ಕಟಕ ರಾಶಿ ದೀಪಾವಳಿ ಭವಿಷ್ಯ: ಅನಿರೀಕ್ಷಿತ ಧನ ಲಾಭ ಹೆಚ್ಚಿನ ನೆಮ್ಮದಿ ನೀಡುತ್ತದೆ, ನಿಮ್ಮ ಜೀವನ ಬೇರೆಯವರಿಗೆ ಮಾದರಿಯಾಗುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಟಕ ರಾಶಿ ದೀಪಾವಳಿ ಭವಿಷ್ಯ: ಅನಿರೀಕ್ಷಿತ ಧನ ಲಾಭ ಹೆಚ್ಚಿನ ನೆಮ್ಮದಿ ನೀಡುತ್ತದೆ, ನಿಮ್ಮ ಜೀವನ ಬೇರೆಯವರಿಗೆ ಮಾದರಿಯಾಗುತ್ತೆ

ಕಟಕ ರಾಶಿ ದೀಪಾವಳಿ ಭವಿಷ್ಯ: ಅನಿರೀಕ್ಷಿತ ಧನ ಲಾಭ ಹೆಚ್ಚಿನ ನೆಮ್ಮದಿ ನೀಡುತ್ತದೆ, ನಿಮ್ಮ ಜೀವನ ಬೇರೆಯವರಿಗೆ ಮಾದರಿಯಾಗುತ್ತೆ

Deepavali Cancer Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಕಟಕ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌.ಸತೀಶ್)

ಕಟಕ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ
ಕಟಕ ರಾಶಿಯವರ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ

Deepavali Cancer Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಕಟಕ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ಕಟಕ ರಾಶಿಯವರ ದೀಪಾವಳಿಯ ವರ್ಷ ಭವಿಷ್ಯದಲ್ಲಿ ಮನದಲ್ಲಿ ಒಂದು ರೀತಿಯ ಭಯ ಮತ್ತು ಆತಂಕವಿರುತ್ತದೆ. ಆತ್ಮವಿಶ್ವಾಸದ ಕೊರತೆಯು ಎದುರಾಗುತ್ತದೆ. ಇದರಿಂದ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗಬಹುದು. ಜೀವನದಲ್ಲಿ ಅಭಿವೃದ್ಧಿ ಹೊಂದಲು ಅವಕಾಶಗಳ ಮಹಾಪೂರವೇ ದೊರೆಯುತ್ತದೆ. ಅದರ ಪ್ರಯೋಜನವನ್ನು ಪಡೆಯಲು ಪ್ರಾಯಸ ಪಡಬೇಕಾಗುತ್ತದೆ. ವಿರೋಧಿಗಳು ನಿಮ್ಮಲ್ಲಿರುವ ಸಾತ್ವಿಕ ಮನೋಭಾವನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಉದ್ಯೋಗದಲ್ಲಿ ಬಡ್ತಿ ದೊರೆತು ವೇತನ ಹೆಚ್ಚಳವಾಗುತ್ತದೆ. ನಿಮ್ಮ ಹಿರಿತನಕ್ಕೆ ತಕ್ಕನಾದ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ.

ನಿರುದ್ಯೋಗಿಗಳಿಗೆ ಆತ್ಮೀಯರ ಸಹಾಯದಿಂದ ಉದ್ಯೋಗ ದೊರೆಯುತ್ತದೆ. ಉದ್ಯೋಗದಲ್ಲಿನ ಒತ್ತಡವು ಕೆಲವೊಮ್ಮೆ ಸಮಸ್ಯೆಯನ್ನು ಉಂಟುಮಾಡುತ್ತದೆ. ಅನಿರೀಕ್ಷಿತ ಮೂಲಗಳಿಂದ ಹಣದ ಅನುಕೂಲತೆ ದೊರೆಯುತ್ತದೆ. ನಿರ್ದಿಷ್ಟವಾದ ತೀರ್ಮಾನಗಳಿಂದ ಉತ್ತಮ ಫಲಗಳನ್ನು ಪಡೆಯುವಿರಿ. ಭೂ ವ್ಯವಹಾರಗಳಲ್ಲಿ ಎಚ್ಚರಿಕೆಯ ಅಗತ್ಯತೆ ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭವು ನೆಮ್ಮದಿಯನ್ನು ನೀಡುತ್ತದೆ. ಆದರೆ ಅನಪೇಕ್ಷಿತ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗುವಿರಿ. ಬೇರೆಯವರಿಂದ ಹಣದ ಸಹಾಯ ದೊರೆಯುತ್ತದೆ. ವಂಶಕ್ಕೆ ಸಂಬಂಧಿಸಿದ ಆಸ್ತಿಯೊಂದನ್ನು ಮಾರಾಟ ಮಾಡುವಿರಿ. ಹಣಕಾಸಿನ ವ್ಯವಹಾರವು ವಿರೋಧಕ್ಕೆ ಕಾರಣವಾಗುತ್ತದೆ. ಕಾನೂನಿನ ಹೋರಾಟದಲ್ಲಿ ಹಿನ್ನಡೆ ಲಭಿಸುತ್ತದೆ.

ತಂದೆ-ತಾಯಿ ಜೊತೆಯಲ್ಲಿ ಅನಾವಶ್ಯಕವಾದ ವಾದಗಳನ್ನು ಮಾಡಬೇಡಿ

ಹೆಣ್ಣು ಮಕ್ಕಳು ಭಾವನಾತ್ಮಕವಾಗಿ ವರ್ತಿಸುತ್ತಾರೆ. ಅವರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಆತ್ಮೀಯರಿಂದ ಸಹಾಯ ಸಹಕಾರ ದೊರೆಯುತ್ತದೆ. ದಂಪತಿ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ನಿಮ್ಮ ಜೀವನವು ಬೇರೆಯವರಿಗೆ ಮಾದರಿ ಆಗುತ್ತದೆ. ಗುರುಗಳ ಸಹಾಯದಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುತ್ತಾರೆ. ಅತಿಯಾದ ಆಯಾಸದಿಂದ ನಿದ್ದೆ ಇಲ್ಲದಂತೆ ಆಗುತ್ತದೆ. ತಂದೆ ತಾಯಿಯ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ನಿಮ್ಮ ನಿರೀಕ್ಷೆಗಳು ಕ್ರಮೇಣವಾಗಿ ಕೈಗೂಡುತ್ತವೆ. ಸಮಾಜದ ಗಣ್ಯ ವ್ಯಕ್ತಿಗಳ ಜೊತೆಯಲ್ಲಿ ವಿವಾದ ಉಂಟಾಗುತ್ತದೆ.

ಧ್ಯಾನ ಮತ್ತು ಯೋಗದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೊಸ ರೀತಿಯ ಮಾರ್ಪಾಡುಗಳು ನಿಮ್ಮ ಇಚ್ಛೆಗೆ ವಿರುದ್ಧವಾಗಿದ್ದರೂ ಒಪ್ಪಲೇಬೇಕಾಗುತ್ತದೆ. ಸುಳ್ಳು ಹೇಳಿಯಾದರೂ ಎದುರಾಗುವ ವಾದ ವಿವಾದಗಳಿಂದ ಪಾರಾಗುವಿರಿ. ಸುಳ್ಳು ವದಂತಿಗಳನ್ನು ನಂಬಿದರೆ ಆತ್ಮೀಯರ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣಲು ಪ್ರಯತ್ನಿಸಿ. ಸಂಗಾತಿಯ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ನರದ ತೊಂದರೆಯಿಂದ ಬಳಲುವವರು ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ. ಅತಿಯಾದ ಆತ್ಮಾಭಿಮಾನವನ್ನು ತೊರೆದು ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು.

ನಿಮ್ಮ ಸಂಗಾತಿಯು ನಯ ವಿನಯದಿಂದ ತಮ್ಮ ಕೆಲಸ ಸಾಧಿಸುತ್ತಾರೆ. ತಪ್ಪನ್ನು ಮನ್ನಿಸುವ ಗುಣವನ್ನು ಬೆಳೆಸಿಕೊಳ್ಳುವಿರಿ. ಕೆಲಸ ಕಾರ್ಯದಲ್ಲಿ ತೊಂದರೆಯಾದಾಗ ಎಲ್ಲರೊಂದಿಗೆ ಉಗ್ರವಾಗಿ ವರ್ತಿಸುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಶ್ರದ್ಧೆಯ ಅವಶ್ಯಕತೆ ಇದೆ ಇರುತ್ತದೆ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಮಕ್ಕಳ ಜೀವನವನ್ನು ರೂಪಿಸುತ್ತವೆ. ವಿದ್ಯಾರ್ಥಿಗಳು ಆತಂಕದ ನಡುವೆಯೂ ನಿರೀಕ್ಷಿತ ಅಂಕಗಳನ್ನು ಪಡೆಯುತ್ತಾರೆ. ಗಣ್ಯ ವ್ಯಕ್ತಿಗಳ ಸ್ನೇಹವನ್ನು ಗಳಿಸುವಿರಿ. ಜನಪ್ರಿಯ ವ್ಯಕ್ತಿಯಾಗುವ ಹಂಬಲದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಬೇರೆಯವರ ಮೇಲೆ ಅಧಿಕಾರ ಚಲಾಯಿಸುವುದು ನಿಮ್ಮ ಗುಣವಾಗಿರುತ್ತದೆ. ಕುಟುಂಬದ ಹಿರಿಯರ ಜನಪ್ರಿಯತೆಯನ್ನು ಬಳಸಿಕೊಳ್ಳುವಿರಿ.

ಪ್ರತಿ ಕೆಲಸದಲ್ಲೂ ಆತ್ಮವಿಶ್ವಾಸ ಹೆಚ್ಚಾಗುತ್ತಲೇ ಇರುತ್ತೆ

ಬಂಧು-ಬಳಗದವರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ನೂತನ ವಿವಾಹಿತರು ತಮ್ಮ ಆಚಾರ ವಿಚಾರಗಳನ್ನು ಬದಲಿಸಿಕೊಳ್ಳುತ್ತಾರೆ. ಸ್ತ್ರೀಯರಿಗೆ ಪತಿಯಿಂದ ನಿರಾಸೆ ಇರುತ್ತದೆ. ಶಿಕ್ಷಕರು ಮತ್ತು ಸಂಧಾನ ಸಭೆಗಳನ್ನು ನಡೆಸುವವರಿಗೆ ಸಮಾಜದಲ್ಲಿ ವಿಶೇಷವಾದಂತಹ ಪ್ರಾತಿನಿಧ್ಯ ದೊರೆಯುತ್ತದೆ. ಯಾವುದೇ ಕೆಲಸವಾದರೂ ಆತ್ಮವಿಶ್ವಾಸದಿಂದ ಮಾಡಿದಲ್ಲಿ ತೊಂದರೆಗಳು ದೂರವಾಗುತ್ತವೆ. ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಹೆಣ್ಣು ಮಕ್ಕಳಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಇರುತ್ತದೆ.

ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ಕಟಕ ರಾಶಿಯವರ ಗುಣಲಕ್ಷಣಗಳು

ಕಟಕ ರಾಶಿಯಲ್ಲಿ ಜನಿಸಿದ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಆಸೆ, ಆಕಾಂಕ್ಷೆಯನ್ನು ಹೊಂದಿರುತ್ತಾರೆ. ಸದಾ ಕಾಲ ಒಳ್ಳೆಯದನ್ನೇ ಬಯಸುತ್ತಾ ಬಾಳುತ್ತಾರೆ. ಇವರಿಗೆ ಆತ್ಮೀಯರ ಸಹಾಯ, ಸಹಕಾರ ಸದಾ ಕಾಲ ಇರುತ್ತದೆ. ಸ್ವಭಾವತಃ ಇವರು ಉದಾರಿಗಳು, ಬೇರೆಯವರಿಗೆ ಸಹಾಯ ಮಾಡುವವರು. ಕಷ್ಟನಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.

ಕಟಕ ರಾಶಿಯಲ್ಲಿ ಜನಿಸಿದ ಪುರುಷರು ಕಷ್ಟದಲ್ಲಿರುವವರನ್ನು ಕರುಣೆಯಿಂದ ನೋಡುತ್ತಾರೆ. ತಮ್ಮ ಬಳಿ ಇರುವ ಹಣವನ್ನು ಅವಶ್ಯಕತೆ ಇದ್ದವರಿಗೆ ನೀಡಲು ಹಿಂದುಮುಂದು ನೋಡುವುದಿಲ್ಲ. ಎಂತಹ ಸಂದರ್ಭದಲ್ಲಿಯೂ ಬುದ್ಧಿವಂತಿಕೆಯಿಂದ ವರ್ತಿಸುವರು. ಸದಾಕಾಲ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗುವರು. ಮನದಲ್ಲಿ ಮೂಡುವ ಯೋಜನೆಗಳು ಯಶಸ್ವಿಯಾಗುವಂತೆ ನೋಡಿಕೊಳ್ಳುವರು. ಭಯದ ಗುಣವಿರುವುದಿಲ್ಲ.

ಕಟಕ ರಾಶಿಯವರ ಶುಭ ದಿನಾಂಕ, ವಾರ, ಬಣ್ಣ

ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.

ಕಟಕ ರಾಶಿಯವರಿಗೆ ಪರಿಹಾರಗಳು

1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.