಿತೋದ್ಯಾನ ಉತ್ಸವ ಡಿ. 11 ಸೋಮವಾರ: ಕಂಚಿಮಾರುಕಟ್ಟೆ ಉತ್ಸವ, ಡಿ. 12 ಮಂಗಳವಾರ: ಗೌರಿಮಾರುಕಟ್ಟೆ ಉತ್ಸವ,ಲಕ್ಷದೀಪೋತ್ಸವ,ಡಿ. 13 ಬುಧವಾರ: ಸಂಜೆ 7 ರಿಂದ ಸಮವಸರಣ ಪೂಜೆ: ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಜರಗಲಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.