ಶ್ರೀ ಕೃಷ್ಣನ ಮೇಲೆ ಭಕ್ತಿ ಉಕ್ಕಿಸುವಲ್ಲಿ ಹರಿದಾಸರ ಪಾತ್ರವೇನು? ಕನಕದಾಸ, ಪುರಂದರದಾಸರ ಕಥೆಯೂ ಇಲ್ಲಿದೆ
Haridasas: ಹರಿದಾಸ ಭಕ್ತಿ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೀಪಾದರಾಯ, ವ್ಯಾಸರಾಯರು, ವಾದಿರಾಜರು, ಪುರಂದರದಾಸರು ಹಾಗು ಕನಕದಾಸರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
ಶ್ರೀ ಕೃಷ್ಣನನ್ನು ಕೊಂಡಾಡಿದ ದಾಸವರೇಣ್ಯರು ಕರ್ನಾಟಕಕ್ಕೆ ಹೊಸ ಆಯಾಮವನ್ನು ಕಲ್ಪಿಸಿ ಕೊಡುತ್ತಾರೆ. ಇವರು ತಮ್ಮ ಬರವಣಿಗೆಯಿಂದಲೇ ಜನಸಾಮಾನ್ಯರಲ್ಲಿಯೂ ಕೃಷ್ಣನ ಬಗ್ಗೆ ಭಕ್ತಿ ಮತ್ತು ನಂಬಿಕೆ ಉಂಟಾಗುವಂತೆ ಮಾಡುತ್ತಾರೆ. ಇವರಲ್ಲಿ ಶ್ರೀಪಾದರಾಯರು ಕೋಲಾರದ ಬಳಿ ಇರುವ ಮುಳಬಾಗಿಲಲ್ಲಿ ಜನಿಸಿದವರಾಗಿದ್ದಾರೆ. ಇವರು ಅನೇಕ ಧರ್ಮಗ್ರಂಥಗಳಲ್ಲಿ ಅಡಕವಾಗಿರುವ ವಿಚಾರಗಳನ್ನು ದೇವರನಾಮದ ಮೂಲಕ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಿದ್ದಾರೆ. ಜನಸಾಮಾನ್ಯರ ತಿಳುವಳಿಕೆಗಾಗಿ ಒಂದು ಕಲಿಕಾ ಕೇಂದ್ರವನ್ನು ಸಹ ಆರಂಭಿಸುತ್ತಾರೆ.
ಶ್ರೀಕೃಷ್ಣ ಎಂಬ ಅಂಕಿತನಾಮದಲ್ಲಿ ಸಾಹಿತ್ಯಸೇವೆಯ ಮೂಲಕ ಹರಿಸೇವೆ ಮಾಡಿದ ಗೌರವ ಶ್ರೀ ವ್ಯಾಸರಾಯರಿಗೆ ಸೇರುತ್ತದೆ. ಇವರು ತಮ್ಮ ಗುರುಗಳಾದ ಶ್ರೀಪಾದರಾಜರನ್ನು ಅನುಸರಿಸಿದ್ದಾರೆ. ಕೇವಲ ಭಕ್ತಿ ಮಾರ್ಗದಿಂದ ಮಾತ್ರ ದೇವರನ್ನು ಒಲಿಸಿಕೊಳ್ಳುವುದು ಸಾಧ್ಯ ಎಂದು ನಿರೂಪಿಸಿದ ಗೌರವ ಇವರಿಗೆ ಸಲ್ಲುತ್ತದೆ. ಇವರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸೇರಿದವರು.
ಭಕ್ತಿ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಮಹನೀಯರೆಂದರೆ ಶ್ರೀ ವಾದಿರಾಜರು. ಇವರ ಜನನ ವಾಗಿದ್ದು ಉಡುಪಿ ಬಳಿ ಇರುವ ಚಿಕ್ಕ ಊರಿನಲ್ಲಿ. ಇಂದು ಎಲ್ಲರಿಗೂ ತಿಳಿದಿರುವ ಪರ್ಯಾಯೋತ್ಸವ ಪದ್ಧತಿಯನ್ನು ಆರಂಭಿಸಿದ್ದು ಇವರೆ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಇವರ ಮಠ ಮತ್ತು ಇವರ ಬೃಂದಾವನವಿದೆ. ಇವರು ರಚಿಸಿರುವ ಲಕ್ಷ್ಮೀ ಸೋಬಾನೆ ಹಾಡನ್ನು ಕೇಳಿದವರೆ ಇಲ್ಲ. ಇದರ ಸದುಪಯೋಗ ಪಡಿಸಿಕೊಂಡವರು ಅಸಂಖ್ಯಾತ ಜನಸಾಮಾನ್ಯರು. ಹಾಗೆಯೇ ತಮ್ಮ ಸಾಹಿತ್ಯದಲ್ಲಿ ಯಾರೊಬ್ಬರೂ ಕಂಡರಿಯದ ವೈಕುಂಠವನ್ನು ವಿವರಿಸಿರುವ ರೀತಿ ಅತಿರೋಚಕವೆನಿಸುತ್ತದೆ. ಇವರ ಪ್ರತಿಯೊಂದು ಲೇಖನಗಳು ವ್ಯಾಕರಣ ಬದ್ಧವಾಗಿವೆ.
ಇವರ ನಂತರ ಸ್ಥಾನದಲ್ಲಿರುವವರೇ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು. ಸಾಹಿತ್ಯ ಕ್ಷೇತ್ರದಲ್ಲಿ ಇವರ ಕೊಡುಗೆ ಹೆಚ್ಚಾಗಿದ್ದರೂ ತಮ್ಮ ಪವಾಡಗಳ ಮೂಲಕ ಜನಸಾಮಾನ್ಯರ ಕಣ್ಣನ್ನು ತೆರೆಸುತ್ತಾರೆ. ಪುರುಷ ಸೂಕ್ತ ಸೇರಿದಂತೆ ಅನೇಕ ಮಂತಗಳ ಅರ್ಥವನ್ನು ಸುಲಭವಾಗಿ ಜನಸಾಮಾನ್ಯರಿಗೆ ತಿಳಿಯುವ ಸಾಹಿತ್ಯ ರಚನೆ ಇವರದಾಗಿದೆ. ಇಂದಿಗೂ ಜನಪ್ರಿಯ ಸ್ಥಾನದಲ್ಲಿ ನಿಲ್ಲುವ ಕೀರ್ತನೆಯಾದ ಇಂದು ಎನಗೆ ಗೋವಿಂದ ರಚನೆ ಆದದ್ದು ಇವರಿಂದಲೇ. ಅನ್ಯ ಧರ್ಮೀಯರು ಸಹ ಹಿಂದೂ ಧರ್ಮವನ್ನು ನಂಬುವಂತೆ ಮಾಡಿದ ಹಿರಿಮೆ ಇವರಿಗೆ ಸೇರುತ್ತದೆ. ಕೇವಲ ಗದ್ಯರೂಪವಲ್ಲದೆ ಪದ್ಯ ರೂಪದಲ್ಲಿಯೂ ಅನೇಕ ವಿಚಾರಗಳನ್ನು ಶ್ರುತ ಪಡಿಸಿದ್ದಾರೆ. ಇವರು ಸಂಗೀತದ ಸಮೇತ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಧರ್ಮ ಬೋಧನೆಗೆ ಬಳಸಿಕೊಂಡಿದ್ದಾರೆ.
ಇವರ ನಂತರ ಬಂದವರೇ ಸಾಹಿತ್ಯ ಲೋಕದ ದಿಗ್ಗಜರಾದ ಶ್ರೀ ಪುರಂದರದಾಸರು. ಇವರ ನಿಜವಾದ ಹೆಸರು ಶ್ರೀನಿವಾಸ ನಾಯಕ. ಜನ್ಮದಿಂದಲೇ ಜಿಪುಣತನ ಇವರಲ್ಲಿ ಮೈಗೂಡಿರುತ್ತದೆ. ಆದರೆ ದೇವರ ಲೀಲೆಯೇ ಬೇರೆಯಾಗಿರುತ್ತದೆ. ಇವರ ಮಾಡದಿಯಾದ ಸರಸ್ವತಿಯವರು ಬಡಬಗ್ಗರಿಗೆ ಬೇಡಿ ಬಂದವರಿಗೆ ಕೇಳಿದ್ದನ್ನೆಲ್ಲ ದಾನ ಮಾಡುತ್ತಿರು. ಶ್ರೀನಿವಾಸನಾಯಕರು ಎಂತಹ ಜಿಪುಣ ಎಂದರೆ ಕುಟುಂಬದಲ್ಲಿ ಯಾರೇ ಅನಾರೋಗ್ಯಕ್ಕೆ ತುತ್ತಾದರೂ ವೈದ್ಯಕೀಯ ಚಿಕಿತ್ಸೆಗೆ ಸಹ ಹಣ ನೀಡುತ್ತಿರಲಿಲ್ಲ.
ಇವರ ಮನಸ್ಸನ್ನು ಬದಲಾಯಿಸಲು ಸ್ವಯಂ ವಿಷ್ಣುವೇ ಬಡಬ್ರಾಹ್ಮಣನ ವೇಷದಲ್ಲಿ ಬರುತ್ತಾನೆ. ಮಗನ ಉಪನಯನಕ್ಕೆ ಹಣದ ಸಹಾಯವನ್ನು ಕೇಳುತ್ತಾನೆ. ಆದರೆ ಶ್ರೀನಿವಾಸ ನಾಯಕರು ಹಣದ ಸಹಾಯ ಮಾಡಲು ಬಹುವಾಗಿ ಸತಾಯಿಸುತ್ತಾರೆ. ವಿಧಿಯೇ ಇಲ್ಲದೆ ಕೊನೆಗೆ ಆತನಿಗೆ ಸವಕರುಲು ನಾಣ್ಯವನ್ನು ನೀಡುತ್ತಾರೆ. ಈ ಕಾರಣದಿಂದ ಬ್ರಾಹ್ಮಣರೂಪಿಯಾದ ವಿಷ್ಣು ಶ್ರೀನಿವಾಸ ನಾಯಕನ ಮನೆಗೆ ಬಂದು ಶ್ರೀನಿವಾಸ ನಾಯಕನ ಪತ್ನಿಯಾದ ಸರಸ್ವತಿಯ ಬಳಿ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾನೆ. ಮಗನ ಉಪನಯನಕ್ಕಾಗಿ ಆಕೆಯ ಸಹಾಯ ಬೇಡುತ್ತಾನೆ. ಆಗ ಸರಸ್ವತಿ ವಿಷ್ಣುವಿನ ಆದೇಶದಂತೆ ತವರು ಮನೆಯಲ್ಲಿ ನೀಡಿದ್ದ ತನ್ನ ಮೂಗುತಿಯನ್ನು ತೆಗೆದು ಕೊಡುತ್ತಾಳೆ. ಕಪಟ ನಾಟಕ ಸೂತ್ರಧಾರಿಯಾದ ವಿಷ್ಣು ಸರಸ್ವತಿ ನೀಡಿದ್ದ ಮೂಗುತಿಯನ್ನು ಶ್ರೀನಿವಾಸ ನಾಯಕನ ಅಂಗಡಿಯಲ್ಲಿ ಅಡವಿಡಲು ಪ್ರಯತ್ನಿಸುತ್ತಾನೆ. ಪತ್ನಿಯನ್ನು ಅನುಮಾನಿಸಿದ ಶ್ರೀನಿವಾಸನಾಯಕನು ಮೂಗುತಿಯನ್ನು ಒಂದು ಡಬ್ಬಿಯಲ್ಲಿಟ್ಟು ಮನೆಗೆ ಬಂದು ಪತ್ನಿಯನ್ನು ಮೂಗುತಿಯನ್ನು ತೋರಿಸಲು ಕೇಳುತ್ತಾನೆ. ಆಗ ಹೆದರಿದ ಸರಸ್ವತಿಯು ಸ್ನಾನ ವೇಳೆಯಲ್ಲಿ ಮೂಗುತಿಯನ್ನು ತೆಗೆದಿರುವುದಾಗಿ ಹೇಳುತ್ತಾಳೆ. ಬೇರೆ ದಾರಿ ತೋರದೆ ಪರಿಸ್ಥಿತಿಯನ್ನು ಎದುರಿಸಲಾಗದೆ ವಿಷವನ್ನು ಕುಡಿಯಲು ಪ್ರಯತ್ನಿಸುತ್ತಾಳೆ. ಆಗ ವಿಷದ ಬಟ್ಟಲಿನಲ್ಲಿ ಯಾವುದೋ ವಸ್ತು ಬಿದ್ದ ಶಬ್ದ ಕೇಳಿಸುತ್ತದೆ. ಆಶ್ಚರ್ಯವಾದರೂ ಚೇತರಿಸಿಕೊಂಡು ಆ ಬಟ್ಟಲಲ್ಲಿ ಬಿದ್ದ ಮೂಗುತಿಯನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಸಮಾಧಾನಗೊಂಡರೂ ಅನುಮಾನದಿಂದ ಶ್ರೀನಿವಾಸ ನಾಯಕನು ಅಂಗಡಿಗೆ ಹಿಂದಿರುಗಿ ಬಂದು ಡಬ್ಬಿಯನ್ನು ತೆಗೆದು ನೋಡುತ್ತಾನೆ. ಆದರೆ ಡಬ್ಬಿಯಲ್ಲಿ ತಾನೇ ಇಟ್ಟಿದ್ದ ಮೂಗುತಿ ಮಾಯವಾಗಿರುತ್ತದೆ.
ಆಗ ಶ್ರೀನಿವಾಸ ನಾಯಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ತನ್ನನ್ನು ಬದಲಿಸಲು ಸ್ವಯಂ ವಿಷ್ಣುವೇ ಬಂದಿರುವ ವಿಚಾರ ತಿಳಿದು ಬರುತ್ತದೆ. ಆಗ ತನ್ನ ನಡವಳಿಕೆಯ ಬಗ್ಗೆ ಅವನಿಗೆ ಬೇಸರ ಉಂಟಾಗುತ್ತದೆ. ಆನಂತರ ಶ್ರೀನಿವಾಸ ನಾಯಕನು ತನ್ನ ಅಗಾಧ ಪ್ರಮಾಣದ ಆಸ್ತಿಯನ್ನು ತೊರೆದು ಶ್ರೀಕೃಷ್ಣನಿಗೆ ದಾಸನಾಗಿ ಬಿಡುತ್ತಾನೆ. ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೊಗಳಿಸಿಕೊಳ್ಳುತ್ತಾರೆ. ಇವರ ಪ್ರತಿಯೊಂದು ಕೀರ್ತನಯು ಒಂದೊಂದು ಭಗವದ್ಗೀತೆಯಂತೆ ಬಾಸವಾಗುತ್ತದೆ. ಅದರಲ್ಲಿ ಜೀವನದ ಸಾರವನ್ನು ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಬರುವ ಮತ್ತೊಬ್ಬರೆಂದರೆ ಶ್ರೀ ಕನಕದಾಸರು. ಇವರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದವರು. ನಾಯಕ ಜನಾಂಗಕ್ಕೆ ಸೇರಿದವರು. ಸಾಹಿತ್ಯ ಲೋಕದಲ್ಲಿ ದೊಡ್ಡ ಸಾಧನೆಯನ್ನೇ ಮಾಡುತ್ತಾರೆ. ಬಂಕಾಪುರ ಪ್ರಾಂತಕ್ಕೆ ದಂಡನಾಯಕರಾಗಿ ವಿಜಯನಗರ ಅರಸರ ಅಧಿಕಾರದಲ್ಲಿ ಸೇವೆ ಸಲ್ಲಿಸುತ್ತಾ ಇರುತ್ತಾರೆ. ತಿರುಪತಿಯ ತಿಮ್ಮಪ್ಪ ನಾಯಕನ ಹರಕೆಯ ಪರವಾಗಿ ಜನಿಸಿದ ಕಾರಣ ಇವರಿಗೆ ತಿಮ್ಮಪ್ಪ ನಾಯಕ ಎಂದು ಹೆಸರಿಡುತ್ತಾರೆ. ಬಾಲಕನಾಗಿದ್ದಾಗಲೇ ಸಂಪೂರ್ಣ ವಿದ್ಯಾವಂತನಾಗುತ್ತಾನೆ. ಸಾಹಸ ವಿದ್ಯೆಗಳಾದ ಕತ್ತಿವರಸೆ, ಕುದುರೆಸವಾರಿಯನ್ನೂ ಕಲಿಯುತ್ತಾನೆ. ತಂದೆಯ ಸಾವಿನ ನಂತರ ಕಿರಿಯ ವಯಸ್ಸಿನಲ್ಲಿ ಬಂಕಾಪುರ ಪ್ರಾಂತ್ಯಕ್ಕೆ ದಂಡನಾಯಕನಾಗಿ ನೇಮಕಗೊಳ್ಳುತ್ತಾನೆ. ಶ್ರೀ ವ್ಯಾಸರಾಯರು ತಮ್ಮಲ್ಲಿನ ಎಲ್ಲಾ ವಿದ್ಯೆಯನ್ನು ತಿಮ್ಮಪ್ಪ ನಾಯಕನಿಗೆ ಧಾರೆ ಎರೆಯುತ್ತಾರೆ. ಇವರದ್ದು ಸಂಪೂರ್ಣ ವ್ಯಾಕರಣಬದ್ಧ ಸಾಹಿತ್ಯ. ಒಂದು ಕಥೆಯ ಪ್ರಕಾರ ಮದುವೆಯ ಸಂದರ್ಭದಲ್ಲಿ ರಾಜ್ಯವನ್ನು ಕಾಪಾಡಲು ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ, ಯುದ್ಧಕ್ಕೆ ಹೊರಟುಬಿಡುತ್ತಾರೆ. ಇಂತಹ ತ್ಯಾಗ ಮತ್ತು ಉತ್ತಮ ಸಂಸ್ಕಾರಗಳಿಗೆ ಹೆಸರು ಮಾಡಿದವರಾಗಿರುತ್ತಾರೆ. ಇವರ ಕೀರ್ತನೆಗಳಲ್ಲಿ ಭಕ್ತಿ ಮತ್ತು ವಿರಕ್ತಿಯ ಸಂದೇಶ ಹೆಚ್ಚಿನದಾಗಿರುತ್ತದೆ. ಕೇವಲ ಕೀರ್ತನೆಗಳಲ್ಲದೆ ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕಾವ್ಯಗಳನ್ನು ರಚಿಸಿದ್ದಾರೆ. ಧರ್ಮದ ಉಳಿವು ಮತ್ತು ಸಮಾಜದ ಉನ್ನತಿಗೆ ಇವರು ವ್ಯಾಸರಾಯರಿಗೆ ಬೆಂಗಾವರಾಗಿದ್ದರು. ಅನಾವಶ್ಯಕವಾಗಿ ವಿಷ್ಣು ಭಕ್ತರು ಇವರನ್ನು ಅವಮಾನಿಸಿದಾಗ ವಿಷ್ಣುವನ್ನು ತನ್ನ ಕಡೆ ತಿರುಗಿಸಿಕೊಂಡ ಖ್ಯಾತಿ ಇವರದು. ಇಂದಿಗೂ ಉಡುಪಿ ಮಠದಲ್ಲಿ ಕನಕನ ಕಿಂಡಿಯನ್ನು ನಾವು ಕಾಣಬಹುದು. ಆ ದಿನಗಳಲ್ಲಿಯೇ ಜಾತ್ಯತೀತ ಸಮಾಜವನ್ನು ರೂಪಿಸಲು ಇವರದ್ದು ಹೆಚ್ಚಿನ ಕೊಡುಗೆಯಾಗಿದೆ.