ದೀಪಾವಳಿ ಭವಿಷ್ಯ 2024: ಮಕರ ರಾಶಿಯವರಿಗೆ ಮಿಶ್ರಫಲ; ಉದ್ಯೋಗದಲ್ಲಿ ಭಡ್ತಿ, ಆದಾಯಕ್ಕೆ ತಕ್ಕ ಖರ್ಚು, ಪಾಲುದಾರಿಕೆ ವ್ಯವಹಾರ ಬೇಡ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೀಪಾವಳಿ ಭವಿಷ್ಯ 2024: ಮಕರ ರಾಶಿಯವರಿಗೆ ಮಿಶ್ರಫಲ; ಉದ್ಯೋಗದಲ್ಲಿ ಭಡ್ತಿ, ಆದಾಯಕ್ಕೆ ತಕ್ಕ ಖರ್ಚು, ಪಾಲುದಾರಿಕೆ ವ್ಯವಹಾರ ಬೇಡ

ದೀಪಾವಳಿ ಭವಿಷ್ಯ 2024: ಮಕರ ರಾಶಿಯವರಿಗೆ ಮಿಶ್ರಫಲ; ಉದ್ಯೋಗದಲ್ಲಿ ಭಡ್ತಿ, ಆದಾಯಕ್ಕೆ ತಕ್ಕ ಖರ್ಚು, ಪಾಲುದಾರಿಕೆ ವ್ಯವಹಾರ ಬೇಡ

Deepavali Capricorn Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಮಕರ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್)

ಮಕರ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ
ಮಕರ ರಾಶಿಯವರ ದೀಪಾವಳಿ ವರ್ಷದ ಭವಿಷ್ಯ

Deepavali Capricorn Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಮಕರ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.

ಮಕರ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದ ಪ್ರಕಾರ ನಿಮಗೆ ಬಹುತೇಕ ಶುಭಫಲಗಳೇ ದೊರೆಯುತ್ತವೆ. ಆದರೂ ಕೆಲವೊಂದು ವಿಚಾರದಲ್ಲಿ ಅಡೆತಡೆಗಳಿರುತ್ತವೆ. ಆರಂಭಿಸಿದ ಕೆಲಸ–ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸು ಗಳಿಸುವಿರಿ. ಯಾವುದೇ ಕೆಲಸದಲ್ಲೂ ಆತ್ಮವಿಶ್ವಾಸ ಬಲು ಮುಖ್ಯ ನೆನಪಿರಲಿ. ಕುಟುಂಬದಲ್ಲಿ ಹಿರಿಯರ ಸಹಾಯ ಸಹಕಾರ ನಿಮಗೆ ದೊರೆಯುವುದಿಲ್ಲ. ಹಾಗೆಯೇ ಉದ್ಯೋಗದಲ್ಲಿಯೂ ಸಹ ಹಿರಿಯ ಅಧಿಕಾರಿಗಳ ಸಹಕಾರ ದೊರೆಯುವುದಿಲ್ಲ. ನಿಮ್ಮ ಜೀವನಕ್ಕೆ ನೀವೇ ರೂವಾರಿಯಾಗಬೇಕು. ಆತ್ಮವಿಶ್ವಾಸದಿಂದ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ದುಡುಕಿ ಮಾತನಾಡುವ ಕಾರಣ ಕೆಲಸ ಕಾರ್ಯದಲ್ಲಿ ಹಿನ್ನೆಡೆ ಅನುಭವಿಸುತ್ತೀರಿ. ಪ್ರೀತಿಯಿಂದ ಎಲ್ಲರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಿ. ಸುಲಭವಾಗಿ ನಿಮ್ಮ ಕೆಲಸಗಳನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ. ದೂರದಿಂದ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸೋದರ ಮಾವನಿಂದ ಪೂರ್ಣಮಟ್ಟದ ಸಹಾಯ ಸಹಕಾರ ದೊರೆಯುತ್ತದೆ. ಹಣಕಾಸಿಗೆ ತೊಂದರೆ ಇರುವುದಿಲ್ಲ. ಹಣವನ್ನು ಉಳಿಸಲು ಸಹ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಯಶಸ್ಸು ದೊರೆಯುತ್ತದೆ. ಆದರೆ ಸಹೋದ್ಯೋಗಿಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮಿಂದ ಸಹಾಯ ಪಡೆದವರು ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತಾರೆ. ಏಕಾಂಗಿಯಾಗಿ ನ್ಯಾಯ ನೀತಿಗಾಗಿ ಹೋರಾಡಬೇಕಾದ ಪ್ರಸಂಗಗಳು ಎದುರಾಗಲಿವೆ. ಸಮಾಜ ಸೇವಾಕರಿಗೆ ವಿಶೇಷ ಗೌರವಾದರಗಳು ಲಭಿಸುತ್ತವೆ. ಗೌರವ ಡಾಕ್ಟರೇಟ್ ಅಂತಹ ಪ್ರಶಸ್ತಿಗಳು ನಿಮ್ಮ ಪಾಲಾಗುತ್ತದೆ. ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ.

ಮಾರಾಟ ಪ್ರತಿನಿಧಿಗಳಿಗೆ ಲಾಭ, ಶೀತದ ಸಮಸ್ಯೆ

ಸ್ವಾರ್ಥ ರಹಿತ ಜೀವನ ನಡೆಸುವಿರಿ. ನಿಮ್ಮಲ್ಲಿ ಉತ್ತಮ ಸೇವಾ ಮನೋಧರ್ಮ ಮನೆಮಾಡಿರುತ್ತದೆ. ಆಯ್ದ ಜನರೊಂದಿಗೆ ಮಾತ್ರ ಸ್ನೇಹ ಬೆಳೆಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಕೆಲವೊಂದು ಪ್ರಕ್ರಿಯೆಗಳ ನಂತರ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ನಿಮ್ಮ ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಎಲ್ಲರ ಬೆಂಬಲ ದೊರೆಯುತ್ತದೆ. ಸಂಘ ಸಂಸ್ಥೆಯ ನಾಯಕತ್ವವು ನಿಮಗೆ ಲಭಿಸುತ್ತದೆ. ಅಶಕ್ತರಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಕಷ್ಟಪಟ್ಟು ದುಡಿಯುವ ನಿಮಗೆ ಅವಕಾಶಗಳಿಗೆ ಬರವಿರುವುದಿಲ್ಲ. ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಆತ್ಮೀಯರ ಸಲಹೆಯನ್ನು ನಿರೀಕ್ಷಿಸುವಿರಿ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸುವಿರಿ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳು ಎದುರಾಗಲಿವೆ. ದುಡುಕುತನದಿಂದ ಕೂಡಿಟ್ಟ ಹಣವನ್ನು ಖರ್ಚು ಮಾಡುವಿರಿ. ಹಣದ ಕೊರತೆಯನ್ನು ಎದುರಿಸಲಾಗದೆ ಸಂಯಮವನ್ನು ಕಳೆದುಕೊಳ್ಳುವಿರಿ. ಮನೆ ಕೊಳ್ಳುವ ಯೋಜನೆ ಕೈ ಬಿಟ್ಟು ಇರುವ ಮನೆಯನ್ನು ನವೀಕರಿಸುವಿರಿ. ಶೀತದ ತೊಂದರೆ ಇರುತ್ತದೆ. ಪಾದಗಳಲ್ಲಿ ಅಧಿಕ ಮಟ್ಟದ ನೋವು ಇರುತ್ತದೆ. ದೈಹಿಕ ವ್ಯಾಯಾಮದಿಂದ ಕೈಕಾಲುಗಳ ಊತ ಕಡಿಮೆಯಾಗುತ್ತದೆ.

‌ದೂರದೂರಿಗೆ ಪ್ರವಾಸ ಮಾಡುವಿರಿ

ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುವಿರಿ. ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವಿರಿ. ಆದರೆ ನಿಮ್ಮ ಒಳ್ಳೆಯತನಕ್ಕೆ ತಕ್ಕ ಬೇರೆ ದೊರೆಯಲಾರದು. ಅತಿಯಾದ ಮಾತುಕತೆಯಿಂದ ನಿಮ್ಮ ಮನದೊಳಗಿನ ವಿಚಾರವನ್ನು ಎಲ್ಲರಿಗೂ ತಿಳಿಸುವಿರಿ. ಇದರಿಂದ ಮುಖ್ಯ ವಿಚಾರಗಳನ್ನು ಸಹ ರಹಸ್ಯವಾಗಿ ಇಡಲು ಸಾಧ್ಯವಾಗುವುದಿಲ್ಲ. ಮಾತು ಕಡಿಮೆ ಮಾಡಿದಷ್ಟು ನಿಮಗೆ ಒಳ್ಳೆಯದು. ಶೀತದ ತೊಂದರೆ ಇರುತ್ತದೆ. ಕುಟುಂಬದ ಬಹುತೇಕ ಜವಾಬ್ದಾರಿ ನಿಮ್ಮ ಪಾಲಾಗುತ್ತದೆ. ಬಿಡುವಿಲ್ಲದ ದುಡಿಮೆಯಿಂದ ಬೇಸರಗೊಳ್ಳುವಿರಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಕಲುಷಿತ ನೀರಿನ ಸೇವನೆಯಿಂದ ಅಪಾಯ. ತಿನ್ನುವುದರಲ್ಲಿ ಇತಿ ಮಿತಿ ಇದ್ದಷ್ಟು ಒಳ್ಳೆಯದು. ತಾಯಿಯ ಮೇಲೆ ವಿಶೇಷವಾದಂತಹ ಪ್ರೀತಿ ಮಮತೆ ತೋರುವಿರಿ. ಸ್ತ್ರೀಯರಿಗೆ ವಿಶೇಷ ಫಲಗಳು ಲಭ್ಯವಾಗಲಿವೆ. ದೇಹದಲ್ಲಿ ಬೊಜ್ಜು ಬೆಳೆಯುವ ಸಾಧ್ಯತೆ. ದೂರದ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವಿರಿ. ವಿಶ್ರಾಂತಿಯನ್ನುಬಯಸುವಿರಿ. ಯಂತ್ರೋಪಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಹಣಕಾಸಿನ ಒಡಂಬಡಿಕೆ ಮಾಡುವಿರಿ. ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ನಂಬಿಕೆ ಇರುವುದಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ನಿಮ್ಮ ಮೂಲ ಉದ್ದೇಶವಾಗಿರುತ್ತದೆ. ಮಕ್ಕಳ ವಿಚಾರದಲ್ಲಿ ಬೇರೆಯವರ ಸಲಹೆ ಒಪ್ಪದೇ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ.

ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು

ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮಕರ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.

ಮಕರ ರಾಶಿಯವರ ಗುಣಲಕ್ಷಣಗಳು

ಮಕರ ರಾಶಿಯಲ್ಲಿ ಜನಿಸಿದ ಮಹಿಳೆಯರು ಸಿರಿತನ-ಬಡತನ ಎನ್ನದೆ ಎಲ್ಲ ರೀತಿಯ ಜೀವನಕ್ಕೂ ಹೊಂದಿಕೊಳ್ಳುತ್ತಾರೆ. ಸದಾ ಗಾಂಭೀರ್ಯದಿಂದ ಕೂಡಿರುತ್ತಾರೆ. ನೋಡಲು ಸಿಡುಕಿನ ಸ್ವಭಾವದವರಂತೆ ಕಂಡರೂ ಆಂತರ್ಯದಲ್ಲಿ ಕರುಣೆ, ನಂಬಿಕೆ, ಸ್ನೇಹದಂಥ ಗುಣಗಳು ಮನೆ ಮಾಡಿರುತ್ತವೆ. ಸಮಯಕ್ಕೆ ಗೌರವ ನೀಡುತ್ತಾರೆ. ಸದಾಕಾಲ ಯಾವುದಾದರೂ ಒಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದ ಕೂಡಿರುತ್ತಾರೆ. ಪ್ರಾಮಾಣಿಕತೆ ಜನ್ಮದಿಂದಲೇ ಇವರಿಗೆ ಲಭಿಸಿರುತ್ತದೆ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಮನಸ್ಸಿಗೆ ಬೇಸರ ತರಿಸುವ ವಿಚಾರ ನಡೆದರೆ ಉದ್ವೇಗದಿಂದ ನಡೆದುಕೊಳ್ಳುತ್ತಾರೆ.

ಈ ರಾಶಿಯಲ್ಲಿ ಜನಿಸಿರುವ ಪುರುಷರು ಯಾವುದೇ ವಿಚಾರದಲ್ಲಿಯೂ ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಹೆಚ್ಚಿನ ಪರಿಶ್ರಮದಿಂದ ಸ್ವಂತ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಅಧಿಕಾರಪ್ರಿಯರಾದ ಇವರು ವಿಶೇಷ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ. ಮನದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇರುತ್ತದೆ. ಆರೋಗ್ಯದಲ್ಲಿ ಆಗಾಗ ತೊಂದರೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಗಳಿಸುತ್ತಾರೆ. ಬೇರೆಯವರಿಗೆ ಬೇಸರ ಬರುವಂತೆ ಮಾತನಾಡುತ್ತಾರೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ತಾವಾಗಿಯೇ ಬೇರೆಯವರಿಗೆ ಸಹಾಯ ಮಾಡಿ ತೊಂದರೆ ಅನುಭವಿಸುತ್ತಾರೆ. ಆದಾಯ ತಕ್ಕಮಟ್ಟಿಗೆ ಉತ್ತಮವಾಗಿರುತ್ತದೆ. ಆದರೆ ಕೇವಲ ಒಂದೇ ರೀತಿಯ ಕೆಲಸ ಮಾಡುವಲ್ಲಿ ನಿರತರಾಗುತ್ತಾರೆ. ಅನವಶ್ಯಕವಾಗಿ ಮಾಡಬೇಕಾದ ಕೆಲಸಗಳನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾರೆ.

ಮಕರ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮಕರ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳಿವು. ಶುಭ ದಿನಾಂಕಗಳು: 6, 8 ಮತ್ತು 9. ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಶುಭ ತಿಂಗಳು: ಮೇ 15ರಿಂದ ಜೂನ್ 14 ಮತ್ತು ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.

ಮಕರ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಮಹಾ ಮೃತ್ಯುಂಜಯ ಮಂತ್ರ: ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.

2) ಈ ದಾನಗಳಿಂದ ಶುಭ ಫಲ: ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
ಬೆಂಗಳೂರಿನ ಜ್ಯೋತಿಷಿ ಎಚ್ ಸತೀಶ್. ಸಂಪರ್ಕ ಸಂಖ್ಯೆ: 85468 65832, ಇಮೇಲ್: sathishaapr23@gmail.com
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.