ದೀಪಾವಳಿ ಭವಿಷ್ಯ 2024: ಮೀನ ರಾಶಿಯವರಿಗೆ ಮಿಶ್ರಫಲ; ಆದಾಯದಷ್ಟೇ ಖರ್ಚು ಇರುತ್ತದೆ, ಕೌಟುಂಬಿಕ ಸಮಸ್ಯೆ, ಆತ್ಮೀಯರಿಂದ ಮೋಸ
Deepavali Pisces Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಮೀನ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್. ಸತೀಶ್)
Deepavali Pisces Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಮೀನ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.
ಮೀನ ರಾಶಿಯವರ ದೀಪಾವಳಿ ವರ್ಷದ ಭವಿಷ್ಯದ ಪ್ರಕಾರ ನಿಮ್ಮಲ್ಲಿ ಆತಂಕದ ಮನೋಭಾವ ಮೂಡುತ್ತದೆ. ಸದಾಕಾಲ ಲವಲವಿಕೆಯಿಂದ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಗುಟ್ಟನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಆತ್ಮೀಯರಿಗೆ ಮಾತ್ರ ಹಣದ ಸಹಾಯ ಮಾಡುವಿರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವವರು ಬಲು ವಿರಳ. ಪ್ರತಿಯೊಂದು ವಿಚಾರದಲ್ಲಿಯೂ ಮುಂದಾಳತ್ವ ವಹಿಸುವಿರಿ. ಎದುರುಗಿರುವ ವ್ಯಕ್ತಿಯನ್ನು ಗಮನಿಸದೆ ನೇರವಾಗಿ ಮತ್ತು ನಿಷ್ಠರವಾಗಿ ಮಾತನಾಡುವಿರಿ. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಯೋಚನೆ ಇರುತ್ತದೆ. ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಸಾಕುಪ್ರಾಣಿಗಳಿಂದ ದೂರವಿರುವುದು ಒಳ್ಳೆಯದು. ಕರುಳಿಗೆ ಸಂಬಂಧಿಸಿದ ತೊಂದರೆಯಿಂದ ಬಳಲುವಿರಿ. ಕುಟುಂಬದ ಸದಸ್ಯರೊಬ್ಬರು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ನಿಮಗೆ ತೊಂದರೆಯಾಗಬಹುದು. ಕುಟುಂಬದಲ್ಲಿ ಒಮ್ಮತ ಇರುವುದಿಲ್ಲ. ಆತುರದಿಂದ ವಿವಾಹಕ್ಕೆ ಒಪ್ಪಿಗೆ ನೀಡುವಿರಿ. ಇರುವ ಸ್ವಂತ ವಾಹನವನ್ನು ಮಾರಾಟ ಮಾಡುವಿರಿ. ಆದರೆ ಹೊಸ ವಾಹನವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಗಳಿಕೆಗೆ ಮಾರುಹೋಗಿ ಮೋಸ ಹೋಗುವಿರಿ. ದೀರ್ಘ ಕಾಲದ ಪ್ರವಾಸವೆಂದರೆ ಆಸೆ. ಆದರೆ ಪ್ರವಾಸಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಸಮಾಜದ ಹಿರಿಯು ವ್ಯಕ್ತಿಗಳ ಸಹಾಯವು ನಿಮಗೆ ದೊರೆಯಲಿದೆ.
ತಪ್ಪು ನಿರ್ಧಾರಗಳಿಂದ ತೊಂದರೆ
ದೈನಂದಿನ ಜೀವನದಲ್ಲಿ ವಿಶೇಷವಾದ ಬದಲಾವಣೆಗಳು ಉಂಟಾಗಲಿವೆ. ಆಪತ್ತಿನ ಸಮಯದಲ್ಲಿ ಜಾಣ್ಮೆಯ ಮಾತುಗಳಿಂದ ಪಾರಾಗುವಿರಿ. ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮದಿಂದ ಪ್ರಗತಿ ಸಾಧಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಸಾಕಷ್ಟು ಪರಿವರ್ತನೆಗಳು ಉಂಟಾಗಲಿವೆ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಅದರಿಂದ ಉಂಟಾಗಬಹುದಾದ ಫಲಿತಾಂಶದ ಬಗ್ಗೆ ಯೋಚಿಸುವಿರಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರುವುದಿಲ್ಲ. ಸಹಾಯವಲ್ಲದೆ ಹೋದರು ಬೇರೆಯವರಿಂದ ಉತ್ತಮ ಸ್ಫೂರ್ತಿಯನ್ನು ಬಯಸುವಿರಿ. ಅಲಂಕಾರಪ್ರಿಯರು. ಜೀವನದಲ್ಲಿ ಹೊಸ ರೀತಿಯ ಬದಲಾವಣೆಗಳನ್ನು ಮೂಡಿಸಲು ಪ್ರಯತ್ನಿಸುವಿರಿ. ಮಾಡಿದ ಮೋಸವನ್ನು ಮರೆತು ಬಂಧು ಬಳಗದವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಿರಿ. ಕಷ್ಟ ನಷ್ಟದ ಸಂದರ್ಭದಲ್ಲಿ ಹೆದರುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಅನಾವಶ್ಯಕವಾದಂತಹ ವಾದ ವಿವಾದಗಳಿರುತ್ತವೆ. ಯುವಕರು ಮತ್ತು ಯುವತಿಯರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಪಾಲುಗಾರಿಕೆಯ ವ್ಯಾಪಾರ ಇದ್ದಲ್ಲಿ, ಅನಾವಶ್ಯಕವಾದ ಚಿಂತೆ ಮತ್ತು ಅನುಮಾನವು ನಿಮ್ಮನ್ನು ಕಾಡುತ್ತದೆ. ನಿಮ್ಮ ಸೋಲಿಗೆ ಬೇರೆಯವರನ್ನು ಕಾರಣ ಮಾಡುವಿರಿ. ಕೈ ತುಂಬಾ ಹಣವಿದ್ದರೂ ಉಳಿಸುವ ಯೋಚನೆ ಮಾಡುವುದಿಲ್ಲ. ನೀವು ಬೇರೆಯವರಿಗೆ ಹಣದ ಸಹಾಯ ಮಾಡಬಹುದು ಆದರೆ ನಿಮಗೆ ಯಾರೊಬ್ಬರು ಹಣವನ್ನು ನೀಡುವುದಿಲ್ಲ.
ವಿದೇಶಕ್ಕೆ ತೆರಳುವ ಯೋಗವಿದೆ
ಪ್ರಾಮಾಣಿಕತೆಯಿಂದ ಬೇರೆಯವರಿಂದ ಪಡೆದ ಹಣವನ್ನು ಮರಳಿ ನೀಡುವಿರಿ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಸ್ವತಂತ್ರವಾಗಿ ನಿಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಮನಸ್ಸಿನಲ್ಲಿ ಸದಾ ಕಾಲ ಒಳ್ಳೆಯ ಚಿಂತನೆಯನ್ನೇ ಮಾಡುವಿರಿ. ಸಮಾಜದಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳುವಿರಿ. ಎಂತಹ ಸಂದರ್ಭ ಬಂದರು ಸತ್ಯವನ್ನೆ ನುಡಿಯುವಿರಿ. ಸಮಯವನ್ನು ಗೌರವಿಸುವ ಕಾರಣ ಸ್ನೇಹಿತರು ಬಲು ಕಡಿಮೆ. ಸದಾಕಾಲ ಸಂತೋಷವಾಗಿರಲು ಪ್ರಯತ್ನಿಸುವಿರಿ. ತಂದೆ ತಾಯಿಗಳ ಒಪ್ಪಿಗೆಯಂತೆ ವಿವಾಹವಾಗುವಿರಿ. ವಿದ್ಯಾರ್ಥಿಗಳು ಸ್ವಂತ ಪ್ರಯತ್ನದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಶಸ್ತ್ರಚಿಕಿತ್ಸೆಯಾಗುವ ಸಂಭವವಿದೆ. ಸುತ್ತಮುತ್ತಲಿನ ವಾತಾವರಣವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಿರಿ. ನಿಮ್ಮ ಹಾಸ್ಯದ ಮನೋಭಾವನೆಗೆ ಜನರು ಮಾರುಹೋಗುತ್ತಾರೆ. ಸಂಗಾತಿ ಮತ್ತು ಮಕ್ಕಳಿಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾಗುವಿರಿ. ವಂಶದಲ್ಲಿಯೇ ಉನ್ನತ ಮಟ್ಟದ ಕೀರ್ತಿ ಪ್ರತಿಷ್ಠೆ ನಿಮಗೆ ದೊರೆಯುತ್ತದೆ. ಕಾನೂನಿನ ತೊಂದರೆ ಇದ್ದಲ್ಲಿ ನಿಮ್ಮ ಪರವಾದ ತೀರ್ಮಾನವನ್ನು ಪಡೆಯುವಿರಿ. ಕ್ರಮೇಣವಾಗಿ ಹೊಸ ರೀತಿಯ ಜೀವನಕ್ಕೆ ಹೊಂದಿಕೊಳ್ಳುವಿರಿ. ಸಮಾಜದ ಕಟ್ಟುಪಾಡುಗಳಿಗೆ ಗೌರವ ನೀಡುವಿರಿ. ದೇವರಲ್ಲಿ ಮತ್ತು ಗುರು ಹಿರಿಯರಲ್ಲಿ ವಿಶೇಷವಾದ ನಂಬಿಕೆ ಇರುತ್ತದೆ. ಕೈ ತುಂಬ ಹಣವಿದ್ದರೂ ಸರಳ ಜೀವನ ನಡೆಸಲು ಇಷ್ಟಪಡುವಿರಿ. ಆಕರ್ಷಕವಾದ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣದ ಖರ್ಚು ಮಾಡುವಿರಿ.
ದೀಪಾವಳಿ 2024: ನಿಮಗೆ ತಿಳಿದಿರಬೇಕಾದ ವಿವರಗಳಿವು
ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೀನ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.
ಮೀನ ರಾಶಿಯ ಗುಣಲಕ್ಷಣಗಳು
ಮೀನ ರಾಶಿಯಲ್ಲಿ ಜನಿಸಿರುವ ಮಹಿಳೆಯರಿಗೆ ಕೋಮಲವಾದ ಮನಸ್ಸಿರುತ್ತದೆ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡುವುದಿಲ್ಲ. ಸೂಕ್ಷ್ಮವಾದ ಗುಣ ಸ್ವಭಾವವಿರುತ್ತದೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ದೊರೆಯುತ್ತದೆ. ಹಾಸ್ಯಪ್ರಜ್ಞೆ ವಿಶೇಷವಾಗಿರುತ್ತದೆ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳುವ ಗುಣ ಇವರದ್ದು. ಸದಾಕಾಲ ಯಾವುದಾದರೂ ಒಂದು ಕೆಲಸ-ಕಾರ್ಯಗಳಲ್ಲಿ ನಿರತರಾಗಿರುತ್ತೀರಿ. ಎಲ್ಲಾ ರೀತಿಯ ಅನುಕೂಲಗಳು ಇದ್ದರೂ ಮನದಲ್ಲಿ ಚಿಂತೆಯೊಂದು ಇರುತ್ತದೆ. ಶಾಂತಿ ಸ್ವಭಾವದವರಾದರೂ ಕಟುವಾಗಿ ಮಾತನಾಡುವಿರಿ.
ಈ ಜಾತಕದಲ್ಲಿ ಜನಿಸಿರುವ ಪುರುಷರು ಜೀವನವನ್ನು ಪ್ರೀತಿಸುತ್ತಾರೆ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಅಭಿಲಾಷೆ ಇವರಿಗಿರುತ್ತದೆ. ಸೂಕ್ಷ್ಮವಾದ ಮನಸ್ಸಿನ ಕಾರಣ ಸಣ್ಣಪುಟ್ಟ ವಿವಾದವನ್ನು ಎದುರಿಸಲಾರಿರಿ. ಆಧ್ಯಾತ್ಮಿಕ ಭಾವನೆ ವಿಶೇಷವಾಗಿರುತ್ತದೆ. ಸಂಗೀತ, ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಹೆಚ್ಚು ಆಸಕ್ತಿ ತೋರುವಿರಿ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲಿರಿ. ಕೋಪ ಬೇಗನೆ ಬಂದರೂ ಬಹುಕಾಲ ಉಳಿಯದು. ಹೆಚ್ಚಿನ ನಿರೀಕ್ಷೆ ಇದ್ದರೂ ಸುಮ್ಮನಾಗುವಿರಿ.
ಸಾಮಾನ್ಯವಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಧೃಡವಾದ ಮನಸ್ಸಿರುವುದಿಲ್ಲ. ಆದ್ದರಿಂದ ಎಲ್ಲಾ ಕೆಲಸ-ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಶುದ್ಧವಾದ ಮನಸ್ಸಿರುತ್ತದೆ. ಯಾವುದೇ ಕೆಲಸ-ಕಾರ್ಯಗಳು ನಿಮಗೆ ಅಸಾಧ್ಯವೆನಿಸುವುದಿಲ್ಲ. ಉನ್ನತ ಮಟ್ಟದ ಜೀವನವನ್ನು ನಡೆಸಲು ಬಯಸುವಿರಿ. ವಿಲಾಸಿ ಜೀವನವನ್ನು ನಡೆಸಲು ಇಷ್ಟಪಡುವಿರಿ. ಇವರ ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ.
ಮೀನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೀನ ರಾಶಿಯ ಅಧಿಪತಿ: ಗುರು, ಮೀನ ರಾಶಿಯವರಿಗೆ ಶುಭ ದಿನಾಂಕಗಳು: 1,3,4 ಮತ್ತು9, ಮೀನ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಮಂಗಳವಾರ ಮತ್ತು ಗುರುವಾರ, ಮೀನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ ಮತ್ತು ರೋಸ್, ಮೀನ ರಾಶಿಯವರಿಗೆ ಅಶುಭ ವರ್ಣ: ನೀಲಿ, ಮೀನ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ಮೀನ ರಾಶಿಯವರಿಗೆ ಶುಭ ತಿಂಗಳು: ಡಿಸೆಂಬರ್ 15ರಿಂದ ಜನವರಿ 14, ಮೀನ ರಾಶಿಯವರಿಗೆ ಶುಭ ಹರಳು: ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ಮೀನ ರಾಶಿಯವರಿಗೆ ಶುಭ ರಾಶಿ: ಕಟಕ, ವೃಶ್ಚಿಕ ಮತ್ತು ಮೀನ, ಮೀನ ರಾಶಿಯವರಿಗೆ ಅಶುಭ ರಾಶಿ: ಕನ್ಯಾ, ಕುಂಭ, ವೃಷಭ ಮತ್ತು ತುಲಾ.
ಮೀನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೆಲಸ-ಕಾರ್ಯಗಳಿಗೆ ಎದುರಾಗುವ ಅಡ್ಡಿ, ಆತಂಕಗಳು ದೂರವಾಗಲಿವೆ. ಋಣಾತ್ಮಕ ಶಕ್ತಿಯು ಮನೆ ಮತ್ತು ಮನದಿಂದ ದೂರವಾಗುವುದು.
2)ಈ ದಾನಗಳಿಂದ ಶುಭ ಫಲ: ಎಳ್ಳು ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ಹಣದ ತೊಂದರೆ ಕಡಿಮೆ ಆಗಲಿದೆ.
3)ದೇವಾಲಯ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)