ದೀಪಾವಳಿ ಭವಿಷ್ಯ 2024: ಕುಂಭ ರಾಶಿಯವರಿಗೆ ಶುಭಫಲ; ನಷ್ಟದಲ್ಲಿರುವ ಉದ್ಯಮಕ್ಕೆ ಲಾಭ ತಂದುಕೊಡಲಿದ್ದೀರಿ, ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೀಪಾವಳಿ ಭವಿಷ್ಯ 2024: ಕುಂಭ ರಾಶಿಯವರಿಗೆ ಶುಭಫಲ; ನಷ್ಟದಲ್ಲಿರುವ ಉದ್ಯಮಕ್ಕೆ ಲಾಭ ತಂದುಕೊಡಲಿದ್ದೀರಿ, ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ

ದೀಪಾವಳಿ ಭವಿಷ್ಯ 2024: ಕುಂಭ ರಾಶಿಯವರಿಗೆ ಶುಭಫಲ; ನಷ್ಟದಲ್ಲಿರುವ ಉದ್ಯಮಕ್ಕೆ ಲಾಭ ತಂದುಕೊಡಲಿದ್ದೀರಿ, ಸಮಾಜದಲ್ಲಿ ಸ್ಥಾನಮಾನ ಹೆಚ್ಚಲಿದೆ

Deepavali Aquarius Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಕುಂಭ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್)

ಕುಂಭ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ
ಕುಂಭ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ

Deepavali Aquarius Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಕುಂಭ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ಕುಂಭ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದ ಪ್ರಕಾರ ಉದ್ಯೋಗದಲ್ಲಿನ ತೀರ್ಮಾನಗಳಿಗೆ ಎಲ್ಲರಿಂದ ಒಪ್ಪಿಗೆ ದೊರೆಯುತ್ತದೆ. ನಷ್ಟದಲ್ಲಿರುವ ಉದ್ದಿಮೆಯೊಂದನ್ನು ಆಯ್ದು ಲಾಭ ಗಳಿಸಲು ಕಾರಣರಾಗುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ಜವಾಬ್ದಾರಿಯ ಸ್ಥಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಸರಿಯಾದ ಆಯ್ಕೆಯು ನಿಮ್ಮ ಜೀವನವನ್ನು ರೂಪಿಸುತ್ತದೆ. ಆಪತ್ತಿನ ಕಾಲದಲ್ಲಿ ಭಯಪಡದೇ ಕರ್ತವ್ಯ ಪಾಲಿಸುವಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿಆಸಕ್ತಿ ಮತ್ತು ನಂಬಿಕೆ ಇರುವುದಿಲ್ಲ. ನಿರುದ್ಯೋಗಿಗಳಿಗೆ ಸಹಾಯ ಮಾಡುವಿರಿ. ಕಲಾವಿದರು ಕ್ರಿಯಾತ್ಮಕ ಯೋಜನೆಗಳಲ್ಲಿ ತಲ್ಲಿನರಾಗುತ್ತಾರೆ. ನೇರವಾಗಿ ನುಡಿಯುವ ಗುಣ ನಿಮ್ಮಲ್ಲಿ ಇರುತ್ತದೆ. ಈ ಕಾರಣದಿಂದಾಗಿ ಕೆಲವೊಮ್ಮೆ ಸಂದರ್ಭಕ್ಕೆ ಹೊಂದಿಕೊಳ್ಳಲು ದೊಡ್ಡ ಹೋರಾಟವನ್ನೇ ಮಾಡುವಿರಿ. ಲಾಭವಿಲ್ಲದೇ ಯಾವುದೇ ಕೆಲಸವನ್ನು ಮಾಡುವುದಿಲ್ಲ. ನಿಮ್ಮ ವಿರೋಧಿಗಳ ಆಟವು ನಿಮ್ಮ ಮುಂದೆ ಸಾಗದು.ಬದಲಾಗದ ಆತ್ಮವಿಶ್ವಾಸ ಮತ್ತು ನಿರ್ಣಯಗಳು ಹೊಸ ಜೀವನಕ್ಕೆ ದಾರಿಯಾಗುತ್ತವೆ. ಉದ್ಯೋಗಸ್ಥರಾದಲ್ಲಿ ಸಹೋದ್ಯೋಗಿಗಳ ಸಹಕಾರವನ್ನು ಸಿಗುತ್ತದೆ. ಸ್ವಂತ ಪರಿಶ್ರಮದಿಂದ ಮನೆ ಅಥವಾ ಜಮೀನನ್ನು ಕೊಳ್ಳುವ ಸೂಚನೆಗಳಿವೆ. ಕುಟುಂಬಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಿವಾದವು ನಿಮ್ಮ ಮಧ್ಯಸ್ಥಿಕೆಯಿಂದ ಪರಿಹಾರಗೊಳ್ಳುತ್ತದೆ. ಉತ್ತಮ ಕಲ್ಪನಾಶಕ್ತಿ ಇರುವ ಕಾರಣ ತೊಂದರೆಗೆ ಸಿಲುಕುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವಿರಿ. ಆರಂಭಿಸುವ ಪ್ರತಿಯೊಂದು ಕೆಲಸದಲ್ಲಿಯೂ ಜಯವನ್ನು ನಿರೀಕ್ಷಿಸುವಿರಿ. ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ಗೌರವಿಸ ಬೇಕೆಂಬ ಮನಸ್ಸಿರುತ್ತದೆ. ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಸ್ಥಾನಮಾನ ದೊರೆಯುತ್ತದೆ. ಬೇರೆಯವರಿಂದ ಹಣದ ಸಹಾಯವನ್ನು ನಿರೀಕ್ಷಿಸುವುದಿಲ್ಲ.

ಹೃದಯದ ಸಂಬಂಧಿ ಸಮಸ್ಯೆ ಇರುವವರು ಎಚ್ಚರ ವಹಿಸಬೇಕು

ನಿಮ್ಮ ರೀತಿ ನೀತಿಯನ್ನು ಒಪ್ಪದೇ ಹೋದಲ್ಲಿ ಕೋಪಕ್ಕೆ ಒಳಗಾಗುವಿರಿ. ಆದರೆ ಕೋಪದಲ್ಲಿಯೂ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಕೆಟ್ಟ ವಿಚಾರಗಳಿಗೆ ಮತ್ತು ತಪ್ಪು ತೀರ್ಮಾನಗಳಿಗೆ ಒಪ್ಪಿಗೆ ನೀಡುವುದಿಲ್ಲ. ತಪ್ಪನ್ನು ಸರಿಪಡಿಸುವ ಬುದ್ದಿವಂತಿಕೆ ನಿಮ್ಮಲ್ಲಿ ಇರುತ್ತದೆ. ಬಂಧು-ಬಳಗದವರಲ್ಲಿ ಮನಸ್ತಾಪವಿರುತ್ತದೆ. ವಿನಾಕಾರಣ ಅಪವಾದವೊಂದನ್ನು ಎದುರಿಸುವಿರಿ. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಅಭಿವೃದ್ಧಿಗೆ ಧಕ್ಕೆ ತರುತ್ತಾರೆ. ವಿವಾಹ ಯೋಗವಿದೆ. ಸಣ್ಣಪುಟ್ಟ ಪ್ರವಾಸಕ್ಕೂ ಮನಸ್ಸು ಮಾಡುವುದಿಲ್ಲ. ಶಾಂತಿ ಸಂಧಾನಗಳಿಂದ ಬೇರೆಯವರ ಜೀವನದ ತೊಂದರೆಗಳನ್ನು ನೀಗಿಸುವಿರಿ. ಬೇರೆಯವರಿಗೆ ಅಸಾಧ್ಯವೆನಿಸುವ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವುದರಿಂದ ತೊಂದರೆಗೆ ಒಳಗಾಗುವಿರಿ. ಹೃದಯಕ್ಕೆ ಸಂಬಂಧಪಟ್ಟ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ವಾಯುಕಾರಕ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ನಿಮಗಿಷ್ಟವಾದ ವಸ್ತು ಒಂದನ್ನು ಬೇರೆಯವರು ಅಪಹರಿಸಬಹುದು ಎಚ್ಚರಿಕೆ ಇರಲಿ. ಒಂದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಕೊಳ್ಳುವಿರಿ. ಸಮಾಜದ ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗುವಿರಿ. ದಾನ ಧರ್ಮ ಮಾಡುವಲ್ಲಿ ಸಂತಸಗೊಳ್ಳುವಿರಿ. ಸ್ವಾರ್ಥದ ಮನಸ್ಸಿನ ಜನರಿಂದ ದೂರ ಉಳಿಯುವಿರಿ. ಬೇರೆಯವರ ಉತ್ಸಾಹವನ್ನು ಹಾಳು ಮಾಡುವುದಿಲ್ಲ. ಪ್ರಯತ್ನ ಪಡದೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮೃದುವಾದ ನಡೆನುಡಿಗಳು ಜೀವನದ ಏರುಪೇರನ್ನು ಮರೆಮಾಡುತ್ತದೆ.

ವಿಶ್ರಾಂತಿ ಇಲ್ಲದ ದುಡಿಮೆಯಿಂದ ಬೇಸರ

ಆಸಕ್ತಿ ಇರುವವರಿಗೆ ಕೆಲಸ ನಿರ್ವಹಿಸಲು ಸಾಕಷ್ಟು ಪ್ರೋತ್ಸಾಹ ನೀಡುವಿರಿ. ಕೋಪದಲ್ಲಿ ಮಾಡುವ ತಪ್ಪನ್ನು ಮನ್ನಿಸುವುದು ನಿಮ್ಮ ದೊಡ್ಡ ಗುಣ. ಮಾತಿನ ಮಲ್ಲರು ಕೆಲವೊಮ್ಮೆ ಬೇರೆಯವರಿಗೆ ಬೇಸರ ಬರುವಷ್ಟು ಮಾತನಾಡುವಿರಿ. ನೀವು ಇರುವೆಡೆ ಸಂತೋಷ ಸಂಭ್ರಮಕ್ಕೆ ಕೊರತೆ ಇರುವುದಿಲ್ಲ. ಅವಸರದಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಲಭಿಸುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ದೈಹಿಕವಾಗಿ ಬಳಲುವಿರಿ. ಉತ್ತಮ ಆದಾಯವಿರುತ್ತದೆ. ಆದರೆ ಹಣವನ್ನು ಉಳಿಸಲು ಮನಸ್ಸು ಮಾಡುವುದಿಲ್ಲ. ಹಣದ ಕೊರತೆ ಉಂಟಾದಲ್ಲಿ ಸಹನೆ ಕಳೆದುಕೊಳ್ಳುವಿರಿ. ಸಂಗಾತಿಯನ್ನು ಅಪಾರ್ಥ ಮಾಡಿಕೊಂಡು ನಂತರ ಸರಿಪಡಿಸಿಕೊಳ್ಳುವಿರಿ. ಸ್ತ್ರೀಯರು ಬಂಧು ಬಳಗದವರಿಂದ ದೂರ ಉಳಿಯುತ್ತಾರೆ. ತಮ್ಮದಲ್ಲದ ತಪ್ಪಿಗೆ ಯಾರೊಬ್ಬರ ಬುದ್ಧಿವಾದವನ್ನು ಒಪ್ಪುವುದಿಲ್ಲ. ತಂದೆ ತಾಯಿಯ ಮೇಲೆ ವಿಶೇಷವಾದ ಭಕ್ತಿ ಭಾವನೆ ಇರುತ್ತದೆ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸುವಿರಿ. ನಿಮ್ಮ ಒಳ್ಳೆಯ ನಡವಳಿಕೆಯಿಂದ ಎಲ್ಲರ ಮನಸ್ಸಿನಲ್ಲಿಯೂ ಸ್ಥಾನವನ್ನು ಗಳಿಸುವಿರಿ. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ನಿಮಗೆ ಧೈರ್ಯದ ಜೊತೆ ಸಾಹಸದ ಬುದ್ದಿಯು ಇರುವ ಕಾರಣ ಮುಂದಿನ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ.

ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಕುಂಭ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ಕುಂಭ ರಾಶಿಯ ಗುಣಲಕ್ಷಣಗಳು

ಕುಂಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ನಿಗೂಢ ಮನಸ್ಸು ಇರುತ್ತದೆ. ಕುತೂಹಲಕಾರಿ ವಿಚಾರಗಳನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಇವರು ಇರುವ ಕಡೆ ಸಂತೋಷಕ್ಕೆ ಕೊರತೆ ಇರುವುದಿಲ್ಲ. ಇವರ ಸ್ಮರಣಶಕ್ತಿ ವಿಶೇಷವಾಗಿರುತ್ತದೆ. ವಿವೇಕದಿಂದ ವರ್ತಿಸುತ್ತಾರೆ. ಬೇರೆಯವರು ಅನುಸರಿಸಬೇಕಾದಂತಹ ಅನೇಕ ಗುಣಗಳು ಇವರಲ್ಲಿರುತ್ತದೆ. ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ಇರುತ್ತದೆ. ಯಾರಿಗೂ ಮೋಸ ಮಾಡುವುದಿಲ್ಲ. ಮಾನಸಿಕವಾಗಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಪರಿಹರಿಸುತ್ತಾರೆ. ಆದರೆ ತಮ್ಮ ಮೇಲೆಯೇ ತಮಗೆ ನಂಬಿಕೆ ಕಡಿಮೆ ಇರುತ್ತದೆ. ಕನಿಷ್ಠ ಪಕ್ಷ ಬೇರೆಯವರಿಂದ ಇವರಿಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.

ಈ ರಾಶಿಯಲ್ಲಿ ಹುಟ್ಟಿದ ಪುರುಷರಿಗೆ ಆವಿಷ್ಕಾರ ಮನೋಭಾವವಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣತಿ ಗಳಿಸುತ್ತಾರೆ. ಗಣಿತಶಾಸ್ತ್ರವೆಂದರೆ ವಿಶೇಷ ಅಕ್ಕರೆ. ಇವರು ಕೈ ಹಾಕಿದ ಬಹುತೇಕ ಕೆಲಸ-ಕಾರ್ಯಗಳು ಯಶಸ್ವಿಯಾಗುತ್ತವೆ. ಎಂದಿಗೂ ತಮ್ಮವರನ್ನು ರಕ್ಷಿಸಲು ತಪ್ಪು ದಾರಿ ಹಿಡಿಯುವುದಿಲ್ಲ. ಅತಿಯಾದ ಪ್ರಾಮಾಣಿಕತೆ ತೊಂದರೆಗೆ ಕಾರಣವಾಗುತ್ತದೆ. ಜೀವನವನ್ನು ನಿರ್ದಿಷ್ಟ ರೀತಿಯಲ್ಲಿ ನಡೆಸಿ ಎಲ್ಲರ ಗಮನ ಸೆಳೆಯುತ್ತಾರೆ. ಸಾಮಾನ್ಯವಾಗಿ ಇವರಿಗೆ ಕೋಪ ಬರುವುದಿಲ್ಲ. ಕೋಪ ಬಂದಲ್ಲಿ ಆವೇಶದಿಂದ ವರ್ತಿಸುತ್ತಾರೆ. ತಪ್ಪು ಮಾಡಿದವರನ್ನು ದೂರ ಮಾಡದೆ ಹೋದರೂ ತಪ್ಪನ್ನು ಒಪ್ಪುವುದಿಲ್ಲ.

ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರು ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇವರ ಮನಸ್ಸಿನಲ್ಲಿ ಇರುವ ವಿಚಾರವನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಇವರಿಗೆ ಬಹುತೇಕ ಎಲ್ಲಾ ವಿಚಾರಗಳ ಅರಿವು ಇರುತ್ತದೆ. ಬರಹದಲ್ಲಿ ಇವರಿಗೆ ಅದೃಷ್ಟವಿದೆ. ಸಮಾಜದಲ್ಲಿ ಜನಪ್ರಿಯ ವ್ಯಕ್ತಿಯಾಗಿ ಬಾಳುತ್ತಾರೆ. ಇವರಿಂದ ಕಲಿಯಬೇಕಾದ ವಿಚಾರಗಳು ಹಲವಾರು ಇರುತ್ತವೆ.

ಕುಂಭ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಕುಂಭ ರಾಶಿಗೆ ಸೇರಿದವರು ನೆನಪಿಟ್ಟುಕೊಳ್ಳಬೇಕಾದ ವಿಷಯಗಳಿವು. ಶುಭ ದಿನಾಂಕಗಳು: 2, 3, 7 ಮತ್ತು 9. ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ, ಶುಭ ವರ್ಣ: ಹಿತ್ತಾಳೆ, ಹಸಿರು, ನೀಲಿ. ಅಶುಭ ವರ್ಣ: ಹಳದಿ, ಕ್ರೀಂ, ಬಿಳಿ ಮತ್ತು ಕೆಂಪು, ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಶುಭ ತಿಂಗಳು: ಜೂನ್ 15 ರಿಂದ ಜುಲೈ 14 ಮತ್ತು ಡಿಸೆಂಬರ್ 15ರಿಂದ ಜನವರಿ14. ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ, ಹೊಂದಾಣಿಕೆ ಇರುವ ರಾಶಿಗಳು: ಕುಂಭ, ವೃಷಭ ಮತ್ತು ಕನ್ಯಾ. ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ ಮತ್ತು ಸಿಂಹ.

ಕುಂಭ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1)ನವನಾಗ ಸ್ತೋತ್ರ: ಪ್ರತಿದಿನ ನವನಾಗ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮನದಲ್ಲಿರುವ ಆತಂಕ ದೂರವಾಗುತ್ತದೆ.

2)ಈ ದಾನಗಳಿಂದ ಶುಭ ಫಲ: ಮಿಶ್ರವರ್ಣದ ಬಟ್ಟೆ ಮತ್ತು ಹುರುಳಿ ದಾನ ನೀಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಲಭಿಸುತ್ತದೆ.

3)ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ವಿರೋಧಿಗಳ ಹಾವಳಿ ಕಡಿಮೆಯಾಗಲಿದೆ. ಮನದ ಆತಂಕ ದೂರವಾಗಲಿದೆ. ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶ್ರವಣದಿಂದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ಬಿಳಿ ಬಣ್ಣದ ಕರವಸ್ತ್ರ ಬಳಸುವುದು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದು.

ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.