ಇಲ್ಲಿ ಪೂಜೆ ಮಾಡಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ; ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯದ ಮಹಿಮೆ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಲ್ಲಿ ಪೂಜೆ ಮಾಡಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ; ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯದ ಮಹಿಮೆ ಹೀಗಿದೆ

ಇಲ್ಲಿ ಪೂಜೆ ಮಾಡಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ; ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯದ ಮಹಿಮೆ ಹೀಗಿದೆ

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಸಿರ್ಕಾಲಿ ಪಟ್ಟಣ ಸಮೀಪದ ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯ ಜನಪ್ರಿಯವಾಗಿದೆ. ಇಲ್ಲಿ ಪೂಜೆ ಮಾಡಿಸಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ ಇದೆ. ದೋಷ ಪರಿಹಾರದ ಆಸಕ್ತಿಕ ಮಾಹಿತಿ ಇಲ್ಲಿದೆ.

ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯ ಕುರಿತ ಮಾಹಿತಿ ಇಲ್ಲಿದೆ
ತಿರುಕ್ಕುರಳ್ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿಸಿದರೆ ಭೂವಿವಾದಗಳು ಬಗೆಹರಿಯುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯ ಕುರಿತ ಮಾಹಿತಿ ಇಲ್ಲಿದೆ

ಜನ್ಮಕುಂಡಲಿಯಲ್ಲಿ ಪ್ರತಿಯೊಬ್ಬರು ಕುಜದೋಷದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ವಿವಾಹದ ಬಗ್ಗೆ ಯಾವುದೋ ಭಯ ಅವರನ್ನು ಆವರಿಸಿರುತ್ತದೆ. ಆದರೆ ಕುಜನು ಕೇವಲ ಪತಿಯನ್ನು ಮಾತ್ರ ಸೂಚಿಸುವುದಿಲ್ಲ. ಕುಜನಿಂದ ಸೋದರರ ಬಗ್ಗೆಯೂ ತಿಳಿಯಬಹುದು. ಭೂಮಿ ಅಥವಾ ಮನೆಯನ್ನು ಸೂಚಿಸುತ್ತದೆ. ಕುಜನಿಗೆ ಗುರು, ಶುಕ್ರ ಅಥವಾ ಶನಿಯ ದೃಷ್ಠಿ ಇದ್ದಲ್ಲಿ ಕುಂಡಲಿಯಲ್ಲಿಯೇ ಕುಜದೋಷವು ಪರಿಹಾರವಾಗಿರುತ್ತದೆ. ಆದರೆ ಕುಜದೋಷದ ಪರಿಹಾರ ಮಾಡಿದಲ್ಲಿ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ಕುಜದೋಷ ನಿವಾರಣೆ ಆಗುತ್ತದೆ. ಅದರೊಂದಿಗೆ ಉತ್ತಮ ವಿದ್ಯಾಭ್ಯಾಸವೂ ದೊರೆಯುತ್ತದೆ. ಮುಖ್ಯವಾಗಿ ಉತ್ತಮ ತಾಂತ್ರಿಕ ಪರಿಣತಿಗಾಗಿ ಕುಜ ಮತ್ತು ಶನಿಯ ಶಾಂತಿ ಮಾಡಬೇಕಾಗುತ್ತದೆ. ಶ್ರೀ ಕುಮಾರಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ವಲ್ಲಿ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯನ್ನು ಮಾಡುವುದು ಸಂಪ್ರದಾಯ. ಇದೇ ರೀತಿ ಲಕ್ಷ್ಮೀಸಮೇತ ಶ್ರೀ ನರಸಿಂಹಸ್ವಾಮಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಇದರಿಂದ ಕುಜದೋಷ ನಿವಾರಣೆಯ ಜೊತೆಯಲ್ಲಿ ಹಣಕಾಸಿನ ಕೊರತೆಯೂ ಪರಿಹಾರವಾಗುತ್ತದೆ.

ಹೆಚ್ಚು ಪ್ರಭಾವಶಾಲಿಯಾದ ನರಸಿಂಹಸ್ವಾವಿಯ ದೇವಾಲಯವು ತಮಿಳುನಾಡಿನ ತಿರುಕ್ಕುರಯಲುರ್ ಎಂಬ ಸ್ಥಳದಲ್ಲಿದೆ. ಈ ದೇವಾಲಯದಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಈ ದೇವಾಲಯದಲ್ಲಿ ವೈಕುಂಠ ಏಕಾದಶಿ ಮತ್ತು ಶ್ರೀನರಸಿಂಹ ಜಯಂತಿಯ ದಿನದಂದು ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದೇವಾಲಯದಲ್ಲಿ ಶ್ರೀ ನರಸಿಂಹಸ್ವಾಮಿಯ ಒಡನೆ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ. ಆದ್ದರಿಂದ ಇಲ್ಲಿ ಪೂಜೆಯನ್ನು ಸಲ್ಲಿಸಿದಲ್ಲಿ ಮನೆತನದ ಅಥವ ಕುಟುಂಬದಲ್ಲಿನ ಭೂವಿವಾದಗಳಿದ್ದಲ್ಲಿ, ಜಗಳ ಕದನಗಳಿಲ್ಲದೆ ಪರಿಹಾರಗೊಳ್ಳುತ್ತದೆ. ಕೇವಲ ಸ್ಥಿರಾಸ್ತಿಯ ವಿಚಾರವಲ್ಲದೆ ಭೂ ಸಂಬಂಧಿತ ಪ್ಯಾಪಾರ ಅಥವಾ ವ್ಯವಹಾರದಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಮತ್ತು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಇಲ್ಲಿ ಶ್ರೀ ಮಹಾಲಕ್ಷಿಯ ದೇವಾಲಯವು ಇದೆ. ಆದ್ದರಿಂದ ಇಲ್ಲಿ ಪೂಜೆಯನ್ನು ಸಲ್ಲಿಸುವುದರಿಂದ ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ.

ಇಲ್ಲಿ ಸ್ನಾನ ಮಾಡಿದರೆ ಮನಸ್ಸಿನ ಶಾಂತಿ ಹೆಚ್ಚಾಗುತ್ತೆ

ಕಾವೇರಿಯ ಉಪನದಿಯಾದ ಮನ್ನಿಯರ್ ನದಿಯು ಈ ಕ್ಷೇತ್ರದಲ್ಲಿ ಹರಿಯುತ್ತದೆ. ಈ ಕಾರಣದಿಂದ ಈ ಸ್ಥಳದಲ್ಲಿ ನದಿ ಸ್ನಾನವನ್ನು ಮಾಡಿ ಶ್ರೀ ಸತ್ಯನಾರಾಯಣಸ್ವಾಮಿಯ ಪೂಜೆಯನ್ನು ಸಲ್ಲಿಸಿದಲ್ಲಿ ಕುಟುಂಬದ ದಾರಿದ್ರ್ಯವು ಕೊನೆಯಾಗುತ್ತದೆ. ಉತ್ತಮ ವಿದ್ಯಾಭ್ಯಾಸವು ಲಭಿಸುತ್ತದೆ. ಮನದಲ್ಲಿನ ಬೇಸರವು ಮರೆಯಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಭೂದೇವಿಯ ಪೂಜೆಯಿಂದ ಆತ್ಮವಿಶ್ವಾಸ ಮತ್ತು ಸಹನೆಯು ಹೆಚ್ಚುವುದಲ್ಲದೆ ಸ್ವಗೃಹ ಭೂಲಾಭವಿರುತ್ತದೆ. ಅಪರೂಪವೆಂಬಂತೆ ಈ ದೇವಾಲಯದಲ್ಲಿ ಪ್ರದೋಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಶ್ರೀರಾಮಾನುಜರು ಈ ಸ್ಥಳದಲ್ಲಿ ಪೂಜೆಸಲ್ಲಿಸಿದರೆಂದು ತಿಳಿದುಬರುತ್ತದೆ. ಜನ್ಮಕುಂಡಲಿಯಲ್ಲಿ ಬುಧನು ಶಕ್ತಿಶಾಲಿಯಾಗಿಲ್ಲದೆ ಹೋದಲ್ಲಿ ನರದ ಮೇಲೆ ಪ್ರಭಾವ ಬೀರುತ್ತಾನೆ. ವಿದ್ಯಾಕಾರಕನಾದ್ದರಿಂದ ವಿದ್ಯಾರ್ಥಿಗಳಿ ಕಲಿಕೆಯಲ್ಲಿ ಹಿಂದೆ ಉಳಿಯಬಹುದು. ಉತ್ತಮ ಹಣಗಳಿಕೆಗೆ ಬುಧ ಮತ್ತು ಶುಕ್ರರು ಬಹುಮುಖ್ಯರಾಗುತ್ತಾರೆ. ಭೂದೇವಿಯು ಬುಧನನ್ನು ಪ್ರತಿಪಾದಿಸಿದಲ್ಲಿ, ಶ್ರೀ ಮಹಾಲಕ್ಷ್ಮಿಯು ಶುಕ್ರನನ್ನು ಪ್ರತಿಪಾದಿಸುತ್ತಾರೆ. ಆದ್ದರಿಂದ ಭೂ ಸಂಬಂಧಿತ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಅಥವಾ ಬೇರೆಯವರ ಜೊತೆಯಲ್ಲಿ ಮನಸ್ತಾಪ ಇದ್ದಲಿ ಪರಿಹಾರ ದೊರೆಯುತ್ತದೆ.

ಅಷ್ಟಮಿಯ ದಿನದಂದು ಶ್ರೀ ಲಕ್ಷ್ಮೀನರಸಿಂಹ, ಭೂದೇವಿ, ಶ್ರೀದೇವಿ ಮತ್ತು ಶ್ರೀ ಮಹಾಲಕ್ಷ್ಮಿಯರಿಗೆ ತುಪ್ಪದ ದೀಪವನ್ನು ಹಚ್ಚಿದರೆ ಮತ್ತು ಬೆಣ್ಣೆಯನ್ನು ದೇವಾಲಯಕ್ಕೆ ನೀಡಿದಲ್ಲಿ ಅಪಮೃತ್ಯು ಪರಿಹಾರ ಆಗಲಿದೆ. ರಾಹುವಿನ ನಕ್ಷತ್ರ ಮತ್ತು ಮಹಾನಕ್ಷತ್ರವಾದ ಸ್ವಾತಿ ನಕ್ಷತ್ರ ಇರುವ ದಿನದಂದು ಶ್ರೀ ಲಕ್ಷ್ಮೀನರಸಿಂಹ, ಭೂದೇವಿ, ಶ್ರೀದೇವಿ ಮತ್ತು ಶ್ರೀ ಮಹಾಲಕ್ಷ್ಮಿಯರಿಗೆ ತುಪ್ಪದ ದೀಪವನ್ನು ಹಚ್ಚಿದ್ದಲ್ಲಿ ವಿವಾಹ ನಿಶ್ಚಯವಾಗುವಲ್ಲಿ ಅಡ್ಡಿ ಆತಂಕಗಳು ಎದುರಾದಲ್ಲಿ ದೋಷವು ಪರಿಹಾರವಾಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಇಲ್ಲಿನ ಹೆಣ್ಣುದೇವರನ್ನು ಅಮೃತವಲ್ಲಿ ಎಂದು ಕರೆಯಲಾಗುತ್ತದೆ.

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಈ ದೇವಾಲಯದಲ್ಲಿ ಶ್ರೀ ಸುದರ್ಶನ ಹೋಮ ಮತ್ತು ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯಲ್ಲಿ ಪಾಲ್ಗೊಂಡಲ್ಲಿ ಪಿತೃಶಾಪ ಮತ್ತು ಮಾತೃಶಾಪಗಳಿಂದ ಮುಕ್ತರಾಗಬಹುದು. ಮಾತ್ರವಲ್ಲದೆ ವಿರೋಧಿಗಳ ಉಪಟಳದಿಂದಲೂ ಪಾರಾಗಬಹುದು. ದಕ್ಷನ ಹೋಮಕುಂಡವನ್ನು ಪಾರ್ವತಿಯು ಪ್ರವೇಶಿಸುತ್ತಾಳೆ. ಇದನ್ನು ತಿಳಿದ ಶಿವನು ಕ್ರೋಧಗೊಳ್ಳುತ್ತಾನೆ. ಆಗ ಇದೇ ಸ್ಥಳದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಭೂದೇವಿ, ಶ್ರೀದೇವಿ ಮತ್ತು ಶ್ರೀ ಮಹಾಲಕ್ಷ್ಮಿಯರ ಸಮೇತನಾಗಿ ಬಂದು ಶಿವನನ್ನು ಸಂತೈಸುತ್ತಾರೆ. ಆದ್ದರಿಂದ ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದರೂ ಪ್ರದೋಷ ಪೂಜೆಯನ್ನು ನೆರವೇರಿಸುತ್ತಾರೆ.

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.